Advertisement
ನಗರದ ಕೇಂದ್ರ ಭಾಗದಲ್ಲಿರುವ ಮೆಜೆಸ್ಟಿಕ್ ನಿಲ್ದಾಣದಲ್ಲಿ ನಿರ್ಮಾಣವಾಗಿರುವ ಇಂಟರ್‌ಚೇಂಜ್ ನಿಲ್ದಾಣವು ದೇಶದಲ್ಲೇ ಅತಿ ದೊಡ್ಡ ಹಾಗೂ ಏಷ್ಯಾಖಂಡದಲ್ಲೇ ಎರಡನೇ ಅತಿದೊಡ್ಡ ಇಂಟರ್‌ಚೇಂಜ್ ನಿಲ್ದಾಣವೆಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಈ ಹಿಂದೆ ಆಯ್ದ ಮಾರ್ಗದಲ್ಲಿ ಸಂಚರಿಸುತ್ತಿದ್ದ ಮೆಟ್ರೋ ರೈಲಿನಲ್ಲಿ ನಿತ್ಯ ಎರಡು ಲಕ್ಷಕ್ಕೂ ಹೆಚ್ಚು ಮಂದಿ ಪ್ರಯಾಣಿಸುತ್ತಿದ್ದರು. ಇದೀಗ ಮೊದಲ ಹಂತ ಸಂಪೂರ್ಣ ಸಂಚಾರಕ್ಕೆ ಮುಕ್ತವಾಗಿರುವುದರಿಂದ ಪ್ರಯಾಣಿಕರ ಸಂಖ್ಯೆ ಐದು ಲಕ್ಷ ಮೀರುವ ಸಾಧ್ಯತೆ ಇದೆ.
Related Articles
Advertisement
ನಿವೇಶನ- ಫ್ಲ್ಯಾಟ್ ಹಂಚಿಕೆಗೆ ಆದ್ಯತೆ: ಅಂತಾರಾಷ್ಟ್ರೀಯ ನಗರಿ ಎಂಬ ಹೆಗ್ಗಳಿಕೆಗೆ ಪಾತ್ರವಾಗುತ್ತಿರುವ ಬೆಂಗಳೂರಿನಲ್ಲಿ ನಿವೇಶನ, ಸೂರು ಪಡೆಯಬೇಕೆಂದು ಬಯಸುವ ದೊಡ್ಡ ಸಮೂಹವೇ ಇದೆ. ಆದರೆ ಭೂಮಿಯ ಬೆಲೆ ಗಗನಮುಖೀಯಾಗಿರುವ ಸಂದರ್ಭದಲ್ಲಿ ಖಾಸಗಿಯವರಿಂದ ಮಾರುಕಟ್ಟೆ ದರದಲ್ಲಿ ನಿವೇಶನ, ಫ್ಲ್ಯಾಟ್ ಖರೀದಿಸುವುದು ಸಾಮಾನ್ಯ ಜನರಿಂದ ಸಾಧ್ಯವೇ ಇಲ್ಲ ಎಂಬ ಸ್ಥಿತಿ ಇದೆ. ಈ ರೀತಿಯ ಜನರಿಗೆ ಸ್ಪಂದಿಸಲೆಂದೇ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ಸರ್ಕಾರವೇ ನಿಯಮಿತವಾಗಿ ಬಡಾವಣೆಗಳನ್ನು ಅಭಿವೃದ್ಧಿಪಡಿಸಿ ನಿವೇಶನ ಹಂಚಿಕೆ ಮಾಡುತ್ತಿದೆ.
ಅದರಂತೆ 2017-18ನೇ ಸಾಲಿನಲ್ಲಿ ಕೆಂಪೇಗೌಡ ಬಡಾವಣೆಯಲ್ಲಿ 5,000 ನಿವೇಶನ ಹಂಚಿಕೆ ಮಾಡಲು ಬಿಡಿಎ ಸಿದ್ಧತೆ ನಡೆಸಿದೆ. ಜತೆಗೆ ಕೆಂಪೇಗೌಡ ಬಡಾವಣೆ ಮಾರ್ಗವಾಗಿ ಮೈಸೂರು ರಸ್ತೆಯಿಂದ ಮಾಗಡಿ ರಸ್ತೆಗೆ ನೇರ ಸಂಪರ್ಕ ಕಲ್ಪಿಸುವ 10.7 ಕಿ.ಮೀ. ಉದ್ದದ ಆರ್ಟಿರಿಯಲ್ ರಸ್ತೆಯನ್ನು ಸುಮಾರು 350 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸುವ ಯೋಜನೆ ರೂಪಿಸಿದೆ. ಅದೇರೀತಿ 3000 ಫ್ಲ್ಯಾಟ್‌ಗಳನ್ನು ಅಭಿವೃದ್ಧಿಪಡಿಸಿ ಪ್ರಸಕ್ತ ವರ್ಷದಲ್ಲೇ ಹಂಚಿಕೆ ಮಾಡುವ ಗುರಿ ಹೊಂದಿದೆ. ಕೋನದಾಸಪುರ ಗ್ರಾಮದಲ್ಲಿ 166 ಎಕರೆ ಪ್ರದೇಶದಲ್ಲಿ ನವೀನ ಮಾದರಿಯ ಟೌನ್‌ಶಿಪ್ ಕೂಡ ನಿರ್ಮಾಣವಾಗುತ್ತಿದೆ.
ಹೊರವರ್ತುಲ ರಸ್ತೆಯ ಹೆಬ್ಟಾಳ ಜಂಕ್ಷನ್‌ನಲ್ಲಿ ಕೆಳಸೇತುವೆ ನಿರ್ಮಾಣದ ಜತೆಗೆ ಮೇಲು ರಸ್ತೆಯಲ್ಲಿ ದಟ್ಟಣೆ ತಪ್ಪಿಸಲು ವಿಸ್ತರಣೆ ಮಾಡುವ ಕಾರ್ಯಕ್ಕೆ 88 ಕೋಟಿ ರೂ. ಅನುದಾನ ಕಾಯ್ದಿರಿಸಿದೆ. ಅಂದಾಜು 44 ಕೋಟಿ ರೂ. ವೆಚ್ಚದಲ್ಲಿ ಹೊರವರ್ತುಲ ರಸ್ತೆಯ ದೊಡ್ಡನೆಕ್ಕುಂದಿ ಜಂಕ್ಷನ್‌ನಲ್ಲಿ ನಿರ್ಮಾಣವಾಗುತ್ತಿರುವ ಮೇಲುಸೇತುವೆ ಕಾಮಗಾರಿಯು ಸದ್ಯದಲ್ಲೇ ಸಾರ್ವಜನಿಕರ ಬಳಕೆಗೆ ಮುಕ್ತಗೊಳ್ಳಲಿದೆ. ಬೆಂಗಳೂರು ಮೆಟ್ರೋ ರೈಲು ನಿಗಮದ ಸಹಯೋಗದಲ್ಲಿ ಹೊಸೂರು ರಸ್ತೆಯ ಸಿಲ್ಕ್ ಬೋರ್ಡ್ ಜಂಕ್ಷನ್ ಹಾಗೂ ಕೆ.ಆರ್.ಪುರ ಜಂಕ್ಷನ್‌ಗಳನ್ನು ಅಭಿವೃದ್ಧಿಪಡಿಸಲಿದೆ.
ಸಮೂಹ ಸಾರಿಗೆ ಬಳಕೆಗೆ ಉತ್ತೇಜನ: ನಗರದಲ್ಲಿ ಸಂಚಾರ ದಟ್ಟಣೆ ತಗ್ಗಿಸಲು ಹಾಗೂ ಸಾರ್ವಜನಿಕರು ಸಮೂಹ ಸಾರಿಗೆಯನ್ನೇ ಹೆಚ್ಚಾಗಿ ಬಳಸುವಂತೆ ಪ್ರೋತ್ಸಾಹ ನೀಡುವ ಸಲುವಾಗಿ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು ನಾನಾ ಮಾದರಿ ಬಸ್‌ಗಳನ್ನು ಕಾರ್ಯಾಚರಣೆಗಿಳಿಸಿದೆ. ತನ್ನ ಕಾರ್ಯ ವೈಖರಿ ಹಾಗೂ ಪ್ರಯಾಣಿಕರಿಗೆ ನೀಡುತ್ತಿರುವ ಉತ್ತಮ ಸೇವೆ ಹಿನ್ನೆಲೆಯಲ್ಲಿ ಬಿಎಂಟಿಸಿ ಈವರೆಗೆ 100ಕ್ಕೂ ಹೆಚ್ಚು ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದೆ. ಈಗಾಗಲೇ 6,500ಕ್ಕೂ ಹೆಚ್ಚು ಬಿಎಂಟಿಸಿ ಬಸ್‌ಗಳಿದ್ದು, ಹೆಚ್ಚುವರಿಯಾಗಿ 3000 ಹೊಸ ಬಸ್‌ಗಳನ್ನು ಖರೀದಿಸುವುದಾಗಿ ಮುಖ್ಯಮಂತ್ರಿಗಳು ಬಜೆಟ್‌ನಲ್ಲಿ ಘೋಷಿಸಿದ್ದಾರೆ. ಈ ಪೈಕಿ 1,500 ಬಸ್‌ಗಳನ್ನು ಹೊಸದಾಗಿ ಖರೀದಿಸಿದರೆ ಇನ್ನೂ 1,500 ಬಸ್‌ಗಳನ್ನು ಗುತ್ತಿಗೆ ಆಧಾರದಲ್ಲಿ ಪಡೆಯಲು ನಿರ್ಧರಿಸಿದೆ.