Advertisement
ಪಟ್ಟಣದ ತಾಪಂ ಆವರಣದ ರಾಜೀವ್ ಗಾಂಧಿ ಸಭಾಂಗಣದಲ್ಲಿ ಸಿಇಒ ಎಸ್.ಅಶ್ವತಿ ಅಧ್ಯಕ್ಷತೆಯಲ್ಲಿ ಅಧಿಕಾರಿಗಳು, ಪಿಡಿಒಗಳನ್ನು ಒಳಗೊಂಡ ಶೌಚಾಲಯ ಪ್ರಗತಿ ಪರಿಶೀಲನಾ ಸಭೆ ನಡೆಯುತ್ತಿತ್ತು. ಮಧ್ಯಾಹ್ನ 1 ಗಂಟೆ ಸಮಯಕ್ಕೆ ಮೈದೂರು ಗ್ರಾಪಂ ವ್ಯಾಪ್ತಿಯ ಗೌರಿಪುರ ಗ್ರಾಮಸ್ಥರು ಅಖೀಲ ಭಾರತ ಕಿಸಾನ್ ಸಭಾ ಸಂಘಟನೆ ನೇತೃತ್ವದಲ್ಲಿ ಖಾತ್ರಿ ಯೋಜನೆಯಡಿ ದುಡಿಯುವ ಕೈಗಳಿಗೆ ಕೆಲಸ, ಶೌಚಾಲಯ ಬಿಲ್ ಪಾವತಿ, ಕುಡಿಯುವ ನೀರು ಕೊಡಬೇಕೆಂದು ಒತ್ತಾಯಿಸಿ ತಾಪಂ ಕಚೇರಿಯ ಎದುರು ಪ್ರತಿಭಟನೆ ಆರಂಭಿಸಿದರು. ಆಗ ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಆರ್.ತಿಪ್ಪೇಸ್ವಾಮಿ, ಮೈದೂರು ಪಿಡಿಒ ಮಂಜುನಾಥ್ ಆಗಮಿಸಿ ಮನವಿ ಸ್ವೀಕರಿಸಲು ಮುಂದಾದಾಗ ಸಿಇಒ ಬರಲಿ ಎಂದು ಪ್ರತಿಭಟನಾಕಾರರು ಪಟ್ಟು ಹಿಡಿದರು.
ಮೊದಲನೆ ಮಹಡಿಯಲ್ಲಿ ನಡೆಯುತ್ತಿದ್ದ ಪ್ರಗತಿ ಪರಿಶೀಲನಾ ಸಭೆಯೊಳಗೆ ನುಗ್ಗಲು ಯತ್ನಿಸಿದರು. ಪ್ರತಿಭಟನಾಕಾರರನ್ನು ತಡೆದ ಅಧಿಕಾರಿಗಳು ಮತ್ತು ಪೊಲೀಸರ ನಡುವೆ ವಾಗ್ವಾದ ನಡೆಯಿತು. ಇಷ್ಟಾದರೂ ಸಿಇಒ ಸಭೆಯಿಂದ ಹೊರಗೆ ಬರಲಿಲ್ಲ. ಆಗ ಸಭೆಯೊಳಗೆ ಅಧಿಕಾರಿಗಳ ಮಾತು ಕೇಳಿಸದಂತೆ ಜೋರಾಗಿ ಧಿಕ್ಕಾರದ ಘೋಷಣೆ ಕೂಗಲು ಆರಂಭಿಸಿದರು. ಗೊಂದಲ ವಾತಾವರಣ ಸೃಷ್ಟಿಯಾದ್ದರಿಂದ ಸಿಇಒ ಎಸ್.ಅಶ್ವತಿ ಅವರು ಸಭೆಯಿಂದ ಹೊರಗೆ ಆಗಮಿಸಿದರು. ಜನರ ಸಮಸ್ಯೆ ಆಲಿಸಲು ಆಗಮಿಸಿರುವ ತಾವು ಜನರ ಸಮಸ್ಯೆ ಆಲಿಸಲು ನಿರ್ಲಕ್ಷ ವಹಿಸುತ್ತೀರಿ, ಪ್ರತಿಭಟನಾಕಾರರ ಬಳಿಗೆ ಬಂದು ಮನವಿ ಸ್ವೀಕರಿಸುವ ಸೌಜನ್ಯವೂ ತಮ್ಮಲ್ಲಿ ಇಲ್ಲ ಎಂದು ಪ್ರತಿಭಟನಾಕಾರರು ಕಿಡಿಕಾರಿದಾಗ, ಸಭೆ ನಡೆಯುತ್ತಿದ್ದರಿಂದ ಮನವಿ ಸ್ವೀಕರಿಸಲು ಬರಲಿಲ್ಲ. ನಾನು ಯಾವಾಗಲೂ ಜನರ ಜೊತೆಗೆ ಇದ್ದೇನೆ. ಕೇರಳ ರಾಜ್ಯದಿಂದ ಇಲ್ಲಿಗೆ ಬಂದು ಜನರ ಕಷ್ಟಗಳಿಗೆ ಸ್ಪಂದಿಸುತ್ತಾ ಕೆಲಸ ಮಾಡುತ್ತಿದ್ದೇನೆಯೇ ಹೊರತು ನಿರ್ಲಕ್ಷ ವಹಿಸಿಲ್ಲ ಎಂದು ಸಿಇಒ ಎಸ್.ಅಶ್ವತಿ ಸ್ಪಷ್ಟಪಡಿಸಿದರು.
Related Articles
Advertisement
ಸಂಘಟನೆ ಮುಖಂಡರಾದ ಗುಡಿಹಳ್ಳಿ ಹಾಲೇಶ್, ಎಚ್.ಎಂ.ಸಂತೋಷ್, ರಮೇಶನಾಯ್ಕ, ಗ್ರಾಮಸ್ಥರಾದ ಬಳಿಗನೂರು ಮಲ್ಲೇಶ್, ಅಂಜಿನಪ್ಪ, ಕೊಟ್ರೇಶ್, ಹನುಮಂತಪ್ಪ, ನಾಗರಾಜ್, ಸಿದ್ದಪ್ಪ, ವೀರಪ್ಪ, ಹುಲಿಗೆಮ್ಮ, ಮಂಜಮ್ಮ, ಶಂಕರ್, ಗೋಣಿಬಸಪ್ಪ, ಮಂಜು, ಕೊಟ್ರಯ್ಯ ಮತ್ತಿತರರಿದ್ದರು.