Advertisement
ತಾಲೂಕಿನ ಹರೇಟನೂರು ಗ್ರಾಮದ ಶ್ರೀಮಠ ಸೇವಾ ಟ್ರಸ್ಟ್‌ನ ಮೂಲಕ ನಡೆಯುತ್ತಿರುವ ಕಾರುಣ್ಯನೆಲೆ ವೃದ್ಧಾಶ್ರಮ ನೊಂದವರ ಬಾಳಿಗೆ ಬೆಳಕಾಗಿದೆ. ಹರೇಟನೂರು ಗ್ರಾಮದ ಅಮರಯ್ಯ ಸ್ವಾಮಿ ಹಿರೇಮಠ ಹಾಗೂ ಅವರ ಸೊಸೆ ಸುಜಾತ ಹಿರೇಮಠ ಗ್ರಾಪಂ ಸದಸ್ಯರಾಗಿ ಸೇವೆ ಸಲ್ಲಿಸಿದವರು. ಜನರೊಂದಿಗೆ ಬೆರೆತು ಕೆಲಸ ಮಾಡಿದ ಹಿನ್ನೆಲೆಯುಳ್ಳ ಇದೇ ಕುಟುಂಬದ ಮೂಲಕ “ಕಾರುಣ್ಯಾಶ್ರಮ’ 52 ಜನರಿಗೆ ವಸತಿ ಕಲ್ಪಿಸುವ ಮಟ್ಟಿಗೆ ಬೆಳೆದಿದೆ.
Related Articles
Advertisement
ಕುಷ್ಟಗಿ ರಸ್ತೆಯಲ್ಲಿ ಟೆಂಟ್‌ವೊಂದನ್ನು ಬಾಡಿಗೆ ಪಡೆದಿದ್ದಾರೆ. ಇದಕ್ಕೆ ತಿಂಗಳಿಗೆ 15 ಸಾವಿರ ರೂ. ಬಾಡಿಗೆ, ತಿಂಗಳಿಗೆ 85 ಸಾವಿರ ರೂ. ಖರ್ಚು ಬರುತ್ತಿದೆ. ಇದನ್ನೆಲ್ಲ ದಾನಿಗಳ ನೆರವಿನಿಂದಲೇ ಭರಿಸಲಾಗುತ್ತಿದೆ ಎನ್ನುತ್ತಾರೆ ಕಾರುಣ್ಯಾಶ್ರಮದ ಆಡಳಿತಾಧಿಕಾರಿ.
ಆರಂಭದಲ್ಲಿ ಹಳ್ಳಿಗಳಿಗೆ ಸುತ್ತಾಡಿ ದಾನಿಗಳ ನೆರವು ಪಡೆಯಲಾಗುತ್ತಿತ್ತು. ಇದೀಗ ಜನರೇ ಬಂದು ವೃದ್ಧರಿಗೆ ಊಟೋಪಚಾರ ಖರ್ಚು, ಅಗತ್ಯ ಸಾಮಗ್ರಿ ಕೊಡಿಸುವಲ್ಲಿ ಕೈ ಜೋಡಿಸಿದ್ದಾರೆ. 7 ಜನ ಸಿಬ್ಬಂದಿ ನೇಮಿಸಿದ್ದು, ದಿನದ 24 ಗಂಟೆಯಲ್ಲಿ ನಿರ್ಗತಿಕರು, ಅನಾಥರು ಆಶ್ರಯ ಬಯಸಿ ಹೋದರೆ ಅವರಿಗೆ ವಸತಿ, ಊಟದ ವ್ಯವಸ್ಥೆ ಕಲ್ಪಿಸುವ ಕೆಲಸ ನಿರಂತರ ಇಲ್ಲಿ ಸಾಗಿದೆ.
ನಿರ್ಗತಿಕರ ಅಂತ್ಯಸಂಸ್ಕಾರ ಇದುವರೆಗೆ ಆಶ್ರಮದಲ್ಲಿ ಆಶ್ರಯ ಪಡೆದವರ ಪೈಕಿ ವಯೋವೃದ್ಧ, ಬುದ್ಧಿಮಾಂದ್ಯ 13 ಜನ ಮೃತಪಟ್ಟಿದ್ದಾರೆ. ಸಂಘ-ಸಂಸ್ಥೆ ನೆರವಿನ ಮೂಲಕ ಅವರ ಅಂತ್ಯಸಂಸ್ಕಾರ ನೆರವೇರಿಸಲಾಗಿದೆ. ಜೀವಸ್ಪಂದನಾ ಸಂಸ್ಥೆ ಅವಿನಾಶ್ ದೇಶಪಾಂಡೆ, ಅಕ್ಷಯ ಆಹಾರ ಜೋಳಿಗೆ ಟ್ರಸ್ಟ್ ಕಾರ್ಯದರ್ಶಿ ಅಶೋಕ ನಲ್ಲಾ, ಯುವಶಕ್ತಿ ಟ್ರಸ್ಟ್‌ನ ಅಧ್ಯಕ್ಷ ಸಂತೋಷ್ ಅಂಗಡಿ ಸೇರಿದಂತೆ ಅನೇಕರು ಆಶ್ರಮದ ಸೇವಾ ಕಾರ್ಯಕ್ಕೆ ಕೈ ಜೋಡಿಸಿದ್ದಾರೆ.
ಪುಟ್ಟರಾಜರು ಅನೇಕರಿಗೆ ಸೇವೆ ಮಾಡಿದ್ದರು. ನಮ್ಮ ಶ್ರೀಮಠದ ಮೂಲಕವೂ ನೊಂದವರಿಗೆ ನೆರವಾಗಲು ಆಶ್ರಮ ಆರಂಭಿಸಿದ್ದು, ಜನರಿಗಾಗಿ ಏನಾದರೂ ಮಾಡಬೇಕೆಂಬ ಸಂಕಲ್ಪವೇ ಕಾರಣ. -ಅಮರಯ್ಯಸ್ವಾಮಿ ಹರೇಟನೂರು, ಅಧ್ಯಕ್ಷರು, ಕಾರುಣ್ಯಾಶ್ರಮ.
ಪುಟ್ಟರಾಜ ಗವಾಯಿಗಳು ಮಾಡಿದ್ದ ಸೇವೆಯೇ ನನಗೆ ಮಾರ್ಗದರ್ಶನ. ಕಷ್ಟ ಬಂದರೆ ನನಗೆ ಪಿತ್ರಾರ್ಜಿತವಾಗಿ ಬಂದ 9 ಎಕರೆ ಭೂಮಿಯ ಆದಾಯವನ್ನು ವ್ಯಯಿಸಿಯಾದರೂ ಈ ಆಶ್ರಮ ಮುನ್ನಡೆಸುತ್ತೇನೆ. -ಚನ್ನಬಸವಸ್ವಾಮಿ, ಆಡಳಿತಾಧಿಕಾರಿ, ಕಾರುಣ್ಯಾಶ್ರಮ
-ಯಮನಪ್ಪ ಪವಾರ