ನವದೆಹಲಿ:ರಾಜಕೀಯವಾಗಿ ಭಾರೀ ಮಹತ್ವ ಪಡೆದಿದ್ದ ತ್ರಿವಳಿ ತಲಾಖ್ ಮಸೂದೆ ಚರ್ಚೆಗೆ ಸಂಬಂಧಿಸಿದಂತೆ ಸೋಮವಾರ ರಾಜ್ಯಸಭೆಯಲ್ಲಿ ಪ್ರತಿಪಕ್ಷಗಳ ಭಾರೀ ಕೋಲಾಹಲ, ವಾಗ್ದಾಳಿಗೆ ಕಾರಣವಾಯಿತು.
ತ್ರಿವಳಿ ತಲಾಖ್ ಕುರಿತಂತೆ ಚರ್ಚೆ ನಡೆಸುವ ಮುನ್ನ ಮಸೂದೆಯನ್ನು ಸೆಲೆಕ್ಟ್ ಕಮಿಟಿಗೆ ಶಿಫಾರಸು ಮಾಡಬೇಕೆಂದು ಕಾಂಗ್ರೆಸ್ ಸೇರಿದಂತೆ ವಿಪಕ್ಷಗಳು ಒತ್ತಾಯಿಸಿದ್ದವು. ಈ ಸಂದರ್ಭದಲ್ಲಿ ಆಡಳಿತಾರೂಢ ಮತ್ತು ವಿಪಕ್ಷಗಳ ನಡುವೆ ಮಾತಿನ ಚಕಮಕಿ, ಕೋಲಾಹಲ ನಡೆದ ಹಿನ್ನೆಲೆಯಲ್ಲಿ ಸಭಾಪತಿ ಕಲಾಪವನ್ನು ಜನವರಿ 2ಕ್ಕೆ ಮುಂದೂಡಿದರು.
ಇಂತಹ ಐತಿಹಾಸಿಕ ಮಹತ್ವದ ಮಸೂದೆಯನ್ನು ಒಂದೋ ಸ್ಥಾಯಿ ಸಮಿತಿ ಅಥವಾ ಸೆಲೆಕ್ಟ್ ಕಮಿಟಿಗೆ ಕಳುಹಿಸಿಕೊಡಬೇಕು. ಆದರೆ ಕೇಂದ್ರ ಸರ್ಕಾರ ಅದನ್ನು ಮಾಡುವಲ್ಲಿ ವಿಫಲವಾಗಿದೆ ಎಂದು ವಿರೋಧ ಪಕ್ಷದ ಮುಖಂಡ ಗುಲಾಂ ನಬಿ ಅಜಾದ್ ತಿಳಿಸಿದ್ದಾರೆ.
ತ್ರಿವಳಿ ತಲಾಖ್ ಮಸೂದೆಗೆ ಸಂಬಂಧಿಸಿದಂತೆ ಬೇರೇನೂ ಇಲ್ಲ, ವಿರೋಧ ಪಕ್ಷಗಳಿಗೆ ಮಸೂದೆ ಅಂಗೀಕಾರವಾಗುವುದು ಬೇಕಾಗಿಲ್ಲ. ಮಹತ್ವದ ಮಸೂದೆ ಬಗ್ಗೆ ವಿಪಕ್ಷಗಳು ರಾಜಕೀಯ ಮಾಡುತ್ತಿವೆ ಎಂದು ಸಂಸದೀಯ ವ್ಯವಹಾರ ಖಾತೆ ಸಚಿವ ವಿಜಯ್ ಗೋಯೆಲ್ ವಾಗ್ದಾಳಿ ನಡೆಸಿದ್ದಾರೆ.
ಗುರುವಾರವಷ್ಟೇ ಲೋಕಸಭೆಯಲ್ಲಿ ಈ ಮಸೂದೆ ಅಂಗೀಕಾರಗೊಂಡಿದ್ದು, ರಾಜ್ಯಸಭೆಯಲ್ಲಿ ಅಂಗೀಕಾರವಾಗುವುದು ಅನಿವಾರ್ಯವಾಗಿದೆ. 2017ರಲ್ಲೂ ಈ ಮಸೂದೆ ಲೋಕಸಭೆಯಲ್ಲಿ ಅಂಗೀಕಾರಗೊಂಡು ರಾಜ್ಯಸಭೆಯಲ್ಲಿ ತಿರಸ್ಕೃತಗೊಂಡಿತ್ತು. ಇದೀಗ ರಾಜ್ಯಸಭೆಯಲ್ಲಿ ಇದನ್ನು ಅಂಗೀಕಾರಗೊಳಿಸಲು ಬಿಜೆಪಿ ಪ್ರಯತ್ನಿಸುತ್ತಿದೆ. ಲೋಕಸಭೆಯಲ್ಲಿ ಈ ಮಸೂದೆ ಮಂಡನೆಯಾದಾಗಲೇ ಕಾಂಗ್ರೆಸ್ ಇದನ್ನು ವಿರೋಧಿಸಿತ್ತು.
ಒಟ್ಟು 245 ಸ್ಥಾನಗಳಿರುವ ರಾಜ್ಯಸಭೆಯಲ್ಲಿ ಮಸೂದೆ ಅಂಗೀಕಾರವಾಗಲು ಶೇ.50ರಷ್ಟು ಮತ ಅಂದರೆ 123 ಮತಗಳು ಬೇಕು. ಕಾಂಗ್ರೆಸ್ ಮಿತ್ರ ಪಕ್ಷಗಳ ಬಲಾಬಲ 155 ಇದೆ. ಬಿಜೆಪಿ ನೇತೃತ್ವದ ಎನ್ ಡಿಎ ಬಲ 89 ಇದ್ದು, ಮಸೂದೆ ಅಂಗೀಕಾರಕ್ಕೆ 38 ಮತಗಳ ಕೊರತೆ ಎದುರಿಸುತ್ತಿದೆ.