Advertisement

ನಮ್ಮ ಮೆಟ್ರೋ ವಿದ್ಯುತ್‌ ದರ ಒಂದು ರೂ. ಇಳಿಕೆ

12:22 PM May 15, 2018 | Team Udayavani |

ಬೆಂಗಳೂರು: “ನಮ್ಮ ಮೆಟ್ರೋ’ಗೆ ಬಳಸುವ ವಿದ್ಯುತ್‌ಗೆ ವಿಧಿಸುವ ದರದಲ್ಲಿ ಒಂದು ರೂ. ಇಳಿಕೆ ಮಾಡಿ ಕರ್ನಾಟಕ ವಿದ್ಯುತ್‌ ನಿಯಂತ್ರಣ ಆಯೋಗ ಆದೇಶ ಹೊರಡಿಸಿದೆ. ಸಾರ್ವಜನಿಕರ ಸುಗಮ ಸಂಚಾರ ಸೇವೆ ಕಲ್ಪಿಸುವ ಬೆಂಗಳೂರು ಮೆಟ್ರೋ ರೈಲು ನಿಗಮವು ಬೆಸ್ಕಾಂ ಪ್ರಮುಖ ಗ್ರಾಹಕ ಸಂಸ್ಥೆಯಾಗಿರುವ ಹಿನ್ನೆಲೆಯಲ್ಲಿ ಬೆಸ್ಕಾಂ ಮನವಿಯಂತೆ ಆಯೋಗ ದರ ಇಳಿಕೆ ಮಾಡಲಾಗಿದ್ದು, ಪ್ರತಿ ಯೂನಿಟ್‌ ವಿದ್ಯುತ್‌ ದರ 5 ರೂ.ಗೆ ಇಳಿಕೆಯಾಗಲಿದೆ.

Advertisement

ಈ ಬಗ್ಗೆ ಮಾಹಿತಿ ನೀಡಿದ ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ರಾಜೇಂದ್ರ ಚೋಳನ್‌, ನಗರದ ಜನರ ಸುಗಮ ಸಂಚಾರ ವ್ಯವಸ್ಥೆ ಕಲ್ಪಿಸಿರುವ “ನಮ್ಮ ಮೆಟ್ರೋ’ ಬೆಸ್ಕಾಂನ ಪ್ರಮುಖ ಗ್ರಾಹಕ ಸಂಖ್ಯೆ. ವಿದ್ಯುತ್‌ ಬಳಕೆಗಾಗಿ ಸಂಸ್ಥೆಯು ವಾರ್ಷಿಕವಾಗಿ 500 ಕೋಟಿ ರೂ.ನಷ್ಟು ಬಿಲ್‌ ಪಾವತಿಸುತ್ತಿದೆ. ಆ ಹಿನ್ನೆಲೆಯಲ್ಲಿ ಸಂಸ್ಥೆಗೆ ಪೂರೈಸುವ ವಿದ್ಯುತ್‌ಗೆ ವಿಧಿಸುವ ದರದಲ್ಲಿ ಒಂದು ರೂ. ಇಳಿಕೆ ಮಾಡಲಾಗಿದೆ ಎಂದು ಹೇಳಿದರು.

ಇದರಿಂದ ಸಂಸ್ಥೆಗೆ ವಾರ್ಷಿಕ ಸುಮಾರು ನೂರಾರು ಕೋಟಿ ರೂ. ಉಳಿತಾಯವಾಗುವ ನಿರೀಕ್ಷೆ ಇದೆ. ಇದರ ಲಾಭವನ್ನು ಬಿಎಂಆರ್‌ಸಿಎಲ್‌ ಗ್ರಾಹಕರ ಅನುಕೂಲಕ್ಕೆ ಬಳಸಿಕೊಳ್ಳಬಹುದಾಗಿದೆ ಎಂದು ತಿಳಿಸಿದರು.

ಸೇವಾ ಶುಲ್ಕವಿಲ್ಲ: ಆನ್‌ಲೈನ್‌ನಲ್ಲಿ ವಿದ್ಯುತ್‌ ಬಿಲ್‌ ಪಾವತಿಸುವವರಿಗೆ ಬ್ಯಾಂಕ್‌ಗಳು ವಿಧಿಸುವ ಸೇವಾ ಶುಲ್ಕವನ್ನು ಗ್ರಾಹಕರಿಗೆ ವರ್ಗಾಯಿಸದೆ ಬೆಸ್ಕಾಂ ಸಂಸ್ಥೆಯೇ ಭರಿಸಲಿದೆ. ಕೇಂದ್ರ ಸರ್ಕಾರದ ಸೂಚನೆಯಂತೆ ಕಳೆದ ಮಾರ್ಚ್‌ 20ರೊಳಗೆ ಆನ್‌ಲೈನ್‌ ಪಾವತಿಗೆ ಸೇವಾ ಶುಲ್ಕವನ್ನು ಸಂಸ್ಥೆಯಿಂದಲೇ ಪಾವತಿಸಲು ನಿರ್ಧರಿಸಲಾಗಿದೆ.

ಹಾಗಾಗಿ ಕ್ರೆಡಿಟ್‌ ಕಾರ್ಡ್‌, ಡೆಬಿಟ್‌ ಕಾರ್ಡ್‌ ಸೇರಿದಂತೆ ಆನ್‌ಲೈನ್‌ನಲ್ಲಿ ಬಿಲ್‌ ಪಾವತಿಯಿಂದ ಗ್ರಾಹಕರಿಗೆ ಯಾವುದೇ ರೀತಿಯಲ್ಲಿ ಹೊರೆಯಾಗದು. ಮುಂಗಡ ಬಿಲ್‌ ಪಾವತಿಗೆ ಬಿಲ್‌ ಮೊತ್ತದ ಶೇ.0.25ರಷ್ಟು ವಿನಾಯ್ತಿ ನೀಡುವ ವ್ಯವಸ್ಥೆ ಡಲಾಗುವುದು. ಜತೆಗೆ ಸೌರ ಹೀಟರ್‌ಗಳ ಬಳಕೆಗೆ ವಿನಾಯ್ತಿ ಮುಂದುವರಿಸಲಾಗಿದೆ ಎಂದು ಹೇಳಿದರು.

Advertisement

ಇವಿ ಚಾರ್ಜಿಂಗ್‌ ವಿದ್ಯುತ್‌ ದರ ಇಳಿಕೆ: ಎಲೆಕ್ಟ್ರಿಕಲ್‌ ವಾಹನಗಳ ಚಾರ್ಜಿಂಗ್‌ಗೆ ಬಳಕೆಯಾಗುವ ವಿದ್ಯುತ್‌ ವಿಧಿಸುವ ದರವನ್ನು 4.85 ರೂ.ಗೆ ಇಳಿಕೆ ಮಾಡಲಾಗಿದೆ. ಎಲೆಕ್ಟ್ರಿಕಲ್‌ ವಾಹನ ಚಾರ್ಜಿಂಗ್‌ ವಿದ್ಯುತ್‌ಗೆ ಖಾಸಗಿ ಸಂಸ್ಥೆಗಳು ಗರಿಷ್ಠ 8 ರೂ.ವರೆಗೆ ದರ ವಿಧಿಸುತ್ತಿದ್ದವು. ಇದೀಗ ಇಳಿಕೆ ಮಾಡಲಾಗಿದೆ. ಬೆಸ್ಕಾಂ ಎಲೆಕ್ಟ್ರಿಕಲ್‌ ವಾಹನ ಚಾರ್ಜಿಂಗ್‌ಗೆ ಬಳಸುವ ಪ್ರತಿ ಯೂನಿಟ್‌ ವಿದ್ಯುತ್‌ಗೆ 4.85 ರೂ. ವಿಧಿಸಲಿದ್ದು, ಖಾಸಗಿ ಸಂಸ್ಥೆಗಳು ಎಷ್ಟಾದರೂ ದರ ವಿಧಿಸಬಹುದು. ಸ್ಪರ್ಧಾತ್ಮಕತೆಯೂ ಹೆಚ್ಚಾಗಿರುವುದರಿಂದ ದುಬಾರಿ ಬೆಲೆ ವಿಧಿಸಲು ಸಾಧ್ಯವಾಗದು ಎಂದು ತಿಳಿಸಿದರು.

ಎಲೆಕ್ಟ್ರಿಕಲ್‌ ವಾಹನ ಚಾರ್ಜಿಂಗ್‌ ಕೇಂದ್ರ ಸ್ಥಾಪನೆಗೆ ಇನ್ನು ಮುಂದೆ ಅನುಮತಿ ಪಡೆಯುವ ಅಗತ್ಯವಿಲ್ಲ. ಯಾರು, ಎಲ್ಲಿ ಬೇಕಾದರೂ ಕೇಂದ್ರಗಳನ್ನು ಸ್ಥಾಪಿಸಿಕೊಂಡು ಬಳಸಿಕೊಳ್ಳಬಹುದು. ವಾಣಿಜ್ಯವಾಗಿಯೂ ಬಳಸಿಕೊಳ್ಳಬಹುದು. ಈ ಕ್ರಮಗಳಿಂದಾಗಿ ಎಲೆಕ್ಟ್ರಿಕಲ್‌ ವಾಹನಗಳ ಬಳಕೆಗೆ ಹೆಚ್ಚಿನ ಉತ್ತೇಜನ ಸಿಗಲಿದೆ ಎಂದು ಹೇಳಿದರು.

ತ್ಯಾಜ್ಯ ನಿರ್ವಹಣೆಗೂ ಆದ್ಯತೆ: ಘನ ತ್ಯಾಜ್ಯ ಸಂಸ್ಕರಣೆಯು ಪರಿಸರ ಹಾಗೂ ಸಾಮಾಜಿಕ ಅನುಕೂಲಕ್ಕೆ ಸಂಬಂಧಪಟ್ಟ ಕಾರ್ಯವಾಗಿರುವುದರಿಂದ ತ್ಯಾಜ್ಯ ಸಂಸ್ಕರಣಾ ಘಟಕಗಳಿಗೆ ಎಲ್‌ಟಿ ಹಾಗೂ ಎಚ್‌ಟಿ ಕೈಗಾರಿಕಾ ವರ್ಗದ ದರವನ್ನೇ ಅನ್ವಯಿಸಲು ಆಯೋಗ ಆದೇಶ ಹೊರಡಿಸಿದೆ ಎಂದು ಕರ್ನಾಟಕ ವಿದ್ಯುತ್‌ ನಿಯಂತ್ರಣ ಆಯೋಗದ ಅಧ್ಯಕ್ಷ ಎಂ.ಕೆ.ಶಂಕರಲಿಂಗೇಗೌಡ ಹೇಳಿದರು.

ಸೋಮವಾರ ವಿದ್ಯುತ್‌ ದರ ಪರಿಷ್ಕರಿಸಿ ಆದೇಶ ಹೊರಡಿಸಿದ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ವಿದ್ಯುತ್‌ ಸರಬರಾಜು ಕಂಪನಿಗಳೂ ಪ್ರತಿ ಉಪವಿಭಾಗಗಳಲ್ಲಿ ಗ್ರಾಹಕ ಸಂಪರ್ಕ ಸಭೆಗಳನ್ನು ಸಂಬಂಧಪಟ್ಟ ಅಧೀಕ್ಷಕ ಎಂಜಿನಿಯರ್‌ ಅಥವಾ ಕಾರ್ಯಪಾಲಕ ಎಂಜಿನಿಯರ್‌ ಅಧ್ಯಕ್ಷತೆಯಲ್ಲಿ ಪ್ರತಿ ಮೂರು ತಿಂಗಳಿಗೊಮ್ಮೆ ನಡೆಸಬೇಕು ಎಂದು ಸೂಚನೆ ನೀಡಲಾಗಿದೆ.

ಒಂದೊಮ್ಮೆ ಸಭೆಗಳನ್ನು ನಡೆಸದಿದ್ದರೆ ಆಯೋಗವು ಪ್ರತಿ ಉಪವಿಭಾಗಕ್ಕೆ ಒಂದು ಲಕ್ಷ ರೂ. ದಂಡ ವಿಧಿಸಲಿದ್ದು, ಆ ದಂಡವನ್ನು ಸಂಬಂಧಪಟ್ಟ ಅಧಿಕಾರಿ ಪಾವತಿಸಬೇಕಾಗುತ್ತದೆ ಎಂದು ತಿಳಿಸಿದರು. ಮಂಗಳೂರು ವಿಶೇಷ ಆರ್ಥಿಕ ವಲಯಕ್ಕೆ 42.14 ಕೋಟಿ ರೂ. ಹಾಗೂ ಏಕಸ್‌ ವಿಶೇಷ ಆರ್ಥಿಕ ವಲಯಕ್ಕೆ 14.83 ಕೋಟಿ ರೂ. ವಾರ್ಷಿಕ ಆದಾಯ ಬೇಡಿಕೆಯನ್ನು ಆಯೋಗ ಒಪ್ಪಿದೆ.

ಅದರಂತೆ ಮಂಗಳವಾರ ವಿಶೇಷ ಆರ್ಥಿಕ ವಲಯ ಕೈಗಾರಿಕಾ ಗ್ರಾಹಕರಿಗೆ ಪ್ರತಿ ಯೂನಿಟ್‌ಗೆ 6.85 ರೂ. ಹಾಗೂ ಏಕಸ್‌ ವಿಶೇಷ ಆರ್ಥಿಕ ವಲಯದಲ್ಲಿ ಪ್ರತಿ ಯೂನಿಟ್‌ಗೆ 6.50 ರೂ. ದರ ನಿಗದಿಪಡಿಸಲಾಗಿದೆ ಎಂದು ಹೇಳಿದರು. ಸಣ್ಣ ಪುಟ್ಟ ವಿದ್ಯುತ್‌ ಘಟಕಗಳನ್ನು ಹೊರತುಪಡಿಸಿ ಉಳಿದ ಸೌರ ವಿದ್ಯುತ್‌ ಘಟಕಗಳಲ್ಲಿ ಟೆಂಡರ್‌ ಮೂಲಕವೇ ದರ ನಿಗದಿಪಡಿಸಬೇಕು. ಸೌರವಿದ್ಯುತ್‌, ಪವನ ವಿದ್ಯುತ್‌ ಸೇರಿದಂತೆ ಎಲ್ಲದಕ್ಕೂ ಇದು ಅನ್ವಯಿಸಲಿದೆ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next