Advertisement

ಲೋಕಾ ಚುನಾವಣೆಯಲ್ಲಿ ದೋಸ್ತಿಗೆ ವಿರೋಧ

06:00 AM Aug 05, 2018 | |

ಮೈಸೂರು: ಲೋಕಸಭೆ ಚುನಾವಣೆಗೂ ಜೆಡಿಎಸ್‌ ಜತೆಗೆ ದೋಸ್ತಿ ಮುಂದುವರಿಯಲಿದೆ ಎಂದು ಕಾಂಗ್ರೆಸ್‌ ಹೈಕಮಾಂಡ್‌ ಹೇಳಿದ್ದರೂ ತಳಮಟ್ಟದಲ್ಲಿ ದೋಸ್ತಿಗೆ ವಿರೋಧ ವ್ಯಕ್ತವಾಗುತ್ತಿದ್ದು, ಮೈಸೂರು-ಕೊಡಗು ಲೋಕಸಭಾ ಕ್ಷೇತ್ರ ತಮ್ಮ ಪಕ್ಷಕ್ಕೇ ಬೇಕೆಂಬ ಚರ್ಚೆಗಳು ಶುರುವಾಗಿವೆ.

Advertisement

ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ಕೆ.ಸಿ.ವೇಣುಗೋಪಾಲ್‌ ಅಧ್ಯಕ್ಷತೆಯಲ್ಲಿ ಶುಕ್ರವಾರ ಬೆಂಗಳೂರಿನಲ್ಲಿ ನಡೆದ ಲೋಕಸಭೆ ಕ್ಷೇತ್ರದ ಮುಖಂಡರ ಸಭೆಯಲ್ಲಿ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರವನ್ನು ಜೆಡಿಎಸ್‌ಗೆ ಬಿಟ್ಟುಕೊಟ್ಟರೆ ಕಾಂಗ್ರೆಸ್‌ ಸಂಘಟನೆಗೆ ಹಿನ್ನಡೆ ಉಂಟಾಗಲಿದೆ ಎಂಬುದನ್ನು ಮನವರಿಕೆ ಮಾಡಿಕೊಟ್ಟಿರುವ ಸ್ಥಳೀಯ ಮುಖಂಡರು, ಮೈತ್ರಿ ಬೇಡವೆಂದು ಹೇಳಿ ಬಂದಿದ್ದಾರೆ. ಜತೆಗೆ ಮಾಜಿ ಸಿಎಂ  ಸಿದ್ದರಾಮಯ್ಯ ಹಾಗೂ ಸಿ.ಎಚ್‌.ವಿಜಯಶಂಕರ್‌ ಅವರನ್ನು ಅಭ್ಯರ್ಥಿಯಾಗಿಸುವ ಬಗ್ಗೆಯೂ ಚರ್ಚೆಯಾಗಿದೆ.

ವಿಧಾನಸಭೆ ಚುನಾವಣೆ ವೇಳೆ ಇದೇ ನನ್ನ ಕಡೇ ಚುನಾವಣೆ. ರಾಷ್ಟ್ರ ರಾಜಕಾರಣಕ್ಕೂ ಹೋಗುವುದಿಲ್ಲವೆಂದು ಹೇಳಿದ್ದ ಸಿದ್ದರಾಮಯ್ಯ ಅವರನ್ನು ಕಾಂಗ್ರೆಸ್‌ ಹೈಕಮಾಂಡ್‌ ಎಐಸಿಸಿ ಕಾರ್ಯಕಾರಿ ಸಮಿತಿ ಸದಸ್ಯರನ್ನಾಗಿ ನೇಮಿಸಿರುವುದರಿಂದ ಹೈಕಮಾಂಡ್‌ ಮಾತಿಗೆ ಕಟ್ಟುಬಿದ್ದು ಲೋಕಸಭೆ ಚುನಾವಣೆಗೆ ಸ್ಪರ್ಧಿಸುತ್ತಾರಾ ಎಂಬ ಕುತೂಹಲವೂ ಇದೆ. ಜತೆಗೆ ತಮ್ಮ ವಿರುದ್ಧ ಅಸಮಾಧಾನಗೊಂಡು ಕಾಂಗ್ರೆಸ್‌ನಿಂದ ಹೊರಹೋದ ಎಚ್‌.ವಿಶ್ವನಾಥ್‌ ಅವರ ಸ್ಥಾನಕ್ಕೆ ಅದೇ ಸಮುದಾಯದ ಮಾಜಿ ಸಚಿವ ಸಿ.ಎಚ್‌.ವಿಜಯಶಂಕರ್‌ ಅವರನ್ನು ಲೋಕಸಭೆ ಚುನಾವಣೆಗೆ ಟಿಕೆಟ್‌ ಕೊಡಿಸುವ ಭರವಸೆಯೊಂದಿಗೆ ಕಾಂಗ್ರೆಸ್‌ಗೆ ಕರೆತಂದಿದ್ದಾರೆ. ಈ ಮಧ್ಯೆ ಎಐಸಿಸಿ ಕಾರ್ಯದರ್ಶಿ ಹಾಗೂ ರಾಹುಲ್‌ಗಾಂಧಿ ಅವರ ಕನಸಿನ ಶಕ್ತಿ ಯೋಜನೆಯ ಕರ್ನಾಟಕದ ಉಸ್ತುವಾರಿಯಾದ  ಸೂರಜ್‌ ಹೆಗಡೆ, ಕೊಡಗಿನ ಜೆ.ಜೆ.ಆನಂದ ಎಂಬುವರೂ ಆಕಾಂಕ್ಷೆ ವ್ಯಕ್ತಪಡಿಸಿದ್ದಾರೆ.

ಹೀಗಾಗಿ ಮೈಸೂರು-ಕೊಡಗು ಕ್ಷೇತ್ರದ ಟಿಕೆಟ್‌ ಹಂಚಿಕೆ ಸಿದ್ದರಾಮಯ್ಯ ಅವರ ನಿರ್ಧಾರದ ಮೇಲೆ ನಿಂತಿದೆ.
ಮತ್ತೆ ಸಕ್ರಿಯ: ಜೆಡಿಎಸ್‌ನಿಂದ ಸಚಿವ ಜಿ.ಟಿ.ದೇವೇಗೌಡರ ಪುತ್ರ ಡಿಸಿಸಿ ಬ್ಯಾಂಕ್‌ ನಿರ್ದೇಶಕ ಜಿ.ಡಿ.ಹರೀಶ್‌ ಗೌಡ ಅವರಿಗೆ ಟಿಕೆಟ್‌ ನೀಡಬೇಕೆಂದು ಪಕ್ಷದ ಕೆಲ ಮುಖಂಡರು ಒತ್ತಾಯಿಸಿದ್ದರು. ಆದರೆ, ಜಿ.ಟಿ.ದೇವೇಗೌಡರೇ ಲೋಕಸಭೆ ಚುನಾವಣೆಗೆ ತಮ್ಮ ಪುತ್ರ ಸ್ಪರ್ಧಿಸುವುದಿಲ್ಲವೆಂದು ಹೇಳಿದ್ದಾರೆ.

ಈ ಮಧ್ಯೆ ಸಾಮಾಜಿಕ ಜಾಲತಾಣದಲ್ಲಿ ಸಚಿವ ಎಚ್‌.ಡಿ.ರೇವಣ್ಣ ಅವರ ಪುತ್ರ “ಪ್ರಜ್ವಲ್‌ ರೇವಣ್ಣ ಯುವ ಬ್ರಿಗೇಡ್‌’ ಮತ್ತೆ ಸಕ್ರಿಯವಾಗಿದ್ದು, ಪ್ರಜ್ವಲ್‌ಗೆ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಟಿಕೆಟ್‌ ನೀಡುವಂತೆ ಬ್ರಿಗೇಡ್‌ ಮೂಲಕ ಅಭಿಪ್ರಾಯ ಸಂಗ್ರಹ ಮಾಡಲಾಗಿದೆ.

Advertisement

ಹಾಗೆ ನೋಡಿದರೆ ಮೈಸೂರು ಜಿಲ್ಲೆಯ ರಾಜಕಾರಣದಲ್ಲಿ ಈ ಪ್ರಯತ್ನ ಹೊಸದೇನಲ್ಲ. ಎರಡನೇ ಬಾರಿಗೆ ಪ್ರಜ್ವಲ್‌ ರೇವಣ್ಣ ಹೆಸರು ಜಿಲ್ಲೆಯಲ್ಲಿ ಕೇಳಿಬರುತ್ತಿದೆ. ವಿಧಾನಸಭೆ ಚುನಾವಣೆ ಸಂದರ್ಭದಲ್ಲೂ ಹುಣಸೂರು ಕ್ಷೇತ್ರಕ್ಕೆ ಪ್ರಜ್ವಲ್‌ ಹೆಸರು ಕೇಳಿಬಂದಿತ್ತು. ಜತೆಗೆ ಚುನಾವಣೆಗೂ ಮುನ್ನ ತಿಂಗಳು ಕಾಲ ಯುವ ಪಡೆ ಜತೆಗೆ ಕ್ಷೇತ್ರದಲ್ಲಿ ಪ್ರವಾಸವನ್ನೂ ಆರಂಭಿಸಿದ್ದರು ಪ್ರಜ್ವಲ್‌. ತಮ್ಮ ಪುತ್ರ ಜಿ.ಡಿ.ಹರೀಶ್‌ ಗೌಡ ಅವರಿಗಾಗಿ ಹುಣಸೂರಿನ ಕಣ ಸಜ್ಜುಗೊಳಿಸಿದ್ದ ಜಿ.ಟಿ.ದೇವೇಗೌಡ ಅವರು ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದರು. ಆದರೆ, ಎಚ್‌.ವಿಶ್ವನಾಥ್‌ ಕಾಂಗ್ರೆಸ್‌ ತೊರೆದು ಜೆಡಿಎಸ್‌ ಸೇರಿದ್ದರಿಂದ ಹುಣಸೂರು ಕ್ಷೇತ್ರವನ್ನು ಜಿ.ಟಿ.ದೇವೇಗೌಡ ಅವರು, ಎಚ್‌.ವಿಶ್ವನಾಥ್‌ ಅವರಿಗೆ ಬಿಟ್ಟುಕೊಡಬೇಕಾಯಿತು. ನಂತರದಲ್ಲಿ ಯುವ ಬ್ರಿಗೇಡ್‌ ತಣ್ಣಗಾಗಿತ್ತು. ಆದರೆ, ಲೋಕಸಭೆ ಚುನಾವಣೆ ಸಂಬಂಧ ರಾಜಕೀಯ ಪಕ್ಷಗಳಲ್ಲಿ ಚಟುವಟಿಕೆಗಳು ಗರಿಗೆದರಿದಾಗ ಪ್ರಜ್ವಲ್‌ ಯುವ ಬ್ರಿಗೇಡ್‌ ಮತ್ತೆ ಸಕ್ರಿಯವಾಗಿ ಜನಾಭಿಪ್ರಾಯ ಸಂಗ್ರಹಕ್ಕೆ ಮುಂದಾಗಿದೆ.

ಬಿಜೆಪಿಯಲ್ಲಿ ಹಾಲಿ ಸದಸ್ಯ ಪ್ರತಾಪ್‌ ಸಿಂಹ ಈಗಾಗಲೇ ಕೇಂದ್ರ ಸರ್ಕಾರದ ನಾಲ್ಕು ವರ್ಷದ ಸಾಧನೆ ಹಾಗೂ ಕಳೆದ ನಾಲ್ಕು ವರ್ಷಗಳಲ್ಲಿ ಕ್ಷೇತ್ರದಲ್ಲಿ ತಾವು ಮಾಡಿರುವ ಅಭಿವೃದ್ಧಿ ಕಾರ್ಯಗಳ ಕಿರುಹೊತ್ತಿಗೆಯನ್ನೇ ಮಾಡಿಸಿ ಪ್ರಚಾರ ಆರಂಭಿಸಿದ್ದಾರೆ.

ಪುತ್ರ ಜಿ.ಡಿ.ಹರೀಶ್‌ ಗೌಡ ಲೋಕಸಭಾ ಚುನಾವಣೆಗೆ ಸ್ಪರ್ಧಿಸುವುದಿಲ್ಲ. ಒಂದು ಚುನಾವಣೆಯೇ ನಮಗೆ ಸಾಕಾಗಿದೆ. ಇನ್ನೊಂದು ಚುನಾವಣೆ ಎದುರಿಸುವ ಸ್ಥಿತಿಯಲ್ಲಿ ನಾವಿಲ್ಲ. ಪಕ್ಷ ಹೇಳಿದರೂ ಕಣಕ್ಕಿಳಿಸುವುದಿಲ್ಲ. ವರಿಷ್ಠರಿಗೆ ಮನವರಿಕೆ ಮಾಡಿಕೊಡುತ್ತೇವೆ.
– ಜಿ.ಟಿ.ದೇವೇಗೌಡ, ಜಿಲ್ಲಾ ಉಸ್ತುವಾರಿ ಸಚಿವ

– ಗಿರೀಶ್‌ ಹುಣಸೂರು

Advertisement

Udayavani is now on Telegram. Click here to join our channel and stay updated with the latest news.

Next