ಕುಣಿಗಲ್: ರಾಜ್ಯದ ಕೆಲವು ಲೋಕಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿಗೆ ಸ್ಥಳೀಯ ಮಟ್ಟದಲ್ಲಿ ಹಿನ್ನಡೆಯಾಗುತ್ತಿರುವ ಬೆನ್ನಲ್ಲೇ, ಪ್ರತಿಷ್ಠಿತ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿಗೂ ಸ್ಥಳೀಯ ಮಟ್ಟದಲ್ಲಿ ಪ್ರತಿರೋಧ ವ್ಯಕ್ತವಾಗಿರುವುದು ಕಾಂಗ್ರೆಸ್ ವರಿಷ್ಠರಿಗೆ ತಲೆನೋವಾಗಿದೆ.
ಮೈತ್ರಿ ಅಭ್ಯರ್ಥಿ ಡಿ.ಕೆ.ಸುರೇಶ್ ಅವರನ್ನು ಬೆಂಬಲಿಸುವಂತೆ ಸಚಿವ ಡಿ.ಕೆ.ಶಿವಕುಮಾರ್ ಅವರ ಮನವಿಗೆ ನಕಾರ ವ್ಯಕ್ತಪಡಿಸಿರುವ ಮಾಜಿ ಸಚಿವ, ಜೆಡಿಎಸ್ ಹಿರಿಯ ಮುಖಂಡ ಡಿ.ನಾಗರಾಜಯ್ಯ “ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುವುದಾಗಿ’ ಹೇಳಿರುವುದರಿಂದ ಮೈತ್ರಿಗೆ ತಾಲೂಕಿನಲ್ಲಿ ಹಿನ್ನಡೆ ಉಂಟಾಗಿದೆ. ಡಿ.ನಾಗರಾಜಯ್ಯ ಅವರನ್ನು ಬುಧವಾರ ಡಿ.ಕೆ.ಶಿವಕುಮಾರ್ ಭೇಟಿ ಮಾಡಿ ಮೈತ್ರಿ ಅಭ್ಯರ್ಥಿ ಬೆಂಬಲಿಸುವ ಸಂಬಂಧ ಗಂಟೆಗೂ ಹೆಚ್ಚು ಕಾಲ ಮಾತುಕತೆ ನಡೆಸಿದ್ದಾರೆ.
ಆಖಾಡಕ್ಕೆ ಇಳಿದ ಸಚಿವ: ರಾಜಕೀಯ ಅಸ್ತಿತ್ವ ಉಳಿಸಿಕೊಳ್ಳಲು ಹಾಗೂ ಕ್ಷೇತ್ರದಲ್ಲಿ ಶಾಸಕ ಡಾ.ರಂಗನಾಥ್ ಅವರ ಕಿರುಕುಳದಿಂದ ಬೇಸತ್ತಿರುವ ಜೆಡಿಎಸ್ ಕಾರ್ಯಕರ್ತರು, ಮುಖಂಡರು ಬೆಂಗಳೂರು ಗ್ರಾ. ಕ್ಷೇತ್ರದ ಮೈತ್ರಿ ಅಭ್ಯರ್ಥಿ ಡಿ.ಕೆ. ಸುರೇಶ್ ಅವರನ್ನು ಬೆಂಬಲಿ ಸುವುದಿಲ್ಲ. ಬದಲಾಗಿ ಬಿಜೆಪಿಯಿಂದ ಯಾರೇ ಸ್ಪರ್ಧಿಸಿದರೂ ಬೆಂಬಲಿಸುವುದಾಗಿ ಸಾಮಾಜಿಕ ಜಾಲತಾಣದಲ್ಲಿ ಎಚ್ಚರಿಕೆ ನೀಡಿದ್ದರು. ಇದರಿಂದ ತಾಲೂಕಿನಲ್ಲಿ ಮೈತ್ರಿ ಪಕ್ಷಗಳು ಒಟ್ಟಾಗಿ ಚುನಾವಣೆ ಎದುರಿಸುವುದು ಸಾಧ್ಯವೇ ಇಲ್ಲ ಎಂಬ ಪರಿಸ್ಥಿತಿ ನಿರ್ಮಾಣವಾಗಿತ್ತು.ಇದನ್ನು ಸೂಕ್ಷ್ಮವಾಗಿ ಅರಿತ ಡಿ.ಕೆ.ಶಿವಕುಮಾರ್ ತಾಲೂಕಿನ ಜೆಡಿಎಸ್ ಕಾರ್ಯಕರ್ತರು, ಮುಖಂಡ ರನ್ನು ಮನವೊಲಿಸಲು ಸ್ವತಃ ಆಖಾಡಕ್ಕೆ ಇಳಿದಿದ್ದಾರೆ.
ಸಿಎಂ ಸಭೆಗೆ ಗೈರು: ಸಿಎಂ ಕುಮಾರಸ್ವಾಮಿ ಬೆಂಗಳೂರು ಗ್ರಾ. ಲೋಕಸಭಾ ಕ್ಷೇತ್ರದ ಮೈತ್ರಿ ಪಕ್ಷದ ಎಲ್ಲಾ ಮುಖಂಡರ ಸಭೆ ಕರೆದಾಗಲೂ ಡಿ.ನಾಗರಾಜಯ್ಯ ಗೈರು ಹಾಜರಾಗಿದ್ದರು. ಈ ಹಿನ್ನೆಲೆ ಬುಧವಾರ ಡಿ.ಕೆ.ಶಿವಕುಮಾರ್ ದಿಢೀರ್ ಭೇಟಿ ನೀಡಿ ಡಿ.ನಾಗರಾಜಯ್ಯ ಅವರ ಮನವೊಲಿಸಿ, ಮೈತ್ರಿ ಅಭ್ಯರ್ಥಿ ಬೆಂಬಲಿಸುವಂತೆಮನವಿಮಾಡಿಕೊಂಡರು. ಈ ವೇಳೆ ಜತೆಯಲ್ಲಿದ್ದ ಶಾಸಕ ಡಾ.ರಂಗನಾಥ್ ಅವರನ್ನು ಹೊರಗೆ ಕಳುಹಿಸುವಂತೆ ಡಿ.ಕೆ. ಶಿವಕುಮಾರ್ ಸಮ್ಮುಖದಲ್ಲೇ ನಾಗರಾಜಯ್ಯ ತರಾಟೆ ತೆಗೆದುಕೊಂಡರು. ನಂತರ ಡಿ.ಕೆ.ಶಿವಕುಮಾರ್ ಅವರೇ ಡಾ.ರಂಗನಾಥ್ ಅವರನ್ನು ಹೊರ ಹೋಗುವಂತೆ ಸೂಚಿಸಿದರು. ಬಳಿಕ ರಹಸ್ಯವಾಗಿ ಒಂದು ಗಂಟೆಗಳ ಕಾಲ ಡಿ.ಕೆ.ಶಿ., ಡಿ.ನಾಗರಾಜಯ್ಯ ಹಾಗೂ ಅವರ ಹಿರಿಯ ಪುತ್ರ ಲೋಕೇಶ್ ಮಾತುಕತೆ ನಡೆಸಿದರು. ಈ ವೇಳೆ ಕುಣಿಗಲ್ ಕ್ಷೇತ್ರದಲ್ಲಿ ಜೆಡಿಎಸ್ ಕಾರ್ಯಕರ್ತರಿಗೆ ಶಾಸಕ ಡಾ.ರಂಗನಾಥ್ ನೀಡುತ್ತಿರುವ ಕಿರುಕುಳ, ವರ್ತನೆ ಕುರಿತು ಶಿವಕುಮಾರ್ ಅವರಿಗೆ ನಾಗರಾಜಯ್ಯ ವಿವರಿಸಿದರು ಎನ್ನಲಾಗಿದೆ.
ಬೆಂಬಲಿಸಲು ಮನವಿ: ಮಾತುಕತೆ ಮಗಿಸಿ ಹೊರ ಬಂದ ನಂತರ ಡಿ.ಕೆ.ಶಿವಕುಮಾರ್ ಮಾತನಾಡಿ, “ನಾಗರಾಜಯ್ಯ ಅವರನ್ನು ಭೇಟಿ ಮಾಡಿ ಮೈತ್ರಿ ಅಭ್ಯರ್ಥಿ ಡಿ.ಕೆ.ಸುರೇಶ್ ಬೆಂಬಲಿಸಲು ಮನವಿ ಮಾಡಿದ್ದೇನೆ. ಈ ವೇಳೆ ಹಲವಾರು ವಿಷಯಗಳನ್ನು ಪ್ರಸ್ತಾಪಿಸಿದ್ದಾರೆ. ಎರಡೂ ಪಕ್ಷದ ಮುಖಂಡರು, ಕಾರ್ಯಕರ್ತರು ನಾಗರಾಜಯ್ಯ ನೇತೃತ್ವದಲ್ಲಿ ಚುನಾವಣೆ ನಡೆಸುವ ವಿಶ್ವಾಸ ಇದೆ. ಈ ವಿಚಾರವಾಗಿ ಸಿಎಂ ಕುಮಾರಸ್ವಾಮಿ ಸಮ್ಮುಖದಲ್ಲಿ ಮತ್ತೂಂದು ಸುತ್ತಿನ ಮಾತುಕತೆ ನಡೆಸಲಾಗುವುದು’ ಎಂದರು.
ಪಕ್ಷೇತರ ಸ್ಪರ್ಧೆ
ಮೈತ್ರಿ ಅಭ್ಯರ್ಥಿಯನ್ನು ಬೆಂಬಲಿಸುವಂತೆ ಮನವಿ ಮಾಡಿದ ಡಿ.ಕೆ.ಶಿವಕುಮಾರ್ ಅವರಿಗೆ “ನಾನೇ ಬೆಂಗಳೂರು ಗ್ರಾಮಾಂತರ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸುತ್ತಿದ್ದೇನೆ. ಹಾಗೇನಾದರೂ ಸಲ್ಲಿಸದೇ ಇದ್ದರೇ ಬೆಂಬಲಿಸುವ ಬಗ್ಗೆ ಮಾ.24 ಬಳಿಕ ಯೋಚಿಸುವುದಾಗಿ’ ಡಿ.ನಾಗರಾಜಯ್ಯ ತಿಳಿಸುವ ಮೂಲಕ ತಮ್ಮ
ರಾಜಕೀಯ ಚಾಣಾಕ್ಷತನ ತೋರಿದ್ದಾರೆ. ಅಲ್ಲದೇ ಯಾರ ಜತೆಯೂ ಮಾತನಾಡಲು ನನಗೆ ಇಷ್ಟವಿಲ್ಲ ಎನ್ನುವ ಮೂಲಕ
ಪರೋಕ್ಷವಾಗಿ “ಬೆಂಬಲಿಸಲು ಸಾಧ್ಯವಿಲ್ಲ’ ಎಂಬ ಸಂದೇಶ ರವಾನಿಸಿದ್ದಾರೆ ಎನ್ನಲಾಗಿದೆ.