Advertisement
ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಾಲಿಕೆಯಲ್ಲಿ 2001ರಲ್ಲಿ ಅಳವಡಿಸಿಕೊಳ್ಳಲಾಗಿದ್ದ ಲೆಕ್ಕಪತ್ರ ವ್ಯವಸ್ಥೆ ಇಂದಿಗೂ ಜಾರಿಯಲ್ಲಿದೆ. ಪ್ರಸ್ತುತ ಸಂದರ್ಭಕ್ಕೆ ತಕ್ಕಂತೆ ಅದನ್ನು ಮಾರ್ಪಡಿಸಿ ಉನ್ನತೀಕರಿಸಲು ಸಮಿತಿಯಿಂದ ವಿವಿಧ ನಗರ ಪಾಲಿಕೆಗಳ ಲೆಕ್ಕಪತ್ರ ವ್ಯವಸ್ಥೆ ಪರಿಶೀಲಿಸಲು ಅಧಿಕಾರಿಗಳನ್ನು ಕೋರಲಾಗಿತ್ತು. ಆದರೆ, ಅದಕ್ಕೆ ಅವಕಾಶ ನೀಡದ ಅಧಿಕಾರಿಗಳು ಏಕಪಕ್ಷೀಯವಾಗಿ ಲೆಕ್ಕಪತ್ರ ಸಮಿತಿ ರಚಿಸಿ ಮಾರ್ಗಸೂಚಿ ರಚಸಿದ್ದಾರೆ ಎಂದು ದೂರಿದರು.
Related Articles
Advertisement
ಇತ್ತೀಚೆಗೆ ವಿವಿಧ ಕಾಮಗಾರಿಗಳಿಗೆ ಹಣ ಬಿಡುಗಡೆಯಾಗಿರುವ ದಾಖಲೆಗಳನ್ನು ಪರಿಶೀಲನೆ ನಡೆಸಲಾಗಿದೆ. ಈ ವೇಳೆ 100 ಕೋಟಿಯ ಕಾಮಗಾರಿಗೆ 160 ಕೋಟಿ ರೂ. ಬಿಡುಗಡೆ ಮಾಡಲಾಗಿದೆ. ಆದರೆ, ಜಾಬ್ ಕೋಡ್ ನೀಡಿರುವುದು ಮಾತ್ರ 100 ಕೋಟಿ ರೂ.ಗೆ ಮಾತ್ರ. ಉಳಿದ 60 ಕೋಟಿಗೆಯನ್ನು ಹೇಗೆ ನೀಡಿದರು, ಯಾವ ಜಾಬ್‌ಕೋಡ್‌ನಲ್ಲಿ ನೀಡಿದರು ಎಂಬ ಮಾಹಿತಿಯೇ ಇಲ್ಲ. ಅದನ್ನು ಪತ್ತೆ ಹಚ್ಚಲು ಮುಂದಾದರೆ ಅಧಿಕಾರಿಗಳು ಅಡ್ಡಪಡಿಸುತ್ತಿದ್ದಾರೆ ಎಂದು ದೂರಿದರು.
ಸದ್ಯ ವಿಶೇಷ ಆಯುಕ್ತ ಮನೋಜ್ ರಾಜನ್ ಅವರು ತಯಾರಿಸಿರುವಂತಹ ಮಾರ್ಗಸೂಚಿಗಳಲ್ಲಿ ಡಿಜಿಟಲೀಕರಣ, ಜಿಎಸ್‌ಟಿ ಸೇರಿದಂತೆ ಹಲವಾರು ಅಂಶಗಳನ್ನು ಪರಿಗಣಿಸಿಲ್ಲ. ಹೀಗಾಗಿ ಯಾವುದೇ ಕಾರಣಕ್ಕೂ ಮಾರ್ಗಸೂಚಿಗಳನ್ನು ಒಪ್ಪುವುದಿಲ್ಲ. ಪಾಲಿಕೆಗೆ ಯಾವ ಮೂಲದಿಂದ ಎಷ್ಟು ಆದಾಯ ಬಂದಿದೆ, ಎಷ್ಟು ವೆಚ್ಚವಾಗಿದೆ ಎಂಬ ಮಾಹಿತಿಗಾಗಿ ಲೆಕ್ಕಪರಿಶೋಧಕರು ಅಗತ್ಯವಿದೆ. ಆದರೆ, ಪಾಲಿಕೆಯಲ್ಲಿ ಈಗ ಡಾಟಾ ಎಂಟ್ರಿ ಆಪರೇಟರ್‌ಗಳಿದ್ದು, ಪ್ರತಿ ವರ್ಷ 73 ಲಕ್ಷ ರೂ. ಗಳನ್ನು ಇವರಿಗೆ ಪಾವತಿಸಲಾಗುತ್ತಿದ್ದು, ಇದರಿಂದ ಯಾವುದೇ ಪ್ರಯೋಜನವಾಗುತ್ತಿಲ್ಲ ಎಂದು ಆರೋಪಿಸಿದರು.
ಎರವಲು ಅಧಿಕಾರಿಗಳು ಏಕೆ ಬೇಕು?ಕೆಲಸವೇ ಗೊತ್ತಿಲ್ಲದ ಅಧಿಕಾರಿಗಳನ್ನು ಎರವಲು ಸೇವೆಯ ಮೇಲೆ ಪಾಲಿಕೆಗೆ ನಿಯೋಜನೆ ಮಾಡಿಕೊಳ್ಳಲಾಗುತ್ತಿದೆ. ಕೆಎಸ್‌ಎಫ್ಸಿಯ ಅಧಿಕಾರಿಯನ್ನು ಮಳೆನೀರುಗಾಲುವೆ ಎಂಜಿನಿಯರ್ ಆಗಿ ನೇಮಿಸಲಾಗಿದೆ. ಅವರಿಗೆ ಮಾಸಿಕ 1 ಲಕ್ಷ ರೂ. ವೇತನ ನೀಡಲಾಗುತ್ತಿದ್ದು, ಅದಕ್ಕೆ ಸಮಾನ ಹುದ್ದೆಯ ಪಾಲಿಕೆ ಅಧಿಕಾರಿಗೆ 60 ಸಾವಿರ ರೂ. ವೇತನ ನೀಡಲಾಗುತ್ತಿದೆ. ಹಾಗೆಯೇ ಕಾರ್ಯನಿರ್ವಾಹಕ ಎಂಜಿನಿಯರ್ ಒಬ್ಬರಿಗೆ ಮಾಸಿಕ 1.50 ಲಕ್ಷ ರೂ. ಹಾಗೂ ಅದೇ ಕೆಲಸ ಮಾಡುವ ಪಾಲಿಕೆಯ ಅಧಿಕಾರಿಗಳು 73 ಸಾವಿರ ನೀಡಲಾಗುತ್ತಿದೆ. ಅವಶ್ಯಕತೆಯಿಲ್ಲದೆ ಅಧಿಕಾರಿಗಳನ್ನು ಎರವಲು ಪಡೆಯುವ ಅಗತ್ಯವೇನಿದೆ ಎಂದು ಗೌತಮ್‌ಕುಮಾರ್ ಪ್ರಶ್ನಿಸಿದರು. ಅಕೌಂಟ್‌ಗಳಿಗೆ ಹ್ಯಾಕ್ ಪ್ರೂಫ್ ಇಲ್ಲ
ಬಿಬಿಎಂಪಿ ಹೊಂದಿರುವ ಖಾತೆಗಳು ಹ್ಯಾಕ್ ಪ್ರೂಫ್ ಹೊಂದಿಲ್ಲದ ಹಿನ್ನೆಲೆಯಲ್ಲಿ ಹ್ಯಾಕರ್‌ಗಳು ಪಾಲಿಕೆಯ ಹಣವನ್ನು ದುರುಪಯೋಗಪಡಿಸಿಕೊಳ್ಳುವ ಸಾಧ್ಯತೆಗಳಿವೆ. ಇದರೊಂದಿಗೆ ಪಾಲಿಕೆಯ ಮುಖ್ಯ ಲೆಕ್ಕಾಧಿಕಾರಿಗಳಿಗೆ ಪಾಲಿಕೆಯ ಎಷ್ಟು ಬ್ಯಾಂಕ್ ಖಾತೆಗಳಿವೆ ಎಂಬ ಮಾಹಿತಿಯಿಲ್ಲ. ಒಂದೊಮ್ಮೆ ಪಾಲಿಕೆಯ ಬ್ಯಾಂಕ್ ಖಾತೆಗಳನ್ನು ಹ್ಯಾಕ್ ಮಾಡಿ ಹಣ ಪಡೆದರೆ ಅದಕ್ಕೆ ಹೊಣೆಯಾರು ಎಂದು ನೇತ್ರಾ ನಾರಾಯಣ್ ಅಧಿಕಾರಿಗಳನ್ನು ಪ್ರಶ್ನಿಸಿದ್ದಾರೆ.