ಹರಪನಹಳ್ಳಿ: ವಿರೋಧ ಪಕ್ಷಗಳ ನಾಯಕರು ಅಭಿವೃದ್ಧಿ ಕೆಲಸಗಳನ್ನು ಸ್ವಾಗತಿಸಬೇಕು. ವಿರೋಧ ಮಾಡುವುದಕ್ಕೋಸ್ಕರ ಅಭಿವೃದ್ಧಿ ಕೆಲಸಗಳ ವಿರುದ್ಧ ಬಾಲಿಶ ಹೇಳಿಕೆ ನೀಡುವ ಮೂಲಕ ಜನರನ್ನು ದಿಕ್ಕು ತಪ್ಪಿಸುವ ಕೆಲಸ ನಿಲ್ಲಿಸಬೇಕೆಂದು ಶಾಸಕ ಎಂ.ಪಿ. ರವೀಂದ್ರ ತಾಕೀತು ಮಾಡಿದರು.
ಪಟ್ಟಣದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 2013ರಲ್ಲಿ ತಾಲೂಕಿನ 60 ಕೆರೆಗಳಿಗೆ ನದಿ ತುಂಬಿಸುವ ಯೋಜನೆ ಕೇವಲ ಪ್ರಸ್ತಾವನೆ ಹಂತದಲ್ಲಿತ್ತು. ನಾನು 4 ವರ್ಷಗಳ ಅವಧಿಯಲ್ಲಿ ಯೋಜನೆಯ ಅನುದಾನ ಪರಿಷ್ಕರಣೆ ಮಾಡಿಸಿ ತಾಂತ್ರಿಕವಾಗಿ, ಅನುದಾನ ವಿಚಾರದಲ್ಲಿ ಜಲ ಸಂಪನ್ಮೂಲ ಸಚಿವರ ಮನವೊಲಿಸಿ 3 ಹಂತದಲ್ಲಿ ಯೋಜನೆಯ ನಕಾಶೆ ತಯಾರಿಸಿ ಸಲ್ಲಿಸಲಾಯಿತು.
ನಮ್ಮ ಕನಸಿನ ಯೋಜನೆಯನ್ನು ಬಜೆಟ್‌ನಲ್ಲಿ ಘೋಷಿಸಿದ ಮುಖ್ಯಮಂತ್ರಿ, ಜಲ ಸಂಪನ್ಮೂಲ ಸಚಿವರು ಹಾಗೂ ಅಧಿಕಾರಿಗಳಿಗೆ ಕೃತಜ್ಞತೆ ಸಲ್ಲಿಸುವುದಾಗಿ ತಿಳಿಸಿದರು. ಅಧಿಕಾರ ಬರುತ್ತದೆ, ಹೋಗುತ್ತದೆ ಆದರೆ ಕೆರೆಗೆ ನೀರು ತುಂಬಿಸುವುದು ಶಾಶ್ವತವಾಗಿ ಜನರಿಗೆ ಅನುಕೂಲವಾಗಲಿದೆ. ಕೇವಲ ಪ್ರಸ್ತಾವನೆ ಸಲ್ಲಿಸಿ ಯೋಜನೆ ನಾನು ಜಾರಿಗೊಳಿಸಿದ್ದೇನೆಂಬ ಕರುಣಾಕರರೆಡ್ಡಿ ಹೇಳಿಕೆ ಬಾಲಿಶವಾಗಿದೆ.
ಎಲ್ಲಾ ಹಂತದಲ್ಲಿಯೂ ಕೆಲಸ ಮಾಡಿದಾಗ ಮಾತ್ರ ಯೋಜನೆ ಸಕಾರಗೊಳ್ಳುತ್ತದೆ. ಸದ್ಯ 50 ಕರೆಗಳಿಗೆ 1 ಟಿಎಂಸಿ ನೀರು ಹರಿಸಲು ಸಂಗ್ರವಾಗಲಿದೆ. ಉಳಿದ 10ಕ್ಕೂ ಹೆಚ್ಚು ಕೆರೆಗಳಿಗೆ ನೀರು ತುಂಬಿಸಲಾಗುವುದು. ಅದ್ದರಿಂದ ರೈತರು ಆತಂಕಗೊಳ್ಳುವ ಅಗತ್ಯವಿಲ್ಲ, ಆ ಕೆಲಸ ಖಂಡಿತವಾಗಿಯೂ ಮಾಡುತ್ತೇನೆಂದು ಭರವಸೆ ನೀಡಿದರು.
ನೆನಗುದಿಗೆ ಬಿದ್ದಿರುವ ಗರ್ಭಗುಡಿ ಬಿಡ್ಜ್ ಕಂ ಬ್ಯಾರೇಜ್ ಯೋಜನೆ ಪರಿಷ್ಕೃತಗೊಂಡು 55 ಕೋಟಿರೂ ಪ್ರಸ್ತಾವನೆ ಸಲ್ಲಿಸಿ ಹಣಕಾಸು ಇಲಾಖೆಯ ಅನುಮೋದನೆ ಪಡೆದು ಮುಖ್ಯಮಂತ್ರಿಗಳ ಅಂಕಿತದೊಂದಿಗೆ ಕ್ಯಾಬಿನೆಟ್‌ಗೆ ತರಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಅಲ್ಲಿ ಅನುಮೋದನೆ ಪಡೆದು ಟೆಂಡರ್ ಕರೆಯಲಾಗುವುದು.
ಹಿಂದಿನ ಅವಧಿಯಲ್ಲಿ ಈ ಯೋಜನೆಯ ಅನುದಾನ ಬಳಕೆ ಮಾಡದಿದ್ದರಿಂದ ಯೋಜನೆಯೇ ರದ್ದುಗೊಂಡಿತ್ತು. ಯೋಜನೆಗೆ ಪುನಃ ಮರುಜೀವ ನೀಡುವ ಕೆಲಸ ಮಾಡಿದ್ದೇನೆಂದು ತಿಳಿಸಿದರು. ಕೆಎಂಎಫ್ ಅಧ್ಯಕ್ಷ ಸ್ಥಾನಕ್ಕೆ ಮಾ.3ರಂದು ಹಾಲಿ ಅಧ್ಯಕ್ಷ ನಾಗರಾಜ್ ರಾಜೀನಾಮೆ ನೀಡಿದ್ದು, 15 ದಿನಗಳ ನಂತರ ರಾಜೀನಾಮೆ ಅಂಗೀಕಾರವಾಗಿದೆ.
ಕೆಎಂಎಫ್ ನ ವ್ಯವಸ್ಥಾಪಕ ನಿರ್ದೇಶಕರು ಮುಂದಿನ ಕ್ರಮಕೈಗೊಳ್ಳಲಿದ್ದಾರೆಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ಮುಖಂಡರಾದ ಟಿ.ಎಚ್.ಎಂ. ವಿರೂಪಾಕ್ಷಯ್ಯ, ಎಂ.ವಿ.ಅಂಜಿನಪ್ಪ, ಕೋಡಿಹಳ್ಳಿ ಭೀಮಪ್ಪ, ಸಿ.ಜಾವೀದ್, ಚಂದ್ರೇಗೌಡ, ಎಚ್ .ಬಿ.ಪರುಶುರಾಮಪ್ಪ, ಹುಲಿಕಟ್ಟಿ ಚಂದ್ರಪ್ಪ, ಓ.ರಾಮಪ್ಪ, ಸಾಸ್ವಿಹಳ್ಳಿ ಚನ್ನಬಸವನಗೌಡ ಮತ್ತಿತರರು ಸುದ್ದಿಗೋಷ್ಠಿಯಲ್ಲಿದ್ದರು.