Advertisement

CET ಪರೀಕ್ಷೆ ಪ್ರಶ್ನೆಪತ್ರಿಕೆಯಲ್ಲಿ ಲೋಪಕ್ಕೆ ಆಕ್ರೋಶ; ಕೃಪಾಂಕಕ್ಕೆ ಆಗ್ರಹ

06:05 PM Apr 19, 2024 | Team Udayavani |

ವಿಜಯಪುರ: ಕರ್ನಾಟಕ ರಾಜ್ಯಾದ್ಯಂತ ನಡೆದ ವಿವಿಧ ವೃತ್ತಿಪರ ಕೋರ್ಸ್ ಗಳ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿ.ಇ.ಟಿ) ಯಲ್ಲಿ ಪಠ್ಯಕ್ರಮ ಹೊರತಾದ ಪ್ರಶ್ನೆಗಳನ್ನು ಕೇಳಲಾಗಿದೆ. ಇದರಿಂದ ವೃತ್ತಿಪರ ಶಿಕ್ಷಣ ಪಡೆಯುವ ವಿದ್ಯಾರ್ಥಿಗಳ ಭವಿಷ್ಯಕ್ಕೆ ಮಾರಕವಾಗಿದೆ ಎಂಬ ಆಕ್ರೋಶದ ಜೊತೆಗೆ ಕೃಪಾಂಕ ನೀಡುವಂತೆ ಆಗ್ರಹ ಕೇಳಿ ಬಂದಿದೆ.

Advertisement

ಈ ಕುರಿತು ಪ್ರಕಟಣೆ ನೀಡಿರುವ ವಿಜಯಪುರದ ಎಕ್ಸಲಂಟ್ ವಿಜ್ಞಾನ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯರೂ ಆಗಿರುವ ಸಿಇಟಿ ತರಬೇತುದಾರ ಕೆ.ಎಸ್.ಶ್ರೀಕಾಂತ, ರಾಜ್ಯಾದ್ಯಂತ ನಡೆದ ವಿವಿಧ ವೃತ್ತಿಪರ ಕೋರ್ಸಗಳ ಸಾಮಾನ್ಯ ಪ್ರವೇಶ ಪರೀಕ್ಷೆಯಲ್ಲಿ ಪಠ್ಯಕ್ರಮದ ಆಚೆಗಿನ ಪ್ರಶ್ನೆಗಳನ್ನು ಕೇಳಾಗಿದೆ. ಇದರಿಂದ ವಿದ್ಯಾರ್ಥಿಗಳಲ್ಲಿ ಗೊಂದಲ ಹಾಗೂ ಆತಂಕ ಉಂಟು ಮಾಡಲಾಗಿದೆ ಎಂದು ಆಕ್ರೋಶ ಹೊರಹಾಕಿದ್ದಾರೆ.

ಜೀವಶಾಸ್ತ್ರ ಪರೀಕ್ಷೆಯಲ್ಲಿ ಕಡಿತಗೊಳಿಸಲಾದ ಪಠ್ಯಕ್ರಮದಿಂದ 10 ಪ್ರಶ್ನೆಗಳನ್ನು ಕೇಳಿದರೆ, ಗಣಿತದಲ್ಲಿ 11 ಪ್ರಶ್ನೆಗಳನ್ನು ಕೇಳುವ ಮೂಲಕ ವಿದ್ಯಾರ್ಥಿಗಳ ಕನಸಿಗೆ ಕೊಕ್ಕೆ ಹಾಕಲಾಗಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಬೋರ್ಡ್ ನಿಂದ ನಡೆಸುವ ಪರೀಕ್ಷಾ ಪ್ರಶ್ನೆಪತ್ರಿಕೆಯಾಗಲಿ, ಸಾಮಾನ್ಯ ಪ್ರವೇಶ ಪರೀಕ್ಷೆ (ಸಿ.ಇ.ಟಿ) ಯಾಗಲಿ ವಿದ್ಯಾರ್ಥಿಸ್ನೇಹಿ ಪ್ರಶ್ನೆ ಪತ್ರಿಕೆಯನ್ನು ತಯಾರಿಸಬೇಕು. ಹಾಗೆಂದ ಮಾತ್ರಕ್ಕೆ ಸರಳ ಪ್ರಶ್ನೆಗಳನ್ನು ಕೇಳಬೇಕೆಂದಲ್ಲ ಎಂದೂ ಸಮಜಾಯಿಸಿ ನೀಡಿದ್ದಾರೆ.

ಕಠಿಣ ಪ್ರಶ್ನೆಗಳು ಇದ್ದರೂ ಕೂಡ ಪಠ್ಯಕ್ರಮ ಮೀರಿದ ಪ್ರಶ್ನೆಗಳು ಬಂದರೆ ವಿದ್ಯಾರ್ಥಿಗಳು ಗಲಿಬಿಲಿಗೊಳ್ಳುವುದು ಸಹಜ. ಗ್ರಾಮಾಂತರ ವಿದ್ಯಾರ್ಥಿಗಳಿಗೆ ಸರಿಯಾದ ತರಬೇತಿ ಮತ್ತು ಅದರ ಬಗ್ಗೆ ಪರಿಪೂರ್ಣ ಜ್ಞಾನವಿರುವುದಿಲ್ಲ. ಹೀಗಿದ್ದಾಗ ಕೋವಿಡ್ ಸಂದರ್ಭದಲ್ಲಿ ಜೀವಶಾಸ್ತ್ರ ಪಠ್ಯದಲ್ಲಿ ಕಡಿತಗೊಳಿಸಲಾದ 5 ಅಧ್ಯಾಯಗಳಿಂದ 10 ಪ್ರಶ್ನೆಗಳನ್ನು ಕೇಳಲಾಗಿದೆ ಎಂದು ಸಿಇಟಿ ಪರೀಕ್ಷೆಯ ಪ್ರಶ್ನೆಪತ್ರಿಕೆಯಲ್ಳಾಗಿರುವ ಲೋಪವನ್ನು ಎತ್ತಿ ತೋರಿಸಿದ್ದಾರೆ.

Advertisement

ಗಣಿತ ವಿಷಯ ಪಠ್ಯದಿಂದ ಕೈ ಬಿಟ್ಟಿರುವ 3 ಪಾಠಗಳಿಂದ ಸಿ.ಇ.ಟಿ. ಪರೀಕ್ಷೆಯಲ್ಲಿ 11 ಪ್ರಶ್ನೆಗಳನ್ನು ಕೇಳಲಾಗಿದೆ. ಅತಿ ಹೆಚ್ಚು ಅಂಕ ಗಳಿಸಿ ರ್ಯಾಂಕ್ ಪಡೆದು ಇಂಜಿನಿಯರಿಂಗ, ಕೃಷಿ ವಿಜ್ಞಾನ, ಪಶು ವೈದ್ಯಕೀಯ ಮುಂತಾದ ವೃತ್ತಿಪರ ಕೋರ್ಸಗಳನ್ನು ಸೇರುವ ಭವಿಷ್ಯ ಕನಸು ಕಾಣುತ್ತಿದ್ದ ವಿದ್ಯಾರ್ಥಿಗಳ ಆಸೆಗೆ ತಣ್ಣೀರು ಎರೆಚಿದಂತಾಗಿದೆ ಎಂದು ಸಿಇಟಿ ಪರೀಕ್ಷಾ ಪ್ರಾಧಿಕಾರದ ಕ್ರಮಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಹಳೆಯ ಎನ್.ಸಿ.ಇ.ಆರ್.ಟಿ ಪಠ್ಯದಲ್ಲಿನ ಪ್ರಶ್ನೆಗಳು ಬಂದಿವೆ. ಹೊಸ ಪಠ್ಯದಲ್ಲಿ ಇಲ್ಲದಿರುವ ಪ್ರಶ್ನೆಗಳು ಬಂದಿದ್ದು ವಿದ್ಯಾರ್ಥಿಗಳಿಗೆ ಗೊಂದಲವಾಗಿದ್ದು ಸಹಜ. ಈ ದಿಸೆಯಲ್ಲಿ ಸಂಬಂಧಪಟ್ಟ ಇಲಾಖೆ ಅಂದರೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆ.ಇ.ಎ) ಸೂಕ್ತ ಪರಿಹಾರ ಒದಗಿಸಿಕೊಡುವ ಮೂಲಕ ವಿದ್ಯಾರ್ಥಿಗಳಿಗೆ ಕೃಪಾಂಕ ನೀಡಬೇಕೆಂದು ಆಗ್ರಹಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next