ದಾವಣಗೆರೆ: ಹಣಕಾಸು ಸಚಿವರೂ ಆಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಬುಧವಾರ ಮಂಡಿಸಿದ 2017-18ನೇ ಸಾಲಿನ ಬಜೆಟ್ ನಿರಾಶದಾಯಕ ಎಂದು ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆ ಪ್ರತಿಕ್ರಿಯಿಸಿದೆ. ಗುರುವಾರ ಮಹಾಸಂಸ್ಥೆ ಅಧ್ಯಕ್ಷ ಮೋತಿ ವೀರಣ್ಣ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕಾರಿ ಸಮಿತಿ ಸಭೆ 2017-18ನೇ ಸಾಲಿನ ರಾಜ್ಯ ಬಜೆಟ್ ಬಗ್ಗೆ ಕೂಲಂಕುಷವಾಗಿ ಚರ್ಚಿಸಿ, ಒಟ್ಟಾರೆಯಾಗಿ ಬಜೆಟ್ ನಿರಾಶದಾಯಕ ಎಂಬ ಅಭಿಪ್ರಾಯ ವ್ಯಕ್ತಪಡಿಸಿದೆ.
ಮುಂಗಡ ಪತ್ರದಲ್ಲಿ ಕೃಷಿ ಮತ್ತು ಮೂಲ ಸೌಕರ್ಯಕ್ಕೆ ಆದ್ಯತೆ ನೀಡಿರುವುದು, 25 ಲಕ್ಷ ರೈತರಿಗೆ 13,500 ಕೋಟಿ ಬೆಳೆ ಸಾಲ, ತೋಟಗಾರಿಕೆಗೂ ಕೃಷಿ ಭಾಗ್ಯ ಹೊಂಡ ನಿರ್ಮಾಣ, 3,975 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆ, 114 ತಾಲೂಕುಗಳಲ್ಲಿ ಡಯಾಲಿಸಿಸ್ ಕೇಂದ್ರ ಪ್ರಾರಂಭ, 6 ಸರ್ಕಾರಿ ವೈದ್ಯಕೀಯ ಕಾಲೇಜು ಮುಂತಾದ ಘೋಷಣೆ ಸ್ವಾಗತಾರ್ಹ.
ಜು. 1 ರಿಂದ ಸರಕು ಮತ್ತು ಸೇವಾ ತೆರಿಗೆ ಕಾಯ್ದೆ ಜಾರಿಗೆ ತರುವ ಹಿನ್ನೆಲೆಯಲ್ಲಿ ಪ್ರಸ್ತುತ ತೆರಿಗೆ ವ್ಯಾಪ್ತಿಯ ಬಗ್ಗೆ ಮುಂಗಡಪತ್ರದಲ್ಲಿ ಬದಲಾವಣೆ ಮಾಡಿಲ್ಲ, ಅಕ್ಕಿ, ಭತ್ತ, ಗೋಧಿ, ಬೇಳೆಕಾಳುಗಳ ಮೇಲಿನ ತೆರಿಗೆ ಮುಂದುವರಿಕೆ, 1 ಲಕ್ಷ ಮೇಲ್ಪಟ್ಟ ದ್ವಿಚಕ್ರ ವಾಹನಗಳ ಮೇಲಿನ ತೆರಿಗೆ ಶೇ. 12 ರಿಂದ 18ಕ್ಕೆ ಹೆಚ್ಚಳ, ಸಣ್ಣ ಮತ್ತು ಅತೀ ಸಣ್ಣ ಉದ್ಯಮಗಳತ್ತ ದೃಷ್ಟಿ ಹರಿಸಿರುವುದು,
ಕೈಗಾರಿಕೆಗಳಿಗೆ ಸ್ಪಂದಿಸಲು ಪ್ರತ್ಯೇಕ ನಿರ್ದೇಶನಾಲಯ ಸ್ಥಾಪನೆ ಬಗ್ಗೆ ಪ್ರಸ್ತಾಪಿಸಿರುವುದು ಕೈಗಾರಿಕೋದ್ಯಮಿಗಳ ಅಭ್ಯುದಯಕ್ಕೆ ಪೂರಕವಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. ದಾವಣಗೆರೆ ಜಿಲ್ಲೆಗೆ ಸಂಬಂಧಿಸಿದಂತೆ 25 ಕೋಟಿ ವೆಚ್ಚದ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ, ಇಎಸ್‌ಐ ಆಸ್ಪತ್ರೆ ಉನ್ನತೀಕರಣ, ನ್ಯಾಮತಿಗೆ ತಾಲೂಕು ಸ್ಥಾನಮಾನ ನೀಡಿರುವುದು ಸ್ವಾಗತಾರ್ಹ.
ಆದರೆ, ಮೆಕ್ಕೆಜೋಳ ಕಣಜ ಖ್ಯಾತಿಯ ಜಿಲ್ಲೆಯಲ್ಲಿ ಸಂಸ್ಕರಣಾ ಘಟಕ, ಉಪ ಉತ್ಪನ್ನ ತಯಾರಿಕಾ ಘಟಕ, ಫುಡ್‌ಪಾರ್ಕ್, ಸರ್ಕಾರಿ ವೈದ್ಯಕೀಯ, ಕೃಷಿ, ಕಾಲೇಜು, ವಿಮಾನ ನಿಲ್ದಾಣ ನಿರ್ಮಾಣ, ಜವಳಿ ಪಾರ್ಕ್ ಅಭಿವೃದ್ಧಿಗೆ ಪ್ರೋತ್ಸಾಹ, ಫ್ಲೆ ಓವರ್, ಸಬ್ ವೇ ನಿರ್ಮಾಣದ ಬಗ್ಗೆ ಬಜೆಟ್‌ನಲ್ಲಿ ಸ್ಪಂದಿಸಿಲ್ಲ. ರೈತರ ಸಾಲ ಮನ್ನಾದ ನಿರೀಕ್ಷೆ ಈಡೇರಿಸಿಲ್ಲ.
ಶಾಶ್ವತವಾಗಿ ನೆನೆಪಿನಲ್ಲಿ ಉಳಿಯುವಂತಹ ಅಥವಾ ಸಮಗ್ರ ಕರ್ನಾಟಕಕ್ಕೆ ಧೀರ್ಘಕಾಲಿಕ ಅನುಕೂಲವಾಗುವಂತ ಯಾವುದೇ ಯೋಜನೆ ಘೋಷಣೆಯಾಗಿಲ್ಲ ಎಂದು ಸಭೆ ಹೇಳಿದೆ. ಬರಗಾಲದಿಂದ ರೈತ ಸಮೂಹ, ಜನ ಸಾಮಾನ್ಯರು ಕ್ಷಿಷ್ಟಕರ ಪರಿಸ್ಥಿತಿ ಎದುರಿಸುತ್ತಿದ್ದರೂ ಸಹ ಸಮಸ್ಯೆ ನಿವಾರಣೆಗೆ ಬಜೆಟ್‌ನಲ್ಲಿ ಸರ್ಕಾರ ಸ್ಪಂದಿಸಿಲ್ಲ. ವಾಣಿಜ್ಯ ಮತ್ತು ಕೈಗಾರಿಕೋದ್ಯಮದ ಪ್ರಗತಿಗೆ ಪೂರಕವಾಗಿ ಅವಶ್ಯಕ ಕ್ರಮ ತೆಗೆದುಕೊಂಡಿರುವುದಿಲ್ಲ.
ಹಾಗಾಗಿ ಈ ಸಾಲಿನ ಬಜೆಟ್ ನಿರಾಶದಾಯಕ ಎಂಬ ಪ್ರತಿಕ್ರಿಯೆ ವ್ಯಕ್ತವಾಯಿತು. ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆ ಕಾರ್ಯದರ್ಶಿ ಅಜ್ಜಂಪುರಶೆಟ್ರಾ ಶಂಭುಲಿಂಗಪ್ಪ, ತೆರಿಗೆ ಸಮಿತಿ ಅಧ್ಯಕ್ಷ ಬಿ.ಜಿ. ಬಸವರಾಜಪ್ಪ, ಕಾರ್ಯಕಾರಿ ಸಮಿತಿ ಸದಸ್ಯರಾದ ಎಂ.ಎಚ್. ನಿಜಾನಂದಪ್ಪ, ಕೆ. ಜಾವಿದ್, ಅಂದನೂರು ಮುಪ್ಪಣ್ಣ, ಎ.ಬಿ. ಷಡಕ್ಷಪ್ಪ, ಜೆಂಬಗಿ ರಾಧೇಶ್ ಅಭಿಪ್ರಾಯ ವ್ಯಕ್ತಪಡಿಸಿದರು.