Advertisement
ರೂಢಿಗತ ಎಕ್ಸ್‌ರೇಗಳನ್ನು ಶಂಕಿತ ಹಲ್ಲಿನ ಬಾಯಿಯೊಳಗಿನ ಎಕ್ಸ್‌ರೇಗೆ ಸೀಮಿತಗೊಳಿಸಲಾಯಿತು. ರೇಡಿಯೋಗ್ರಾಫಿ ನಡೆಸುವ ವೇಳೆ ರೋಗಿ ಉದ್ದನೆಯ ನಿಲುವಂಗಿ ಧರಿಸಿರುವಂತೆ ನೋಡಿಕೊಳ್ಳಲಾಯಿತು. ವಿಕಿರಣದಿಂದ ಭ್ರೂಣ ಮತ್ತು ತಾಯಿಗೆ ಅಪಾಯವಿರುವುದನ್ನು ಗಣನೆಗೆ ತೆಗೆದುಕೊಂಡು ಸೋಂಕು ಕುತ್ತಿಗೆಯ ಆಳಭಾಗಕ್ಕೆ ಹರಡಿದೆಯೇ ಎಂಬುದನ್ನು ತಿಳಿಯಲು ಸಹಾಯ ಮಾಡುವಂತಹ ಕಂಪ್ಯೂಟೆಡ್ ಟೊಮೊಗ್ರಫಿ (ಸಿಟಿ) ಸ್ಕ್ಯಾನ್ ಕೂಡ ಮಾಡಿಸಲಿಲ್ಲ.
Related Articles
Advertisement
ಮಹಿಳೆ ಗರ್ಭಧರಿಸಿದ ಸಮಯದಲ್ಲಿ ಆಕೆಯಲ್ಲಿ ಲೈಂಗಿಕ ಹಾರ್ಮೋನ್‌ಗಳ ಸ್ರಾವ ಹೆಚ್ಚುತ್ತದೆ. ಈಸ್ಟ್ರೋಜನ್ ಸ್ರಾವ 10 ಪಟ್ಟು ಹೆಚ್ಚಿದರೆ ಪ್ರೊಜೆಸ್ಟಿರೋನ್ ಸ್ರಾವ 30 ಪಟ್ಟು ಅಧಿಕವಾಗುತ್ತದೆ. ಗರ್ಭಿಣಿಯರಲ್ಲಿ ಹಾರ್ಮೋನ್ ಸ್ರಾವ ಹೆಚ್ಚುವುದರಿಂದ ಮತ್ತು ಭ್ರೂಣ ಬೆಳೆಯುತ್ತಿರುವುದರಿಂದ ದೇಹ ವ್ಯವಸ್ಥೆಗೆ ಸಂಬಂಧಿಸಿದ, ಸ್ಥಳೀಯ ದೇಹಶಾಸ್ತ್ರೀಯ ಮತ್ತು ದೈಹಿಕವಾದ ಹಲವಾರು ಬಗೆಯ ಬದಲಾವಣೆಗಳು ಘಟಿಸುತ್ತವೆ. ದೈಹಿಕ ವ್ಯವಸ್ಥೆಗೆ ಸಂಬಂಧಿಸಿದ ಬದಲಾವಣೆಗಳಲ್ಲಿ ಹೃದಯ, ರಕ್ತಸಂಬಂದಿಯಾದ, ಶ್ವಾಸಕೋಶಗಳ, ಮೂತ್ರ ಜನಕಾಂಗ ಸಂಬಂಧಿಯಾದ, ಜೀರ್ಣ ವ್ಯವಸ್ಥೆಯ ಹಾಗೂ ಜನನಾಂಗ ಮತ್ತು ಮೂತ್ರ ವಿಸರ್ಜನಾಂಗಗಳಿಗೆ ಸಂಬಂಧಿಸಿದವು ಮುಖ್ಯವಾದವುಗಳು. ದೈಹಿಕವಾಗಿ ಸ್ಥಳೀಯವಾದ ಬದಲಾವಣೆಗಳು ದೇಹದ ವಿವಿಧ ಅಂಗಾಂಗಗಳಲ್ಲಿ ಉಂಟಾಗುತ್ತಿದ್ದು, ಬಾಯಿಯೂ ಇವುಗಳಲ್ಲಿ ಒಂದು. ಈ ಒಟ್ಟು ಬದಲಾವಣೆಗಳು ಗರ್ಭಿಣಿಯರಿಗೆ ದಂತವೈದ್ಯಕೀಯ ಆರೈಕೆಯನ್ನು ಒದಗಿಸಲು ವಿವಿಧ ಸವಾಲುಗಳನ್ನು ಒಡ್ಡುತ್ತವೆ.
ಗರ್ಭಧಾರಣೆಯ ಸಮಯದಲ್ಲಿ ಬಾಯಿಯಲ್ಲಿ
ಆಗುವ ಬದಲಾವಣೆಗಳು
ಗರ್ಭಧಾರಣೆಯ ಸಮಯದಲ್ಲಿ ಆಗುವ ಹಾರ್ಮೋನ್ ಸಂಬಂಧಿ ಬದಲಾವಣೆಗಳು ಬಾಯಿಯ ಕುಹರದಲ್ಲಿ ಕೂಡ ಅನೇಕ ಬದಲಾವಣೆಗಳಿಗೆ ಕಾರಣವಾಗಬಲ್ಲವು. ಈಸ್ಟ್ರೋಜನ್ ಪ್ರಮಾಣ ಹೆಚ್ಚಿರುವುದು ಗರ್ಭಿಣಿಯರು ಜಿಂಜಿವೈಟಿಸ್ ಮತ್ತು ಜಿಂಜಿವಲ್ ಹೈಪರ್‌ಪ್ಲಾಸಿಯಾಕ್ಕೆ ತುತ್ತಾಗುವುದಕ್ಕೆ ಅನುವು ಮಾಡಿಕೊಡುತ್ತದೆ. ಗರ್ಭಧಾರಣೆಯಿಂದ ಪರಿದಂತೀಯ ಕಾಯಿಲೆಗಳು ಉಂಟಾಗುವುದಿಲ್ಲವಾದರೂ ಈಗಾಗಲೇ ಪರಿದಂತೀಯ ಅನಾರೋಗ್ಯ ಇದ್ದರೆ ಅದು ಉಲ್ಬಣಿಸುವುದಕ್ಕೆ ಕಾರಣವಾಗಬಹುದು. ಗರ್ಭಿಣಿಯರ ಪೈಕಿ ಶೇ. 1ರಿಂದ ಶೇ. 5ರಷ್ಟು ಮಹಿಳೆಯರಲ್ಲಿ ಪೆಯೊಜೆನಿಕ್ ಗ್ರಾನ್ಯುಲೊಮಾಸ್ (ಗರ್ಭಧಾರಣೆಯ ಗಡ್ಡೆಗಳು) ಉಂಟಾಗುತ್ತವೆ. ಲೈಂಗಿಕ ಹಾರ್ಮೋನ್‌ಗಳಿಂದಾಗಿ ಆ್ಯಂಜಿಯೊಜೆನೆಸಿಸ್ ಹೆಚ್ಚಳವಾಗಬಹುದಾಗಿದ್ದು, ಇದರ ಜತೆಗೆ ಪ್ಲೇಕ್‌ನಂತಹ ಸ್ಥಳೀಯ ಕಾರಣಗಳಿಂದ ಉಂಟಾಗುವ ಜಿಂಜಿವಲ್ ತೊಂದರೆ ಸೇರ್ಪಡೆಗೊಂಡು ಪೆಯೋಜೆನಿಕ್ ಗ್ರಾನ್ಯುಲೊಮಾಗೆ ಕಾರಣವಾಗುತ್ತದೆ ಎಂದು ಭಾವಿಸಲಾಗಿದೆ. ಗರ್ಭಧಾರಣೆಯ ಸಂದರ್ಭದಲ್ಲಿ ಯಾವುದೇ ಸಮಯದಲ್ಲಿಯೂ ಇದು ಉಂಟಾಗಬಹುದು; ಆದರೆ ಚೊಚ್ಚಲ ಗರ್ಭಧಾರಣೆಯ ಸಂದರ್ಭದಲ್ಲಿ, ಮೊದಲ ಮತ್ತು ಮೂರನೆಯ ತ್ತೈಮಾಸಿಕ ಅವಧಿಗಳಲ್ಲಿ ಇದು ಉಂಟಾಗುವುದು ಸಾಮಾನ್ಯವಾಗಿ ಕಂಡುಬಂದಿದ್ದು, ಶಿಶುಜನನದ ಬಳಿಕ ಉಪಶಮನವಾಗುತ್ತದೆ. ವಾಂತಿಯ ಜತೆಗೆ ಇರುವ ಜಠರದ ಆಮ್ಲಗಳು ಹಲ್ಲುಗಳ ಅದರಲ್ಲೂ ಮುಂಭಾಗದ ಹಲ್ಲುಗಳ ಒಳಭಾಗದ ಎನಾಮಲ್ ಸವೆತಕ್ಕೆ ಕಾರಣವಾಗಬಹುದಾಗಿದೆ. ವಾಂತಿಯಾದ ಕೂಡಲೇ ಬಾಯಿಯನ್ನು ಸೋಡಿಯಂ ಬೈಕಾಬೊìನೇಟ್‌ಯುಕ್ತ ದ್ರಾವಣ ಉಪಯೋಗಿಸಿ ಚೆನ್ನಾಗಿ ತೊಳೆದುಕೊಳ್ಳುವುದಕ್ಕೆ ಸಲಹೆ ನೀಡುವ ಮೂಲಕ ಇದನ್ನು ತಡೆಯಬಹುದಾಗಿದೆ. ಬಾಯಿಯ ಒಳಭಾಗದ ಲೋಳೆ ಪದರವು ಕರಗುವುದನ್ನು ಜೊಲ್ಲಿನಲ್ಲಿ ಬೆರೆತಿರುವ ಈಸ್ಟ್ರೋಜನ್ ಹೆಚ್ಚಿಸುತ್ತದೆ. ಕರಗುತ್ತಿರುವ ಅಂಗಾಂಶಗಳು ಬ್ಯಾಕ್ಟೀರಿಯಾಗಳಿಗೆ ಪೋಷಕಾಂಶಗಳಾಗಿ ಅವುಗಳ ಬೆಳವಣಿಗೆಯಾಗಲು ಪೂರಕ ವಾತಾವರಣ ನಿರ್ಮಿಸುತ್ತವೆ. ಇದು ಗರ್ಭಿಣಿಯರಲ್ಲಿ ಹಲ್ಲು ಹುಳುಕು ಉಂಟಾಗುವುದಕ್ಕೆ ಕಾರಣವಾಗಬಹುದು. ಗರ್ಭಿಣಿಯರಲ್ಲಿ ಮುಖದ ಬಣ್ಣ ಹೆಚ್ಚಬಹುದಾಗಿದ್ದು, ಇದನ್ನು “ಮೆಲಾಸ್ಮಾ’ ಅಥವಾ ಗರ್ಭಧಾರಣೆಯ ಅವಧಿಯ ಮಾಸ್ಕ್ ಎಂದೂ ಕರೆಯುತ್ತಾರೆ. ಇದು ಮುಖದ ಮಧ್ಯಭಾಗದಲ್ಲಿ ಎರಡೂ ಕಡೆ ಕಂದು ಕಲೆಗಳಂತೆ ಕಾಣಿಸಿಕೊಳ್ಳುತ್ತವೆ. ಮುಖದಲ್ಲಾಗುವ ಈ ಬದಲಾವಣೆ ಮೊದಲ ತ್ತೈಮಾಸಿಕದಲ್ಲಿ ಆರಂಭವಾಗಬಹುದಾಗಿದ್ದು, ಗರ್ಭಿಣಿಯರ ಪೈಕಿ ಶೇ. 50ರಿಂದ 70 ಮಂದಿಯಲ್ಲಿ ಉಂಟಾಗುತ್ತದೆ. ಈ ಸ್ಥಿತಿಗೆ ಕಾರಣಗಳು ಇನ್ನೂ ಖಚಿತವಾಗಿ ತಿಳಿದುಬಂದಿಲ್ಲ; ಆದರೆ ಈಸ್ಟ್ರೊಜನ್ ಮತ್ತು ಪ್ರೊಜೆಸ್ಟಿರಾನ್ ಹೆಚ್ಚಳವೇ ಇದಕ್ಕೆ ಕಾರಣ ಎಂದು ಭಾವಿಸಲಾಗಿದೆ. ಪ್ರಸೂತಿಯ ಬಳಿಕ ಮೆಲಾಸ್ಮಾ ಮಾಯವಾಗುತ್ತದೆ. ಪರಿದಂತೀಯ ಕಾಯಿಲೆಗಳಿಂದಾಗಿ ಬಹುತೇಕ ಬಾರಿ ಅವಧಿಪೂರ್ವ ಹೆರಿಗೆ ಉಂಟಾಗಬಹುದಾಗಿದೆ. ಕಡಿಮೆ ತೂಕದ ಶಿಶು ಜನನ ಮತ್ತು ಪ್ರಿಎಕ್ಲಾಂಪ್ಸಿಯಾ ಕೂಡ ಪರಿದಂತೀಯ ಕಾಯಿಲೆಗಳೊಂದಿಗೆ ಸಂಬಂಧ ಹೊಂದಿವೆ. ಪೆರಿಯೊಡಾಂಟೈಟಿಸ್ ಹೃದ್ರೋಗಗಳು, ಮಧುಮೇಹ, ಶ್ವಾಸಕೋಶದ ದೀರ್ಘಾವಧಿಯ ಕಾಯಿಲೆಗಳು ಮತ್ತು ಗರ್ಭಧಾರಣೆಯ ಫಲಿತಾಂಶದ ಮೇಲೂ ಪರಿಣಾಮ ಬೀರುತ್ತದೆ. ಪರಿದಂತೀಯ ಕಾಯಿಲೆಗಳು ಮಧ್ಯಮದಿಂದ ಕಡಿಮೆ ಪ್ರಮಾಣದ ಉರಿಯೂತ ಲಕ್ಷಣವನ್ನು ಹೊಂದಿರುವುದರಿಂದ ಪರಿದಂತೀಯ ಕಾಯಿಲೆಗಳನ್ನು ಹೊಂದಿರುವ ಮಹಿಳಾ ರೋಗಿಗಳಲ್ಲಿ ಗರ್ಭಧಾರಣೆಯು ಋಣಾತ್ಮಕವಾಗಿ ಮುಕ್ತಾಯ ಕಾಣುತ್ತದೆ ಎಂದು ತಿಳಿಯಲಾಗಿದೆ. ಪರಿದಂತೀಯ ಕಾಯಿಲೆಗಳೊಂದಿಗೆ ಧನಾತ್ಮಕ ಸಂಬಂಧ ಹೊಂದಿರುವುದನ್ನು ಹಲವು ಅಧ್ಯಯನ ವರದಿಗಳು ತಿಳಿಸಿವೆ. ದೇಹಶಾಸ್ತ್ರೀಯ ಬದಲಾವಣೆಗಳು
ಹೊಟ್ಟೆ ತೊಳೆಸುವಿಕೆ ಮತ್ತು ವಾಂತಿಯನ್ನು ಶೇ. 66ರಷ್ಟು ಗರ್ಭಿಣಿಯರು ಅನುಭವಿಸುತ್ತಾರೆ. ಇದು ಕೊನೆಯ ಋತುಚಕ್ರದ ಬಳಿಕ ಐದು ವಾರಗಳಲ್ಲಿ ಆರಂಭವಾಗಿ ಸುಮಾರು 8ರಿಂದ 12 ವಾರಗಳ ಅವಧಿಯವರೆಗೆ ಇರುತ್ತದೆ. ಗರ್ಭಧಾರಣೆಯಿಂದಾಗಿ ವಾಂತಿ, ಹೊಟ್ಟೆ ತೊಳೆಸುವಿಕೆ ಬೆಳಗಿನ ಸಮಯದಲ್ಲಿಯೇ ಹೆಚ್ಚು ಇರುವುದರಿಂದ ಗರ್ಭಿಣಿಯರು ದಂತವೈದ್ಯಕೀಯ ಚಿಕಿತ್ಸೆಗಾಗಿ ಬೆಳಗಿನ ಸಮಯ ಕಾಯ್ದಿರಿಸುವುದನ್ನು ತಪ್ಪಿಸುವುದು ಉತ್ತಮ. ಗರ್ಭಿಣಿಯರಲ್ಲಿ ಎಂಡೊಕ್ರೈನ್ ಬದಲಾವಣೆಗಳು ಕೂಡ ಉಂಟಾಗುತ್ತವೆ; ಭಾರತೀಯರಲ್ಲಿ ಶೇ. 14ರಷ್ಟು ಗರ್ಭಿಣಿಯರು ಗರ್ಭಧಾರಣೆಯ ಸಮಯದ ಮಧುಮೇಹಕ್ಕೆ ತುತ್ತಾಗುತ್ತಾರೆ. ಒಟ್ಟು ಗರ್ಭಿಣಿಯರಲ್ಲಿ ಶೇ. 8 ಮಂದಿಗೆ ಡಿಕ್ಯುಬಿಟಸ್ ಅಧಿಕ ರಕ್ತದೊತ್ತಡ ಅಥವಾ ವೆನಾ ಕಾವಾ ಸಿಂಡ್ರೋಮ್ ಗರ್ಭಧಾರಣೆಯ ಅಂತಿಮ ಘಟ್ಟದಲ್ಲಿ ಉಂಟಾಗುವುದು ವರದಿಯಾಗಿದೆ. ಗರ್ಭಕೋಶವು ದೊಡ್ಡದಾಗಿರುವುದರ ಪರಿಣಾಮವಾಗಿ ಕಿರಿಯ ವೆನಾ ಕಾವಾ ಸಂಕುಚನಗೊಳ್ಳುವುದರಿಂದ ಹೃದಯಕ್ಕೆ ರಕ್ತವು ಹಿಂದಿರುಗಲು ತೊಂದರೆಯಾಗಿ ಈ ಸಮಸ್ಯೆ ಉಂಟಾಗುತ್ತದೆ. ಈ ಸಮಸ್ಯೆಯು ರಕ್ತದೊತ್ತಡವು ಹಠಾತ್ತಾಗಿ ಕುಸಿಯುವುದರೊಂದಿಗೆ ಪ್ರಕಟಗೊಳ್ಳುತ್ತದೆ, ರೋಗಿ ನಿಂತಿರುವ ಭಂಗಿಯಲ್ಲಿದ್ದಾಗ ಹೊಟ್ಟೆ ತೊಳೆಸುವಿಕೆ, ತಲೆ ತಿರುಗುವುದು, ಮೂಛೆì ತಪ್ಪುವುದು ಇದರ ಲಕ್ಷಣಗಳು. –ಮುಂದಿನ ವಾರಕ್ಕೆ -ಡಾ| ಸುನಿಲ್ ಎಸ್. ನಾಯಕ್
ಅಸೋಸಿಯೇಟ್ ಪ್ರೊಫೆಸರ್, ಓರಲ್ ಮತ್ತು ಮ್ಯಾಕ್ಸಿಲೊಫೇಶಿಯಲ್ ಸರ್ಜರಿ ವಿಭಾಗ, ಎಂಸಿಒಡಿಎಸ್, ಮಾಹೆ, ಮಣಿಪಾಲ