ಗಜೇಂದ್ರಗಡ: ಜನವಸತಿ ಪ್ರದೇಶವಾಗಿರುವ ಪಟ್ಟಣದ ಕುಷ್ಟಗಿ ರಸ್ತೆ ಬಳಿ ಬಾಲಕಿಯರ ವಸತಿ ನಿಲಯದಲ್ಲಿ ತಾಲೂಕಾಡಳಿತ ಕೋವಿಡ್-19 ಚಿಕಿತ್ಸಾ ಕೇಂದ್ರ ತೆರೆಯಲು ಮುಂದಾಗಿರುವುದನ್ನು ವಿರೋಧಿಸಿ ಅಲ್ಲಿನ ನಿವಾಸಿಗಳು ಶನಿವಾರ ಪ್ರತಿಭಟನೆ ನಡೆಸಿದರು.
ಕುಷ್ಟಗಿ ರಸ್ತೆ ಬಳಿ ಸಮಾಜ ಕಲ್ಯಾಣ ಇಲಾಖೆ ಪರಿಶಿಷ್ಟ ಜಾತಿ-ಪಂಗಡಗಳ ಬಾಲಕಿಯರ ವಸತಿ ನಿಲಯದಲ್ಲಿ ಕೋವಿಡ್ ಸೋಂಕಿತರ ಚಿಕಿತ್ಸಾ ಕೇಂದ್ರ ಸ್ಥಾಪಿಸಲು ತಾಲೂಕಾಡಳಿತ ಮುಂದಾಗಿರುವುದು ಸುತ್ತಲಿನ ನಿವಾಸಿಗಳಿಗೆ ಭೀತಿಯನ್ನುಂಟು ಮಾಡಿದೆ. ಹೀಗಾಗಿ ಈ ಕೇಂದ್ರ ಬೇರೆಡೆ ತೆರೆಯಬೇಕೆಂದು ಒತ್ತಾಯಿಸಿದರು.
ವಸತಿ ನಿಲಯ ಸುತ್ತಲೂ ಮನೆಗಳು ಮತ್ತು ಕೃಷಿ ಚಟುವಟಿಕೆಗಳಿಗೆ ನಿತ್ಯ ರೈತರು ಇದೇ ರಸ್ತೆಯಲ್ಲಿಯೇ ಸಂಚರಿಸುತ್ತಾರೆ. ಜೊತೆಗೆ ಹೊಲಗಳಲ್ಲಿ ಮನೆ ಮಾಡಿಕೊಂಡು ವಾಸವಿದ್ದಾರೆ. ಇಂತಹ ಜನವಸತಿ ಪ್ರದೇಶದಲ್ಲಿ ಕೋವಿಡ್ -19 ಚಿಕಿತ್ಸಾ ಕೇಂದ್ರ ತೆರೆಯುವುದು ಸಮಂಜಸವಲ್ಲ. ಬದಲಾಗಿ ಚಿಕಿತ್ಸಾ ಕೇಂದ್ರವನ್ನು ನಿರ್ಜನ ಪ್ರದೇಶದಲ್ಲಿನ ಕಟ್ಟಡದಲ್ಲಿ ತೆರೆದು ಸೋಂಕಿತರಿಗೆ ಚಿಕಿತ್ಸೆ ನೀಡಬೇಕೆಂದು ಮನವಿ ಮಾಡಿದರು.
ಸ್ಥಳಕ್ಕೆ ತಹಶೀಲ್ದಾರ್ ಎ.ಬಿ. ಕಲಘಟಗಿ, ಶಿರಸ್ತೆದಾರ ವೀರಣ್ಣ ಅಡಗತ್ತಿ ಭೇಟಿ ನೀಡಿ, ಸಾರ್ವಜನಿಕರಿಗೆ ಯಾವುದೇ ತೊಂದರೆಯಾಗದಂತೆ ಎಲ್ಲ ಸುರಕ್ಷತಾ ಕ್ರಮ ಕೈಗೊಳ್ಳಲಾಗುವುದು ಎಂದು ಮನವೊಲಿಸಿದರು. ಇದಕ್ಕೊಪ್ಪದ ಅಲ್ಲಿನ ನಿವಾಸಿಗಳು ಕೋವಿಡ್ ಚಿಕಿತ್ಸಾ ಕೇಂದ್ರ ಈ ವಸತಿ ನಿಲಯದಲ್ಲಿ ತೆರೆಯಲು ಮುಂದಾದರೆ, ಮುಂದಾಗುವ ಅವಘಡಗಳಿಗೆ ತಾಲೂಕಾಡಳಿತವೇ ಹೊಣೆ ಎಂದು ಎಚ್ಚರಿಸಿದರು.
ವೈದ್ಯಾಧಿಕಾರಿ ಸಂಗಮೇಶ ಬಂಕದ, ತಹಶೀಲ್ದಾರ್ ಕಚೇರಿಯ ಗಣೇಶ ಕೊಡಕೇರಿ ಸೇರಿದಂತೆ ಪೊಲೀಸರು ಸೂಕ್ತ ಬಂದೋಬಸ್ತ್ ಒದಗಿಸಿದ್ದರು.