Advertisement

ಧರಣಿ, ಗದ್ದಲ ನಡುವೆ ಅಧಿವೇಶನಕ್ಕೆ ತೆರೆ

06:00 AM Dec 22, 2018 | |

ಸುವರ್ಣಸೌಧ: ರಾಷ್ಟ್ರೀಕೃತ ಬ್ಯಾಂಕ್‌ಗಳ ಸಾಲ ಮನ್ನಾ ಹಾಗೂ ಉತ್ತರ ಕರ್ನಾಟಕದ ಸಮಸ್ಯೆ-ಅಭಿವೃದ್ಧಿ ಕುರಿತಾದ ಚರ್ಚೆಗೆ ಒತ್ತಾಯಿಸಿ ಪ್ರತಿಪಕ್ಷ ಬಿಜೆಪಿ ಧರಣಿ ಮುಂದುವರಿಸಿದ್ದರಿಂದ ಶುಕ್ರವಾರವೂ ವಿಧಾನ ಮಂಡಲದ ಉಭಯ ಸದನಗಳ ಕಲಾಪ ನಡೆಯಲಿಲ್ಲ. ಇದರೊಂದಿಗೆ ಅಧಿವೇಶನವೂ ಅನಿರ್ದಿಷ್ಟಾವಧಿ ಅವಧಿಗೆ ಮುಂದೂಡಿಕೆಯಾಯಿತು. ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ರೈತರು ಪಡೆದಿರುವ ಸಾಲವನ್ನು ತಕ್ಷಣ ಮನ್ನಾ ಮಾಡಬೇಕು ಎಂದು ಒತ್ತಾಯಿಸಿ ವಿಧಾನಸಭೆಯಲ್ಲಿ ಬಿಜೆಪಿ ಶಾಸಕರು ಶುಕ್ರವಾರವೂ ಧರಣಿ ಆರಂಭಿಸಿದರು. ಇದರಿಂದಾಗಿ ಮೂರು ವಿಧೇಯಕಗಳ ಅಂಗೀಕಾರ, ಲಿಖೀತ ಮೂಲಕ ನೀಡುವ ಉತ್ತರಗಳ ಮಂಡನೆ, ಗಮನ ಸೆಳೆಯುವ 32 ಸೂಚನೆಗಳಿಗೆ ಸರ್ಕಾರದ ಉತ್ತರಸಹಿತವಾಗಿ ಕಲಾಪ ಕೇವಲ10 ನಿಮಿಷದಲ್ಲಿಮುಗಿಯಿತು.

Advertisement

ಬೆಳಗ್ಗೆ 11 ಗಂಟೆಗೆ ನಿಗದಿಯಾಗಿದ್ದ ಕಲಾಪ, 11.30ಕ್ಕೆ ಆರಂಭವಾಯಿತು. ಇದಕ್ಕೂ ಮೊದಲೇ ಬಿಜೆಪಿ ಶಾಸಕರು ಸದನದ ಬಾವಿಯೊಳಗೆ ಸೇರಿದ್ದರು. ಸಭಾಧ್ಯಕ್ಷರು ಆಗಮಿಸುತ್ತಿದ್ದಂತೆ ಬಿಜೆಪಿ ಸದಸ್ಯರು ಸದನದ ಬಾವಿಯೊಳಗಿಂದಲೇ ಸಾಲ ಮನ್ನಾಕ್ಕೆ
ಒತ್ತಾಯಿಸಿ, ಧರಣಿ ಮುಂದುವರಿಸಿದರು. “ಸರ್ಕಾರದ ಸಾಲಮನ್ನಾ ಭರವಸೆ-ಬುರುಡೆ, ಸರ್ಕಾರದ ಬಜೆಟ್‌-ಬುರುಡೆ, ಮುಖ್ಯಮಂತ್ರಿ
ಕುಮಾರಸ್ವಾಮಿ ಹೇಳಿಕೆ-ಬುರುಡೆ’ ಎಂಬ ಘೋಷಣೆಯ ಜತೆಗೆ, “ಸಾಲಮನ್ನಾ ಆಗಲೇಬೇಕು, ಆಗಲೇಬೇಕು, ರೈತ ವಿರೋಧಿ
ಸರ್ಕಾರಕ್ಕೆ ಧಿಕ್ಕಾರ- ಧಿಕ್ಕಾರ’ ಇತ್ಯಾದಿ ಘೋಷಣೆ ಕೂಗಿ ಧರಣಿ ಮುಂದುವರಿಸಿದರು. ಆಗ ಆಡಳಿತ ಪಕ್ಷದ ಶಾಸಕರು ಸರ್ಕಾರದ ಪರವಾಗಿ ಜೈಕಾರ ಕೂಗಿದರು.

ಈ ಮಧ್ಯೆ, ಸಭಾಧ್ಯಕ್ಷ ರಮೇಶ್‌ ಕುಮಾರ್‌ ಅವರು, ಪ್ರತಿಪಕ್ಷದವರ ಪ್ರತಿಭಟನೆಯ ನಡುವೆಯೇ ಎಂದಿನಂತೆ ಕಲಾಪ ಆರಂಭಿಸಿದರು. ಗದ್ದಲದ ನಡು ವೆಯೇ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಕೃಷ್ಣಬೈರೇಗೌಡ ಅವರು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಹುದ್ದೆಯನ್ನು ಲಾಭ ದಾಯಕ ವ್ಯಾಪ್ತಿಯಿಂದ ಹೊರಗಿಡುವ ಉದ್ದೇಶದ 2018ನೇ ಸಾಲಿನ ಕರ್ನಾಟಕ ವಿಧಾನಮಂಡಲ (ಅನರ್ಹತಾ ನಿವಾರಣಾ) (ತಿದ್ದುಪಡಿ) ವಿಧೇಯಕ,  2018ನೇ ಸಾಲಿನ ರೈ ತಾಂತ್ರಿಕ ವಿಶ್ವವಿದ್ಯಾಲಯ ಬೆಂಗಳೂರು (ತಿದ್ದುಪಡಿ) ವಿಧೇಯಕ, 2018ನೇ ಸಾಲಿನ ಕರ್ನಾಟಕ ಸಿವಿಲ್‌ ಸೇವೆಗಳ (ನೇಮಕಾತಿಯ
ಸಮಯದಲ್ಲಿ ಅಭ್ಯರ್ಥಿಗಳ ಆಯ್ಕೆಯ ಕಾರ್ಯವಿಧಾನ) ವಿಧೇಯಕ ಮಂಡಿಸಿದರು. ಆಡಳಿತ ಪಕ್ಷದ ಸದಸ್ಯರು ವಿಧೇಯಕಕ್ಕೆ ಒಪ್ಪಿಗೆ
ಸೂಚಿಸಿದ ಹಿನ್ನೆಲೆಯಲ್ಲಿ ಸ್ಪೀಕರ್‌ ಅವರು ಮೂರು ವಿಧೇಯಕವನ್ನು ಅಂಗೀಕರಿಸಿದರು.

2018ನೇ ಸಾಲಿನ ರಾಜೀವ್‌ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ (ತಿದ್ದುಪಡಿ) ವಿಧೇಯಕ ಮಂಡನೆಯಾಗಿದ್ದರೂ, ಅಂಗೀಕಾರವಾಗಿಲ್ಲ. ಸಚಿವರು ವಿಧೇಯಕ ಮಂಡಿಸುತ್ತಿದ್ದರೂ ಬಿಜೆಪಿ ಶಾಸಕರು ಸದನದ ಬಾವಿಯೊಳಗೆ ಸರ್ಕಾರದ ವಿರುದಟಛಿ
ಘೋಷಣೆ ಕೂಗಿ ಪ್ರತಿಭಟನೆ ನಡೆಸುತ್ತಲೇ ಇದ್ದರು. ವಿಧೇಯಕ ಮಂಡನೆಯ ನಂತರ ಸ್ಪೀಕರ್‌ ಮಾತನಾಡಿ, ಸದನ ನಡೆಸಲು ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿ, ಸದನವನ್ನು ಅನಿರ್ದಿಷ್ಟಾವಧಿಗೆ ಮುಂದೂಡಿದರು. ಸದನದಲ್ಲಿ ಇಷ್ಟೆಲ್ಲ ನಡೆಯುತ್ತಿದ್ದ ವೇಳೆ
ಮುಖ್ಯಮಂತ್ರಿ ಕುಮಾರಸ್ವಾಮಿ ಹಾಜರಿರಲಿಲ್ಲ. ಸಚಿವರಾದ ಕೃಷ್ಣಬೈರೇಗೌಡ, ಸಿ.ಎಸ್‌.ಪುಟ್ಟರಾಜು ಹೊರತುಪಡಿಸಿ ಬೇರ್ಯಾವ ಸಚಿವರು ಸದನದಲ್ಲಿ ಇರಲಿಲ್ಲ. ಇಷ್ಟು ಮಾತ್ರವಲ್ಲದೆ ಮೈತ್ರಿ ಸರ್ಕಾರದ 120 ಶಾಸಕರ ಪೈಕಿ 43 ಶಾಸಕರಷ್ಟೇ ಕಲಾಪದ ವೇಳೆ
ಉಪಸ್ಥಿತರಿದ್ದರು. ಪ್ರತಿಪಕ್ಷ ನಾಯಕ ಬಿ.ಎಸ್‌. ಯಡಿಯೂರಪ್ಪ, ಉಪನಾಯಕ ಗೋವಿಂದ ಕಾರಜೋಳ, ಮಾಜಿ ಮುಖ್ಯಮಂತ್ರಿ ಜಗದೀಶ್‌ ಶೆಟ್ಟರ್‌, ಮಾಜಿ ಉಪಮುಖ್ಯಮಂತ್ರಿಗಳಾದ ಕೆ.ಎಸ್‌. ಈಶ್ವರಪ್ಪ, ಆರ್‌.ಅಶೋಕ್‌ ಸೇರಿದಂತೆ 80 ಶಾಸಕರು
ಉಪಸ್ಥಿತರಿದ್ದರು. ಸ್ಪೀಕರ್‌ ಸದನವನ್ನು ಅನಿರ್ದಿಷ್ಟಾವಧಿಗೆ ಮುಂದೂಡುವವರೆಗೂ ಪ್ರತಿಭಟನೆ ಮುಂದುವರಿಸಿದರು.

ಪರಿಷತ್‌ನಲ್ಲೂ ಗದ್ದಲ
ವಿಧಾನ ಪರಿಷತ್‌ನಲ್ಲೂ ಬೆಳಗ್ಗೆ ಕಲಾಪ ಆರಂಭವಾಗುತ್ತಿದ್ದಂತೆ ಬಿಜೆಪಿ ಸದಸ್ಯರು ಉತ್ತರ ಕರ್ನಾಟಕ ಭಾಗದ ಸಮಸ್ಯೆ-ಅಭಿವೃದ್ಧಿ ಬಗ್ಗೆ ಚರ್ಚಿಸಲು ಅವಕಾಶ ನೀಡುವಂತೆ ಪಟ್ಟು ಹಿಡಿದು, ಧರಣಿ ಮುಂದುವರಿಸಿದರು. ಸಭಾಪತಿ ಪ್ರತಾಪ್‌ಚಂದ್ರ ಶೆಟ್ಟಿ ಅವರು ಧರಣಿಯನ್ನು ವಾಪಸ್‌ ಪಡೆಯಲು ಮನವಿ ಮಾಡಿದರೂ ಪ್ರಯೋಜನವಾಗಲಿಲ್ಲ. ಹೀಗಾಗಿ, ಸದನವನ್ನು ಅರ್ಧಗಂಟೆ ಮುಂದೂಡಲಾುತು. ಮತ್ತೆ ಸೇರಿದಾಗಲೂ ಪ್ರತಿಭಟನೆ ಮುಂದುವರಿಸಿದ್ದರಿಂದ ಗದ್ದಲದ ನಡುವೆಯೇ ಸಭಾನಾಯಕಿ ಡಾ.ಜಯಮಾಲ ಪ್ರಶ್ನೋತ್ತರಗಳ ಪಟ್ಟಿ ಮಂಡಿಸಿದರು. ಮುಖ್ಯಮಂತ್ರಿ ಕುಮಾರಸ್ವಾಮಿ ಹಾಗೂ ಸಚಿವ ಕೃಷ್ಣಭೈರೇಗೌಡ
ಅವರು ವಿಧಾನಸಭೆಯಲ್ಲಿ ಅಂಗೀಕಾರವಾದ ವಿಧೇಯಕಗಳನ್ನು ಮಂಡಿಸಿ, ಅಂಗೀಕಾರ ಪಡೆದರು. ನಂತರ ಸದನವನ್ನು
ಅನಿರ್ದಿಷ್ಟಾವಧಿಗೆ ಮುಂದೂಡಲಾಯಿತು.

Advertisement
Advertisement

Udayavani is now on Telegram. Click here to join our channel and stay updated with the latest news.

Next