Advertisement

ಸಾವಯವ ಕೃಷಿಯನ್ನೇ ನಂಬಿ ಜೀವನ ನಡೆಸೋ ಕುಟುಂಬ

06:10 AM Sep 12, 2017 | Team Udayavani |

ಸಿದ್ದಾಪುರ: ಭಾರತದ ಸಾವಿರಾರೂ ರೈತರು ಇಂದು ಕೃಷಿಯನ್ನೇ ನಂಬಿ ಜೀವನ ಸಾಗಿಸುತ್ತಿದ್ದಾರೆ. ಇಂತಹವರ ಸಾಲಿನಲ್ಲಿ ಕುಂದಾಪುರ ತಾಲೂಕಿನ ಹೊಸಂಗಡಿ ಗ್ರಾಮದ ಹೊಳೆ ಶಂಕರನಾರಾಯಣದ ಸಮೀಪದ ಬೆಚ್ಚಳ್ಳಿ ಭೋಜ ಪೂಜಾರಿ ಹಾಗೂ ಅವರ ಕುಟುಂಬ ಒಂದಾಗಿದೆ.

Advertisement

ಉತ್ತಮವಾದ ಫಸಲು
ಭೋಜ ಪೂಜಾರಿ ಹಾಗೂ ಅವರ ಕುಟುಂಬ ತರಕಾರಿ ಮತ್ತು ತೋಟಗಾರಿಕೆ ಬೆಳೆಗಳನ್ನು ಬೆಳೆಯುತ್ತಿದ್ದಾರೆ. ಅವರು ಈ ಎರಡು ಬೆಳೆಗಳಿಗೆ ಯಾವುದೇ ರಾಸಾಯನಿಕ ಔಷಧಗಳನ್ನು ಬಳಸದೆ ಸಾವಯವ ಗೊಬ್ಬರಗಳ ಬಳಕೆ ಮಾಡಿ, ಈ ಮೂಲಕ ಉತ್ತಮವಾದ ಫಸಲು  ಪಡೆಯುತ್ತಿದ್ದಾರೆ. ಅವರು ಬೆಚ್ಚಳ್ಳಿ ಹಾಗೂ ಕಾವ್ರಾಡಿ ಗ್ರಾಮದ ಮುಂಭಾರಿನಲ್ಲಿ ಕೂಡ ಕೃಷಿ ಹಾಗೂ ತರಕಾರಿ ಬೆಳೆಗಳನ್ನು ಬೆಳೆಯುತ್ತಿದ್ದಾರೆ. ಉತ್ತಮವಾಗಿ ಕೃಷಿಯನ್ನು ಮಾಡುತ್ತಿರುವುದರಿಂದ ಭೋಜ ಪೂಜಾರಿ ಅವರು ಸಾವಯವ ಕೃಷಿಯಲ್ಲಿ ಪ್ರಗತಿ ಪರ ಕೃಷಿಕರೆನ್ನಿಸಿಕೊಂಡಿದ್ದಾರೆ. ಅವರು ಮುಖ್ಯವಾಗಿ ತರಕಾರಿ ಬೆಳೆಯಲ್ಲಿ ಹೆಚ್ಚಿನ ಆಸಕ್ತಿ ಹೊಂದಿದ್ದು, ತರಕಾರಿ ಭೋಜ ಪೂಜಾರಿ ಎಂದೇ ಪ್ರಖ್ಯಾತಿ ಗಳಿಸಿದ್ದಾರೆ.

ತಂದೆಯಂತೆ ಮಗನೂ
ಭೋಜ ಪೂಜಾರಿ ಅವರ ಮಗ ರಾಜೇಂದ್ರ ಪೂಜಾರಿ ಅವರು ಬಿ.ಎಡ್‌. ಪದವಿಧರರು. ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಬಿ.ಎಡ್‌. ಪದವಿ ಮುಗಿಸಿರುವ ಅವರಿಗೆ ಸರಕಾರಿ ಉದ್ಯೋಗ ಅರಸಿ ಬಂದರೂ, ಅದನ್ನು ಬಿಟ್ಟು ಕೃಷಿಯಲ್ಲಿ ಮುಂದುವರಿದಿದ್ದಾರೆ. ಅವರು ಸ್ವತಃ ಕೃಷಿಯೊಂದಿಗೆ ಮಾರುಕಟ್ಟೆ ಕೂಡ ಮಾಡುತ್ತಿದ್ದಾರೆ. ಪ್ರತಿ ಬುಧವಾರ ಸಿದ್ದಾಪುರ ಸಂತೆ ಮತ್ತು ಪ್ರತಿ ಶನಿವಾರ ಕುಂದಾಪುರ ಸಂತೆಯಲ್ಲಿ ತಾವು ಬೆಳೆದ ತರಕಾರಿ ಹಾಗೂ ಇತರ ಬೆಳೆಗಳನ್ನು ಮಾರುತ್ತಾರೆ.

ಸಾವಯವ ಕೃಷಿ
ಭೋಜ ಪೂಜಾರಿ ಅವರ ಇಡೀ ಕುಟುಂಬವು ಸಾವಯವ ಕೃಷಿಯಲ್ಲಿ ತೊಡಗಿಸಿಕೊಂಡಿದೆ. ಈ ಮೂಲಕ ಉತ್ತಮ ಆದಾಯಗಳಿಸುತ್ತಿದ್ದಾರೆ. ತೋಟಗಾರಿಕೆ ಬೆಳೆಗಳಾದ ಅಡಿಕೆ, ತೆಂಗು, ಬಾಳೆ, ಚಿಕ್ಕು, ದುಡ್ಲೆಕಾಯಿ, ದಿವೆಲ್ಸಿನಕಾಯಿ, ಕಾಳು ಮೆಣಸು, ಕಬ್ಬು, ತರಕಾರಿ ಬೆಳೆಗಳಾದ ಸುವರ್ಣಗಡ್ಡೆ, ಮರಸನಗಡ್ಡೆ, ಅನಾನಸು, ಪಪ್ಪಾಯಿ, ನುಗ್ಗೆಕಾಯಿ, ಆವಟೆಕಾಯಿ ಇದರಲ್ಲಿ ಸಿಹಿ ಮತ್ತು ಹುಳಿ, ಮರಗೆಣಸು, ಕೆಸ, ಬೆಂಡೆ, ಪಡವಲಕಾಯಿ, ಅಲಸಂಡೆ, ಇಬ್ಬುಡ್ಲು, ಮುಳ್ಳುಸೌತೆ, ಹಾಗಲಕಾಯಿ, ಸಾಂಬರ್‌ಸೌತೆ, ಹರಿವೆಸೊಪ್ಪು ಇದರಲ್ಲಿ ಕೆಂಪು ಮತ್ತು ಬಿಳಿ, ಬಸಳೆಸೊಪ್ಪು, ಮೆಣಸು, ಬದನೆಕಾಯಿ, ಸಿಹಿ ಮತ್ತು ಬೂದುಗುಂಬಳಕಾಯಿ, ತೊಂಡೆಕಾಯಿ, ಶುಂಠಿ ಮತ್ತು ಅವಾಡೆಕಾಯಿಗಳನ್ನು ಬೆಳೆಯುತ್ತಿದ್ದಾರೆ. ಇದರೊಂದಿಗೆ ಯಾಂತ್ರೀಕೃತ ಭತ್ತದ ಬೇಸಾಯ ಕೂಡ ಮಾಡುತ್ತಿದ್ದಾರೆ. ಇವೆಲ್ಲದಕ್ಕೂ ಸಾವಯವ ಗೊಬ್ಬರವನ್ನೇ ಬಳಸುತ್ತಾರೆ.

ಕೃಷಿಯಿಂದ ಮನೋಲ್ಲಾಸ ಲಭ್ಯವಾಗುತ್ತದೆ. ಯಾವುದೇ ಕೆಲಸ ಮಾಡಬೇಕಾದರೆ ಅದರ ಬಗ್ಗೆ ಆಸಕ್ತಿ, ಮಾಹಿತಿ ಇರಬೇಕು. ಅದರೊಂದಿಗೆ ಮಣ್ಣಿನ ಗುಣಮಟ್ಟ ತಿಳಿದುಕೊಂಡು ಆಯಾಯ ಮಣ್ಣಿನ ಅನುಗುಣವಾಗಿ ಕೃಷಿ ಮಾಡಿದರೆ, ಉತ್ತಮ ಆದಾಯ ಗಳಿಸಬಹುದಾಗಿದೆ. ಆಗ ಮಾತ್ರ ಕೃಷಿಯಲ್ಲಿ ನಷ್ಟ ಇರುವುದಿಲ್ಲ. ಕೃಷಿಕರು ಯಾವಾಗಲೂ ಒಂದೇ ಕೃಷಿಯನ್ನು ನಂಬಿಕೊಂಡ ಇರಬಾರದು. ಮಿಶ್ರ ಕೃಷಿ ಪದ್ಧತಿಯನ್ನು ಆಳವಡಿಸಿಕೊಳ್ಳುವುದು  ಉತ್ತಮ. 
– ಭೋಜ ಪೂಜಾರಿ ಬೆಚ್ಚಳ್ಳಿ, ಪ್ರಗತಿಪರ ಕೃಷಿಕ

Advertisement

ಜೀವನೋಪಾಯಕ್ಕೆ ಶಿಕ್ಷಣ ಬೇಕು. ಆ ಶಿಕ್ಷಣದಿಂದಲೇ ಸರಕಾರಿ ಉದ್ಯೋಗಕ್ಕೆ ಹೋಗಿ ಜೀವನ ಸಾಗಿಸಬೇಕು ಎಂಬ ನಿರೀಕ್ಷೆ ಬೇಡ. ತಮಗೆ ಆಸಕ್ತಿ ಇರುವ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡು ಆ ಮೂಲಕ ಸಂಪಾದನೆ ಮಾಡಬೇಕು. ಹಣಕ್ಕಾಗಿ  ಅನ್ಯಾಯದ ಮಾರ್ಗ ಹಿಡಿಯದೆ, ಕಷ್ಟ ಪಟ್ಟು ಸಂಪಾದನೆ ಮಾಡಬೇಕು. ಇದರಿಂದ ಮಾನಸಿಕ ನೆಮ್ಮದಿ ಸಿಗುತ್ತದೆ.
– ರಾಜೇಂದ್ರ ಪೂಜಾರಿ ಬೆಚ್ಚಳ್ಳಿ, ಪ್ರಗತಿಪರ ಕೃಷಿಕ

– ಸತೀಶ ಆಚಾರ್‌ ಉಳ್ಳೂರ್‌

Advertisement

Udayavani is now on Telegram. Click here to join our channel and stay updated with the latest news.

Next