ಮೈಸೂರು: ನಗರದ ಜಲದರ್ಶಿನಿ ಸಮೀಪದ ಮೈಸೂರು-ಹುಣಸೂರು ಮುಖ್ಯರಸ್ತೆಯನ್ನು ನೇರಗೊಳಿಸಲು ಮುಂದಾಗಿರುವ ಕ್ರಮ ವಿರೋಧಿಸಿ ಮೈಸೂರು ಗ್ರಾಹಕ ಪರಿಷತ್ ಹಾಗೂ ವಿವಿಧ ಸಂಘಟನೆಗಳ ಸದಸ್ಯರು ಭಾನುವಾರ ಮೌನ ಪ್ರತಿಭಟನಾ ಮೆರವಣಿಗೆ ನಡೆಸಿದರು.
ಹೆಚ್ಚಿನ ಅಪಘಾತ ಸಂಭವಿಸಲಿದೆ ಎಂಬ ಕಾರಣ ಮುಂದಿಟ್ಟುಕೊಂಡು ರಸ್ತೆ ಅಗಲೀಕರಣ ಹಾಗೂ ರಸ್ತೆಯನ್ನು ನೇರಗೊಳಿಸಲು ಮುಂದಾಗಿರುವುದು ಮೂರ್ಖತನದ ನಿರ್ಧಾರ. ಆದರೆ, ವಾಹನ ದಟ್ಟಣೆ ನಿಯಂತ್ರಿಸುವುದು ಮತ್ತು ರಸ್ತೆಯನ್ನು ದುರಸ್ತಿಗೊಳಿಸಿದರೆ ಅಪಘಾತದ ಪ್ರಮಾಣ ತಗ್ಗಿಸಬಹುದಾಗಿದೆ.
ಸದರಿ ರಸ್ತೆಯಲ್ಲಿ ಸಂಚರಿಸುವ ವಾಹನ ಸವಾರರು ನಿಗದಿತ ವೇಗಕ್ಕಿಂತ ಹೆಚ್ಚಾಗಿ ವಾಹನ ಚಾಲನೆ ಮಾಡುವುದು ಅಪಘಾತ ಹೆಚ್ಚಲು ಕಾರಣ ಎಂದು ದೂರಿದರು. ರಸ್ತೆ ನೇರಗೊಳಿಸುವುದಕ್ಕೂ ಅಪಘಾತಕ್ಕೂ ಯಾವುದೇ ಸಂಬಂಧವಿಲ್ಲ.
ಹೀಗಾಗಿ ಪೊಲೀಸರು ರಸ್ತೆಯಲ್ಲಿ ಸ್ಪೀಡ್ ಬ್ರೇಕರ್‌ಗಳನ್ನು ಅಳವಡಿಸಿ ರಸ್ತೆ ಎತ್ತರ ಹೆಚ್ಚಿಸಿದರೆ ಅಪಘಾತಗಳನ್ನು ತಡೆಯಬಹುದಾಗಿದೆ. ಇದಕ್ಕೆ 2 ಲಕ್ಷ ರೂ. ವೆಚ್ಚವಾಗಲಿದ್ದು, ಇದರ ಹೊರತಾಗಿ ಒಟ್ಟು 12 ಕೋಟಿ ರೂ. ವೆಚ್ಚದಲ್ಲಿ ಕಾಮಗಾರಿ ನಡೆಸಲು ಮುಂದಾಗಿರುವುದು ಸರಿಯಲ್ಲ. ಅಲ್ಲದೆ ಈ ಕಾಮಗಾರಿಗೆ ಸಾಕಷ್ಟು ಮರಗಳ ಮಾರಣ ಹೋಮ ನಡೆಸುವುದು ಖಂಡನೀಯ ಎಂದರು.
ಈ ಮುನ್ನ ಕಲಾಮಂದಿರದ ಎದುರು ಮೌನ ಪ್ರತಿಭಟನೆ ನಡೆಸಿದ ಪ್ರತಿಭಟನಾಕಾರರು, ಕಲಾಮಂದಿರದ ಮುಂಭಾಗದ ರಸ್ತೆಯಲ್ಲಿ ಮಾನವ ಸರಪಳಿ ನಿರ್ಮಿಸಿದರು. ನಿವೃತ್ತ ಮೇಜರ್ ಜನರಲ್ ಎಸ್.ಜಿ.ಒಂಬತ್‌ಕೆರೆ, ಮೈಸೂರು ಗ್ರಾಹಕರ ಪರಿಷತ್ ಅಧ್ಯಕ್ಷ ಎಸ್.ಡಿ.ಸಾಹುಕರ್, ಆಶಾ ಒಂಬತೆರೆ, ಶಬಾನ್,
-ಹರಿಪ್ರಸಾದ್, ಅಶ್ವಿನಿ ರಂಜನ್, ಲೀಲಾವತಿ, ಜಗನ್ಮಾಥ್, ಎನ್‌ಐಇ ಕಾಲೇಜು ಪ್ರಾಧ್ಯಾಪಕ ಪ್ರೊ.ಯದುಪತಿ ಪುಟ್ಟಿ, ಮೈಸೂರು ವಿವಿ ಸಹ ಪ್ರಾಧ್ಯಾಪಕಿ ಡಾ.ಸಪ್ನ, ಗ್ರೀನ್ ಮೈಸೂರು, ಕುಕ್ಕರಹಳ್ಳಿ ಕೆರೆ ಉಳಿಸಿ ಸಂಘಟನೆ, ಸಮರ್ಪಣಾ ಫೌಂಡೇಶನ್ ಸಂಘಟನೆಗಳ ನೂರಾರು ಮಂದಿ ಪಾಲ್ಗೊಂಡಿದ್ದರು.