Advertisement
ಈ ಕಾಯ್ದೆಯು ಸರ್ಕಾರಿ ಆಸ್ಪತ್ರೆ ಹಾಗೂ ಸರ್ಕಾರಿ ವೈದ್ಯರಿಗೂ ಅನ್ವಯಿಸುವಂತೆ ಮಾಡಬೇಕು. ಖಾಸಗಿ ಆಸ್ಪತ್ರೆಯಲ್ಲಿ ನೀಡುವ ಚಿಕಿತ್ಸೆಗೆ ಸರ್ಕಾರ ಶುಲ್ಕ ನಿಗದಿ ಮಾಡ ಕೂಡದು. ವೈದ್ಯರ ವಿರುದ್ಧ ದೂರು ದಾಖಲಿಸುವ ಅವಕಾಶ ಹಿಂಪಡೆಯುವ ನಿಟ್ಟಿನಲ್ಲಿ ವಿಧೇಯಕವನ್ನು ಇನ್ನೊಮ್ಮೆ ಪುನರ್ ಪರಿಶೀಲಿಸಬೇಕು ಎಂದು ಆಗ್ರಹಿಸಿ ರಾಜ್ಯದ ವಿವಿಧ ಭಾಗದ 15 ಸಾವಿರಕ್ಕೂ ಅಧಿಕ ವೈದ್ಯರು ಶುಕ್ರವಾರ ಬೆಳಗ್ಗೆ ಸಂಗೊಳ್ಳಿ ರಾಯಣ್ಣ ವೃತ್ತದಿಂದ ಫ್ರೀಡಂ ಪಾರ್ಕ್ ತನಕ ಕಾಲ್ನಡಿಗೆ ಜಾಥ ನಡೆಸಿ, ಸರ್ಕಾರ ಹಾಗೂ ಆರೋಗ್ಯ ಇಲಾಖೆ ವಿರುದ್ಧ ಘೋಷಣೆ ಕೂಗಿದರು.
Related Articles
Advertisement
ನಾರಾಯಣ ಹೃದಯಾಲಯದ ಡಾ.ದೇವಿಶೆಟ್ಟಿ ಮಾತನಾಡಿ, “ಸರ್ಕಾರಿ ಆಸ್ಪತ್ರೆ ಸರಿಯಿದ್ದರೆ ಸಾರ್ವಜನಿಕರು ಖಾಸಗಿ ಆಸ್ಪತ್ರೆಗಳಿಗೆ ಬರುತ್ತಿರಲಿಲ್ಲ. ಸರ್ಕಾರಿ ಆಸ್ಪತ್ರೆಯನ್ನೇ ಸರಿಯಾಗಿಟ್ಟುಕೊಳ್ಳದ ಸರ್ಕಾರ ನಮ್ಮ ಮೇಲೆ ಸವಾರಿ ಮಾಡಲು ಹೊರಟಿದೆ. ಈ ವಿಧೇಯಕದಿಂದ ಖಾಸಗಿ ಆಸ್ಪತ್ರೆಗಳಿಗೆ ಬಹಳ ತೊಂದರೆ ಇದೆ. ಸರ್ಕಾರ ಮಂಡಿಸಿರುವ ವಿಧೇಯಕವನ್ನು ಹಿಂಪಡೆದು ಮರು ಪರಿಶೀಲನೆ ಮಾಡದೇ ಇದ್ದರೆ ಉಗ್ರ ಹೋರಾಟ ಮಾಡಲಿದ್ದೇವೆ,’ ಎಂದು ಎಚ್ಚರಿಕೆ ನೀಡಿದರು.
ಭಾರತೀಯ ವೈದ್ಯಕೀಯ ಸಂಘದ ಅಧ್ಯಕ್ಷ ಡಾ.ರವೀಂದ್ರ ಮಾತನಾಡಿ, “ಈ ವಿಧೇಯಕದ ಅವಶ್ಯಕತೆ ಏನಿತ್ತು. ರಾಜ್ಯದಲ್ಲಿ ಪರಿಸ್ಥಿತಿ ಹೀಗೆ ಮುಂದುವರಿದರೆ ಎಲ್ಲಾ ವೈದ್ಯರು ಬೀದಿಗಿಳಿಯುವ ದಿನಗಳು ಬರಲಿದೆ. ವೈದ್ಯರು ಮಾನವೀಯತೆ ಇಟ್ಟುಕೊಂಡೇ ಈ ವೃತ್ತಿಗೆ ಬಂದಿದ್ದಾರೆ. ಖಾಸಗಿ ಆಸ್ಪತ್ರೆ ಮತ್ತು ವೈದ್ಯರ ಮೇಲೆ ಸರ್ಕಾರ ಈ ರೀತಿ ದಬ್ಟಾಳಿಕೆ ಮಾಡುವುದನ್ನು ಸಹಿಸಲು ಸಾಧ್ಯವಿಲ್ಲ,’ ಎಂದರು.
ಕೌÉಡ್ ನೈನ್ ಆಸ್ಪತ್ರೆಯ ನಿರ್ದೇಶಕ ಡಾ.ಕಿಶೋರ್ ಕುಮಾರ್, ಮಣಿಪಾಲ್ ಆಸ್ಪತ್ರೆ ಅಧ್ಯಕ್ಷ ಡಾ.ಸುದರ್ಶನ ಬಲ್ಲಾಳ್, ವೈದ್ಯಕೀಯ ಸಂಘದ ಪದಾಧಿಕಾರಿಗಳಾದ ಡಾ.ಅಲೆಕ್ಸಾಂಡರ್ ಥಾಮಸ್, ಡಾ.ಪ್ರಸನ್ನ ಸೇರಿದಂತೆ ವಿವಿಧ ಖಾಸಗಿ ಆಸ್ಪತ್ರೆಯ ಬಹುತೇಕ ಎಲ್ಲಾ ವ್ಯದ್ಯರು ಪ್ರತಿಭಟನೆಯಲ್ಲಿದ್ದರು.
ಸೇವೆಯಲ್ಲಿ ವ್ಯತ್ಯಯ: ಬಹುತೇಕ ವೈದ್ಯರು ಮುಷ್ಕರದಲ್ಲಿ ಪಾಲ್ಗೊಂಡಿದ್ದರಿಂದ ಕೆಲವು ಖಾಸಗಿ ಆಸ್ಪತ್ರೆಯ ಒಳ ಮತ್ತು ಹೊರ ರೋಗಿಗಳ ವಿಭಾಗದಲ್ಲಿ ತಜ್ಞ ವೈದ್ಯರ ಸೇವೆ ಲಭ್ಯವಾಗಿರಲಿಲ್ಲ. ಸಂಜೆಯ ನಂತರ ಕೆಲವು ವೈದ್ಯರು ಆಸ್ಪತ್ರೆಗೆ ಭೇಟಿ ನೀಡಿ, ರೋಗಿಗಳನ್ನು ವಿಚಾರಿಸಿದ್ದಾರೆ. ವೈದ್ಯರ ಸೇವೆ ಹೊರತುಪಡಿಸಿ ಬೇರೆಲ್ಲ ಸೌಲಭ್ಯ ಎಂದಿನಂತೆ ಆಸ್ಪತ್ರೆಗಳಲ್ಲಿ ಲಭ್ಯವಿತ್ತು.