Advertisement

ಭರವಸೆ ನೀಡಿ ನಿರ್ಲಕ್ಷಿಸುತ್ತಿರುವ ಬಿಜೆಪಿ ವಿರುದ್ದ ಆಕ್ರೋಶ

11:51 AM Mar 10, 2022 | Team Udayavani |

ಚಿಂಚೋಳಿ: ಬಿಜೆಪಿ ನಾಯಕರು ಚುನಾವಣೆಯಲ್ಲಿ ಕೋಲಿ ಸಮಾಜಕ್ಕೆ ಹಲವಾರು ಭರವಸೆ ನೀಡಿ ಈಗ ನಿರ್ಲಕ್ಷಿಸುತ್ತಿರುವುದರಿಂದ ಶಾಸಕರು, ಸಂಸದರ ಸಭೆ, ಸಮಾರಂಭ, ಪಕ್ಷದ ಸಭೆಗಳಲ್ಲಿ ಭಾಗವಹಿಸದಿರಲು ನಿರ್ಧರಿಸಲಾಗಿದೆ ಎಂದು ತಾಲೂಕು ಕೋಲಿ ಸಮಾಜ ಅಧ್ಯಕ್ಷ ಗಿರಿರಾಜ ನಾಟೀಕಾರ, ಕೋಲಿ ಸಮಾಜದ ರಾಜ್ಯ ಪ್ರಧಾನ ಕಾರ್ಯದರ್ಶಿ ಲಕ್ಷ್ಮಣ ಅವಂಟಿ ತಿಳಿಸಿದ್ದಾರೆ.

Advertisement

ಪಟ್ಟಣದ ನಿಜಶರಣ ಅಂಬಿಗರ ಚೌಡಯ್ಯ ಸಮುದಾಯ ಭವನದಲ್ಲಿ ಕೋಲಿ ಸಮಾಜದ ಮುಖಂಡರ ಸಮ್ಮುಖದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಲಬುರಗಿ, ಬೀದರ ಮತ್ತು ಚಿಂಚೋಳಿ ವಿಧಾನಸಭೆ ಕ್ಷೇತ್ರದಲ್ಲಿ ನಡೆದ ಉಪ-ಚುನಾವಣೆಯಲ್ಲಿ ಕೋಲಿ ಸಮಾಜದಿಂದ ಬಿಜೆಪಿ ಅತಿ ಹೆಚ್ಚು ಮತ ಪಡೆದಿದೆ. ಹೀಗಿದ್ದರೂ ಕಳೆದ ಮೂರು ವರ್ಷದಿಂದ ಬಿಜೆಪಿ ಸಮಾಜವನ್ನು ಕಡೆಗಾಣಿಸುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಮಾಜಿ ಮುಖ್ಯಮಂತ್ರಿ ಬಿ.ಎಸ್‌ .ಯಡಿಯೂರಪ್ಪ, ಎನ್‌.ರವಿಕುಮಾರ, ವಿ.ಸೋಮಣ್ಣ, ಸಂಸದ ಡಾ| ಉಮೇಶ ಜಾಧವ, ಬೀದರ ಸಂಸದ ಭಗವಂತ ಖೂಬಾ, ಮಾಜಿ ಸಚಿವ ಬಾಬುರಾವ ಚಿಂಚನಸೂರ ಚುನಾವಣೆ ಪ್ರಚಾರದಲ್ಲಿ ಕೋಲಿ ಕಬ್ಬಲಿಗ ಸಮಾಜವನ್ನು ಎಸ್‌ಟಿಗೆ ಸೇರ್ಪಡೆ ಮಾಡಲಾಗುವುದು ಎಂದು ಭರವಸೆ ನೀಡಿದ್ದರು. ಆದರೀಗ ಅಧಿಕಾರ ಮುಗಿಯಲು ಕೆಲವು ತಿಂಗಳು ಮಾತ್ರ ಉಳಿದಿವೆ. ಈ ಕುರಿತು ಯಾವುದೇ ಚಕಾರ ಎತ್ತುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಒಂದೆರಡು ಸಲ ನಿಯೋಗ ಕರೆದುಕೊಂಡು ಹೋದರೂ ನೆಪಮಾತ್ರಕ್ಕೆ ಎನ್ನುವಂತಾಗಿದೆ. ನಿಜಶರಣ ಅಂಬಿಗರ ಚೌಡಯ್ಯ ಅಭಿವೃದ್ದಿ ನಿಗಮ ಕೇವಲ ನಾಮಕೆವಾಸ್ತೆ ಎನ್ನುವಂತಿದೆ. 2022ರ ಬಜೆಟ್‌ದಲ್ಲಿ ನಿಗಮಕ್ಕೆ ಹೆಚ್ಚಿನ ಅನುದಾನ ನೀಡಲಾಗಿದೆ. ಆದರೆ ಸಿಎಂ ಬಸವರಾಜ ಬೊಮ್ಮಾಯಿ ನಿಗಮಕ್ಕೆ ಒಂದು ಪೈಸೆ ಅನುದಾನವನ್ನು ನೀಡಿಲ್ಲ. ಕೆಲವು ದಿನಗಳ ಹಿಂದೆ ತಳವಾರ ಸಮುದಾಯಕ್ಕೆ ಎಸ್‌ಟಿ ಪ್ರಮಾಣ ಪತ್ರ ನೀಡುವುದಾಗಿ ಘೋಷಿಸಿದ್ದರು. ಈ ಪ್ರಮಾಣಪತ್ರವನ್ನು ನೀಡುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಮತಕ್ಷೇತ್ರದಲ್ಲಿ ಕೋಲಿ ಸಮಾಜಕ್ಕೆ ಸರ್ಕಾರದಿಂದ ಜಾರಿಯಾಗುತ್ತಿರುವ ಯಾವುದೇ ಯೋಜನೆಗಳ ಲಾಭ ಸಿಗುತ್ತಿಲ್ಲ. ಹೀಗೆ ಆದಲ್ಲಿ ಬರುವ ದಿನಗಳಲ್ಲಿ ಕೋಲಿ ಸಮಾಜ ತಕ್ಕಪಾಠ ಕಲಿಸಲಿದೆ ಎಂದು ತಾಲೂಕು ಕೋಲಿ ಸಮಾಜದ ಅಧ್ಯಕ್ಷ ಗಿರಿರಾಜ ನಾಟೀಕಾರ, ರಾಜ್ಯ ಪ್ರಧಾನ ಕಾರ್ಯದರ್ಶಿ ಲಕ್ಷ್ಮಣ ಆವಂಟಿ ಎಚ್ಚರಿಕೆ ನೀಡಿದರು. ಮುಖಂಡರಾದ ರವಿ ಹೊಸಬಾಯಿ, ಸಂಗಪ್ಪ ದಂಡಿನ, ರಾಮಲಿಂಗ ನಾಟೀಕಾರ, ಸುಧಾಕರ ಮಿರಿಯಾಣ, ಕಾಶಿನಾಥ ನಾಟೀಕಾರ, ರಾಜಕುಮಾರ ರಾಜಾಪುರ, ಸಂಗಮೇಶ ಬಡಿಗೇರ, ಸಂತೋಷ ಕಡಬೂರ, ಮಲ್ಲಿಕಾರ್ಜುನ ಮರಗುತ್ತಿ, ಪವನಕುಮಾರ ಗೋಪನಪಲ್ಲಿ ಹಾಗೂ ಕೋಲಿ ಸಮಾಜದ ಮುಖಂಡರು ಭಾಗವಹಿಸಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next