Advertisement

ಎಪಿಎಂಸಿ ತಿದ್ದುಪಡಿ ಕಾಯ್ದೆಗೆ ವಿರೋಧ

07:02 AM Jun 02, 2020 | Suhan S |

ವಿಜಯಪುರ: ಕೇಂದ್ರ ಸರಕಾರ ಎಪಿಎಂಸಿ ಕಾಯ್ದೆ 2017ಕ್ಕೆ ತಿದ್ದುಪಡಿ ತಂದಿದ್ದು ರಾಜ್ಯ ಸರ್ಕಾರ ಮೇ 16ರಂದು ಕಾಯ್ದೆ ತಿದ್ದುಪಡಿ ಮಾಡಿ ಅಧಿಸೂಚನೆ ಹೊರಡಿಸಿದ್ದನ್ನು ವಿರೋಧಿ ಸಿ ನಗರದಲ್ಲಿ ವರ್ತಕರು ಸೋಮವಾರ ತಮ್ಮ ವಹಿವಾಟು ಬಂದ್‌ ಮಾಡಿ ಪ್ರತಿಭಟನೆ ನಡೆಸಿದರು. ಅಲ್ಲದೇ ಎಪಿಎಂಸಿ ಕಚೇರಿ ಎದುರು ತಿದ್ದುಪಡಿ ಕಾಯ್ದೆಯ ಅಧಿಸೂಚನೆ ಪ್ರತಿಗೆ ಬೆಂಕಿ ಹಚ್ಚಿ ಆಕ್ರೋಶ ಹೊರ ಹಾಕಿದರು.

Advertisement

ಮರ್ಚೆಂಟ್ಸ್‌ ಅಸೋಸಿಯೇಷನ್‌ ವಿಜಯಪುರ ಹಾಗೂ ಕರ್ನಾಟಕ ರಾಜ್ಯ ಪ್ರಾಂತ ರೈತ ಸಂಘ ಜಿಲ್ಲಾ ಸಮಿತಿ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಹೋರಾಟದಲ್ಲಿ ಪಾಲ್ಗೊಂಡ ಪ್ರಮುಖರು ಮಾತನಾಡಿ, ಸದರಿ ತಿದ್ದುಪಡಿ ಕಾಯ್ದೆಯಿಂದ ಬಹು ರಾಷ್ಟ್ರೀಯ ಕಂಪನಿಗಳು ರೈತರಿಂದ ನೇರವಾಗಿ ಖರೀದಿ ಮಾಡುವ ಕಾರಣ ಕೃಷಿ ಮಾರುಕಟ್ಟೆಯಲ್ಲಿ ಸಿಗುವ ಸ್ಪರ್ಧಾತ್ಮಕ ಬೆಲೆ ಸಿಗದೇ ರೈತರು ಸಂಕಷ್ಟಕ್ಕೆ ಸಿಲಕುತ್ತಾರೆ. 165 ಎಪಿಎಂಸಿ ಅಧಿಕಾರ ಮೊಟಕು ಮಾಡುವುದರಿಂದ ರಾಜ್ಯ ಸರಕಾರದ ಬೊಕ್ಕಸಕ್ಕೂ ಶೇ 1.50 ಅಂದರೆ 600 ಕೋಟಿ ರೂ. ಹಾಗೂ ಜಿಎಸ್‌ಟಿ ಆದಾಯ ಕೊರತೆ ಆಗಲಿದೆ. ಈಗಿರುವ ಇ-ಟೆಂಡರ್‌ ವ್ಯವಸ್ಥೆಯಿಂದ ರೈತರಿಗೆ ಸ್ಪರ್ಧಾತ್ಮಕ ಬೆಲೆ ದೊರೆಯುತ್ತಿದ್ದು ವರ್ತಕರಿಗೂ ಅನುಕೂಲವಾಗಿದೆ. ತಿದ್ದುಪಡಿ ಕಾಯ್ದೆ ಜಾರಿಗೆ ಬಂದಲ್ಲಿ ರೈತರು, ವರ್ತಕರು ಮಾತ್ರವಲ್ಲ ಈ ವ್ಯವಸ್ಥೆಯನ್ನು ನಂಬಿರುವ ಎಲ್ಲರ ಬದುಕು ಬೀದಿಗೆ ಬಳಲಿದೆ ಎಂದು ಆಕ್ರೋಶ ಹೊರ ಹಾಕಿದರು.

2017ರಲ್ಲಿ ಎಪಿಎಂಸಿ ಕಾಯ್ದೆ ತಿದ್ದುಪಡಿಗೆ ಮುಂದಾದಾಗ ರೈತರು, ವ್ಯಾಪಾರಸ್ಥರು, ದುಡಿಯುವ ವರ್ಗಗಳ ಜಂಟಿ ಹೋರಾಟದಿಂದ ಕಾಯ್ದೆಯನ್ನು ವಾಪಸ್‌ ಪಡೆಯಲಾಗಿತ್ತು. ಆದ್ದರಿಂದ ಈಗಲೂ ಈ ಕಾಯ್ದೆ ಅನುಷ್ಠಾನಕ್ಕೆ ತರದೇ ರೈತರಿಗೆ, ವ್ಯಾಪಾರಸ್ಥರಿಗೆ ಹಾಗೂ ದುಡಿಯುವ ವರ್ಗಕ್ಕೆ ಕಂಟಕವಾಗುವ ಎಪಿಎಂಸಿ ಕಾಯ್ದೆ ತಿದ್ದುಪಡಿ ಪ್ರಸ್ತಾವವನ್ನು ಕೈ ಬಿಡಬೇಕೆಂದು ಆಗ್ರಹಿಸಿದರು.

ಮರ್ಚೆಂಟ್‌ ಅಸೋಸಿಯೇಷನ್‌ ಅಧ್ಯಕ್ಷ ರವೀಂದ್ರ ಬಿಜ್ಜರಗಿ, ಕರ್ನಾಟಕ ರಾಜ್ಯ ಪ್ರಾಂತ ರೈತ ಸಂಘ ರಾಜ್ಯ ಉಪಾಧ್ಯಕ್ಷ ಭೀಮಶಿ ಕಲಾದಗಿ, ಅಖಂಡ ಕರ್ನಾಟಕ ರೈತ ಸಂಘದ ಪ್ರಧಾನ ಕಾರ್ಯದರ್ಶಿ ಅರವಿಂದ ಕುಲಕರ್ಣಿ, ಅಣ್ಣಾರಾಯ ಈಳಗೇರ, ಸದಾಶಿವ ಬರಟಗಿ, ಸಿದ್ರಾಮ ಅಂಗಡಗೇರಿ, ಭೀಮರಾಯ ಪೂಜಾರಿ, ಬಸನಗೌಡ ಧರ್ಮಗೊಂಡ, ಬಾಳು ಜೇವೂರ, ಚಂದ್ರಾಮ ತೆಗ್ಗಿ, ಶೇಕಪ್ಪ ಕರಾಬಿ, ರಾಮಣ್ಣ ಶಿರಗೋಳ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next