ಚಿತ್ರದುರ್ಗ: ಪ್ರತ್ಯೇಕ ಲಿಂಗಾಯತ ಧರ್ಮ ವಿಚಾರಕ್ಕೆ ಕೈಹಾಕಿ ತಪ್ಪು ಮಾಡಿದ್ದೇವೆ ಎಂದು ಕ್ಷಮೆ ಕೋರಿದ್ದ ಸಚಿವ ಡಿ.ಕೆ. ಶಿವಕುಮಾರ್ ಹೇಳಿಕೆ ವಿರುದ್ಧ ಬಸವ ಕೇಂದ್ರಗಳ ಮುಖಂಡರು ಶನಿವಾರ ಮುರುಘಾ ಮಠದ ಅನುಭವ ಮಂಟಪದ ಎದುರು ಪ್ರತಿಭಟನೆ ನಡೆಸಿದರು. ತಮ್ಮ ಹೇಳಿಕೆಗೆ ಕ್ಷಮೆ ಕೋರಬೇಕು. ಇಲ್ಲದಿದ್ದರೆ ಅವರನ್ನು ಸಂಪುಟದಿಂದ ಕೈಬಿಡಬೇಕು ಎಂದು ಆಗ್ರಹಿಸಿದರು.
ಈ ಹಿಂದಿನ ಕಾಂಗ್ರೆಸ್ ಸರ್ಕಾರ ಪ್ರತ್ಯೇಕ ಲಿಂಗಾಯತ ಧರ್ಮಕ್ಕೆ ಶಿಫಾರಸು ಮಾಡಿದ್ದು ತಪ್ಪಾಗಿದೆ. ಇದರಿಂದ ಕಾಂಗ್ರೆಸ್ ಪಕ್ಷಕ್ಕೆ ದೊಡ್ಡ ನಷ್ಟವಾಗಿದೆ ಎಂದು ಶಿವಕುಮಾರ್ ನೀಡಿರುವ ಹೇಳಿಕೆಯನ್ನು ಸೂಕ್ಷ್ಮವಾಗಿ ಗಮನಿಸಿದರೆ ಪಂಚಾಚಾರ್ಯ ಗುರುಪೀಠಗಳ ಓಲೈಕೆ ಮತ್ತು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಶಕ್ತಿ ಕುಗ್ಗಿಸಲು ನೀಡಿದ್ದು ಎಂದು ಪ್ರತಿಭಟನಾಕಾರರು ಆರೋಪಿಸಿದರು.
ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್ ಅವರಿಗೆ ಲಿಂಗಾಯತ ಧರ್ಮದ ಬಗ್ಗೆ ಏನೂ ಗೊತ್ತಿಲ್ಲ. ಲಿಂಗಾಯತ ಧರ್ಮದ ತತ್ವ, ಸಿದ್ಧಾಂತಗಳ ಅರಿವಿಲ್ಲ, ವಚನಗಳ ಬಗ್ಗೆಯೂ ತಿಳಿದುಕೊಂಡಿಲ್ಲ. ತಿಳಿದುಕೊಂಡಿದ್ದರೆ ಅವರು ಈ ರೀತಿಯ ಹೇಳಿಕೆ ನೀಡುತ್ತಿರಲಿಲ್ಲ ಎಂದರು.
ರಾಜ್ಯದ ಎಲ್ಲ ಕಡೆ ಈ ಹೇಳಿಕೆಗೆ ಖಂಡನೆ ವ್ಯಕ್ತವಾಗುತ್ತಿದ್ದರೂ ಸಚಿವ ಡಿ.ಕೆ. ಶಿವಕುಮಾರ್ ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಳ್ಳುತ್ತಿದ್ದಾರೆ. ಆತ್ಮಸಾಕ್ಷಿಗೆ ಅನುಗುಣವಾಗಿ ಮಾತನಾಡಿದ್ದೇನೆ, ಹೇಳಿಕೆಗೆ ಬದ್ಧ ಎಂದು ಸ್ಪಷ್ಟನೆ ನೀಡಿರುವುದು ಅವರ ದುರಹಂಕಾರವನ್ನು ಎತ್ತಿ ತೋರಿಸುತ್ತಿದೆ ಎಂದು ಟೀಕಿಸಿದರು.
ಜಮಖಂಡಿ ಬಸವ ಕೇಂದ್ರದ ಅಣ್ಣಾಸಾಬ ಜಗದೇವ, ಸಿದ್ದಪ್ಪ ಗಲಿಗಲಿ, ಜೇವರ್ಗಿ ಬಸವ ಕೇಂದ್ರದ ಶಿವನಗೌಡ ಪಾಟೀಲ್, ಶಿವಕುಮಾರ್ ಕಲ್ಲಾ, ರಾಮನಗೌಡ ಶಹಾಪುರ, ನಿಂಗಣ್ಣ ಗಳಮನಿ, ಮಲ್ಲನಗೌಡ ಹಗ್ಗಿನಾಳ, ನೀಲಕಂಠ ಅವಂಡಿ, ಬಸವರಾಜ್ ಕಲ್ಲಾ, ಧಾರವಾಡ ಬಸವ ಕೇಂದ್ರದ ಈಶ್ವರ ಸಾಣಿಕೊಪ್ಪ, ಬಸವಂತ ತೋಟದ, ಸಿಂಧನೂರು ಬಸವ ಕೇಂದ್ರದ ವೀರಭದ್ರಪ್ಪ ಕುರಗುಂದಿ, ಸಿಂಧಗಿ ಬಸವ ಕೇಂದ್ರದ ನಾನಾಗೌಡ ಪಾಟೀಲ್, ಬೀದರ್ ಬಸವ ಕೇಂದ್ರದ ಶರಣಪ್ಪ ಮಿಠಾರೆ, ಹಳಿಯಾಳ ಬಸವ ಕೇಂದ್ರದ ಬಸವರಾಜ ಗಾಣಿಗೇರ, ಬಸವರಾಜ ಹರಕುಣಿ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ಕ್ಷಮೆ ಕೋರದಿದ್ದಲ್ಲಿ ಬಸವ ಕೇಂದ್ರದಿಂದ ರಾಜ್ಯಾದ್ಯಂತ ಹೋರಾಟ ಲಿಂಗಾಯತ ಧರ್ಮದ ಹೋರಾಟ ನಷ್ಟವಾಗಿಲ್ಲ, ಸುಮಾರು 60 ಮಂದಿ ಲಿಂಗಾಯತ ಶಾಸಕರು ಆಯ್ಕೆಯಾಗಿದ್ದಾರೆ. ದಕ್ಷಿಣ ಕರ್ನಾಟಕದಲ್ಲಿ ಕಾಂಗ್ರೆಸ್‌ಗೆ ಹೆಚ್ಚಿನ ಸ್ಥಾನ ಬಂದಿಲ್ಲ ಎನ್ನುವ ಸತ್ಯವನ್ನು ಡಿ.ಕೆ. ಶಿವಕುಮಾರ್ ಒಪ್ಪಿಕೊಳ್ಳಬೇಕು. ತಮ್ಮ ಶಕ್ತಿ ಏನೆಂದು ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದು ಪ್ರತಿಭಟನಾಕಾರರು ತಾಕೀತು ಮಾಡಿದರು. ಲಿಂಗಾಯತ ಪ್ರತ್ಯೇಕ ಧರ್ಮದ ವಿಚಾರದಲ್ಲಿ ಆಗಿನ ಕಾಂಗ್ರೆಸ್ ಸರ್ಕಾರ ತಪ್ಪಿ ಮಾಡಿಲ್ಲ. ಸರಿಯಾದ ನಿರ್ಧಾರ ತೆಗೆದುಕೊಂಡು ಕೇಂದ್ರಕ್ಕೆ ಶಿಫಾರಸು ಮಾಡಿದೆ. ಧರ್ಮದ ವಿಚಾರದಲ್ಲಿ ಡಿಕೆಶಿ ಹಸ್ತಕ್ಷೇಪ ಮಾಡಬಾರದು, ಕೂಡಲೇ ಕ್ಷಮೆ ಕೋರಬೇಕು. ಸಚಿವರು ಕ್ಷಮೆ ಕೋರದಿದ್ದಲ್ಲಿ ರಾಜ್ಯಾದ್ಯಂತ ಬಸವ ಕೇಂದ್ರಗಳ ಮೂಲಕ ಉಗ್ರ ಹೋರಾಟ ಮಾಡಲಾಗುತ್ತದೆ ಎಂದು ಎಚ್ಚರಿಸಿದರು.