Advertisement

ಬಹುಮತ ಸಿಗದಿದ್ರೆ ವಿಪಕ್ಷ ಸ್ಥಾನ: ಮಧು ಬಂಗಾರಪ್ಪ

11:28 AM Jan 12, 2018 | Team Udayavani |

ಬೀದರ: ಮುಂಬರುವ ಚುನಾವಣೆಯಲ್ಲಿ ಜೆಡಿಎಸ್‌ಗೆ ಸ್ಪಷ್ಟಬಹುಮತ ದೊರೆತರೆ ಸ್ವಂತ ಬಲದ ಮೇಲೆ ಸರ್ಕಾರ
ರಚಿಸಲಿದೆ. ಇಲ್ಲವಾದರೆ ವಿರೋಧ ಪಕ್ಷದ ಸ್ಥಾನದಲ್ಲಿ ಕೂರಲು ಸಿದ್ಧವಿದೆ ಎಂದು ಜೆಡಿಎಸ್‌ ರಾಜ್ಯ ಯುವ
ಘಟಕದ ಅಧ್ಯಕ್ಷ ಮಧು ಬಂಗಾರಪ್ಪ ಹೇಳಿದರು.

Advertisement

ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದ ಅಭಿವೃದ್ಧಿಗೆ ಪ್ರಾದೇಶಿಕ ಪಕ್ಷಗಳ ಅವಶ್ಯಕತೆ ಇದೆ. ನೆಲ- ಜಲ ಪ್ರತಿಯೊಂದು ವಿಷಯಕ್ಕಾಗಿ ದೆಹಲಿಗೆ ಹೋಗುವ ರಾಷ್ಟ್ರೀಯ ಪಕ್ಷಗಳಿಂದ ಪ್ರಗತಿ ಸಾಧ್ಯವಿಲ್ಲ. ಕರ್ನಾಟಕಕ್ಕೆ ನಾಯಕತ್ವದ ಕೊರತೆ ಕಾಡುತ್ತಿದ್ದು, ಅದನ್ನು ಜೆಡಿಎಸ್‌ ಅಧ್ಯಕ್ಷ ಕುಮಾರಸ್ವಾಮಿ
ತುಂಬಲಿದ್ದಾರೆ ಎಂದರು.

ಕುಮಾರಸ್ವಾಮಿ ಅವರು ತಮ್ಮ 20 ತಿಂಗಳ ಅಧಿಕಾರವ ಯಲ್ಲಿ ಜನಪರ ಕೆಲಸಗಳನ್ನು ಮಾಡಿದ್ದರಿಂದಲೇ ಕನ್ನಡಿಗರ ಮನಸ್ಸಿನಲ್ಲಿ ನೆಲೆಯೂರಿದ್ದಾರೆ. ಅವರು ಯೋಜನೆಗಳನ್ನು ಗುಡಿಸಲುಗಳಲ್ಲಿ ರೂಪಿಸಿದರೆ ಹೊರತು ವಿಧಾನಸೌಧದಲ್ಲಲ್ಲ. ಅಂದಿನ ಗ್ರಾಮ ವಾಸ್ತವ್ಯ ಕಾರ್ಯಕ್ರಮ ಇಂದು ಮತಗಳಾಗಿ ಪರಿವರ್ತನೆ ಆಗಲಿವೆ. ಜನ ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಆಗಬೇಕೆಂಬುದನ್ನು ಬಯಸಿದ್ದಾರೆ ಎಂದು ಹೇಳಿದರು.

ರಾಜಕೀಯದಲ್ಲಿ ಬದಲಾವಣೆ ತರುವ ಶಕ್ತಿ ಯುವಕರಲ್ಲಿದೆ. ಹಾಗಾಗಿ ಯುವಕರಲ್ಲಿ ವಿಶ್ವಾಸ ಮೂಡಿಸುವ ದಿಸೆಯಲ್ಲಿ ಜೆಡಿಎಸ್‌ ಯುವ ಘಟಕದಿಂದ ರಾಜ್ಯ ಮಟ್ಟದ ಯುವ ಸಮಾವೇಶವನ್ನು ಫೆ.18 ಅಥವಾ 25ರಂದು ಚಿತ್ರದುರ್ಗದ ಹಿರಿಯೂರಿನಲ್ಲಿ ಆಯೋಜಿಸಲಾಗಿದೆ. ಇದಕ್ಕೆ ಪೂರ್ವಭಾವಿಯಾಗಿ ರಾಜ್ಯದ ಪ್ರತಿ ಜಿಲ್ಲೆಗಳಲ್ಲಿ ಸಮಾವೇಶಗಳನ್ನು ನಡೆಸಲಾಗುತ್ತಿದೆ ಎಂದು ತಿಳಿಸಿದರು.

ಪಕ್ಷದ ಚುನಾವಣಾ ಪ್ರಣಾಳಿಕೆ ಸಿದ್ದಪಡಿಸುವ ಮುನ್ನ ಕುಮಾರಸ್ವಾಮಿ ರೈತರು, ಮಹಿಳೆಯರು, ಹಿರಿಯ ನಾಗರಿಕರು, ಎಸ್‌ಸಿ-ಎಸ್‌ಟಿ ಹೀಗೆ ಪ್ರತಿಯೊಂದು ವಿಭಾಗದ ಸಮಾವೇಶ ನಡೆಸಿ ಅವರ ಸಮಸ್ಯೆ, ನೋವು ಅರಿತುಕೊಳ್ಳುತ್ತಿದ್ದಾರೆ. ಅದೇ ಯುವಕರಿಗೆ ಶಿಕ್ಷಣ, ಉದ್ಯೋಗಕ್ಕಾಗಿ ಆರ್ಥಿಕವಾಗಿ ಸಹಾಯ ಸಿಗಲು ಏನಾಗಬೇಕು ಎಂಬುದರ ಚರ್ಚೆ ನಡೆಸಲಿದ್ದಾರೆ ಎಂದು ಹೇಳಿದರು.

Advertisement

ಉತ್ತರ ಕರ್ನಾಟಕ ಭಾಗದಲ್ಲಿಯೂ ಜೆಡಿಎಸ್‌ ಮತ್ತಷ್ಟು ಬಲಿಷ್ಠಗೊಳಿಸಲಾಗುತ್ತಿದ್ದು, ಈ ಪ್ರದೇಶದಿಂದ ಹೆಚ್ಚು ಶಾಸಕರು ಆಯ್ಕೆಯಾಗಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಮಾಜಿ ಸಚಿವ ಬಂಡೆಪ್ಪ ಖಾಶೆಂಪುರ, ಎಂಎಲ್‌ಸಿ ಕಾಂತರಾಜು, ಬೆಂಗಳೂರು ಯುವ ಘಟಕದ ಅಧ್ಯಕ್ಷ ರಮೇಶಗೌಡ, ಮಹಾ ಪ್ರಧಾನ ಕಾರ್ಯದರ್ಶಿ ಹರೀಶ, ಪಕ್ಷದ ಜಿಲ್ಲಾಧ್ಯಕ್ಷ ರಮೇಶ ಪಾಟೀಲ ಸೋಲಪೂರ, ಮಾಜಿ ಅಧ್ಯಕ್ಷ ನಸಿಮುದ್ದೀನ್‌ ಪಟೇಲ ಮತ್ತು ಯುವ ಘಟಕದ
ಜಿಲ್ಲಾಧ್ಯಕ್ಷ ಬಸವರಾಜ ಪಾಟೀಲ ಹಾರೂರಗೇರಿ ಇದ್ದರು.

ಅನಂತಕುಮಾರ ಹೆಗಡೆ ಭಯೋತ್ಪಾದಕ
ಬೀದರ: ಸಂವಿಧಾನ ಬದಲಾಯಿಸುತ್ತೇವೆ ಎಂಬ ಹೇಳಿಕೆ ನೀಡಿದ್ದ ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಅವರನ್ನು
ಭಯೋತ್ಪಾದಕ ಎಂದು ಕರೆಯಬೇಕು ಎಂದು ಜೆಡಿಎಸ್‌ ಯುವ ಘಟಕದ ರಾಜ್ಯಾಧ್ಯಕ್ಷ ಮಧು ಬಂಗಾರಪ್ಪ ಹೇಳಿದರು.

ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ಮತ್ತು ಆರೆಸ್ಸೆಸ್‌ನವರು ದೇಶದ ಪ್ರಜೆಗಳು. ಅವರನ್ನು ಭಯೋತ್ಪಾದಕರೆಂದು ಒಬ್ಬ ಮುಖ್ಯಮಂತ್ರಿಗಳು ಹಗುರವಾಗಿ ಮಾತನಾಡಿರುವುದು ಸರಿಯಲ್ಲ ಎಂದ ಅವರು, ಕೊನೆಗೆ ಸಚಿವ ಹೆಗಡೆ ಹೇಳಿಕೆಗೆ ಪ್ರತಿಕ್ರಿಯಿಸಿ, ಮುಸ್ಲಿಮರ ಮತ ಬೇಕಿಲ್ಲ ಮತ್ತು ಸಂವಿಧಾನ ಬದಲಿಸುತ್ತೇವೆ ಎಂದೆನ್ನುವ ಅನಂತಕುಮಾರ ಟೆರರಿಸ್ಟ್‌ ಎಂದರು.

ಮಂಗಳೂರಿನ ಕಲ್ಲಡ್ಕ ಪ್ರಭಾಕರ ಅವರನ್ನು ಬಂಧಿಸಿದರೆ ಇಡೀ ರಾಜ್ಯಕ್ಕೆ ಬೆಂಕಿ ಹಚ್ಚುತ್ತೇವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಅವರು ಹೇಳಿದ್ದಕ್ಕೆ ನಾನು ಅವರನ್ನು ಅಂದು ಕಚಡಾ ಎಂದು ಹೇಳಿದ್ದೆ. ಆದರೆ, ಇಂದು
ಕಾರಣ ಇಲ್ಲದೇ ಬಿಎಸ್‌ವೈ ಅವರನ್ನು ಜೈಲಿಗೆ ಹೋಗಿ ಬಂದವರೆಂದು ಹೇಳಿ ಕಚಡಾಗಿಂತ ಕಚಡಾ ಮಾತನಾಡುತ್ತಿದ್ದಾರೆ ಎಂದರು.

ನಟ ಸುದೀಪ ಜೆಡಿಎಸ್‌ ಸೇರ್ಪಡೆ ಅಥವಾ ಚುನಾವಣಾ ಪ್ರಚಾರಕರಾಗಿ ಬರುವುದು ತಮಗೆ ಮಾಹಿತಿ ಇಲ್ಲ. ಕುಮಾರಸ್ವಾಮಿ ಮತ್ತು ಸುದೀಪ ಅವರು ಚಿತ್ರರಂಗದಿಂದ ಸ್ನೇಹಿತರಾಗಿದ್ದಾರೆ. ಪಕ್ಷಕ್ಕೆ ಸುದೀಪ ಸಹಕಾರ ಸಿಕ್ಕರೆ ಲಾಭವಾಗುತ್ತದೆ ಎಂದ ಅವರು, ಕಾಂಗ್ರೆಸ್‌ ರಾಜ್ಯಾಧ್ಯಕ್ಷರು ಜೆಡಿಎಸ್‌ ವಿರುದ್ಧ ಸುಳ್ಳು ಮಾತನಾಡುವುದನ್ನು ಬಿಡಬೇಕು. ಅವರೇನು ನಮ್ಮ ಪಕ್ಷದ ವಕ್ತಾರರಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. 

ಜೆಡಿಎಸ್‌ ಅಪ್ಪ-ಮಕ್ಕಳ ಪಕ್ಷ ಎಂದು ಆರೋಪಿಸುತ್ತಾರೆ. ಆದರೆ, ನನ್ನನ್ನು ಈ ಮಟ್ಟಕ್ಕೆ ಬೆಳೆಸಿ ಯುವ ಘಟದ ಅಧ್ಯಕ್ಷ ಸ್ಥಾನ ನೀಡಿರುವುದು ಇದೇ ಪಕ್ಷ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next