Advertisement

ಕಾಸಿಯಾ ವ್ಯಾಖ್ಯಾನ ಬದಲಾವಣೆಗೆ ವಿರೋಧ

12:14 PM Aug 10, 2018 | Team Udayavani |

ಬೆಂಗಳೂರು: ಕೇಂದ್ರ ಸರ್ಕಾರವು ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ ವ್ಯಾಖ್ಯಾನ ಬದಲಾವಣೆಗೆ ಲೋಕಸಭೆಯಲ್ಲಿ ವಿಧೇಯಕ ಮಂಡಿಸಿರುವುದು ಸರಿಯಲ್ಲ. ಈ ಬಗ್ಗೆ ಚರ್ಚೆ ನಡೆಸಿ ನೀತಿ ರೂಪಿಸಿದ ನಂತರವಷ್ಟೇ ವಿಧೇಯಕ ಅನುಮೋದಿಸಬೇಕು ಎಂದು ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘದ ಅಧ್ಯಕ್ಷ ಬಸವರಾಜ ಎಸ್‌. ಜವಳಿ ಒತ್ತಾಯಿಸಿದರು.

Advertisement

ನಗರದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರವು ಉದ್ಯಮಗಳ ವಹಿವಾಟು ಆಧರಿಸಿ ಎಂಎಸ್‌ಎಂಇ ವ್ಯಾಖ್ಯಾನಕ್ಕೆ ಮುಂದಾಗಿರುವುದು ಸರಿಯಲ್ಲ. ಐದು ಕೋಟಿ ರೂ. ಮಿತಿಯೊಳಗೆ ವಹಿವಾಟು ನಡೆಸುವ ಘಟಕಗಳನ್ನು ಸೂಕ್ಷ್ಮ, 5 ಕೋಟಿ ರೂ.ನಿಂದ 75 ಕೋಟಿ ರೂ.ವರೆಗೆ ವಹಿವಾಟು ನಡೆಸುವ ಘಟಕಗಳನ್ನು ಸಣ್ಣ ಹಾಗೂ 75 ಕೋಟಿ ರೂ. ನಿಂದ 250 ಕೋಟಿ ರೂ.ವರೆಗೆ ವಹಿವಾಟು ನಡೆಸುವ ಘಟಕಗಳನ್ನು  ಮಧ್ಯಮ ಕೈಗಾರಿಕೆಯೆಂದು ವ್ಯಾಖ್ಯಾನಿಸಲು ಮುಂದಾಗಿರುವುದು ಅವೈಜ್ಞಾನಿಕ ಎಂದು ತಿಳಿಸಿದರು.

ವಹಿವಾಟಿನ ಬದಲಿಗೆ ಹೂಡಿಕೆ ಆಧಾರದ ಮೇಲೆ ಎಂಎಸ್‌ಎಂಇ ಕ್ಷೇತ್ರವನ್ನು ವ್ಯಾಖ್ಯಾನಿಸುವ ಹಾಲಿ ವ್ಯವಸ್ಥೆ ಸೂಕ್ತವೆನಿಸಿದೆ. 25 ಲಕ್ಷ ರೂ. ಹೂಡಿಕೆಯಿರುವ ಘಟಕವನ್ನು ಸೂಕ್ಷ್ಮ, 25 ಲಕ್ಷ ರೂ.ನಿಂದ 5 ಕೋಟಿ ರೂ.ವರೆಗೆ ಹೂಡಿಕೆಯ ಉದ್ಯಮವನ್ನು ಸಣ್ಣ ಹಾಗೂ 5 ಕೋಟಿ ರೂ.ನಿಂದ 10 ಕೋಟಿ ರೂ.ವರೆಗೆ ಹೂಡಿಕೆಯಾಗಿರುವ ಘಟಕವನ್ನು ಮಧ್ಯಮ ಕೈಗಾರಿಕೆ ಎಂದು ಗುರುತಿಸುವುದು ಅರ್ಥಪೂರ್ಣ.

ಈ ಬಗ್ಗೆ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳನ್ನು ಸಂಪರ್ಕಿಸಿದರೆ ನೀತಿಯಲ್ಲಿ ಈ ಅಂಶ ಅಳವಡಿಸುವುದಾಗಿ ಮೌಖೀಕವಾಗಿ ಹೇಳುತ್ತಿದ್ದು, ಲಿಖೀತ ಭರವಸೆ ನೀಡುತ್ತಿಲ್ಲ. ಈಗಾಗಲೇ ಕೇಂದ್ರ ಸಚಿವ ಅನಂತಕುಮಾರ್‌ ಸೇರಿ ಸಂಸದರಿಗೆ ಮನವಿ ಸಲ್ಲಿಸಲಾಗಿದೆ. ಸದ್ಯದಲ್ಲೇ ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಅವರಿಗೆ ಮನವಿ ಸಲ್ಲಿಸಲಾಗುವುದು ಎಂದು ಹೇಳಿದರು.

ಸರ್ಕಾರಿ ಇಲಾಖೆ ಜತೆಗೆ ಸರ್ಕಾರಿ ಸ್ವಾಮ್ಯದ ಸಂಸ್ಥೆಗಳ ಖರೀದಿಯಲ್ಲೂ ಶೇ.15 ಎಂಎಸ್‌ಎಂಇ ಕ್ಷೇತ್ರಕ್ಕೆ ನೀಡಬೇಕೆಂಬ ಆದೇಶವಿತ್ತು. ಆದರೆ ಕೆಲ ವರ್ಷಗಳ ಹಿಂದೆ ಇದನ್ನು ಸರ್ಕಾರಿ ಇಲಾಖೆಗಳಿಗಷ್ಟೇ ಸೀಮಿತಗೊಳಿಸಿರುವುದರಿಂದ ಉದ್ಯಮಗಳ ವಹಿವಾಟಿಗೆ  ಹಿನ್ನಡೆಯಾಗಿದೆ. ಹಾಗಾಗಿ ಸರ್ಕಾರಿ ಸ್ವಾಮ್ಯದ ನಿಗಮ, ಮಂಡಳಿಗಳ ಖರೀದಿಯಲ್ಲೂ ಹಿಂದಿನಂತೆ ಎಂಎಸ್‌ಎಂಇ ಕ್ಷೇತ್ರದಿಂದ ಕಡ್ಡಾಯವಾಗಿ ಇಂತಿಷ್ಟು ಉತ್ಪನ್ನ ಖರೀದಿಸಬೇಕೆಂಬ ನಿಯಮ ರೂಪಿಸುವಂತೆ ರಾಜ್ಯ ಸರ್ಕಾರವನ್ನು ಒತ್ತಾಯಿಸಲಾಗುವುದು ಎಂದು ತಿಳಿಸಿದರು.

Advertisement

ಇತ್ತೀಚೆಗೆ ಪ್ರಧಾನ ಮಂತ್ರಿಗಳೊಂದಿಗೆ ರುವಾಂಡಾ, ಉಗಾಂಡಾಕ್ಕೆ ಭೇಟಿ ನೀಡಿದ್ದಾಗ ಪ್ರಧಾನಿಯವರು ಅನುದಾನ ಘೋಷಿಸಿದ್ದು, ಹಣದ ಬದಲಿಗೆ ಉತ್ಪನ್ನಗಳು ಪೂರೈಕೆಯಾಗಲಿದೆ. ಅದರಂತೆ ಕರ್ನಾಟಕದ ಎಂಎಸ್‌ಎಂಇ ಕೈಗಾರಿಕೆಗಳ ರಫ್ತು ಪ್ರಮಾಣದಲ್ಲಿ ಶೇ.10ರಷ್ಟು ಹೆಚ್ಚಳವಾಗುವ ನಿರೀಕ್ಷೆ ಇದೆ. ಸದ್ಯ ಎಂಎಸ್‌ಎಂಇ ಕ್ಷೇತ್ರವು ರಾಜ್ಯದ ರಫ್ತು ಉದ್ಯಮಕ್ಕೆ ಶೇ.25ರಿಂದ ಶೇ.30ರಷ್ಟು ಕೊಡುಗೆ ನೀಡುತ್ತಿದೆ ಎಂದು ಹೇಳಿದರು.

ಕಾಸಿಯಾ ವತಿಯಿಂದ ಶ್ರೇಷ್ಠತೆ ಮತ್ತು ನಾವೀನ್ಯತಾ ಕೇಂದ್ರ ಸ್ಥಾಪನೆಯಾಗುತ್ತಿದೆ. ಕೈಗಾರಿಕೆಗಳು ಬಯಸುವ ಕುಶಲ ಕಾರ್ಮಿಕರು ಲಭ್ಯವಿಲ್ಲದಿದ್ದರೆ, ಇನ್ನೊಂದೆಡೆ ಕೌಶಲ್ಯವಿಲ್ಲದ ನಿರುದ್ಯೋಗಿಗಳಿದ್ದಾರೆ. ಹಾಗಾಗಿ ಅಲ್ಪಾವಧಿ ಕೌಶಲ್ಯ ತರಬೇತಿ ಮೂಲಕ ಉದ್ಯಮಗಳಿಗೆ ಅಗತ್ಯವಿರುವ ಉದ್ಯೋಗಿಗಳ ಸೃಷ್ಟಿಗೆ ಆದ್ಯತೆ ನೀಡಲಾಗುತ್ತಿದೆ. ಸಂಶೋಧನೆ ಮತ್ತು ಅಭಿವೃದ್ಧಿಗೂ ಗಮನ ನೀಡಲಾಗುತ್ತಿದೆ ಎಂದರು.

ಕಾಸಿಯಾ ಉಪಾಧ್ಯಕ್ಷ ಆರ್‌.ರಾಜು, ಪ್ರಧಾನ ಕಾರ್ಯದರ್ಶಿ ರವಿಕಿರಣ್‌ ಕುಲಕರ್ಣಿ, ಜಂಟಿ ಕಾರ್ಯದರ್ಶಿ (ನಗರ) ಸುರೇಶ್‌ ಎನ್‌. ಸಾಗರ್‌, ಜಂಟಿ ಕಾರ್ಯದರ್ಶಿ (ಗ್ರಾಮಾಂತರ) ಎಸ್‌.ವಿಶ್ವೇಶ್ವರಯ್ಯ, ಖಜಾಂಚಿ ಶ್ರೀನಾಥ್‌ ಭಂಡಾರಿ ಉದ್ಯಾವರ್‌ ಉಪಸ್ಥಿತರಿದ್ದರು.

ಕೈಗಾರಿಕಾ ಅದಾಲತ್‌ ಆಯೋಜನೆ: ಬೆಂಗಳೂರು, ಕಲಬುರಗಿ, ಮಂಗಳೂರು, ಹುಬ್ಬಳ್ಳಿ ಹಾಗೂ ಶಿವಮೊಗ್ಗದಲ್ಲಿ ಕೈಗಾರಿಕಾ ಅದಾಲತ್‌ ಆಯೋಜಿಸಲಾಗುವುದು ಎಂದು ಬಸವರಾಜ ಎಸ್‌. ಜವಳಿ ಹೇಳಿದರು. ಹೆಚ್ಚು ಕೈಗಾರಿಕಾ ಎಸ್ಟೇಟ್‌ ನಿರ್ಮಿಸುವಂತೆ ಸರ್ಕಾರವನ್ನು ಕೋರಲಾಗುವುದು. ರಾಜ್ಯದ ನಾಲ್ಕು ದಿಕ್ಕುಗಳಲ್ಲಿ ಉದ್ಯೋಗ ಮೇಳ ಆಯೋಜಿಸಲಾಗುವುದು.

ಬೆಂಗಳೂರು, ಮೈಸೂರು, ಕಲಬುರಗಿ, ಮಂಗಳೂರು, ಹುಬ್ಬಳ್ಳಿ ಹಾಗೂ ಶಿವಮೊಗ್ಗಗಳಲ್ಲಿ ಖಾಸಗಿ- ಸಾರ್ವಜನಿಕ ಸಹಭಾಗಿತ್ವದಲ್ಲಿ ಮಾರಾಟಗಾರರ ಅಭಿವೃದ್ಧಿ ಕಾರ್ಯಕ್ರಮ ಆಯೋಜಿಸಲಾಗುವುದು. ಶಿವಮೊಗ್ಗ, ಕಲಬುರಗಿ, ಚಾಮರಾಜನಗರ, ಉತ್ತರ ಕನ್ನಡ ಹಾಗೂ ರಾಯಚೂರು ಜಿಲ್ಲೆಯಲ್ಲಿ ಕೃಷಿ ಹಾಗೂ ಆಹಾರೋತ್ಪನ್ನ ಸಮ್ಮೇಳನ ಆಯೋಜಿಸಲಾಗುತ್ತದೆ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next