Advertisement

ಸ್ವಯಂ ಉದ್ಯೋಗಿಗಳಾಗಲು ಅಪಾರ ಅವಕಾಶ ­

11:27 AM Apr 22, 2022 | Team Udayavani |

ಧಾರವಾಡ: ಐಟಿಐ ಹಾಗೂ ಇತರೆ ಕೈಗಾರಿಕಾ ತರಬೇತಿ ಪಡೆದ ಅಭ್ಯರ್ಥಿಗಳು ತಮ್ಮ ಅರ್ಹತೆಗೆ ಪೂರಕವಾಗಿ ಕೌಶಲ್ಯ ಗಳಿಸಿಕೊಂಡು ದೇಶ-ವಿದೇಶಗಳ ಉದ್ಯಮಗಳಲ್ಲಿ ಉದ್ಯೋಗ ಪಡೆಯಲು ಪ್ರಯತ್ನಶೀಲರಾಗಬೇಕು. ಉದ್ಯಮಶೀಲತೆ ಅಳವಡಿಸಿಕೊಂಡು ಸ್ವಯಂ ಉದ್ಯೋಗಿಗಳಾಗಲು ಅಪಾರ ಅವಕಾಶಗಳಿವೆ ಎಂದು ಅಪರ ಜಿಲ್ಲಾಧಿಕಾರಿ ಶಿವಾನಂದ ಭಜಂತ್ರಿ ಹೇಳಿದರು.

Advertisement

ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆ ಅವ್ವಪ್ಪಣ್ಣ ಅತ್ತಿಗೇರಿ ಐಟಿಐ ಸಹಯೋಗದಲ್ಲಿ ಲಿಂಗಾಯತ ಟೌನ್‌ಹಾಲ್‌ನಲ್ಲಿ ಏರ್ಪಡಿಸಿದ್ದ ಜಿಲ್ಲಾಮಟ್ಟದ ರಾಷ್ಟ್ರೀಯ ಶಿಶಿಕ್ಷು (ಅಪ್ರಂಟಿಸ್‌) ಮೇಳ ಉದ್ಘಾಟಿಸಿ ಮಾತನಾಡಿದ ಅವರು, ಶಿಶಿಕ್ಷು ಮೇಳದಲ್ಲಿ ಸರ್ಕಾರದ ಇಲಾಖೆಗಳು, ಐಟಿಐ ಸಂಸ್ಥೆಗಳು, ವಿದ್ಯಾರ್ಥಿಗಳು, ಉದ್ಯೋಗದಾತರು ಒಂದೆಡೆ ಸೇರಿರುವುದು ಉದ್ಯೋಗ ಸ್ನೇಹಿ ವಾತಾವರಣ ನಿರ್ಮಿಸಿದೆ. ವಿದ್ಯಾರ್ಥಿಗಳು ಅನುಭವ, ಕೌಶಲ್ಯ ಗಳಿಸಿಕೊಂಡು ದೇಶ-ವಿದೇಶಗಳ ಬಹುರಾಷ್ಟ್ರೀಯ ಕಂಪನಿಗಳಲ್ಲಿ ಉದ್ಯೋಗ ಪಡೆಯುವಂತೆ ಬೆಳೆಯಬೇಕು. ಅಗತ್ಯವಿರುವ ಪಾಸ್‌ಪೋರ್ಟ್‌ ಮತ್ತಿತರೆ ದಾಖಲೆಗಳನ್ನು ಸಿದ್ಧಪಡಿಸಿಕೊಳ್ಳುವ ಮಾಹಿತಿ ಪಡೆಯಬೇಕು ಎಂದರು.

ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಟಿ. ಸಿದ್ಧಣ್ಣ ಮಾತನಾಡಿ, ಉದ್ಯೋಗ ಮೇಳಗಳ ಮೂಲಕ ಅರ್ಹ ಅಭ್ಯರ್ಥಿಗಳಿಗೆ ಸ್ಥಳೀಯವಾಗಿ ಉದ್ಯೋಗ ಒದಗಿಸುವ ಪ್ರಯತ್ನ ಮಾಡಲಾಗುತ್ತಿದೆ. ಯುವಶಕ್ತಿ ಉದ್ಯೋಗಕ್ಕಾಗಿ ವಲಸೆ ಹೋಗುವುದನ್ನು ತಡೆಯಲು ಮೇಳಗಳು ಸಹಕಾರಿ ಎಂದರು.

ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿ ಡಾ|ಚಂದ್ರಪ್ಪ ಮಾತನಾಡಿ, ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಹಾಗೂ ಜೀವನೋಪಾಯ ಇಲಾಖೆಯಡಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕೌಶಲ್ಯಾಧಾರಿತ ಶಿಕ್ಷಣ, ತರಬೇತಿ ನೀಡಲು ಆದ್ಯತೆ ನೀಡಿ ಪೂರಕ ವಾತಾವರಣ ನಿರ್ಮಿಸುತ್ತಿವೆ ಎಂದರು.

ಶಿಶಿಕ್ಷು ಮೇಳದ ನೋಡಲ್‌ ಅಧಿಕಾರಿ ರವೀಂದ್ರ ಪಿ.ದ್ಯಾಬೇರಿ ಮಾತನಾಡಿ, ಶಿಶಿಕ್ಷು ಮೇಳಕ್ಕೆ ಸುಮಾರು ಒಂದು ಸಾವಿರ ಅಭ್ಯರ್ಥಿಗಳು ನೋಂದಾಯಿಸಿದ್ದಾರೆ. 89 ಉದ್ಯೋಗದಾತರು ಮೇಳದಲ್ಲಿ ಭಾಗವಹಿಸಿದ್ದಾರೆ. ಕೌಶಲ್ಯ ಹೊಂದಿದ ಯುವಜನರಿಗೆ ಉದ್ಯೋಗ ಒದಗಿಸುವ ಪ್ರಯತ್ನ ಇದಾಗಿದೆ. ಜಿಲ್ಲೆಯಲ್ಲಿರುವ ಸರ್ಕಾರಿ ಹಾಗೂ ಖಾಸಗಿ ಐಟಿಐ, ಜಿಟಿಟಿಸಿ ಸಂಸ್ಥೆಗಳ ಮೂಲಕ ಪ್ರತಿವರ್ಷ ಸುಮಾರು 3 ಸಾವಿರ ವಿದ್ಯಾರ್ಥಿಗಳು ಹೊರ ಬರುತ್ತಿದ್ದಾರೆ. ಅವರಿಗೆ ಉದ್ಯೋಗ ದೊರಕಿಸಲು ಇಂತಹ ಮೇಳಗಳನ್ನು ಪ್ರತಿವರ್ಷ ಆಯೋಜಿಸಲಾಗುವುದು ಎಂದರು.

Advertisement

ಅಧ್ಯಕ್ಷತೆ ವಹಿಸಿದ್ದ ವಿಭಾಗೀಯ ಶಿಶಿಕ್ಷು ಸಲಹೆಗಾರ, ಕೈಗಾರಿಕಾ ಮತ್ತು ತರಬೇತಿ ಇಲಾಖೆಯ ಬೆಳಗಾವಿ ವಿಭಾಗದ ಜಂಟಿ ನಿರ್ದೇಶಕ ಪಿ.ರಮೇಶ ಮಾತನಾಡಿ, ಒಂದು ದೇಶ ಒಂದು ಶಿಶಿಕ್ಷು ಮೇಳ ಎಂಬ ಧ್ಯೇಯದೊಂದಿಗೆ ದೇಶದ ಎಲ್ಲಾ ರಾಜ್ಯಗಳು ಮತ್ತು ಜಿಲ್ಲೆಗಳಲ್ಲಿ ಇಂದು ಏಕಕಾಲದಲ್ಲಿ ಮೇಳಗಳು ನಡೆಯುತ್ತಿವೆ ಎಂದರು.

ಲಿಂಗಾಯತ ವಿದ್ಯಾಭಿವೃದ್ದಿ ಸಂಸ್ಥೆಯ ಉಪಾಧ್ಯಕ್ಷ ವಿ.ಬಿ.ಯಳಲಿ ಮಾತನಾಡಿದರು. ಎಲ್‌ಇಎ ಸಂಸ್ಥೆಯ ಎಸ್‌.ಎಂ.ಅಗಡಿ, ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ಉಪನಿರ್ದೇಶಕ ಎನ್‌. ಎಂ. ಭೀಮಪ್ಪ, ಜಿಲ್ಲಾ ಸಹಾಯಕ ಶಿಶಿಕ್ಷು ಸಲಹೆಗಾರ ಈಶ್ವರಪ್ಪ ದ್ಯಾಮನಗೌಡ್ರ, ಜಿಲ್ಲಾ ವಾರ್ತಾಧಿಕಾರಿ ಮಂಜುನಾಥ ಡೊಳ್ಳಿನ ಮತ್ತಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಜಿ.ಆರ್‌.ಘೋಡಕೆ ಸ್ವಾಗತಿಸಿದರು. ಮುಜಾವರ್‌ ನಿರೂಪಿಸಿದರು. ಸಂಜಯ್‌ ತ್ರಾಸದ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next