ಹುಬ್ಬಳ್ಳಿ: ಹು-ಧಾ ಮಹಾನಗರ ಚುನಾವಣೆ ಹಿನ್ನೆಲೆಯಲ್ಲಿ ಪ್ರತಿ ವಾರ್ಡ್‌ನಲ್ಲೂ ಪಕ್ಷ ಸಂಘಟನಾತ್ಮಕವಾಗಿ ಸಜ್ಜಾಗಬೇಕಾಗಿದೆ ಎಂದು ಬಿಜೆಪಿ ಮಹಾನಗರ ಜಿಲ್ಲಾಧ್ಯಕ್ಷ ಹಾಗೂ ಶಾಸಕ ಅರವಿಂದ ಬೆಲ್ಲದ ಹೇಳಿದರು.
ದೇಶಪಾಂಡೆನಗರದ ಪಕ್ಷದ ಕಚೇರಿಯಲ್ಲಿ ಆಯೋಜಿಸಿದ್ದ ಮಹಾನಗರ ಜಿಲ್ಲಾ ಪದಾಧಿಕಾರಿಗಳ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಪಕ್ಷದ ಬಲವರ್ಧನೆಗೆ ವಿವಿಧ ಪ್ರಕೋಷ್ಠ ಹಾಗೂ ಮೋರ್ಚಾಗಳ ಕಾರ್ಯ ಮುಖ್ಯವಾಗಿದೆ. ಪ್ರತಿಯೊಂದು ವಿಭಾಗಕ್ಕೂ ಉಸ್ತುವಾರಿಗಳನ್ನು ನೇಮಕ ಮಾಡಲಾಗಿದೆ. ಹೆಚ್ಚು ಹೆಚ್ಚು ಸಂಘಟನಾತ್ಮಕ ಸಭೆಗಳು ನಡೆಯಬೇಕು. ಉಸ್ತುವಾರಿಗಳು ಸಭೆಗಳನ್ನು ಆಯೋಜಿಸುವ ಜವಾಬ್ದಾರಿ ತೋರಬೇಕು ಎಂದರು.
ಪ್ರತಿಯೊಂದು ಮಂಡಲದಲ್ಲಿ ಇಂತಹ ಸಭೆಗಳು ನಡೆಯುತ್ತಿರುವುದರಿಂದ ಪಕ್ಷದ ಸಂಘಟನೆಯನ್ನು ಇನ್ನಷ್ಟು ಸದೃಢಗೊಳಿಸಬಹುದಾಗಿದೆ. ಜತೆಗೆ ಪದಾ ಧಿಕಾರಿಗಳು ನಾಯಕತ್ವ ಬೆಳೆಸಿಕೊಂಡಂತಾಗಲಿದೆ ಎಂದರು. ರಾಜ್ಯ ಶಿಸ್ತು ಸಮಿತಿ ಅಧ್ಯಕ್ಷ ಹಾಗೂ ಧಾರವಾಡ ವಿಭಾಗ ಪ್ರಭಾರಿ ಲಿಂಗರಾಜ ಪಾಟೀಲ ಮಾತನಾಡಿ, ಪಕ್ಷದ ಚಟುವಟಿಕೆಗಳು ನಿರಂತರವಾಗಿರಬೇಕು. ಎಷ್ಟೋ ಜನರು ಪಕ್ಷದ ಪದಾಧಿ ಕಾರಿಗಳಾಗಲು ಸರದಿಯಲ್ಲಿ ನಿಂತಿದ್ದಾರೆ. ನಿಮ್ಮೆಲ್ಲರಿಗೆ ಪಕ್ಷ ನೀಡಿದ ಅವಕಾಶವನ್ನು ಯಶಸ್ವಿಯಾಗಿ ನಿರ್ವಹಿಸಬೇಕು. ಪಾಲಿಕೆ ಚುನಾವಣೆಯಲ್ಲಿ 82 ವಾರ್ಡ್‌ಗಳಲ್ಲಿ ಕನಿಷ್ಠ 72 ಸ್ಥಾನಗಳನ್ನು ಪಡೆಯಲು ಶ್ರಮಿಸಬೇಕೆಂದರು.
ಪಕ್ಷದ ಮುಖಂಡರಾದ ರಾಜಕುಮಾರ ಬಸವಾ, ವಿಜಯಾನಂದ ಶೆಟ್ಟಿ, ದತ್ತಮೂರ್ತಿ ಕುಲಕರ್ಣಿ, ತಿಪ್ಪಣ್ಣ ಮಜ್ಜಗಿ, ರವಿ ನಾಯ್ಕ, ಸಂತೋಷ ಚವ್ಹಾಣ, ಪ್ರಭು ನವಲಗುಂದಮಠ, ಬಸವರಾಜ ಗರಗ, ಈರಣ್ಣ ಹಪ್ಪಳಿ, ಕೃಷ್ಣ ಗಂಡಗಾಳೇಕರ, ವಸಂತ ನಾಡಜೋಶಿ, ಸಿದ್ದು ಕಲ್ಯಾಣಶೆಟ್ಟಿ, ವಿಶ್ವನಾಥ ಪಾಟೀಲ, ಮುರುಗೇಶ ಹೊರಡಿ, ಅನಸೂಯಾ ಹಿರೇಮಠ, ಸುಜಾತಾ ಕಳ್ಳಿಮನಿ, ಪೂರ್ಣಿಮಾ ಶಿಂಧೆ, ಪ್ರಮಿಳಮ್ಮ ಕೊಠಾರಿ ಇನ್ನಿತರರಿದ್ದರು. ಸಭೆ ಆರಂಭದಲ್ಲಿ ಮಾಜಿ ಮಹಾಪೌರ ಸುಧಿಧೀರ ಸರಾಫ್ ಹಾಗೂ ಬಿಜೆಪಿ ಮಹಾನಗರ ಜಿಲ್ಲಾ ಉಪಾಧ್ಯಕ್ಷರಾಗಿದ್ದ ಶಂಕರ ಛಬ್ಬಿ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.