ಬೆಂಗಳೂರು: ಕೊರೊನಾ ಲಾಕ್‌ಡೌನ್ ಹಿನ್ನೆಲೆಯಲ್ಲಿ ಎಲ್ಲಾ ಚಟುವಟಿಕೆಗಳು ಮುಂದೂಡಲ್ಪ ಟ್ಟಿದ್ದು ಜೂನ್‌ನಲ್ಲಿ ಖಾಲಿಯಾಗುವ ವಿಧಾನ ಪರಿಷತ್ ಸ್ಥಾನಗಳಿಗೆ ಯಾವಾಗ ಚುನಾವಣೆ ನಡೆಯುತ್ತದೆ ಎಂಬ ಕುತೂಹಲ ಆಕಾಂಕ್ಷಿಗಳಲ್ಲಿ ಮೂಡಿದೆ. ಜೂನ್ 2ನೇ ವಾರದಲ್ಲಿ ಖಾಲಿಯಾಗುವ 16 ವಿಧಾನ ಪರಿಷತ್ ಸ್ಥಾನ, 4 ರಾಜ್ಯಸಭೆ ಸ್ಥಾನಕ್ಕೆ ಜೂನ್ ಮಾಸಾಂತ್ಯದೊಳಗೆ ಚುನಾವಣೆ ನಡೆಸಿ ಹೊಸ ಸದಸ್ಯರು ಆಯ್ಕೆಯಾಗಬೇಕು.
ಜೂನ್‌ನಲ್ಲಿ ಖಾಲಿಯಾಗುವ ಸ್ಥಾನಗಳ ಬಗ್ಗೆ ರಾಜ್ಯ ವಿಧಾನ ಪರಿಷತ್ತಿನಿಂದ ಚುನಾವಣಾ ಆಯೋಗಕ್ಕೆ ಮಾಹಿತಿ ಕಳುಹಿಸಲಾಗಿದೆ ಎಂದು ತಿಳಿದು ಬಂದಿದೆ. ರಾಜ್ಯದಲ್ಲಿ ಲಾಕ್‌ಡೌನ್ ಜಾರಿಯಲ್ಲಿದ್ದು ಜೂನ್‌ನಲ್ಲಿ ಖಾಲಿಯಾಗುವ ಸ್ಥಾನಗಳಿಗೆ ನಿಗದಿತ ಅವಧಿಯಲ್ಲೇ ಚುನಾವಣೆ ಮಾಡುವ ಬಗ್ಗೆ ಕೇಂದ್ರ ಚುನಾವಣಾ ಆಯೋಗ ಇನ್ನೂ ನಿರ್ಧಾರ ತೆಗೆದುಕೊಂಡಿಲ್ಲ. ಮಹಾರಾಷ್ಟ್ರದಲ್ಲಿ ಇದೇ ರೀತಿ ನಡೆಯುವ ಪರಿಷತ್ ಚುನಾವಣೆಗೆ ಆಯೋಗ ಅನುಮತಿ ನೀಡಿರುವುದರಿಂದ ರಾಜ್ಯ ದಲ್ಲಿಯೂ ಚುನಾವಣೆ ನಡೆಸಬಹುದು ಎಂಬ ನಿರೀಕ್ಷೆ ಆಕಾಂಕ್ಷಿಗಳಲ್ಲಿದೆ.
ಆದರೆ, ನಿಗದಿತ ಅವಧಿಯೊಳಗೆ ಚುನಾವಣೆ ನಡೆಸ ಬೇಕೆಂದು ಒತ್ತಡ ಹೇರಲು ಬಲವಾದ ಕಾರಣ ಇಲ್ಲದಿರುವುದರಿಂದ ಆಕಾಂ ಕ್ಷಿಗಳು ಆಯೋಗ ತೀರ್ಮಾನ ಬರುವವರೆಗೂ ಕಾಯು ವಂತಾಗಿದೆ. ಅಲ್ಲದೇ ಲಾಕ್‌ಡೌನ್ ಇದ್ದು ರಾಜ್ಯ ಸರ್ಕಾರವೂ ಚುನಾವಣೆ ನಡೆಸುವ ಕಡೆಗೆ ಹೆಚ್ಚಿನ ಗಮನ ಹರಿಸಿಲ್ಲವೆಂದು ಹೇಳಲಾಗುತ್ತಿದೆ. ನಿರೀಕ್ಷೆಯಲ್ಲಿ ಆಕಾಂಕ್ಷಿಗಳು: ಟಿಕೆಟ್ ಆಕಾಂಕ್ಷಿ ಗಳು ನೇರವಾಗಿ ನಾಯಕರನ್ನು ಭೇಟಿ ಮಾಡಿ ಲಾಬಿ ನಡೆಸದಿದ್ದರೂ, ಜಾತಿ, ಪ್ರಾದೇಶಿಕತೆ, ಈಗ ಖಾಲಿಯಾಗುವ ಸಮುದಾಯದ ಕೋಟಾ ಲೆಕ್ಕಾಚಾರದಲ್ಲಿ ಅರ್ಜಿ ಸಿದಪಡಿಸಿ ಕುಳಿತು ಕೊಂಡವರೇ ಹೆಚ್ಚು ಎನ್ನಲಾಗುತ್ತಿದೆ.
ಎಲ್ಲಿ ಎಷ್ಟು ಸ್ಥಾನ?: ಖಾಲಿಯಾಗುವ 16 ಸ್ಥಾನ ಗಳಲ್ಲಿ ವಿಧಾನಸಭೆಯಿಂದ ವಿಧಾನ ಪರಿಷತ್ತಿಗೆ ನಡೆಯುವ ಚುನಾವಣೆಗೆ 7 ಸ್ಥಾನ, ರಾಜ್ಯ ಪಾಲರಿಂದ ನಾಮನಿರ್ದೇಶನಗೊಳ್ಳುವ 5 ಸ್ಥಾನ, 2 ಪದವೀಧರ ಕ್ಷೇತ್ರ, 2 ಶಿಕ್ಷಕರ ಕ್ಷೇತ್ರಗಳಿಗೆ ಚುನಾವಣೆ ನಡೆಯಬೇಕಿದೆ. ಇವುಗಳಲ್ಲಿ ವಿಧಾನಸಭೆಯಿಂದ ವಿಧಾನ ಪರಿಷತ್ತಿಗೆ ನಡೆಯುವ ಸ್ಥಾನಗಳಲ್ಲಿ ವಿಧಾನಸಭೆ ಯಲ್ಲಿ ಪಕ್ಷಗಳ ಸಂಖ್ಯಾಬಲದ ಲೆಕ್ಕಾಚಾರದಲ್ಲಿ ಆಡಳಿತ ಪಕ್ಷ ಬಿಜೆಪಿಗೆ 4 ಸ್ಥಾನ, ಕಾಂಗ್ರೆಸ್ 2 ಹಾಗೂ ಜೆಡಿಎಸ್‌ಗೆ ಸ್ಥಾನ ದೊರೆಯಲಿದೆ.
ರಾಜ್ಯ ಸಭೆ ಹೊಂದಾಣಿಕೆ?: ಇದೇ ವೇಳೆ ರಾಜ್ಯ ವಿಧಾನಸಭೆಯಿಂದ ರಾಜ್ಯ ಸಭೆಗೆ 4 ಸ್ಥಾನಗಳಿಗೆ ನಡೆಯುವುದರಿಂದ 4 ಸ್ಥಾನಗಳಲ್ಲಿ ಬಿಜೆಪಿಗೆ 2, ಕಾಂಗ್ರೆಸ್ ಹಾಗೂ ಜೆಡಿಎಸ್‌ಗೆ ತಲಾ ಒಂದು ಸ್ಥಾನ ದೊರೆಯುತ್ತವೆ. ಜೆಡಿಎಸ್ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರನ್ನು ರಾಜ್ಯ ಸಭೆಗೆ ಕಳುಹಿಸಲು ಚಿಂತನೆ ನಡೆಸಿದ್ದು ಅವರ ಗೆಲುವಿಗೆ ಅಗತ್ಯವಿರುವ ಹೆಚ್ಚಿನ ಮತಗಳನ್ನು ಕಾಂಗ್ರೆಸ್‌ನಿಂದ ಪಡೆಯಲು ಆಲೋಚಿಸಿದೆ ಎನ್ನಲಾಗುತ್ತಿದೆ. ಆದರೆ, ರಾಜ್ಯಸಭೆಗೆ ದೇವೇ ಗೌಡರಿಗೆ ಬೆಂಬಲ ನೀಡಬೇಕೆಂದರೆ ಜೆಡಿಎಸ್ ಪರಿಷತ್‌ನಲ್ಲಿ ತನ್ನ ಪಾಲಿಗೆ ದೊರೆಯುವ ಒಂದು ಸ್ಥಾನವನ್ನು ಕಾಂಗ್ರೆಸ್‌ಗೆ ಬಿಟ್ಟು ಕೊಡಬೇಕು ಎಂಬ ಬೇಡಿಕೆ ಇಡಬೇಕು ಎಂದು ಟಿಕೆಟ್ ಆಕಾಂಕ್ಷಿಗಳು ಪಕ್ಷದ ನಾಯಕರಿಗೆ ಒತ್ತಡ ಹೇರುತ್ತಿದ್ದಾರೆಂದು ತಿಳಿದು ಬಂದಿದೆ.
ಖಾಲಿಯಾಗುವ ಸ್ಥಾನ
ವಿಧಾನಸಭೆಯಿಂದ ವಿಧಾನ ಪರಿಷತ್‌ಗೆ ಆಯ್ಕೆಯಾದವರು
* ಜಯಮ್ಮ, ಎಸ್. ಎನ್.ಭೋಸರಾಜ್, ಎಚ್.ಎಂ. ರೇವಣ್ಣ, ನಜೀರ್ ಅಹ್ಮದ್, ಎಂ.ಸಿ.ವೇಣುಗೋಪಾಲ್(ಕಾಂಗ್ರೆಸ್)
* ಟಿ.ಎ.ಶರವಣ (ಜೆಡಿಎಸ್)
* ಡಿ.ಯು.ಮಲ್ಲಿಕಾರ್ಜುನ (ಪಕ್ಷೇತರ)
ನಾಮನಿರ್ದೇಶಿತರು
* ಕೆ.ಅಬ್ದುಲ್ ಜಬ್ಟಾರ್, ಜಯಮಾಲಾ, ಇಕ್ಬಾಲ್ ಅಹಮದ್ ಸರಡಗಿ, ಐವಾನ್ ಡಿಸೋಜಾ, ತಿಮ್ಮಣ್ಣ ಕಮಕನೂರು
* ಈಶಾನ್ಯ ಶಿಕ್ಷಕರ ಕ್ಷೇತ್ರದಿಂದ ಶರಣಪ್ಪ ಮಟ್ಟೂರ್ (ಕಾಂಗ್ರೆಸ್)
* ಬೆಂಗಳೂರು ಶಿಕ್ಷಕರ ಕ್ಷೇತ್ರದಿಂದ ಪುಟ್ಟಣ್ಣ (ಜೆಡಿಎಸ್)
* ಪಶ್ಚಿಮ ಪದವೀಧರ ಕ್ಷೇತ್ರದಿಂದ ಎಸ್.ವಿ.ಸಂಕನೂರ್ ( ಬಿಜೆಪಿ)
* ಆಗ್ನೇಯ ಪದವೀಧರ ಕ್ಷೇತ್ರದಿಂದ ಚೌಡರೆಡ್ಡಿ ತೂಪಲ್ಲಿ (ಜೆಡಿಎಸ್)
ಜೂನ್‌ನಲ್ಲಿ ಖಾಲಿಯಾಗುವ ವಿಧಾನ ಪರಿಷತ್ ಸ್ಥಾನಗಳಿಗೆ ಚುನಾವಣೆ ನಡೆಸುವ ಬಗ್ಗೆ ಕೇಂದ್ರ ಚುನಾವಣಾ ಆಯೋಗ ಯಾವಾಗ ತೀರ್ಮಾನ ತೆಗೆದುಕೊಳ್ಳುತ್ತದೆಯೋ ಗೊತ್ತಿಲ್ಲ. ಚುನಾವಣೆ ನಡೆಸಲು ಕನಿಷ್ಠ 4 ವಾರ ಸಮಯಾವಕಾಶಬೇಕಾಗುತ್ತದೆ.
-ಸಂಜೀವ್‌ಕುಮಾರ್, ಮುಖ್ಯ ಚುನಾವಣಾಧಿಕಾರಿ
* ಶಂಕರ ಪಾಗೋಜಿ