Advertisement

ಹೊಸ ಜಾಹೀರಾತು ಬೈಲಾಗೆ ವಿರೋಧ

12:30 PM Oct 26, 2018 | Team Udayavani |

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ಹೊಸದಾಗಿ ಜಾರಿಗೊಳಿಸಲು ಉದ್ದೇಶಿಸಿರುವ ಜಾಹೀರಾತು ಹೊರಾಂಗಣ ಹಾಗೂ ಒಳಾಂಗಣ ಉಪವಿಧಿ (ಬೈಲಾ)ಗಳನ್ನು ವಿರೋಧಿಸಿ ಹೊರಾಂಗಣ ಜಾಹೀರಾತು ಸಂಘದಿಂದ ಗುರುವಾರ ಪ್ರತಿಭಟನೆ ನಡೆಸಲಾಯಿತು.

Advertisement

ಟೌನ್‌ಹಾಲ್‌ ಮುಂಭಾಗ ಪ್ರತಿಭಟನೆ ನಡೆಸಿದ ಸಂಘಟನೆ ಸದಸ್ಯರು, ಹಳೆಯ ಜಾಹೀರಾತು ನಿಯಮವನ್ನೇ ಮುಂದುವರಿಸಬೇಕು ಹಾಗೂ ಅಧಿಕೃತ ಜಾಹೀರಾತು ಫ‌ಲಕಗಳನ್ನು ತೆರವುಗೊಳಿಸಬಾರದು ಎಂದು ಒತ್ತಾಯಿಸಿದರು. 

ಪ್ರತಿಭಟನೆಯನ್ನು ಉದ್ದೇಶಿಸಿದ ಮಾತನಾಡಿದ ದಲಿತ ಸಂಘರ್ಷ ಸಮಿತಿಯ ಚಿಕ್ಕಣ್ಣ, ನಗರದಲ್ಲಿನ ಅನಧಿಕೃತ ಜಾಹೀರಾತು ಫ‌ಲಕಗಳನ್ನು ತೆರವುಗೊಳಿಸುವಂತೆ ಹೈಕೋರ್ಟ್‌ ತಿಳಿಸಿದೆ. ಆದರೆ, ಬಿಬಿಎಂಪಿಯವರು ಅಧಿಕೃತ ಜಾಹೀರಾತುಗಳನ್ನು ಬ್ಯಾನ್‌ ಮಾಡುವ ಮೂಲಕ ಆರು ಲಕ್ಷಕ್ಕೂ ಹೆಚ್ಚು ಕುಟುಂಬಗಳು ಬೀದಿಗೆ ಬರುವಂತೆ ಮಾಡಿದ್ದರೆ ಎಂದು ಆರೋಪಿಸಿದರು. 

ಪೋಸ್ಟರ್‌ಗಳು, ಬ್ಯಾನರ್‌ ಹಾಗೂ ಕಟೌಟ್‌ಗಳಿಂದ ನಗರದ ಸೌಂದರ್ಯಕ್ಕೆ ಧಕ್ಕೆಯಾಗುತ್ತದೆ. ಆದರೆ ಹೋರ್ಡಿಂಗ್‌ಗಳಿಂದ ಯಾವುದೇ ಸಮಸ್ಯೆಯಿಲ್ಲ. ನಾವು ಕಾನೂನು ಪ್ರಕಾರವೇ ಜಾಹೀರಾತು ಫ‌ಲಕಗಳನ್ನು ಅಳವಡಿಸಿದ್ದು, ಮರು ಬಳಕೆ ಮಾಡಬಹುದಾದ ಉತ್ಪನ್ನಗಳನ್ನು ಜಾಹೀರಾತು ಪ್ರದರ್ಶಿಸಲು ಬಳಸುತ್ತಿದ್ದೇವೆ.

ಆದರೆ, ಪಾಲಿಕೆಯ ಹೊಸ ನಿಯಮಗಳಿಂದ ಲಕ್ಷಾಂತರ ಕುಟುಂಬಗಳಿಗೆ ಅನ್ಯಾಯವಾಗಿದೆ ಎಂದು ದೂರಿದರು.  ಜಾಹೀರಾತು ಫ‌ಲಕಗಳಿಂದ ರಿಯಲ್‌ ಎಸ್ಟೇಟ್‌ ಉದ್ಯಮಗಳ ಅಭಿವೃದ್ಧಿಯಾಗುತ್ತಿದ್ದು, ವಿದೇಶಿ ಬಂಡವಾಳ ಆಕರ್ಷಿಸಲು ಸಾಧ್ಯವಾಗುತ್ತಿದೆ.

Advertisement

ಅದರೆ, ಇದೀಗ ಜಾಹೀರಾತು ಫ‌ಲಕಗಳನ್ನು ಬ್ಯಾನ್‌ ಮಾಡಿರುವುದರಿಂದ ಜಾಹೀರಾತು ಏಜೆನ್ಸಿಗಳೊಂದಿಗೆ ಸರ್ಕಾರಕ್ಕೂ ನಷ್ಟವಾಗಲಿದೆ. ಇನ್ನು ಕೇವಲ ಬಸ್‌ ಶೆಲ್ಟರ್‌, ಸ್ಕೈವಾಕ್‌ಗಳಲ್ಲಿ ಜಾಹೀರಾತು ಪ್ರಕಟಿಸಲು ಅನುಮತಿ ನೀಡುವ ಮೂಲಕ ಪ್ರಭಾವಿಗಳಿಗೆ ಮಾತ್ರ ಪ್ರಯೋಜನ ಮಾಡಿಕೊಡಲು ಬಿಬಿಎಂಪಿ ಮುಂದಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. 

ಹೊರಾಂಗಣ ಜಾಹೀರಾತು ಸಂಘದ ಅಧ್ಯಕ್ಷ ಎಸ್‌.ಎಂ.ಜಾವೀದ್‌, ಅಧಿಕೃತವಾಗಿ ಪ್ರಕಟಿಸುವ ಜಾಹೀರಾತುದಾರರಿಗೆ ಪಾಲಿಕೆ ಅನುಮತಿ ನೀಡಲೇಬೇಕು. ನೂತನ ಬೈಲಾ ವಿರೋಧಿಸಲು ಕೊನೆ ದಿನವಾದ್ದರಿಂದ ಪ್ರತಿಭಟನೆ ನಡೆಸುತ್ತಿದ್ದೇವೆ. ನೂತನ ಜಾಹೀರಾತು ನೀತಿಯು, ವಿದೇಶಿ ನೀತಿಗಳನ್ನು ಕಟ್‌ ಪೇಸ್ಟ್‌ ಮಾಡಿದಂತಿದೆ. ಪಾಲಿಕೆಯ ಹಳೆಯ ನೀತಿಯೇ ಸಮಗ್ರವಾಗಿದ್ದು, ಅದನ್ನೇ ಮುಂದುವರಿಸಬೇಕು ಎಂದು ಒತ್ತಾಯಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next