ಕನ್ನಡದಲ್ಲಿ ಈಗಾಗಲೇ ದೇಶಪ್ರೇಮ, ದೇಶ ಭಕ್ತಿ ಕುರಿತ ಅನೇಕ ಚಿತ್ರಗಳು ಬಂದಿವೆ. ಆ ಸಾಲಿಗೆ ಈಗ “ನಮ್ಮ ಭಾರತ’ ಸಿನಿಮಾ ಹೊಸ ಸೇರ್ಪಡೆ. ಚಿತ್ರವನ್ನು ಕುಮಾರಸ್ವಾಮಿ ನಿರ್ದೇಶಿಸಿದ್ದಾರೆ. ನಿರ್ಮಾಣದ ಜೊತೆಯಲ್ಲಿ ಛಾಯಾಗ್ರಹಣ ಕೂಡ ಅವರೇ ನಿರ್ವಹಿಸಿದ್ದಾರೆ. ಚಿತ್ರ ಪೂರ್ಣಗೊಂಡಿದ್ದು, ಬಿಡುಗಡೆಗೆ ಸಜ್ಜಾಗಿದೆ. ತಮ್ಮ ಸಿನಿಮಾ ಬಗ್ಗೆ ಹೇಳಿಕೊಳ್ಳಲೆಂದೇ ಚಿತ್ರತಂಡದ ಜೊತೆ ಆಗಮಿಸಿದ್ದ ಕುಮಾರಸ್ವಾಮಿ, ಹೇಳಿದ್ದು ಹೀಗೆ. “ನಾನು 18 ನೇ ವಯಸ್ಸಲ್ಲಿ ಕ್ಯಾಮೆರಾ ಹಿಡಿದವನು. ನಂತರ ಎಸ್‌ಜೆಪಿಯಲ್ಲಿ ಸಿನಿಮಾಟೋಗ್ರಫಿ ಕೋರ್ಸ್ ಮಾಡಿ, ಪುಟ್ಟಣ್ಣ ಕಣಗಾಲ್, ರಾಜ್‌ಕುಮಾರ್ ಸಿನಿಮಾಗಳಲ್ಲಿ ಕೆಲಸ ಮಾಡಿ ಅನುಭವ ಪಡೆದೆ. ನಂತರ ಬಾಲಿವುಡ್‌ಗೂ ಕಾಲಿಟ್ಟು, ದೇವಾನಂದ್ ಅವರ ಪ್ರೊಡಕ್ಷನ್‌ನಲ್ಲಿ ಕೆಲಸ ನಿರ್ವಹಿಸಿದ್ದೇನೆ. ಅಷ್ಟು ವರ್ಷಗಳ ಅನುಭವದ ಮೇಲೆ ನಿರ್ದೇಶನ ಮಾಡುವ ಆಸೆ ಇತ್ತು. ಸುಮಾರು 20 ಕಥೆ ಕೇಳಿದೆ. ಯಾವುದೂ ಇಷ್ಟವಾಗಲಿಲ್ಲ. ಕೊನೆಗೆ ರವಿಶಂಕರ್ ಮಿರ್ಲೆ ಅವರು ಬರೆದ “ನಮ್ಮ ಭಾರತ’ ಕಥೆ ಇಷ್ಟವಾಯ್ತು. ಇಲ್ಲಿ ನಾಯಕ, ನಾಯಕಿ ಎಂಬುದಿಲ್ಲ. ಕಥೆಯೇ ಎಲ್ಲವನ್ನೂ ಹೊಂದಿದೆ. ದೇಶಕ್ಕೆ ಸ್ವಾತಂತ್ರ್ಯ ಬಂದದ್ದು ಹೇಗೆ, ನಮ್ಮ ರಾಷ್ಟ್ರಧ್ವಜದ ಮಹತ್ವ ಮತ್ತು ಮಕ್ಕಳಿಗೆ ದೇಶಪ್ರೇಮ ಕುರಿತು ಸಾರುವ ಸಂದೇಶ ಈ ಚಿತ್ರದಲ್ಲಿದೆ. ಬೆಟ್ಟದಪುರ ಸಮೀಪ ಚಿತ್ರೀಕರಿಸಲಾಗಿದೆ. ಪುಟ್ಟಣ್ಣ ಅವರ ಕಣಗಾಲ್ ಊರಲ್ಲೂ ಶೂಟಿಂಗ್ ಮಾಡಿದ್ದು ವಿಶೇಷ. ಈಗ ಚಿತ್ರ ಜನರ ಮುಂದೆ ಬರಲು ಸಜ್ಜಾಗಿದೆ. ಎಲ್ಲರೂ ಪ್ರೋತ್ಸಾಹಿಸಬೇಕು’ ಎಂಬ ಮನವಿ ಇಟ್ಟರು ಕುಮಾರಸ್ವಾಮಿ.
ಚಿತ್ರಕ್ಕೆ ಬೆನ್ನೆಲುಬಾಗಿ ನಿರ್ದೇಶಕ ಮಂಡ್ಯ ನಾಗರಾಜ್ ಕೆಲಸ ಮಾಡಿದ್ದಾರೆ. “ಕುಮಾರಸ್ವಾಮಿ ಒಂದು ಸಿನಿಮಾ ಮಾಡಬೇಕು ಅಂತ ನನ್ನ ಬಳಿ ಚರ್ಚಿಸಿದಾಗ, ಈಗ ನೆಗೆಟಿವ್ ಕಾಲವಲ್ಲ. ಡಿಜಿಟಲ್ ಕಾಲ ಬಂದಿದೆ. ಜೊತೆಗೆ ಜನರೇಷನ್ ಕೂಡ ಬದಲಾಗಿದೆ. ಅದಕ್ಕೆ ತಕ್ಕ ಸಿನಿಮಾ ಮಾಡಬೇಕು ಅಂದೆ. ಕಥೆ ಚೆನ್ನಾಗಿತ್ತು. ಮಕ್ಕಳಲ್ಲಿ ದೇಶಪ್ರೇಮ ಮೂಡಿಸುವ ಕಥಾವಸ್ತು ಇದ್ದುದರಿಂದ ಇದನ್ನೇ ಆಯ್ಕೆ ಮಾಡಿಕೊಂಡು ಸಿನಿಮಾ ಮಾಡಲಾಗಿದೆ. ಈ ರೀತಿಯ ಚಿತ್ರಗಳು ಪ್ರಸ್ತುತ ಕಾಲಘಟ್ಟಕ್ಕೆ ಅವಶ್ಯಕ’ ಎಂದರು ಮಂಡ್ಯ ನಾಗರಾಜ್.
ಕಲಾವಿದ ಮೈಸೂರು ವಾಗೀಶ್ ಅವರಿಗೆ ಇದು ಹೊಸ ಅನುಭವ. “ಸಿನಿಮಾದಲ್ಲಿ ನಾನು ಒಬ್ಬ ಸ್ವಾತಂತ್ರ್ಯ ಹೋರಾಟಗಾರನಾಗಿ ನಟಿಸಿದ್ದೇನೆ. ಮಾಸ್ಟರ್ ಪ್ರಜ್ವಲ್ ಹಾಗು ನನ್ನ ಕಾಂಬಿನೇಷನ್‌ನಲ್ಲಿ ಈ ಚಿತ್ರ ಮೂಡಿಬಂದಿದೆ. ನನ್ನೊಳಗಿನ ಆದರ್ಶಗಳನ್ನು ಆ ಹುಡುಗನಲ್ಲಿ ಕಾಣುವಂತಹ ಪ್ರಯತ್ನ ಮಾಡಿದ್ದೇನೆ. ಇಲ್ಲಿ ನಮ್ಮ ದೇಶ, ಧ್ವಜದ ಮಹತ್ವ ಇತರೆ ಅಂಶಗಳು ಇವೆ’ ಎಂದರು ವಾಗೀಶ್.
ಮಾಸ್ಟರ್ ಪ್ರಜ್ವಲ್ ತಮ್ಮ ಅನುಭವ ಹಂಚಿಕೊಂಡರು. ನೀಲಾ ನೀಲಕಂಠ ಫಿಲಂಸ್ ಬ್ಯಾನರ್‌ನಲ್ಲಿ ಚಿತ್ರ ತಯಾರಾಗಿದ್ದು, ಕುಮಾರ್ ಈಶ್ವರ್ ಸಂಗೀತ ನೀಡಿದ್ದಾರೆ. ಸಂಜೀವ್ ರೆಡ್ಡಿ ಸಂಕಲನವಿದೆ. ಚಿತ್ರದಲ್ಲಿ ಅಮಲ, ಯಶೋಧಾ, ಪುಟ್ಟಣ್ಣ, ಗೋಪಿನಾಥ್ ಇತರರು ನಟಿಸಿದ್ದಾರೆ. ಇದಕ್ಕೂ ಮುನ್ನ ಚಿತ್ರದ ಹಾಡು ಹಾಗು ಟ್ರೇಲರ್ ತೋರಿಸಲಾಯಿತು.