ಬೆಳಗಾವಿ: ಉತ್ತರ ಕರ್ನಾಟಕದಲ್ಲಿ ಕ್ಯಾನ್ಸರ್ ರೋಗಿಗಳ ಸಂಖ್ಯೆ ತೀವ್ರಗತಿಯಲ್ಲಿ ಏರಿಕೆಯಾಗುತ್ತಿದ್ದು, ಚಿಕಿತ್ಸೆಗಾಗಿ ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಕ್ಯಾನ್ಸರ್ ರೋಗಿಗಳಿಗೆ ಗುಣಮಟ್ಟದ ಚಿಕಿತ್ಸೆ ನೀಡಲು ಮುಂಬರುವ 2022 ರ ಫೆಬ್ರುವರಿಯಲ್ಲಿ ಕರ್ನಾಟಕದಲ್ಲಿಯೇ ಪ್ರಥಮವಾಗಿ ಸುಸಜ್ಜಿತ ಹಾಗೂ ಅತ್ಯಾಧುನಿಕ ವೈದ್ಯಕೀಯ ಸಲಕರಣೆಯುಳ್ಳ ಕ್ಯಾನ್ಸರ್ ಆಸ್ಪತ್ರೆಯನ್ನು ಜನಸೇವೆಗೆ ಅರ್ಪಿಸಲಾಗುವದು ಎಂದು ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷರಾದ ಡಾ. ಪ್ರಭಾಕರ ಕೋರೆ ಹೇಳಿದರು.
ಕೆಎಲ್‌ಇ ಸಂಸ್ಥೆಯ ಡಾ. ಪ್ರಭಾಕರ ಕೋರೆ ಆಸ್ಪತ್ರೆ ಹಾಗೂ ವೈದ್ಯಕೀಯ ಸಂಶೋಧನಾ ಕೇಂದ್ರದ ಆವರಣದಲ್ಲಿ ನಿರ್ಮಿಸಲಾಗುತ್ತಿರುವ ಆಸ್ಪತ್ರೆಯ ಕಟ್ಟಡದ ಕಾಮಗಾರಿ ಪ್ರಗತಿ ಹಾಗೂ ಗುಣಮಟ್ಟವನ್ನು ಪರಿಶೀಲಿಸಿ ಮಾತನಾಡಿದ ಅವರು 200 ಕೋಟಿ ರೂ.ಗಳ ವೆಚ್ಚದಲ್ಲಿ 200 ಹಾಸಿಗೆಗಳ ಆಸ್ಪತ್ರೆಯನ್ನು ನಿರ್ಮಿಸಲಾಗುತ್ತಿದ್ದು, ಕಟ್ಟಡದ ಕಾಮಗಾರಿ ಇದೇ ಡಿಸೆಂಬರ್ ವೇಳೆಗೆ ಪೂರ್ಣಗೊಳ್ಳಲಿದ್ದು, ಮುಂದಿನ ಫೆಬ್ರುವರಿ ವೇಳೆ ಸಂಪುರ್ಣ ಕಾಮಗಾರಿ ಪೂರ್ಣಗೊಳಿಸಿ ಜನಸೇವೆಗೆ ಅರ್ಪಿಸಲಾಗುವುದು ಎಂದರು.
ಈಗಾಗಲೇ ಪ್ರತಿದಿನ 40 ಕ್ಕೂ ಅಧಿಕ ಹೊರರೋಗಿಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಈ ಆಸ್ಪತ್ರೆಯಲ್ಲಿ ಕ್ಯಾನ್ಸರ್ ಸಂಬಂಧಿತ ಎಲ್ಲ ರೀತಿಯ ಚಿಕಿತ್ಸೆಯನ್ನು ನೀಡಲಾಗುತ್ತದೆ. 100ಕ್ಕೂ ಅಧಿಕ ರೋಗಿಗಳಿಗೆ ಕಿಮೋಥೆರಪಿ ನೀಡಬಹುದು. ಕ್ಯಾನ್ಸರ್ ರೋಗಿಗಳಿಗೆ ಗುಣಮಟ್ಟದ ಚಿಕಿತ್ಸೆ ನೀಡುವದರೊಂದಿಗೆ ಈ ಭಾಗದಲ್ಲಿ ಉದ್ಯೋಗ ಸೃಷ್ಟಿಯೂ ಆಗಲಿದೆ ಎಂದು ವಿವರಿಸಿದರು. ಈಗ ರೆಡಿಯೋಥೆರಪಿ ನೀಡಲು ಮೂರು ಯಂತ್ರೋಪಕರಣ ಹಾಗೂ ಶಸ್ತ್ರಚಿಕಿತ್ಸೆಗೆ ಅಗ್ಯತವಿರುವ ಅತ್ಯಾಧುನಿಕ ಕೊಠಡಿ ಸೇರಿದಂತೆ ವಿವಿಧ ಸೌಲಭ್ಯಗಳನ್ನು ಕಲ್ಪಿಸಲಾಗುತ್ತದೆ. ಪ್ರಸಕ್ತ ಪ್ರತಿ ತಿಂಗಳು ಸುಮಾರು 130ಕ್ಕೂ ಅಧಿಕ ರೋಗಿಗಳು ಹೊಸದಾಗಿ ಕಂಡುಬಂದಿದ್ದಾರೆ. ಅವರಿಗೆ ಒಂದೇ ಸೂರಿನಡಿ ಕ್ಯಾನ್ಸರ್ ಸಂಬಂಧಿತ ಎಲ್ಲ ವಿಧವಾದ ಚಿಕಿತ್ಸೆ ನೀಡಲು ಈ ಆಸ್ಪತ್ರೆಯು ಸಹಕಾರಿಯಾಗಲಿದೆ ಎಂದು ಹೇಳಿದರು.
ಸಂಸ್ಥೆಯ ನಿರ್ದೇಶಕರಾದ ಡಾ| ವಿ ಎಸ್ ಸಾಧುನವರ, ಶಂಕರಣ್ಣ ಮುನವಳ್ಳಿ, ಎಸ್ ಸಿ ಮೆಟಗುಡ್, ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕರಾದ ಡಾ| ಎಂ ವಿ ಜಾಲಿ, ಕಾಹೆರ ಕುಲಪತಿ ಡಾ. ವಿವೇಕ ಸಾವೋಜಿ, ವೈಜಾಗ್ ನ ಟಾಟಾ ಮೆಮೋರಿಯಲ್ ಕ್ಯಾನ್ಸರ್ ಆಸ್ಪತ್ರೆಯ ನಿರ್ದೇಶಕ ಡಾ| ಉಮೇಶ ಮಹಾಂತಶೆಟ್ಟಿ, ಡಾ| ಕುಮಾರ ವಿಂಚುರಕರ, ಡಾ| ಇಮಿ¤ಯಾಜ ಮುಂತಾದವರು ಉಪಸ್ಥಿತರಿದ್ದರು.