Advertisement

ಪಪಂ ಸಿಬ್ಬಂದಿ ಕಾರ್ಯ ವೈಖರಿಗೆ ಆಕ್ರೋಶ

03:25 PM May 27, 2022 | Niyatha Bhat |

ಹೊಳೆಹೊನ್ನೂರು: ಇಲ್ಲಿನ ಪಪಂ ಕಾರ್ಯಾಲಯದಲ್ಲಿ ಜನರ ಕೆಲಸ ಮಾಡಿಕೊಡಲು ವಿನಾಕಾರಣ ವಿಳಂಬ ನೀತಿ ಅನುಸರಿಸುತ್ತಿದ್ದಾರೆ ಎಂದು ಆರೋಪಿಸಿ ಡಣಾಯಕಪುರ ಗ್ರಾಮಸ್ಥರು ರೈತಸಂಘ ಹಾಗೂ ಹಸಿರು ಸೇನೆ ನೇತೃತ್ವದಲ್ಲಿ ಪಪಂ ಎದುರು ಗುರುವಾರ ಪ್ರತಿಭಟನೆ ನಡೆಸಿದರು.

Advertisement

ಪಪಂ ಆಗಿ ಮೇಲ್ದರ್ಜೆಗೆ ಏರಿಸಿದ ನಂತರ ಪಂಚಾಯ್ತಿ ವ್ಯಾಪ್ತಿಗೆ ಡಣಾಯಕಪುರ, ಎಮ್ಮೆಹಟ್ಟಿ, ಹೊಳೆಭೈರನಹಳ್ಳಿ, ಜಂಬರಘಟ್ಟ, ಕೆರೆಬೀರನಹಳ್ಳಿ ಹಾಗೂ ಮೂಡಲವಿಠಲಾಪುರ ಗ್ರಾಮಗಳು ಸೇರಲ್ಪಟ್ಟಿವೆ. ಗ್ರಾಮಗಳ ಜನರು ಇ-ಸ್ವತ್ತು, ಎನ್‌ ಒಸಿ, ಖಾತೆ ಬದಲಾವಣೆ, ಲೈಸೆನ್ಸ್‌ ಸೇರಿದಂತೆ ಅನೇಕ ಸೇವೆಗಳಿಗಾಗಿ ಪಂಚಾಯ್ತಿ ಕಚೇರಿಗೆ ಸಲ್ಲಿಸಿದ ಅರ್ಜಿಗಳನ್ನು ಶೀಘ್ರ ಕೈಗೆತ್ತಿಕೊಂಡು ವಿಲೇವಾರಿ ಮಾಡುತ್ತಿಲ್ಲ. ಜನರಿಗೆ ಅನಾವಶ್ಯಕ ದಾಖಲೆಗಳನ್ನು ನೀಡುವಂತೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಸತಾಯಿಸುತ್ತಿದ್ದಾರೆ. ಇದರಿಂದ ಜನರು ವಿನಾ ಕಾರಣ ತೊಂದರೆ ಅನುಭವಿಸುತ್ತಿದ್ದಾರೆ. ಮುಖ್ಯಾಧಿಕಾರಿಗಳು ಜನರಿಗೆ ಸರಿಯಾಗಿ ಸ್ಪಂದಿಸದೆ ಉಡಾಫೆಯಿಂದ ಮಾತನಾಡುತ್ತಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.

ಅಲ್ಲದೆ ವಸತಿ ಯೋಜನೆಯಡಿ ಅರ್ಹ ಫಲಾನುಭವಿಗಳಿಗೆ ವಸತಿ ಸೌಲಭ್ಯ ಕಲ್ಪಿಸಬೇಕು. ಮನೆ ಕಟ್ಟಲು ಸಕಾಲದಲ್ಲಿ ಸರಳ ದಾಖಲೆಯೊಂದಿಗೆ ಪರವಾನಗಿ ನೀಡಬೇಕು. ವಿದ್ಯುತ್‌ ಸೌಲಭ್ಯ ಪಡೆಯಲು ಕನಿಷ್ಠ ಶುಲ್ಕ ಪಡೆದು ಎನ್‌.ಒ.ಸಿ. ನೀಡಬೇಕು. ಅಗತ್ಯ ಸರಳ ದಾಖಲೆಗಳನ್ನು ಪಡೆದು ಇ-ಆಸ್ತಿ ನೀಡಬೇಕು. ಕಾಲಮಿತಿಯೊಳಗೆ ಖಾತೆ ಬದಲಾವಣೆ ಮಾಡಬೇಕು. ಗ್ರಾಮಗಳಲ್ಲಿ ಕಾಲ- ಕಾಲಕ್ಕೆ ಚರಂಡಿ ಸ್ವಚ್ಛಗೊಳಿಸಬೇಕು. ಬೀದಿ ದೀಪ ನಿರ್ವಹಣೆ ಸರಿಯಾಗಿ ಆಗಬೇಕು. 94ಸಿ ಹಕ್ಕುಪತ್ರಗಳ ಆಧಾರದ ಮೇಲೆ ತಕ್ಷಣ ಖಾತೆ ಮಾಡಿಕೊಡಬೇಕು. ಪಪಂ ಅನುದಾನದ ಕೊರತೆ ಇದ್ದು ಶೀಘ್ರ ಹೆಚ್ಚಿನ ಅನುದಾನ ಬಿಡುಗಡೆ ಮಾಡಬೇಕು. ಅಕಾಲಿಕ ಮಳೆಗೆ ಹಾನಿಗೀಡಾಗಿರುವ ಮನೆಗಳಿಗೆ ತಕ್ಷಣ ಸೂಕ್ತ ಪರಿಹಾರ ನೀಡಬೇಕು. ಸಾರ್ವಜನಿಕ ಸೇವೆಗಳನ್ನು ಸಮರ್ಪಕವಾಗಿ ನಿರ್ವಹಸಬೇಕು. ನಿರ್ಲಕ್ಷ್ಯ ತೋರುವ ಅಧಿಕಾರಿಗಳು ಹಾಗೂ ಸಿಬ್ಬಂದಿ ಮೇಲೆ ಸೂಕ್ತ ಶಿಸ್ತು ಕ್ರಮ ಜರುಗಿಸಬೇಕು ಎಂಬ ಬೇಡಿಕೆಯ ಮನವಿ ಪತ್ರವನ್ನು ಮುಖ್ಯಾಧಿಕಾರಿಗಳ ಮುಖಾಂತರ ಜಿಲ್ಲಾಧಿಕಾರಿಗಳಿಗೆ ಸಲ್ಲಿಸಲಾಯಿತು.

ರೈತಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಡಿ.ವಿ. ವೀರೇಶ್‌, ತಾಲೂಕು ಅಧ್ಯಕ್ಷ ಹಿರಣ್ಣಯ್ಯ, ಗ್ರಾಮ ಘಟಕದ ಅಧ್ಯಕ್ಷ ಎಸ್‌. ಕುಮಾರ್‌, ಸ್ಥಳೀಯ ಗ್ರಾಪಂ ಅಧ್ಯಕ್ಷ ಆರ್‌. ಉಮೇಶ್‌, ಎಚ್‌.ಕೆ. ಶ್ರೀನಿವಾಸ್‌, ಮುಖಂಡರಾದ ದಾನೇಶ್‌, ರಮೇಶ, ಬಸವರಾಜಪ್ಪ, ಎಚ್‌.ಜಿ. ವೆಂಕಟೇಶ್‌, ನಾಗಪ್ಪ, ಧರ್ಮೋಜಿರಾವ್‌, ಚಂದ್ರಶೇಖರ, ವಿಶ್ವನಾಥ, ಎಂ. ಹರೀಶ್‌ ಕುಮಾರ್‌ ಹಾಗೂ ಗ್ರಾಮಸ್ಥರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next