ನವದೆಹಲಿ:ಕಾಂಗ್ರೆಸ್, ಜೆಡಿಎಸ್ ಪಕ್ಷಗಳ ಮಂತ್ರಿಗಳಲ್ಲಿ ಸಹಮತವಿಲ್ಲ. ಕಳೆದ ಎಂಟು ತಿಂಗಳಲ್ಲಿ ಸಮ್ಮಿಶ್ರ ಸರ್ಕಾರದ ಆಡಳಿತ ಕುಸಿದಿದೆ ಎಂದು ಆರೋಪಿಸಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ, ಬಿಜೆಪಿ ಆಪರೇಷನ್ ಕಮಲ ಮಾಡುತ್ತಿಲ್ಲ. ಸಿಎಂ ಕುಮಾರಸ್ವಾಮಿಯವರೇ ಬಿಜೆಪಿ ಶಾಸಕರಿಗೆ ಆಮಿಷವೊಡ್ಡುತ್ತಿದ್ದಾರೆ ಎಂದು ದೂರಿದ್ದಾರೆ.
ನವದೆಹಲಿಯಲ್ಲಿ ಬಿಜೆಪಿ ಶಾಸಕರ ಜೊತೆ ಬೀಡು ಬಿಟ್ಟಿರುವ ಯಡಿಯೂರಪ್ಪ ಸುದ್ದಿಗಾರರ ಜತೆ ಮಾತನಾಡುತ್ತ, ಕಾಂಗ್ರೆಸ್, ಜೆಡಿಎಸ್ ಆಡಳಿತ ನಡೆಸಲು ಸಂಪೂರ್ಣವಾಗಿ ವಿಫಲವಾಗಿದೆ. ನಾವು ಆಪರೇಷನ್ ಕಮಲದ ಪ್ರಯತ್ನಕ್ಕೆ ಕೈ ಹಾಕಿಲ್ಲ ಎಂದು ಹೇಳಿದರು.
ಆಡಳಿತಾರೂಢ ಮೈತ್ರಿ ಸರ್ಕಾರದ ಮುಖ್ಯಮಂತ್ರಿ ಕುಮಾರಸ್ವಾಮಿಯವರೇ ನಮ್ಮ ಬಿಜೆಪಿ ಶಾಸಕರಿಗೆ ಮಂತ್ರಿ ಸ್ಥಾನದ ಆಮಿಷವೊಡ್ಡಿ ಆಪರೇಷನ್ ಕಮಲ ಮಾಡಲು ಹೊರಟಿದ್ದಾರೆ ಎಂದು ಆರೋಪಿಸಿದರು.
ಏತನ್ಮಧ್ಯೆ ಬಿಜೆಪಿಯ 104 ಶಾಸಕರು ದೆಹಲಿಯಲ್ಲಿಯೇ ವಾಸ್ತವ್ಯ ಹೂಡಿರುವುದು ರಾಜಕೀಯ ವಲಯದಲ್ಲಿ ಆಪರೇಶನ್ ಕಮಲದ ನಡುಕ ಹುಟ್ಟಿಸಿದೆ. ಕೆಲವು ಶಾಸಕರು ದೆಹಲಿಯಿಂದ ನೇರ ಗುರುಗ್ರಾಮ್ ರೆಸಾರ್ಟ್ ಗೆ ತೆರಳಿದ್ದಾರೆ ಎಂದು ವರದಿ ತಿಳಿಸಿದೆ.
ಬಿಜೆಪಿ ಹಗಲುಗನಸು ಕಾಣುತ್ತಿದೆ. ಪದೇ, ಪದೇ ಆಪರೇಶನ್ ಕಮಲಕ್ಕೆ ಕೈ ಹಾಕಿ ಮುಖಭಂಗ ಅನುಭವಿಸುತ್ತಿದೆ. ಮುಂಬೈಗೆ ಹೋಗಿರುವ ಮೂವರು ಶಾಸಕರು ನನ್ನ ಸಂಪರ್ಕದಲ್ಲಿ ಇದ್ದಾರೆ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ.