Advertisement

ನಮ್ಮ ಮೆಟ್ರೋ 2ನೇ ಹಂತ “ಮಿಷನ್‌ 2020′ಅನುಮಾನ!

12:56 PM Oct 22, 2018 | |

ನಮ್ಮ ಮೆಟ್ರೋ ಎರಡನೇ ಹಂತದ ಕಾಮಗಾರಿ 2020ರ ಹೊತ್ತಿಗೆ ಪೂರ್ಣಗೊಂಡು, ಸಾರ್ವಜನಿಕ ಸೇವೆಗೆ ಅರ್ಪಣೆಗೊಳ್ಳಲಿದೆ ಎಂಬ ಬಿಎಂಆರ್‌ಸಿಎಲ್‌ ಭರವಸೆ ಈಡೇರುವ ಲಕ್ಷಣಗಳೇ ಕಾಣುತ್ತಿಲ್ಲ. ಟೆಂಡರ್‌ ಕರೆಯುವಲ್ಲಿಯಿಂದ ಆರಂಭವಾಗಿ ಸಿವಿಲ್‌ ಕಾಮಗಾರಿ, ವಿದ್ಯುತ್‌ ಸಂಪರ್ಕ ಕಲ್ಪಿಸುವವರೆಗಿನ ಎಲ್ಲ ಕಾರ್ಯಗಳೂ ಸಾಲಾಗಿ ವಿಳಂಬವಾಗುತ್ತಿವೆ. ಹೀಗಾಗಿ 2020ಕ್ಕೆ ಎರಡನೇ ಹಂತ ಸೇವೆಗೆ ಸಿದ್ಧವಾಗುವುದು ಅಸಾಧ್ಯ ಎನ್ನಲಾಗುತ್ತಿದೆ. ಹೀಗಾಗಿ ಎರಡನೇ ಹಂತದ ಮೆಟ್ರೋ ಯೋಜನೆಯ ಕಾಮಗಾರಿ ಪ್ರಗತಿ ಕುರಿತ ಮಾಹಿತಿ ಈ ಬಾರಿಯ ಸುದ್ದಿ ಸುತ್ತಾಟದಲ್ಲಿ…

Advertisement

“ನಮ್ಮ ಮೆಟ್ರೋ’ ಎರಡನೇ ಹಂತದ ಗಡುವು ಮತ್ತೆ ವಿಸ್ತರಣೆಯಾಗಿದೆ. 2020ಕ್ಕೆ ಎರಡು ಎತ್ತರಿಸಿದ ಮಾರ್ಗಗಳು ಮಾತ್ರ ಲೋಕಾರ್ಪಣೆ ಮಾಡುವುದಾಗಿ ಬೆಂಗಳೂರು ಮೆಟ್ರೋ ರೈಲು ನಿಗಮ (ಬಿಎಂಆರ್‌ಸಿ) ಸ್ಪಷ್ಟಪಡಿಸಿದೆ. ಆದರೆ, ಇಡೀ ಯೋಜನೆ ಪೂರ್ಣಗೊಳ್ಳುವುದು ಯಾವಾಗ ಎನ್ನುವುದರ ಬಗ್ಗೆ ಸ್ವತಃ ನಿಗಮಕ್ಕೇ ಸ್ಪಷ್ಟತೆ ಇಲ್ಲ. ಇದೆಲ್ಲದರ ನಡುವೆ ಐದು ವರ್ಷಗಳು ಕಳೆದುಹೋಗಿವೆ. ಈವರೆಗೆ ಟೆಂಡರ್‌ ಪ್ರಕ್ರಿಯೆಯೂ ಪೂರ್ಣಗೊಂಡಿಲ್ಲ! ಹಾಗಿದ್ದರೆ, 72.09 ಕಿ.ಮೀ. ಉದ್ದದ ಎರಡನೇ ಹಂತ ಸಂಪೂರ್ಣವಾಗಿ ಸಾರ್ವಜನಿಕರ ಸೇವೆಗೆ ಲಭ್ಯವಾಗಲು ಇನ್ನು ಎಷ್ಟು ವರ್ಷಬೇಕು? 

“ಇನ್ನೂ ಕನಿಷ್ಠ ಐದು ವರ್ಷ ಕಾಯುವುದು ಅನಿವಾರ್ಯ’ ಎನ್ನುತ್ತಾರೆ ತಜ್ಞರು. ಏಕೆಂದರೆ, ನಾಲ್ಕು ವಿಸ್ತರಿಸಿದ ಮತ್ತು ಎರಡು ಹೊಸ ಮಾರ್ಗಗಳ ಪೈಕಿ ಒಂದು ಮಾರ್ಗಕ್ಕೆ (ಗೊಟ್ಟಿಗೆರೆ-ನಾಗವಾರ) ಇನ್ನೂ ಟೆಂಡರ್‌ ಕರೆದಿಲ್ಲ. ಈ ಕ್ಷಣದಲ್ಲೇ ಗುತ್ತಿಗೆ ನೀಡಿದರೂ ಸಿವಿಲ್‌ ಕಾಮಗಾರಿ ಪೂರ್ಣಗೊಳ್ಳಲು 42 ತಿಂಗಳು ಬೇಕಾಗುತ್ತದೆ. ಹಾಗೂ ಸಿಸ್ಟ್‌ಂ ಕಾಮಗಾರಿಗಳು 24 ತಿಂಗಳು ತೆಗೆದುಕೊಳ್ಳುತ್ತವೆ. ಅಂದರೆ, ಈಗಿನಿಂದಲೇ ಲೆಕ್ಕಹಾಕಿದರೂ ಇನ್ನೂ ಐದು ವರ್ಷ ಹಿಡಿಯುತ್ತದೆ. ವಾಸ್ತವ ಹೀಗಿರುವಾಗ, ಎರಡನೇ ಹಂತದ ಮೆಟ್ರೋ ಯೋಜನೆ 2020ಕ್ಕೆ ಪೂರ್ಣಗೊಳ್ಳುವುದು ಅಸಾಧ್ಯದ ಮಾತು ಎಂದು ಸ್ವತಃ ನಿಗಮದ ಅಧಿಕಾರಿಗಳು ಸ್ಪಷ್ಟಪಡಿಸುತ್ತಾರೆ.

ಈ ಮಧ್ಯೆ ಇನ್ನೂ ಟ್ರ್ಯಾಕ್ಷನ್‌ (ಮೂರನೇ ರೈಲು ಹಳಿಗೆ ಒದಗಿಸಲಾಗುವ ವಿದ್ಯುತ್‌ ಲೈನ್‌)ಗೆ ಈಗಷ್ಟೇ ಟೆಂಡರ್‌ ಕರೆಯಲಾಗಿದೆ. ಇಲ್ಲಿ ಪ್ರತಿ ಕಿ.ಮೀ. ವಿದ್ಯುತ್‌ ಒದಗಿಸಲು ಒಂದು ತಿಂಗಳು ಬೇಕಾಗುತ್ತದೆ. ಇನ್ನು ಬೋಗಿಗಳ ಪೂರೈಕೆಗೆ ಸಂಬಂಧಿಸಿದ ಟೆಂಡರ್‌ ಆಗಿಲ್ಲ. ಕೇವಲ ನಾಲ್ಕು ವಿಸ್ತರಿಸಿದ ಮಾರ್ಗಗಳಿಗೇ ಸುಮಾರು 150 ಬೋಗಿಗಳು ಬೇಕಾಗುತ್ತವೆ ಎಂದು ಅಂದಾಜಿಸಲಾಗಿದೆ. ಇದೆಲ್ಲದರ ನಡುವೆ ಹೆಚ್ಚು ಪ್ರಗತಿಯಲ್ಲಿದ್ದ ಮೈಸೂರು ರಸ್ತೆ-ಕೆಂಗೇರಿ ಮಾರ್ಗದ ಗುತ್ತಿಗೆ ಪಡೆದ ಐಎಲ್‌ ಆಂಡ್‌ ಎಫ್ಎಸ್‌ ಸಾಲದ ಸುಳಿಯಲ್ಲಿ ಸಿಲುಕಿದೆ. ಇದು ಪ್ರಗತಿ ಮೇಲೆ ಪರಿಣಾಮ ಬೀರಲಿದೆ.

ಯೋಜನೆಗೆ ಅನುಮೋದನೆ ನೀಡಿದ ನಂತರದಿಂದ ಐದು ವರ್ಷಗಳಲ್ಲಿ ಪೂರ್ಣಗೊಳಿಸುವುದಾಗಿ ಬಿಎಂಆರ್‌ಸಿಯು ಸಮಗ್ರ ಯೋಜನಾ ವರದಿಯಲ್ಲಿ ಘೋಷಿಸಿಕೊಂಡಿದೆ. ಅದರಂತೆ 2018-19ಕ್ಕೆ ಪೂರ್ಣಗೊಳ್ಳಬೇಕಿತ್ತು. ಈಗಾಗಲೇ ಎರಡು ಬಾರಿ ಗಡುವು ವಿಸ್ತರಣೆಯಾಗಿದ್ದು, 2020ಕ್ಕೆ ಪೂರ್ಣಗೊಳ್ಳುವುದು ವಾಸ್ತವವಾಗಿ ಅಸಾಧ್ಯವಾಗಿದೆ. ಈ ವಿಳಂಬ ಧೋರಣೆಯು ಯೋಜನಾ ವೆಚ್ಚ ಹೆಚ್ಚಳದ ರೂಪದಲ್ಲಿ ಪರಿಣಮಿಸಲಿದೆ.

Advertisement

ಮೆಟ್ರೋ ಮಾರ್ಗ ನಿರ್ಮಾಣಕ್ಕೆ ಅಗತ್ಯ ಇರುವ ಉಪಕರಣಗಳು, ಕಾರ್ಮಿಕರು, ಡೀಸೆಲ್‌ ದರ ಏರಿಕೆ, ವಿದೇಶಿ ಬ್ಯಾಂಕ್‌ಗಳಿಂದ ಪಡೆದ ಸಾಲ (ಇದು ಡಾಲರ್‌ ಎದುರು ರೂಪಾಯಿ ಮೌಲ್ಯವನ್ನು ಅವಲಂಬಿಸಿದೆ) ಸೇರಿ ಎಲ್ಲದರ ವೆಚ್ಚವೂ ಅಧಿಕವಾಗಲಿದ್ದು, ನಿಗಮದ ಮೂಲಗಳ ಪ್ರಕಾರ 7ರಿಂದ 8 ಸಾವಿರ ಕೋಟಿ ರೂ. ಹೆಚ್ಚಲಿದೆ. ಇದರಿಂದ ಪರೋಕ್ಷವಾಗಿ ಜನರ ಮೇಲೆ ಹೊರೆ ಬೀಳಲಿದೆ.

ರೈಟ್ಸ್‌ ಈ ಹಿಂದೆ ಒಂದು ಸಮೀಕ್ಷೆ ನಡೆಸಿದ್ದು, ಅದರಲ್ಲಿ ಎರಡನೇ ಹಂತದಲ್ಲಿ ಓಡಾಡಲಿರುವ ಪ್ರಯಾಣಿಕರ ಸಂಖ್ಯೆ ಎಷ್ಟು? ಅದರಿಂದ ಎಷ್ಟು ವಾಹನಗಳು ಕಡಿಮೆ ಆಗಲಿವೆ? ಇದರಿಂದ ಉಳಿತಾಯ ಆಗಲಿರುವ ಡೀಸೆಲ್‌ ಮತ್ತು ಸಮಯ ಇದೆಲ್ಲವನ್ನೂ ಲೆಕ್ಕಹಾಕಲಾಗಿದೆ. ಅದನ್ನು ಈಗಿನ ಖರ್ಚು-ವೆಚ್ಚಗಳಿಗೆ ನುಗುಣವಾಗಿ ಲೆಕ್ಕಹಾಕಿದರೆ, ಒಂದು ದಿನ ವಿಳಂಬವಾದರೂ 65 ಲಕ್ಷ ರೂ. ನಷ್ಟವಾದಂತೆ ಎಂದು ಸಾರಿಗೆ ತಜ್ಞ ಪ್ರೊ.ಎಂ.ಎನ್‌. ಶ್ರೀಹರಿ ತಿಳಿಸುತ್ತಾರೆ.

ಸಂಚಾರ ನರಕಯಾತನೆ: ಅಲೈನ್‌ಮೆಂಟ್‌, ಆದ್ಯತೆ, ನಿರ್ಧಾರಗಳಲ್ಲಿನ ನಿಧಾನಗತಿ ಧೋರಣೆಯು ಯೋಜನೆ ಮೇಲೆ ಅಡ್ಡ ಪರಿಣಾಮ ಬೀರುತ್ತಿದೆ. ಯೋಜನೆ ವಿಳಂಬದಿಂದ ಯೋಜನಾ ವೆಚ್ಚ ಮಾತ್ರವಲ್ಲ; ಕಾಮಗಾರಿ ನಡೆಯುತ್ತಿರುವ ಮಾರ್ಗಗಳಲ್ಲಿ ವಾಹನ ಸಂಚಾರ ನರಕಯಾತನೆ ಆಗಿದೆ. ಉದಾಹರಣೆಗೆ ಕೆಂಗೇರಿ ಮಾರ್ಗದಲ್ಲಿ ನಿತ್ಯ ಜನ ಓಡಾಡಲು ಸರ್ಕಸ್‌ ಮಾಡಬೇಕಾಗಿದೆ.

ಆದ್ದರಿಂದ ಆದ್ಯತೆ ಮೇಲೆ ಯೋಜನೆ ಪೂರ್ಣಗೊಳಿಸಬೇಕು ಎಂದು ಎಂದು ಬೆಂಗಳೂರು ಮೆಟ್ರೋ ಮತ್ತು ಉಪನಗರ ರೈಲು ಪ್ರಯಾಣಿಕರ ಅಸೋಸಿಯೇಷನ್‌ ಅಧ್ಯಕ್ಷ ಪ್ರಕಾಶ್‌ ಮಂಡೂತ್‌ ಆಗ್ರಹಿಸುತ್ತಾರೆ. ಐದು ವರ್ಷಗಳಲ್ಲಿ ಮುಗಿಸಬೇಕಾದ ಎರಡನೇ ಹಂತದ ಯೋಜನೆಯಲ್ಲಿ ಇನ್ನೂ ಭೂಸ್ವಾಧೀನ ಪ್ರಕ್ರಿಯೆಯೇ ಪೂರ್ಣಗೊಂಡಿಲ್ಲ. ಈ ಮಧ್ಯೆ ಮಾರ್ಗಸೂಚಿ ದರ ಎರಡು ಬಾರಿ ಹೆಚ್ಚಳವಾಗಿದೆ. ಇದರಿಂದ ಪರಿಹಾರದ ಮೊತ್ತ ಈಗಾಗಲೇ ಏರಿಕೆಯಾಗಿದೆ.

ಅದೇ ರೀತಿ, ಹೂಡಿಕೆ ಮೇಲಿನ ಬಡ್ಡಿ ಹೊರೆಯಾಗುತ್ತದೆ. ಉದಾಹರಣೆಗೆ ಮೈಸೂರು ರಸ್ತೆ-ಕೆಂಗೇರಿ ಪ್ರಗತಿಯಲ್ಲಿದೆ. ಅದಕ್ಕೆ ಈಗಾಗಲೇ ನೂರಾರು ಕೋಟಿ ರೂ. ಹೂಡಿಕೆ ಆಗಿರುತ್ತದೆ. ಅದು ತ್ವರಿತಗತಿಯಲ್ಲಿ ಮುಗಿದು, ಕಾರ್ಯಾಚರಣೆ ಆರಂಭಗೊಂಡರೆ ಅದರಿಂದ ಆದಾಯ ಬರಬಹುದು. ಪರಿಣಾಮ ತಕ್ಕಮಟ್ಟಿಗೆ ಸಾಲದ ಹೊರೆ ತಗ್ಗಬಹುದು. ಇದರ ಬದಲಿಗೆ ವಿಳಂಬದಿಂದ ಯೋಜನಾ ವೆಚ್ಚ ಹೆಚ್ಚಲಿದೆ. ಮೊದಲ ಹಂತದಲ್ಲಿ ಆಗಿದ್ದೂ ಇದೇ ಎಂದು ಪ್ರಜಾ ಸಂಸ್ಥೆಯ ಸಂಜೀವ ದ್ಯಾಮಣ್ಣವರ ತಿಳಿಸುತ್ತಾರೆ. 

ಒಂದೂ ಸಿವಿಲ್‌ ಕಾಮಗಾರಿ ಪೂರ್ಣವಿಲ್ಲ: 32.02 ಕಿ.ಮೀ. ಉದ್ದದ ನಾಲ್ಕು ವಿಸ್ತರಿಸಿದ ಮಾರ್ಗಗಳಲ್ಲಿ ಈವರೆಗೆ ಒಂದೇ ಒಂದು ಮಾರ್ಗದ ಸಿವಿಲ್‌ ಕಾಮಗಾರಿ ಪೂರ್ಣಗೊಂಡಿಲ್ಲ! ಇತರ ಮಾರ್ಗಗಳಿಗೆ ಹೋಲಿಸಿದರೆ ಮೈಸೂರು ರಸ್ತೆ ಮತ್ತು ಕನಕಪುರ ರಸ್ತೆ ಮಾರ್ಗಗಳ ಕಾಮಗಾರಿ ಹೆಚ್ಚು ಪ್ರಗತಿ ಹೊಂದಿದೆ. ವಯಾಡಕ್ಟ್ಗಳ ಅಳವಡಿಕೆ, ಕಂಬಗಳ ನಿರ್ಮಾಣ, ಪೇಂಟಿಂಗ್‌ ಹೀಗೆ ಒಂದಿಲ್ಲೊಂದು ಕಾಮಗಾರಿ ಬಾಕಿ ಉಳಿದಿರುವುದು ಕಾಣಬಹುದು.

ಅನುಷ್ಠಾನದ ಹಂತಗಳು 
-ಡಿಪಿಆರ್‌ ಮಂಡಿಸಿದ ನಂತರದ 6 ತಿಂಗಳಲ್ಲಿ ರಾಜ್ಯ ಸರ್ಕಾರದ ಅನುಮೋದನೆ.
-ಡಿಪಿಆರ್‌ ಮಂಡಿಸಿದ ನಂತರದ 12 ತಿಂಗಳಲ್ಲಿ ಕೇಂದ್ರದ ಅನುಮೋದನೆ.
-ವರದಿ ಮಂಡಿಸಿದ 18 ತಿಂಗಳಲ್ಲಿ ಕನ್ಸಲ್ಟಂಟ್‌ ನೇಮಕ.
-ವರದಿ ಮಂಡಿಸಿದ 60 ತಿಂಗಳಲ್ಲಿ ಟೆಂಡರ್‌, ಕಾರ್ಯಾರಂಭ, ಯೋಜನೆಗೆ ಅಗತ್ಯ ವಸ್ತುಗಳ ಪೂರೈಕೆ, ಬೋಗಿಗಳಿಗೆ ಆರ್ಡರ್‌ ಪೂರ್ಣಗೊಳ್ಳಬೇಕು.
-ವರದಿ ಮಂಡಿಸಿದ ನಂತರದ 62 ತಿಂಗಳಲ್ಲಿ ಪರೀಕ್ಷೆ ಮತ್ತು ಅನುಮೋದನೆ ಪಡೆಯಬೇಕು.
-63 ತಿಂಗಳಲ್ಲಿ ವಾಣಿಜ್ಯ ಸಂಚಾರ ಆರಂಭಗೊಳ್ಳಬೇಕು.

ಯೋಜನಾ ವೆಚ್ಚ ಮತ್ತು ಸರ್ಕಾರಗಳ ಪಾಲು: ನಮ್ಮ ಮೆಟ್ರೋ ಎರಡನೇ ಹಂತದ ಯೋಜನಾ ವೆಚ್ಚ 26,405 ಕೋಟಿ ರೂ. ವಿಸ್ತರಿಸಿದ ಮಾರ್ಗಗಳ ಯೋಜನಾ ವೆಚ್ಚ  ಅಂದಾಜು 9,645 ಕೋಟಿ ರೂ. ಆಗಿದೆ. ಯೋಜನೆಗೆ ಕೇಂದ್ರ ಮತ್ತು ರಾಜ್ಯ ಸರ್ಕಾರದ ಪಾಲು 50-50 ಆಗಿದೆ. ಇದಲ್ಲದೆ, ಜೈಕಾ, ಎಎಫ್ಡಿ, ವಿಶ್ವಬ್ಯಾಂಕ್‌, ಹುಡ್ಕೊ ಸೇರಿದಂತೆ ಸ್ಥಳೀಯ ಬ್ಯಾಂಕ್‌ಗಳಿಂದ ಸಾಲ ಪಡೆಯಲು ಬಿಎಂಆರ್‌ಸಿ ಅವಕಾಶ ಇದೆ.

ಜತೆಗೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ (ಬಿಡಿಎ) ಬಡಾವಣೆಗಳು ಮತ್ತು ಖಾಸಗಿ ಲೇಔಟ್‌ಗಳಲ್ಲಿ “ಅಭಿವೃದ್ಧಿ ಸೆಸ್‌’ ವಿಧಿಸಲು ಸರ್ಕಾರಕ್ಕೆ ಅವಕಾಶ ಇದೆ. ಇದರಿಂದ 1,250 ಕೋಟಿ ರೂ. ಆದಾಯ ಬರಲಿದೆ. ಮೆಟ್ರೋ ಮಾರ್ಗಗಳಲ್ಲಿನ ಕಟ್ಟಡಗಳಿಗೆ ಎಫ್ಎಆರ್‌ (ಫ್ಲೋರ್‌ ಏರಿಯಾ ರೇಷಿಯೋ) ವಿಧಿಸುವ ಮೂಲಕ ಐದು ವರ್ಷಗಳಲ್ಲಿ 430 ಕೋಟಿ ರೂ. ನಿರೀಕ್ಷಿಸಲಾಗಿದೆ. ಬಿಎಂಆರ್‌ಸಿ ಬಾಂಡ್‌ಗಳನ್ನು ಕೂಡ ಪರಿಚಯಿಸಬಹುದು.

ಸಾಲದ ಸುಳಿಯಲ್ಲಿ ಕಂಪನಿ: ಈ ಮಧ್ಯೆ 2ಎ ಯೋಜನೆ ಅಡಿ ಕೆ.ಆರ್‌.ಪುರ-ಸಿಲ್ಕ್ ಬೋರ್ಡ್‌ ಮಾರ್ಗದ ಕಾಮಗಾರಿಯನ್ನೂ ಕೈಗೆತ್ತಿಕೊಳ್ಳಲಾಗಿದ್ದು, ಇತ್ತೀಚೆಗಷ್ಟೇ ಟೆಂಡರ್‌ ಕರೆಯಲಾಗಿದೆ. ಮೂರು ಪ್ಯಾಕೇಜ್‌ಗಳಲ್ಲಿ ಕರೆದ ಈ ಟೆಂಡರ್‌ನಲ್ಲಿ ಭಾಗಿಯಾಗಿರುವ ಐಎಲ್‌ ಆಂಡ್‌ ಎಫ್ಎಸ್‌, ಮೊದಲ ಪ್ಯಾಕೇಜ್‌ನಲ್ಲಿ ಎಲ್‌-1 ಕಂಪನಿ ಕೂಡ ಆಗಿದೆ.

ಆದರೆ, ಈ ಕಂಪನಿ ಈಗ ಸಾಲದ ಸುಳಿಯಲ್ಲಿ ಸಿಲುಕಿರುವುದರಿಂದ ಟೆಂಡರ್‌ ಮರುಪರಿಶೀಲನೆಗೆ ಬಿಎಂಆರ್‌ಸಿ ಮುಂದಾಗಿದೆ. ಇದರಿಂದ ಯೋಜನೆ ಮತ್ತಷ್ಟು ವಿಳಂಬವಾಗುವ ಸಾಧ್ಯತೆ ಇದೆ. ಇದಲ್ಲದೆ, ನಾಗವಾರದಿಂದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೂ ಮೆಟ್ರೋ ಸಂಪರ್ಕ ಕಲ್ಪಿಸಲು ನಿರ್ಧರಿಸಲಾಗಿದೆ. ಆದರೆ, ಇದಕ್ಕೆ ಸಂಬಂಧಿಸಿದಂತೆ ಹಣ ಹೂಡಿಕೆಗೆ ಬಿಐಎಎಲ್‌ ಅಪಸ್ವರ ಎತ್ತಿದೆ.

ಎರಡನೇ ಹಂತದ ಮಾರ್ಗದ ವಿವರ
ಮಾರ್ಗ    ಉದ್ದ (ಕಿ.ಮೀ.)    ಯೋಜನಾ ವೆಚ್ಚ (ಕೋಟಿ ರೂ.)

-ಬೈಯಪ್ಪನಹಳ್ಳಿ-ವೈಟ್‌ಫೀಲ್ಡ್‌    15.50    4,845 
-ಮೈಸೂರು ರಸ್ತೆ- ಕೆಂಗೇರಿ    6.46    1,867
-ನಾಗಸಂದ್ರ-ಬಿಸಿಐಸಿ    3.77    1,168.22
-ಯಲಚೇನಹಳ್ಳಿ-ಅಂಜನಾಪುರ ಟೌನ್‌ಶಿಪ್‌    6.29    1,765.88
-ಆರ್‌.ವಿ. ರಸ್ತೆ-ಬೊಮ್ಮಸಂದ್ರ    18.82    5,744.09
-ಐಐಎಂಬಿ-ನಾಗವಾರ    21.25    11,014 
-ಒಟ್ಟು    72.09    26,405.14

61: ನಿಲ್ದಾಣಗಳು
12: ಸುರಂಗ ನಿಲ್ದಾಣಗಳು
72.09: ಎರಡನೇ ಹಂತದ ಮಾರ್ಗದ ಉದ್ದ
26,405 ಕೋಟಿ ರೂ.: ಎರಡನೇ ಹಂತದ ಯೋಜನಾ ವೆಚ್ಚ
9,645 ಕೋಟಿ ರೂ.: ವಿಸ್ತರಿಸಿದ ಮಾರ್ಗಗಳ ಯೋಜನಾ ವೆಚ್ಚ

* ವಿಜಯಕುಮಾರ್‌ ಚಂದರಗಿ 

Advertisement

Udayavani is now on Telegram. Click here to join our channel and stay updated with the latest news.

Next