ನವದೆಹಲಿ : ಎಐಎಮ್‍ಐಎಮ್‍ನ ಮುಖ್ಯಸ್ಥ ಹಾಗೂ ಸಂಸದ ಅಸಾವುದ್ದೀನ್ ಓವೈಸಿ ಅವರು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಮತ್ತೆ ವಾಗ್ದಾಳಿ ನಡೆಸಿದ್ದಾರೆ.
ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಓವೈಸಿ, ನಮ್ಮ ಪ್ರಧಾನಿ ನರೇಂದ್ರ ಮೋದಿಯವರು ಮುಖ್ಯವಾಗಿ ಎರಡು ವಿಷಯಗಳ ಬಗ್ಗೆ ಮಾತನಾಡುತ್ತಿಲ್ಲ. ದೇಶದಲ್ಲಿ ದಿನದಿಂದ ದಿನಕ್ಕೆ ಇಂಧನ ತೈಲ ಬೆಲೆ ಹೆಚ್ಚುತ್ತಿದೆ. ಹಾಗೂ ದೇಶದ ಕೇಂದ್ರಾಡಳಿತ ಪ್ರದೇಶವಾದ ಲಡಾಖ್ ಪಕ್ಕದಲ್ಲಿ ಚೀನಾ ಸೇನೆ ನೆಲೆಯೂರಿದೆ. ಈ ಎರಡು ವಿಷಗಳ ಬಗ್ಗೆ ಮೋದಿಯವರು ಯಾಕೆ ಮಾತನಾಡುತ್ತಿಲ್ಲ ಎಂದು ಪ್ರಶ್ನಿಸಿದ್ದಾರೆ.
ಮೋದಿ ವಿರುದ್ಧ ಟೀಕಾ ಪ್ರಹಾರ ನಡೆಸಿರುವ ಓವೈಸಿ, ಮೋದಿಯವರು ಚೀನಾ ವಿರುದ್ಧ ಮಾತನಾಡಲು ಹೆದರುತ್ತಿದ್ದಾರೆ ಎಂದು ಕುಟುಕಿದ್ದಾರೆ. ಪ್ರತಿ ದಿನ ಲೀಟರ್ ಗೆ 35 ಪೈಸೆಯಂತೆ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಹೆಚ್ಚುತ್ತಿದೆ. ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ನೂರು ರೂಪಾಯಿಯ ಗಡಿ ದಾಡಿದೆ. ಮೋದಿ ಮಾತ್ರ ಮೌನಿಯಾಗಿದ್ದಾರೆ ಎಂದು ಓವೈಸಿ ಟೀಕಿಸಿದ್ದಾರೆ.
ಇನ್ನು ಜಮ್ಮು ಕಾಶ್ಮೀರದಲ್ಲಿ ಉಗ್ರರ ಗುಂಡಿನ ದಾಳಿಗೆ ಹುತಾತ್ಮರಾಗುತ್ತಿರುವ ಯೋಧರ ಬಗ್ಗೆ ಮಾತನಾಡಿರುವ ಓವೈಸಿ, ಜಮ್ಮು ಕಾಶ್ಮೀರದಲ್ಲಿ 9 ಜನ ಯೋಧರು ಪ್ರಾಣ ತ್ಯಾಗ ಮಾಡಿದ್ದಾರೆ. ಇಂತಹ ಸಂದರ್ಭದಲ್ಲಿ ಭಾರತವು ಅಕ್ಟೋಬರ್ 24 ರಂದು ಪಾಕ್ ಜೊತೆ ಟಿ-20 ಆಟವಾಡಲು ಸಿದ್ಧವಾಗಿದೆ. ನಮ್ಮ ಸೈನಿಕರು ಹುತಾತ್ಮರಾಗುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಪಾಕ್ ಜೊತೆ ಟಿ-20 ಪಂದ್ಯ ಬೇಕಾ ? ಜಮ್ಮು ಕಾಶ್ಮೀರದಲ್ಲಿ ಪಾಕಿಸ್ತಾನ ಪ್ರತಿ ದಿನ ಭಾರತೀಯ ಪ್ರಾಣದ ಜೊತೆ 20-20 ಆಡುತ್ತಿದೆ ಎಂದಿದ್ದಾರೆ ಓವೈಸಿ.