Advertisement

ಜವಳಿ ಮಳಿಗೆ ಮಾಲೀಕನೀಗ ಸಾವಯವ ಕೃಷಿಕ

07:38 PM Sep 28, 2021 | Team Udayavani |

ವರದಿ: ಅಮರೇಗೌಡ ಗೋನವಾರ

Advertisement

ಹುಬ್ಬಳ್ಳಿ: ಅವರು ರೈತರಲ್ಲ, ಕಮ್ತಾ ಗೊತ್ತಿಲ್ಲ ಆದರೂ ಭೂ ತಾಯಿ ಸೆಳೆತ ಜವಳಿ ಮಳಿಗೆ ಮಾಲೀಕರೊಬ್ಬರನ್ನು ರೈತನನ್ನಾಗಿಸಿದೆ, ಕಮ್ತಾ ಕಲಿಸಿದೆ, ಹೊಸ ಪ್ರಯೋಗಕ್ಕೆ ಹಚ್ಚಿದೆ, ವಿಷಮುಕ್ತ ಕೃಷಿಯ ಪ್ರಯೋಗಶಾಲೆಯನ್ನು ತೆರೆಸಿದೆ, ಸುಮಾರು 11 ಎಕರೆಯಲ್ಲಿ ತೆಂಗು, ಅಡಿಕೆ, ಸಪೋಟಾ ಸೇರಿದಂತೆ ವಿವಿಧ ಹಣ್ಣಿನ ಗಿಡಗಳು ಕಂಗೊಳಿಸುವಂತೆ ಮಾಡಿದೆ.

ಹಾವೇರಿ ಜಿಲ್ಲೆ ಹಾನಗಲ್ಲ ತಾಲೂಕಿನ ಅಕ್ಕಿಆಲೂರು ಬಳಿಯ ವೀರಾಪುರ ಗ್ರಾಮದ ಸಾವಯವ ರೈತರೊಬ್ಬರ ಯಶೋಗಾಥೆಯಿದು. ಕೃಷಿ ಕಷ್ಟದಾಯಕ ಮತ್ತು ನಷ್ಟದ ಕಾಯಕ ಎಂದು ಅದೆಷ್ಟೋ ಜನರು ಕೃಷಿಯಿಂದ ವಿಮುಖರಾಗುತ್ತಿರುವ ಸನ್ನಿವೇಶದಲ್ಲಿ ಉತ್ತಮ ಗಳಿಕೆ ಜವಳಿ ವ್ಯಾಪಾರ ಇದ್ದರೂ ಕೃಷಿ ಕಾಯಕದಲ್ಲಿ ತೊಡಗಿಕೊಳ್ಳುವ ಸಾಹಸ ತೋರಿದ್ದಾರೆ. ಹೊಲಕ್ಕೆ ಹೆಜ್ಜೆ ಇಟ್ಟರೆ ಹಸಿರೆಲೆ ಗೊಬ್ಬರ, ದಶಪರ್ಣಿ, ಬೇವಿನ ಎಣ್ಣೆ, ರಸಾಯನ, ಪಂಚಗವ್ಯ-ದಶಗವ್ಯ, ಗೋಕೃಪಾಮೃತ, ಪೋಷಕಾಂಶ ಗೊಬ್ಬರ ತಯಾರಿ ನೋಡಬಹುದು, ಆಳೆತ್ತರಕ್ಕೆ ಬೆಳೆದು ನಿಂತ ಅಡಿಕೆ, ತೆಂಗಿನ ಮರಗಳು, ಚಿಕ್ಕು ಹಣ್ಣಿನ ಗಿಡಗಳು ಎಂತಹವರನ್ನು ಆಕರ್ಷಿಸುತ್ತವೆ. ವೀರಾಪುರದ ರೈತ ವಿಜಯಕುಮಾರ ತಿರಕಣ್ಣವರ ಕೃಷಿಯಲ್ಲಿ ಇಂತಹ ಸಾಧನೆಗಳ ಹೆಜ್ಜೆಯನ್ನು ಸದ್ದಿಲ್ಲದೇ ಇರಿಸಿದ್ದಾರೆ.

ವಿಜಯಕುಮಾರ ಅವರು ಪದವೀಧರರಾಗಿದ್ದು, ಅಕ್ಕಿಆಲೂರಿನಲ್ಲಿ ಕುಟುಂಬದಿಂದ ಬಂದ ಜವಳಿ ಮಾರಾಟ ಮಳಿಗೆ ನಿರ್ವಹಣೆಗೆ ಮುಂದಾಗಿದ್ದರು. ಸುಮಾರು 30-40 ವರ್ಷಗಳಿಂದ ಸಣ್ಣದಾಗಿಯೇ ಇದ್ದ ಮಳಿಗೆಯನ್ನು ದೊಡ್ಡ ಮಳಿಗೆಗೆ ಬದಲಾಯಿಸಿದ್ದರು. ಕೇವಲ ಸೀರೆ, ಬಟ್ಟೆ ಮಾರಾಟ ಆಗುತ್ತಿದ್ದ ಮಳಿಗೆಯಲ್ಲಿ ಸಿದ್ಧ ಉಡುಪುಗಳು ಸೇರಿದಂತೆ ಹೊಸ ಉತ್ಪನ್ನಗಳ ಮೂಲಕ ವಹಿವಾಟು ಹೆಚ್ಚಳಕ್ಕೂ ಶ್ರಮಿಸಿದ್ದರು. ವ್ಯಾಪಾರದ ಜತೆಗೆ ಕೃಷಿ ಕಾಯಕದ ಚಿಂತನೆ ಗರಿಗೆದರಿತ್ತು. ಗುತ್ತಿಗೆಯಾಗಿ ನೀಡಿದ್ದ ತಮ್ಮದೇ ಜಮೀನಿನಲ್ಲಿ ಯಾಕೆ ಕೃಷಿ ಕಾಯಕ ಕೈಗೊಳ್ಳಬಾರದೆಂಬ ಚಿಂತನೆಯೊಂದಿಗೆ ಮುಂದಡಿ ಇರಿಸಿದ್ದರು.

ದಶಪರ್ಣಿ ತಯಾರು: ಸಾವಯವ ಕೃಷಿಗೆ ಬೇಕಾಗುವ ಹಸಿರೆಲೆ ಗೊಬ್ಬರವನ್ನು ಹೊಲದಲ್ಲಿಯೇ ತಯಾರಿಸಲಾಗುತ್ತಿದೆ. ಬೇವಿನ ಸೊಪ್ಪು ತಂದು ಕುದಿಸಿ ಬೇವಿನ ಎಣ್ಣೆ ತಯಾರಿಸಲಾಗುತ್ತದೆ. ಸುಮಾರು 500 ಚಿಕ್ಕು ಗಿಡಗಳ ಕೆಳಗಡೆ ಕೆಲವೊಂದು ಹಕ್ಕಿ ಇನ್ನಿತರೆ ಕಾರಣದಿಂದ ಚಿಕ್ಕು ಕಾಯಿ, ಹಣ್ಣು ಬೀಳುತ್ತಿದ್ದವು. ಬಿದ್ದ ಕಾಯಿ-ಹಣ್ಣಿಗೆ ಬರುವ ಕೀಟಗಳು ಗಿಡದಲ್ಲಿನ ಕಾಯಿಗಳನ್ನು ಹಾಳು ಮಾಡುತ್ತಿದ್ದವು. ಬಿದ್ದ ಕಾಯಿ-ಹಣ್ಣು ಆಯ್ದುಕೊಂಡು ಡ್ರಮ್‌ನಲ್ಲಿ ಹಾಕಿ ಅಷ್ಟೇ ಪ್ರಮಾಣದ ಬೆಲ್ಲ ಸೇರಿಸಿ ಅದರಿಂದ ರಸಾಯನ ತಯಾರಿಸಲಾಗುತ್ತದೆ. ಮೂರು ತರಹದ ಹಾಲು ಇರುವ ಎಲೆಗಳು, ಮೂರು ತರಹದ ವಿಷಕಾರಿ ಎಲೆಗಳು, ಮೂರು ತರಹದ ನಾರಿನ ಅಂಶ ಹೆಚ್ಚಿರುವ ಎಲೆಗಳು ಒಟ್ಟು 9 ತರಹದ ಸುಮಾರು 10 ಕೆಜಿ ಎಲೆಗಳಿಗೆ 3 ಕೆಜಿಯಷ್ಟು ಎಲೆ ತಂಬಾಕು, 3 ಕೆಜಿ ಹಸಿಮೆಣಸಿನಕಾಯಿ ಹಾಗೂ 1 ಕೆಜಿಯಷ್ಟು ಜವಾರಿ ಬೆಳ್ಳೊಳ್ಳಿ ರುಬ್ಬಿ ಹಾಕಿ 45 ದಿನಗಳವರೆಗೆ ಇರಿಸುವ ಮೂಲಕ ದಶಪರ್ಣಿ ತಯಾರಿಸಲಾಗುತ್ತದೆ. ಕೀಟಗಳ ಬಾಧೆ ನಿಯಂತ್ರಣಕ್ಕೆ ಇದನ್ನು ಬಳಸಲಾಗುತ್ತದೆ.

Advertisement

ನವಧಾನ್ಯಗಳನ್ನು ಒಂದಿಂಚು ಮಣ್ಣಿನಲ್ಲಿ ಹಾಕಿ ಕತ್ತಲಿನಲ್ಲಿ ಇರಿಸಲಾಗುತ್ತದೆ. ಧಾನ್ಯಗಳು ಮೊಳಕೆ ಬಂದು, ಎಲೆ ಬಿಡುವುದರೊಳಗೆ ಅವುಗಳನ್ನು ಮಣ್ಣಿನಿಂದ ಬೇರ್ಪಡಿಸಿ ರುಬ್ಬಿ, 10 ದಿನ ನೀರಿನಲ್ಲಿ ಇರಿಸಲಾಗುತ್ತದೆ. ಇದು ಜಿಬ್ರಾಲಿಕ್‌ ಆ್ಯಸಿಡ್‌ ಆಗಿ ಪರಿವರ್ತನೆಗೊಳ್ಳಲಿದೆ. ಕಂಪೆನಿಗಳು ಒಂದು ಲೀಟರ್‌ಗೆ ಸುಮಾರು 40-50 ಸಾವಿರ ರೂ.ನಂತೆ ಮಾರಾಟ ಮಾಡುತ್ತಿವೆಯಂತೆ. ಜತೆಗೆ ಪಂಚಗವ್ಯ-ದಶಗವ್ಯ ತಯಾರಿಸಲಾಗುತ್ತದೆ. ಮೂರು ತರಹದ ಏಕದಳ ಧಾನ್ಯಗಳು, ಮೂರು ತರಹದ ದ್ವಿದಳ ಧಾನ್ಯಗಳು, ಮೂರು ತರಹದ ಎಣ್ಣೆ ಕಾಳುಗಳು ಸೇರಿ ಒಟ್ಟು 18 ಕೆಜಿ ಧಾನ್ಯಗಳನ್ನು ಹಿಟ್ಟು ಮಾಡಿ, ತಾಮ್ರದ ಪಾತ್ರೆಯಲ್ಲಿರಿಸಬೇಕು, ತುಕ್ಕು ಹಿಡಿಯದ 30 ಮಳೆ, ಬ್ಯಾಟರಿಯ ಹಳೇ ಸೆಲ್‌ಗ‌ಳಲ್ಲಿನ ಕರಿದಾದ ಪದಾರ್ಥ ಹಾಕಿ ಒಂದು ತಿಂಗಳು ಬಿಡುವ ಮೂಲಕ ಪೋಷಕಾಂಶ ತಯಾರಿಸಲಾಗುತ್ತಿದೆ.

6 ಟ್ರಿಪ್‌ ಮಣ್ಣು, ಆರು ಟ್ರಿಪ್‌ ಎಲೆಗಳು, ಆರು ಟ್ರಿಪ್‌ ಸಗಣೆ ಸೇರಿಸಿ ಹಸಿರೆಲೆ ಗೊಬ್ಬರ ಹೀಗೆ ವಿವಿಧ ಔಷಧ, ಪೋಷಕಾಂಶಗಳನ್ನು ವಿಜಯಕುಮಾರ ಅವರ ತೋಟದಲ್ಲಿ ತಯಾರು ಮಾಡಲಾಗುತ್ತದೆ. ಜತೆಗೆ 22 ಡ್ರಮ್‌ಗಳಲ್ಲಿ ಗೋಕೃಪಾಮೃತ ತಯಾರು ಮಾಡಲಾಗುತ್ತದೆ. ಅಡಿಕೆ ಮರಗಳಿಗೆ ಸುಳಿರೋಗ ಬಂದರೆ ಬುಡಸಮೇತ ಕಿತ್ತು ಹಾಕಬೇಕೆಂಬುದು ಅನೇಕ ರೈತರ ಅನಿಸಿಕೆ. ವಿಜಯಕುಮಾರ ಅವರ ತೋಟದಲ್ಲಿನ 4,500 ಅಡಿಕೆ ಮರಗಳಲ್ಲಿ ಏಳು ಮರಗಳಿಗೆ ಸುಳಿರೋಗ ಕಾಣಿಸಿಕೊಂಡಿತ್ತು. ಮರಗಳನ್ನು ಕಿತ್ತು ಹಾಕದೆ ಮೇಲಿನ ಭಾಗವನ್ನು ಕ್ರಾಸ್‌ ಕಟ್‌ ಮಾಡಿದರೆ, ಒಳಗೆ ಇನ್ನೊಂದು ಸುಳಿ ಇರುತ್ತದೆ. ಆ ಸುಳಿ ಮೇಲೆ ದಶಪರ್ಣಿ ಹಾಕುತ್ತ ಬಂದಿದ್ದು, ಇದೀಗ ಸುಳಿರೋಗಕ್ಕೆ ಸಿಲುಕಿದ ಮರಗಳು ಹೊಸ ಚಿಗುರಿನೊಂದಿಗೆ ಬೆಳೆದು ನಿಂತಿವೆ.

Advertisement

Udayavani is now on Telegram. Click here to join our channel and stay updated with the latest news.

Next