Advertisement

ಫೆ. 2ರಿಂದ ಸಾವಯವ ಕೃಷಿ ಮೇಳ

11:34 AM Jan 19, 2019 | Team Udayavani |

ಹೊನ್ನಾವರ: ರೋಟರಿ ಕ್ಲಬ್‌, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸಹಯೋಗದೊಂದಿಗೆ ಫೆ.2 ಮತ್ತು 3 ರಂದು ಬೃಹತ್‌ ಸಾವಯವ ಕೃಷಿ ಮೇಳವನ್ನು ಪ್ರಭಾತನಗರದ ಮೂಡಗಣಪತಿ ದೇವಸ್ಥಾನದ ಆವಾರದಲ್ಲಿ ನಡೆಸಲಿದೆ ಎಂದು ರೋಟರಿ ಅಧ್ಯಕ್ಷ ಆಮಂತ್ರಣ ಪತ್ರಿಕೆ ಮತ್ತು ಪೋಸ್ಟರ್‌ ಬಿಡುಗಡೆ ಕಾರ್ಯಕ್ರಮದಲ್ಲಿ ತಿಳಿಸಿದರು.

Advertisement

ತಜ್ಞರು ಮತ್ತು ರೈತರ ಸಂವಾದ, ವಸ್ತು ಪ್ರದರ್ಶನ ಮತ್ತು ಮಾರಾಟ ಮಳಿಗೆಗಳನ್ನು ಒಳಗೊಂಡ ಈ ಕಾರ್ಯಕ್ರಮದಲ್ಲಿ ಮಕ್ಕಳ ಸಂತೆ, ಸಿರಿಧಾನ್ಯ ಮೇಳ, ಸಾವಯವ ತಿಂಡಿ ತಿನಿಸು, ಫಲಪುಷ್ಪ ಪ್ರದರ್ಶನ, ಗೃಹೋಪಯೋಗಿ ವಸ್ತು ಮಾರಾಟ, ಕೃಷಿ ಯಂತ್ರೋಪಕರಣ ಪ್ರದರ್ಶನ, ರೋಟರಿ ರೈತಶ್ರೀ ಪ್ರಶಸ್ತಿ, ಕರಾವಳಿ ಶೈಲಿಯ ಆಹಾರ ಮಳಿಗೆ, ಮತ್ತ ಮನರಂಜನಾ ಕಾರ್ಯಕ್ರಮಗಳಿರುತ್ತವೆ. ವನವಾಸಿ ಕಲ್ಯಾಣ ಸಂಘ ಮತ್ತು ವನಸುಮ ಸೇವಾಟ್ರಸ್ಟ್‌ ಸಂಚಾರಿ ಆಸ್ಪತ್ರೆಯಲ್ಲಿ ತುರ್ತು ಮತ್ತು ಉಚಿತ ಆರೋಗ್ಯ ತಪಾಸಣೆ ವ್ಯವಸ್ಥೆ ಮಾಡಲಾಗಿದೆ. ಈ ಸಮ್ಮೇಳನದ ಯಶಸ್ಸಿಗಾಗಿ ತಾಲೂಕಿನ ಮತ್ತು ಜಿಲ್ಲೆಯ ಪ್ರಮುಖ ಕೃಷಿ, ತೋಟಗಾರಿಕೆ, ಅರಣ್ಯ ಇಲಾಖೆ, ಎಲ್ಲ ಸಹಕಾರಿ ಸಂಘಗಳನ್ನೊಳಗೊಂಡ ವಿಶೇಷ ಸಮಿತಿ ರಚಿಸಲಾಗಿದೆ. ಬೆಳಗ್ಗೆ 9 ರಿಂದ ಸಂಜೆ 9ರವರೆಗೆ ಕಾರ್ಯಕ್ರಮಗಳು ನಡೆಯುತ್ತಿರುತ್ತವೆ.

ಫೆ. 2 ರಂದು ಧರ್ಮಸ್ಥಳ ಯೋಜನೆ ಕಾರ್ಯನಿರ್ವಾಹಕ ನಿರ್ದೇಶಕ ಡಾ| ಎಲ್‌.ಎಚ್. ಮಂಜುನಾಥ ಅಂದು ಬೆಳಗ್ಗೆ 9:30ಕ್ಕೆ ಕಾರ್ಯಕ್ರಮ ಉದ್ಘಾಟಿಸುವರು. ಪ್ರಸಿದ್ಧ ಕೃಷಿ ತಜ್ಞ, ಲೇಖಕ ಶಿವಾನಂದ ಕಳವೆ ಅತಿಥಿಗಳಾಗಿ ಪಾಲ್ಗೊಳ್ಳುವರು. ಕೃಷಿ ಸಂವಾದದಲ್ಲಿ ನಾರಾಯಣ ಉಪಾಧ್ಯಾಯ ಬೆಂಗಳೂರು, ಡಾ| ಎಲ್‌.ಎಚ್. ಮಂಜುನಾಥ ಧರ್ಮಸ್ಥಳ, ನವೀನಕುಮಾರ, ಡಾ| ರಾಜೇಂದ್ರ ಹೆಗಡೆ, ಜಿ.ಆರ್‌. ಭಟ್, ಶಂಕರ ಭಟ್, ಶಂಕರ ಹೆಗಡೆ, ಡಾ| ಸಂಧ್ಯಾ ಭಟ್, ಡಾ| ಸತೀಶ ಗುನಗಾ ಮೊದಲಾದವರು ಜಿಲ್ಲೆಯ ಕೃಷಿಕರ ಎಲ್ಲ ಸಮಸ್ಯೆಗಳನ್ನು ಚರ್ಚಿಸಿ, ವಿಚಾರ-ವಿನಿಮಯದೊಂದಿಗೆ ಮಾರ್ಗದರ್ಶನ ನೀಡುವರು. ರೈತರು ಈ ಎರಡು ದಿನದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ವಿಚಾರ- ವಿನಿಮಯದಲ್ಲಿ ಸಕ್ರೀಯರಾಗಿ ಯಶಸ್ವಿಗೊಳಿಸಬೇಕು ಎಂದು ಕೋರಿದ್ದಾರೆ.

ರೋಟರಿ ಅಧ್ಯಕ್ಷ ರಂಗನಾಥ ಪೂಜಾರಿ, ಕಾರ್ಯದರ್ಶಿ ಸ್ಟೀಪನ್‌ ರೊಡ್ರಗೀಸ್‌, ಕಾರ್ಯಕ್ರಮ ಸಂಯೋಜಕ ಮಹೇಶ ಕಲ್ಯಾಣಪುರ, ಹಿರಿಯ ರೋಟರಿಯನ್‌ ದಿನೇಶ ಕಾಮತ್‌, ಜಿ.ಟಿ. ಹೆಬ್ಟಾರ, ಪ್ರೊ| ಮಾಳಗಿಮನಿ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next