ಅಲ್ ಖೈದಾ ಉಗ್ರ ಸಂಘಟನೆ ಸಂಸ್ಥಾಪಕ, ವಿಶ್ವದ ನಂ.1 ಉಗ್ರ ಎಂದೇ ಕುಖ್ಯಾತನಾದ ಒಸಾಮಾ ಬಿನ್ ಲಾಡೆನ್ ಪುತ್ರ ಹಂಝ ಬಿನ್ ಲಾಡೆನ್ ಬಗ್ಗೆ ಮಾಹಿತಿ ನೀಡಿದವರಿಗೆ 7 ಕೋಟಿ ರೂ. (1 ಮಿಲಿಯ ಅಮೆರಿಕನ್ ಡಾಲರ್) ಬಹುಮಾನ ನೀಡಲಾಗುತ್ತದೆ. ಹೀಗೆಂದು ಗುರುವಾರ ಅಮೆರಿಕ ಸರ್ಕಾರ ಘೋಷಣೆ ಮಾಡಿದೆ. ಆತ ಸದ್ಯ ಎಲ್ಲಿದ್ದಾನೆ ಎಂದು ಪತ್ತೆಯಾಗಲಿಲ್ಲ. ಪಾಕಿಸ್ತಾನ, ಅಫ್ಘಾನಿಸ್ತಾನ, ಸಿರಿಯಾ ಅಥವಾ ಇರಾನ್‌ನಲ್ಲಿ ಗೃಹ ಬಂಧನದಲ್ಲಿ ಇರಬಹುದು ಎಂದು ಅಮೆರಿಕದ ಗೃಹ ಸಚಿವಾಲಯ ಹೇಳಿದೆ. ಲಾಡೆನ್ ಪುತ್ರ ಹಂಝ ಬಿನ್ ಲಾಡೆನ್ ಅಲ್‌ಖೈದಾದ ಭವಿಷ್ಯದ ನಾಯಕನಾಗಿ ರೂಪುಗೊಳ್ಳುತ್ತಿದ್ದಾನೆ. ಸದ್ಯ ಆತನಿಗೆ 30 ವರ್ಷ ಇರಬಹುದು. 2011ರಲ್ಲಿ ತಂದೆಯ ಹತ್ಯೆಯ ಪ್ರತೀಕಾರವಾಗಿ ಅಮೆರಿಕದ ವಿರುದ್ಧ ದಾಳಿ ನಡೆಸುವ ಬಗ್ಗೆ ಮಾತನಾಡಿದ್ದ ಧ್ವನಿಯನ್ನು 2015ರಲ್ಲಿ ಬಿಡುಗಡೆ ಮಾಡಿದ್ದ ಎಂದು ವಿದೇಶಾಂಗ ಇಲಾಖೆ ತಿಳಿಸಿದೆ. ಇದರ ಜತೆಗೆ ಸೌದಿ ಅರೇಬಿಯಾದಲ್ಲಿರುವ ನಾಯಕತ್ವವನ್ನೂ ಕಿತ್ತೂಗೆಯಬೇಕೆಂದು ಆತ ಒತ್ತಾಯಿಸಿದ್ದ.