Advertisement

ಮಾತೆ ಮಹಾದೇವಿ ವಿರುದ್ಧ ಆಕ್ರೋಶ

03:11 PM Aug 04, 2017 | |

ಬಾಳೆಹೊನ್ನೂರು: ಬಸವಣ್ಣನವರ ವಚನಗಳನ್ನು ತಿರುಚಿ ತಮ್ಮಸ್ವಾರ್ಥಕ್ಕೆ ಬಳಸಿಕೊಂಡು ಸಮಾಜದಲ್ಲಿ ಗೊಂದಲ ಉಂಟು ಮಾಡುತ್ತಿರುವ ಮಾತೆ ಮಹಾದೇವಿ ವೀರಶೈವ-ಲಿಂಗಾಯತ ಧರ್ಮಕ್ಕೆ ಕಂಟಕವಾಗಿದ್ದಾರೆ ಎಂದು ಬೇರುಗಂಡಿ ಬೃಹನ್ಮಠದ ರೇಣುಕ ಮಹಂತ ಶಿವಾಚಾರ್ಯರು
ತಿಳಿಸಿದರು. 

Advertisement

ರಂಭಾಪುರಿ ಶ್ರೀಗಳ ವಿರುದ್ಧ ಮಾತೆ ಮಹಾದೇವಿ ಹಾಗೂ ಅವರ ಅನುಯಾಯಿಗಳು ಅವಹೇಳನ ಮಾಡಿರುವ ಹಿನ್ನೆಲೆಯಲ್ಲಿ ಘಟನೆ ಖಂಡಿಸಿ ಇಲ್ಲಿನ ಜೇಸಿ ವೃತ್ತದಲ್ಲಿ ಗುರುವಾರ ರಂಭಾಪುರಿ ಪೀಠಾಭಿಮಾನಿಗಳು, ಸರ್ವ ಧರ್ಮೀಯರು ಹಾಗೂ ವಿವಿಧ ಸಂಘಟನೆಗಳು ಹಮ್ಮಿಕೊಂಡಿದ್ದ ಪ್ರತಿಭಟನಾ ಸಭೆಯಲ್ಲಿ ಅವರು ಮಾತನಾಡಿದರು. ಮಾತೆ ಮಹಾದೇವಿ ವಿರುದ್ಧ ವಿಚಾರಣೆ ನಡೆಸಿ ಗಡಿಪಾರು ಮಾಡಬೇಕು ಎಂದು ಒತ್ತಾಯಿಸಿದರು.

ಸುಳ್ಳ ಪಂಚಗೃಹ ಹಿರೇಮಠದ ಶಿವಸಿದ್ದರಾಮೇಶ್ವರ ಶಿವಾಚಾರ್ಯರು ಮಾತನಾಡಿ, ಲಿಂಗಾಯತ ಪದ ಸಂಸ್ಕಾರದಿಂದ ಬಂದಿದೆ. ಆದರೆ, ಇದನ್ನರಿಯದ ಮಾತೆ ಮಹಾದೇವಿ ವೀರಶೈವ ಲಿಂಗಾಯತ ಧರ್ಮವನ್ನು ಬೇರ್ಪಡಿಸಲು ದುಷ್ಟ ಶಕ್ತಿಗಳೊಂದಿಗೆ ಕೈ ಜೋಡಿಸಿದ್ದಾರೆ. ಮಾತೆ ಮಹಾದೇವಿ ಹಾಗೂ ಅವರ ಅನುಯಾಯಿಗಳು ವೀರಶೈವ-ಲಿಂಗಾಯತ ಧರ್ಮವನ್ನು ಪ್ರತ್ಯೇಕ ಪಡಿಸಲು ದುಸ್ಸಾಹಸ ಪಡುತ್ತಿರುವುದು ಖಂಡನೀಯ 
ಎಂದರು.

ಮಹಾರಾಷ್ಟ್ರದ ಬಾಳಾಪುರ್ಕರ್‌ ಜಂಗಮಮಠದ ಡಾ| ವಿರೂಪಾಕ್ಷ ಶಿವಾಚಾರ್ಯರು ಮಾತನಾಡಿ, ದೇಶದಲ್ಲಿ ಹಲವು ಜಾತಿಗಳಿದ್ದು, ಎಲ್ಲವೂ ಒಂದೇ ಆಗಿವೆ. ಬಸವಣ್ಣನವರು ಹೇಳಿದಂತೆ ದಯಯೇ ಧರ್ಮದ ಮೂಲವಾಗಿದೆ. ಆದರೆ ಮಹಾನ್‌ ಗುರುವಾದ ರಂಭಾಪುರಿ ಶ್ರೀಗಳನ್ನು ಮಾತೆ 
ಮಹಾದೇವಿ ಅನುಯಾಯಿಗಳು ಅವಮಾನಿಸಿರುವುದು ತೀವ್ರ ಖಂಡನೀಯವಾಗಿದೆ ಎಂದರು. ಜಿಪಂ ಮಾಜಿ ಉಪಾಧ್ಯಕ್ಷ ಎಂ.ಎಸ್‌. ಚನ್ನಕೇಶವ್‌, ಪಿಎಸಿಎಸ್‌ ಅಧ್ಯಕ್ಷ ಟಿ.ಎಂ. ಉಮೇಶ್‌ ಕಲ್ಮಕ್ಕಿ, ಮುಸ್ಲಿಂ ಸಮುದಾಯದ ಯುವ ಮುಖಂಡ ಇಬ್ರಾಹಿಂ ಶಾಫಿ, ಕ್ರಿಶ್ಚಿಯನ್‌ ಸಮುದಾಯದ ಮುಖಂಡ ಜಾನ್‌ ವಿಲೆ ಡಿಸೋಜಾ, ಎನ್‌.ಆರ್‌.ಪುರ ತಾಲೂಕು ಬಿಜೆಪಿ ಅಧ್ಯಕ್ಷ ಭಾಸ್ಕರ್‌ ವೆನಿಲ್ಲಾ ಇತರರು ಮಾತನಾಡಿದರು. ವಿಶ್ವ ಹಿಂದೂ ಪರಿಷತ್‌ ಜಿಲ್ಲಾ ಉಪಾಧ್ಯಕ್ಷ ಆರ್‌.ಡಿ. ಮಹೇಂದ್ರ, ಸಹ್ಯಾದ್ರಿ ಕಾಫಿ ಬೆಳೆಗಾರರ ಸಂಘದ ಅಧ್ಯಕ್ಷ ಎಂ.ಕೆ. ಸುಂದರೇಶ್‌, ತಾಪಂ ಉಪಾಧ್ಯಕ್ಷ ಹೊಳೆಬಾಗಿಲು ಮಂಜು, ಜೆಡಿಎಸ್‌ ಮುಖಂಡ ಕೆ.ಎನ್‌. ರುದ್ರಪ್ಪಗೌಡ, ಜಿಲ್ಲಾ ಅಲ್ಪ ಸಂಖ್ಯಾತ ವಿಭಾಗದ ಜಿಲ್ಲಾ ಜಂಟಿ ಕಾರ್ಯದರ್ಶಿ ಬಿ.ಕೆ. ಮಹಮ್ಮದ್‌ ಅಲಿ, ಸವಿತಾ ಸಮಾಜದ ಹಿರಿಯಣ್ಣ, ಜಿಪಂ ಸದಸ್ಯೆ ಚಂದ್ರಮ್ಮ, ಬಿಜೆಪಿ ವಕ್ತಾರ ಜಗದೀಶ್ಚಂದ್ರ, ದಸಂಸ ವಿಭಾಗೀಯ ಸಂಚಾಲಕ ಕುಮಾರ್‌, ವೀರಶೈವ ಮುಖಂಡ ಶಿವಶಂಕರ್‌, ಗ್ರಾಪಂ ಉಪಾಧ್ಯಕ್ಷೆ ಸವಿತಾ ಇತರರು ಪಾಲ್ಗೊಂಡಿದ್ದರು. 

ಪ್ರತಿಭಟನಾಕಾರರು ಕೆಲ ಕಾಲ ಮಾನವ ಸರಪಳಿ ನಿರ್ಮಿಸಿ ಸಾಂಕೇತಿಕವಾಗಿ ರಸ್ತೆ ತಡೆ ನಡೆಸಿದರು. ಬಳಿಕ ನಾಡಕಚೇರಿ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು.  

Advertisement
Advertisement

Udayavani is now on Telegram. Click here to join our channel and stay updated with the latest news.

Next