ಚಿಕ್ಕಮಗಳೂರು: ಕಾಂಗ್ರೆಸ್ ಶಾಸಕರಿಗೆ ಬಿಜೆಪಿ 100 ಕೋಟಿ ರೂ. ಆಫರ್ ನೀಡಿದೆ ಎನ್ನುವ ಶಾಸಕ ರವಿ ಗಣಿಗ ಅವರ ಆರೋಪಕ್ಕೆ ಚಿಕ್ಕಮಗಳೂರು ಶಾಸಕ ತಮ್ಮಯ್ಯ ಸ್ಪಷ್ಟನೆ ನೀಡಿದ್ದಾರೆ.
ಸೋಮವಾರ (ನ.18ರಂದು) ವಿಡಿಯೋ ಮಾಡಿ ಮಾತನಾಡಿರುವ ಅವರು, ರವಿ ಗಣಿಗ 100 ಕೋಟಿ ರೂ. ಆರೋಪಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ.
“ನನ್ನನ್ನು ಈವರೆಗೂ ಯಾರೂ ಸಂಪರ್ಕ ಮಾಡಿಲ್ಲ. ನಾನು ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಶಾಸಕ. ಸಿದ್ದರಾಮಯ್ಯ, ಖರ್ಗೆ, ಡಿಕೆಶಿ ನೇತೃತ್ವದಲ್ಲಿ 5 ವರ್ಷ ಸರ್ಕಾರ ಆಳಲು ಜನ ನನ್ನನ್ನು ಗೆಲ್ಲಿಸಿದ್ದಾರೆ. ಅವರು ಏನು ಮಾತಾಡಿದ್ದಾರೆ ನನಗೆ ಮಾಹಿತಿ ಇಲ್ಲ. ಇದರಲ್ಲಿ ನನ್ನ ಹೆಸರು ಏಕೆ ಬಂತು ನನಗೆ ಗೊತ್ತಿಲ್ಲ. ನಾನು 18 ವರ್ಷ ಬಿಜೆಪಿಯಲ್ಲಿ ಇದ್ದೆ. ಬಿಜೆಪಿಯವರು ಸಿಕ್ಕಿದಾಗ ಆತ್ಮೀಯವಾಗಿ ಮಾತನಾಡುತ್ತಾರೆ ಅಷ್ಟೆ” ಎಂದು ಶಾಸಕ ತಮ್ಮಯ್ಯ ಸ್ಪಷ್ಟನೆ ನೀಡಿದ್ದಾರೆ.
ಶಾಸಕ ರವಿಕುಮಾರ್ ಹೇಳಿದ್ದೇನು?:
ನಮ್ಮ ಶಾಸಕರ ಖರೀದಿಗೆ 50 ಕೋಟಿ ರೂ. ಅಲ್ಲ, 100 ಕೋಟಿ ರೂ. ಆಮಿಷ ಒಡ್ಡಿದ್ದಾರೆ. ಶಾಸಕರ ಭೇಟಿಯ ಆಡಿಯೋ, ವಿಡಿಯೋ ರೆಕಾರ್ಡ್ ಇದೆ. ಸಮಯ ನೋಡಿ ಬಿಡುಗಡೆ ಮಾಡುತ್ತೇವೆ ಎಂದು ಶಾಸಕ ರವಿಕುಮಾರ್ ಗೌಡ ಗಣಿಗ ಹೇಳಿದ್ದರು.
ಮುಖ್ಯಮಂತ್ರಿ ಮಾತು ಸತ್ಯ. ನಮ್ಮ ಶಾಸಕರನ್ನು ವಿಪಕ್ಷದವರು ಎಲ್ಲಿ ಭೇಟಿ ಮಾಡಿದ್ದರು, ಯಾವ ಗೆಸ್ಟ್ಹೌಸ್ಗೆ ಬಂದಿದ್ದರು, ಯಾವ ವಿಮಾನ ನಿಲ್ದಾಣದಲ್ಲಿ ಸಿಕ್ಕಿದ್ದರು ಎನ್ನುವುದರ ವಿಡಿಯೋ, ಆಡಿಯೋ ರೆಕಾರ್ಡ್ ಇದೆ. ಅದನ್ನು ಸಿಎಂ ಗಮನಕ್ಕೆ ತಂದಿದ್ದೇವೆ ಎಂದಿದ್ದರು.