Advertisement

ಕುರುಬ ಸಮಾಜ ಅಭಿವೃದ್ಧಿಗೆ ಸಂಘಟನೆ ಅಗತ್ಯ

01:11 PM Oct 08, 2017 | Team Udayavani |

ಹೊನ್ನಾಳಿ: ಕುರುಬ ಸಮಾಜವು ರಾಜಕೀಯ, ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕವಾಗಿ ಅಭಿವೃದ್ಧಿ ಹೊಂದಲು ಸಮಾಜದ ಸಂಘಟನೆ ಅಗತ್ಯವಾಗಿದೆ ಎಂದು ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಎಚ್‌.ಬಿ. ಮಂಜಪ್ಪ ಹೇಳಿದರು.

Advertisement

ಪಟ್ಟಣದ ಸರಕಾರಿ ನೌಕರರ ಭವನದ ಆವರಣದಲ್ಲಿ ಶನಿವಾರ ಜಿಲ್ಲಾ ಕುರುಬ ಸಮಾಜದ ವತಿಯಿಂದ ಹಮ್ಮಿಕೊಂಡಿದ್ದ ತಾಲೂಕು ಯುವ ಘಟಕದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.

ಸಂಘಟನೆಯಾಗದಿದ್ದರೆ ಸಮಾಜದ ಅಭಿವೃದ್ಧಿ ಸಾಧ್ಯವಿಲ್ಲ. ಆ ನಿಟ್ಟಿನಲ್ಲಿ ಸಮಾಜದವರು ಪಕ್ಷತೀತವಾಗಿ ಸಂಘಟನಾತ್ಮಕ ಚಟುವಟಿಕೆಗಳಲ್ಲಿ ಸಕ್ರೀಯವಾಗಿ ತೊಡಗಿಕೊಳ್ಳಬೇಕು ಎಂದರು. 

ಈ ಹಿಂದೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹಣಕಾಸು ಸಚಿವರಾಗಿದ್ದಾಗ 100 ಕುರಿಗಳನ್ನು ಎಣಿಸಲು ಬಾರದವ ಹಣಕಾಸು ಖಾತೆಯನ್ನು ಹೇಗೆ ನಿಭಾಯಿಸುವರು ಎಂದು ಮುಂದುವರಿದ ಕೋಮಿನ ನಾಯಕರು ಅಪಹಾಸ್ಯ ಮಾಡಿದ್ದರು.

ಆದರೆ, ಸಿದ್ದರಾಮಯ್ಯನವರು 10ಕ್ಕೂ ಹೆಚ್ಚು ಬಾರಿ ಹಣಕಾಸು ಖಾತೆಯನ್ನು ಸಮರ್ಥವಾಗಿ ನಿಭಾಯಿಸಿದ್ದಾರೆ. ರಾಜ್ಯದ ಮುಖ್ಯಮಂತ್ರಿಯಾಗಿ ಎಲ್ಲ ಸಮಾಜದವರ ಏಳ್ಗೆಗಾಗಿ ಅವಿರತ ಶ್ರಮಿಸುತ್ತಿದ್ದಾರೆ ಎಂದು ಹೇಳಿದರು.

Advertisement

ಕುರುಬ ಸಮಾಜದವರು ಅಮಾಯಕರು, ನಂಬಿಕಸ್ಥರು. ನಂಬಿಕೆಯಿಟ್ಟವರಿಗೆ ಪ್ರಾಣ ಕೊಡುವ ಸ್ವಾಭಿಮಾನಿಗಳು. ಆದರೆ, ಸಮಾಜದವರನ್ನು ಅವಶ್ಯಕತೆಗಷ್ಟೇ ಬಳಸಿಕೊಂಡು ಕೈಬಿಡುವ ಜನರಿದ್ದಾರೆ. ಈ ಹಿಂದಿನ ವಿಧಾನಸಭಾ ಚುನಾವಣೆಯಲ್ಲಿ ನನ್ನ ಹೆಸರಿದ್ದರೂ ಮಾತಿಗೆ ಕಟ್ಟು ಬಿದ್ದು ನಿಷ್ಠೆಯಿಂದ ಮತ್ತೂಬ್ಬರ ಗೆಲುವಿಗೆ ದುಡಿದ ನನಗೆ ಈ ಹಿಂದಿನ ಒಡಂಬಡಿಕೆಯಂತೆ ನಡೆದುಕೊಳ್ಳದೇ ವಿಶ್ವಾಸದ್ರೋಹ ಎಸಗಿದ್ದಾರೆ ಎಂದರು.

ಸಮಾಜವನ್ನು ಒಡೆದಾಳುವ ಕೆಲಸವನ್ನು ಕೆಲವರು ವ್ಯವಸ್ಥಿತವಾಗಿ ಮಾಡುತ್ತಿದ್ದಾರೆ. ಎಲ್ಲರೂ ಎಚ್ಚರಿದಿಂದ ಇರಬೇಕು. ಸಮಾಜದವರಲ್ಲಿ ಒಗ್ಗಟ್ಟಿದ್ದರೆ ನಮ್ಮನ್ನು ನಿರ್ಲಕ್ಷಿಸುವ ಧೈರ್ಯ ಯಾರೂ ಮಾಡಲು ಸಾಧ್ಯವಿಲ್ಲ. ಯಾವುದೇ ಪಕ್ಷದಲ್ಲಿದ್ದರೂ ಸಮಾಜದ ಹಿತದೃಷ್ಠಿಯಿಂದ ಸಮಯ ಬಂದಾಗ ಎಲ್ಲರೂ ಒಗ್ಗಟ್ಟಿನ ಶಕ್ತಿ ಪ್ರದರ್ಶಿಸಲು ಸಿದ್ಧರಾಗಿರಬೇಕು ಎಂದು ಹೇಳಿದರು.

ಪಟ್ಟಣದ ವೀರಸಂಗೊಳ್ಳಿರಾಯಣ್ಣ ವೃತ್ತದಲ್ಲಿ 10ಲಕ್ಷ ರೂ.ಗಳ ವೆಚ್ಚದಲ್ಲಿ ವೀರಸಂಗೊಳ್ಳಿ ರಾಯಣ್ಣನ ಕಂಚಿನ ಪ್ರತಿಮೆಯನ್ನು ಎಲ್ಲರ ಸಹಕಾರದಿಂದ ಶೀಘ್ರದಲ್ಲೇ ಸ್ಥಾಪಿಸಲಾಗುವುದು ಎಂದರು. 

ಕರ್ನಾಟಕ ಪ್ರದೇಶ ಕುರುಬರ ಮಹಾಮಂಡಳದ ಗೌರವಾಧ್ಯಕ್ಷ ರಾಜ್‌ ಕುಮಾರ್‌ ಮಾತನಾಡಿ, ಸಂಘವು ಕಳೆದ 126 ವರ್ಷಗಳಿಂದಲೂ ಸಮಾಜದ ಶ್ರೇಯೋಭಿವೃದ್ಧಿಗೆ ಶ್ರಮಿಸುತ್ತಿದೆ. 10 ವರ್ಷಗಳಿಂದ ಯುವಕರನ್ನು ಜಾಗೃತಿಗೊಳಿಸಲು ರಾಜ್ಯಾದ್ಯಂತ ಯುವ ಘಟಕಗಳ ಸ್ಥಾಪನೆ ಮಾಡಲಾಗುತ್ತಿದೆ. ಸಂಘಕ್ಕೆ ವಾರ್ಷಿಕವಾಗಿ 9 ಲಕ್ಷ ರೂ. ಆದಾಯ ಬರುತ್ತಿದೆ.

ಇದನ್ನು ಸಮಾಜ ಬಡ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ವಿನಿಯೋಗಿಸಲಾಗುತ್ತಿದೆ. 400ಕ್ಕೂ ಅಧಿಕ ವಿದ್ಯಾರ್ಥಿಗಳು ಸದುಯೋಗಪಡಿಸಿಕೊಳ್ಳುತ್ತಿದ್ದಾರೆ ಎಂದು ಹೇಳಿದರು.

ಯುವ ಘಟಕದ ಅಧ್ಯಕ್ಷ ಶಿವುಕುಮಾರ, ಗೌರವಾಧ್ಯಕ್ಷ ಜೆ.ಎನ್‌. ಶ್ರೀನಾಥ್‌, ಕಾರ್ಯದರ್ಶಿ ಅರವಿಂದ, ಪರಶುರಾಮ, ಎಪಿಎಂಸಿ ಮಾಜಿ ಅಧ್ಯಕ್ಷ ಎಸ್‌.ಎಸ್‌. ಬೀರಪ್ಪ ಮುಕ್ತೇನಹಳ್ಳಿ ಮರುಳಸಿದ್ದಪ್ಪ, ಪಪಂ ಸದಸ್ಯ ಅಣ್ಣಪ್ಪ, ವಿಜೇಂದ್ರಪ್ಪ, ಮಾದಪ್ಪ, ಮಾದನಬಾವಿ ಆನಂದಪ್ಪ, ಕಡೂರಪ್ಪ, ಬಿಂಬಮಂಜಪ್ಪ, ಸರಳಿಮನೆ ರಾಜು, ಕಲ್ಕೇರಿಶಿವಣ್ಣ, ಕ್ವಾಟೆ ಪರಮೇಶ್ವರಪ್ಪ, ಡಿ.ಕೆ. ರಮೇಶ್‌, ಕುಂಬಳೂರು ವಾಗೀಶ್‌ ಇತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next