ಹೊಸದಿಲ್ಲಿ: ಸಂಸತ್ತಿನ ಪ್ರತಿಭಟನೆಗೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿ ಸೋಮವಾರ ಪ್ರತಿಪಕ್ಷಗಳ ವಿರುದ್ಧ ಹರಿಹಾಯ್ದರು. ಅವರು ತಮ್ಮ ರಾಜಕೀಯ ಹಿತಾಸಕ್ತಿಗಳನ್ನು ದೇಶಕ್ಕಿಂತ ಹೆಚ್ಚಾಗಿ ಇಟ್ಟುಕೊಂಡಿದ್ದಾರೆ. ಸರ್ಕಾರದ ಅಭಿವೃದ್ಧಿ ಕಾರ್ಯಗಳಿಗೆ ಅಡ್ಡಿಪಡಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಕಳೆದ ವಾರ ಮುಂಗಾರು ಅಧಿವೇಶನ ಆರಂಭವಾದಾಗಿನಿಂದ ಸಂಸತ್ತಿನ ಉಭಯ ಸದನಗಳ ಕಲಾಪಗಳು ಬೆಲೆ ಏರಿಕೆಗೆ ಸಂಬಂಧಿಸಿದಂತೆ ಪ್ರತಿಪಕ್ಷಗಳ ಪ್ರತಿಭಟನೆಯಿಂದಾಗಿ ಸ್ಥಗಿತಗೊಂಡಿವೆ.
ಸಮಾಜವಾದಿ ಪಕ್ಷದ ಮಾಜಿ ರಾಜ್ಯಸಭಾ ಸದಸ್ಯ ಹರ್ಮೋಹನ್ ಸಿಂಗ್ ಯಾದವ್ ಅವರ 10 ನೇ ಪುಣ್ಯತಿಥಿ ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರಧಾನಿ ಮೋದಿ, ” ಪ್ರತಿಪಕ್ಷಗಳು ಅನೇಕ ಬಾರಿ ಸರ್ಕಾರದ ಕೆಲಸದಲ್ಲಿ ಅಡ್ಡ ಹಾಕುವ ಕಾರಣದಿಂದ ಅವರು ಅಧಿಕಾರದಲ್ಲಿದ್ದಾಗ ತೆಗೆದುಕೊಂಡ ಕೆಲವು ನಿರ್ಧಾರಗಳನ್ನು ಜಾರಿಗೆ ತರಲು ಸಾಧ್ಯವಾಗುವುದಿಲ್ಲ” ಎಂದು ಹೇಳಿದರು.
ಪ್ರತಿ ನಿರ್ಧಾರದಲ್ಲೂ ಪ್ರತಿಪಕ್ಷಗಳು ಸರ್ಕಾರವನ್ನು ಪ್ರಶ್ನಿಸುತ್ತವೆ ಎಂದು ಪ್ರಧಾನಿ ಮೋದಿ ಹೇಳಿದರು. ಇತ್ತೀಚಿನ ದಿನಗಳಲ್ಲಿ, “ಸಮಾಜ ಮತ್ತು ದೇಶದ ಹಿತಾಸಕ್ತಿಗಳಿಗಿಂತ ಸಿದ್ಧಾಂತ ಅಥವಾ ರಾಜಕೀಯ ಹಿತಾಸಕ್ತಿಗಳನ್ನು ಮೇಲಕ್ಕೆ ಇಡುವ ಪ್ರವೃತ್ತಿ ಕಂಡುಬಂದಿದೆ” ಎಂದು ಪ್ರಧಾನಿ ಹೇಳಿದರು.
ಇದನ್ನೂ ಓದಿ:ದ.ಕ.ದಲ್ಲಿ 19.86 ಲಕ್ಷ ಮೆಟ್ರಿಕ್ ಟನ್ ಲಭ್ಯ: ನಿರ್ಮಾಣ ಕ್ಷೇತ್ರಕ್ಕೆ ನಾನ್ ಸಿಆರ್‌ಝಡ್
ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಮಾತುಗಳನ್ನು ನೆನಪಿಸಿಕೊಂಡ ಮೋದಿ, ಪಕ್ಷ ರಾಜಕಾರಣಕ್ಕಿಂತ ರಾಷ್ಟ್ರದ ಪ್ರಾಮುಖ್ಯತೆಯನ್ನು ಒತ್ತಿ ಹೇಳಿದರು.
ಪ್ರಜಾಪ್ರಭುತ್ವದಿಂದಾಗಿ ಪಕ್ಷಗಳು ಅಸ್ತಿತ್ವದಲ್ಲಿವೆ. ದೇಶದಿಂದಾಗಿ ಪ್ರಜಾಪ್ರಭುತ್ವ ಅಸ್ತಿತ್ವದಲ್ಲಿದೆ. ನಮ್ಮ ದೇಶದ ಬಹುತೇಕ ಪಕ್ಷಗಳು, ವಿಶೇಷವಾಗಿ ಎಲ್ಲಾ ಕಾಂಗ್ರೆಸ್ಸೇತರ ಪಕ್ಷಗಳು ಈ ಕಲ್ಪನೆಯನ್ನು ಅನುಸರಿಸಿವೆ” ಎಂದು ಪ್ರಧಾನಿ ಮೋದಿ ಹೇಳಿದರು.