Advertisement

ಕಣ್‌ ತೆರೆದು ನೋಡಿ

09:26 AM Mar 29, 2019 | mahesh |

ಭೂಮಿ ಮೇಲಿನ ಜೀವಜಾಲದಲ್ಲಿ ನಮಗೆ ಗೊತ್ತಿಲ್ಲದ ಸಂಗತಿಗಳು ಹಲವಾರು! ಅಷ್ಟೇ ಯಾಕೆ… ನಮ್ಮ ಸುತ್ತಮುತ್ತಲೇ ಇರುವ, ನಿತ್ಯವೂ ಕಣ್ಣಿಗೆ ಕಾಣುವ ಜೀವಿಗಳು, ಹುಳ ಹುಪ್ಪಟೆಗಳನ್ನೇ ನಾವು ಸರಿಯಾಗಿ ತಿಳಿದುಕೊಂಡಿರುವುದಿಲ್ಲ. ಅಂಥ ಸೋಜಿಗದ ಜಗತ್ತಿನೊಳಗೊಂದು ಸುತ್ತು…

Advertisement

ವನ್ಯಜೀವಿ ಜಗತ್ತಿನ ಬಾಝಿಗರ್‌!
ಹಾಲಿವುಡ್‌ ನಟ ಶಾರುಖ್‌ ಖಾನ್‌ನನ್ನು ಕೀರ್ತಿ ಶಿಖರದ ಉತ್ತುಂಗಕ್ಕೆ ಏರಿಸಿದ್ದು ಸಿನಿಮಾಗಳಲ್ಲಿ ಆತ ನಿರ್ವಹಿಸುತ್ತಿದ್ದ ಲವರ್‌ ಬಾಯ್‌ ಪಾತ್ರಗಳು. ಆತನನ್ನು ಪ್ರೀತಿಯ ರಾಯಭಾರಿ ಎಂದರೂ ತಪ್ಪಿಲ್ಲ. ಒಂದು ಕಾಲದಲ್ಲಿ, ಅಷ್ಟೇ ಯಾಕೆ ಈಗಲೂ “ಬಾಝಿಗರ್‌’ ಶಾರುಖ್‌ನಂತೆ ಪ್ರೀತಿಸುವ ಪತಿ ಸಿಗಬೇಕೆಂದು ಅಪೇಕ್ಸಿಸುವ ಹುಡುಗಿಯರಿದ್ದಾರೆ. ಬಾಝಿಗರ್‌ ಸಿನಿಮಾದಲ್ಲಿ “ಸೋತು ಗೆಲ್ಲುವವನೇ ನಿಜವಾದ ವಿಜೇತ’ ಎಂಬ ಅರ್ಥ ಬರುವ ಸಂಭಾಷಣೆಗೆ ಅನೇಕರು ಮಾರುಹೋಗಿದ್ದರು. ಅಲ್ಲಿ ಆತ ಪ್ರಿಯತಮೆಗೋಸ್ಕರ ಕಾರ್‌ ರೇಸ್‌ನಲ್ಲಿ ಸೋಲುತ್ತಾನೆ. ಇದೇ ಪ್ರವೃತ್ತಿ ವನ್ಯಜೀವಿ ಜಗತ್ತಿನಲ್ಲೂ ಇದೆ ಎಂದರೆ ಅಚ್ಚರಿ ಪಡಬೇಡಿ. ವನ್ಯಜೀವಿ ಜಗತ್ತಿನ ಈ ಬಾಝಿಗರ್‌ ಯಾರು ಗೊತ್ತಾ? ನಾಯಿ. ಮನುಷ್ಯರ ಸಾಂಗತ್ಯದಲ್ಲಿರುವ ನಾಯಿ ಈ ವರ್ತನೆ ತೋರಿದ್ದರಲ್ಲಿ ಅಚ್ಚರಿಯಿಲ್ಲ. ಮನುಷ್ಯ ನಾಯಿಯನ್ನು ನೋಡಿ ಕಲಿಯಬೇಕಾದ ವಿಚಾರಗಳು ತುಂಬಾ ಇರುವಂತೆಯೇ, ನಾಯಿಯೂ ಮನುಷ್ಯರನ್ನು ನೋಡಿ ಅನೇಕ ವಿಚಾರಗಳನ್ನು ಕಲಿಯುತ್ತದೆ ಎನ್ನಬಹುದು. ಗಂಡು ನಾಯಿ ಹೆಣ್ಣು ನಾಯಿಯೊಡನೆ ಆಟವಾಡುವಾಗ ತಾನು ಗೆಲ್ಲುವುದು ಶತಸಿದ್ಧ ಎನ್ನುವಂಥ ಪರಿಸ್ಥಿತಿಯಲ್ಲೂ ಸೋತುಬಿಡುತ್ತದೆ. ಹೆಣ್ಣು ನಾಯಿಗೆ ಸೋತು ಶರಣಾಗುತ್ತದೆ. ಇದು ಪ್ರೀತಿಯ ದ್ಯೋತಕವೇ ಸರಿ. ನಾಯಿಗಳೂ ಶಾರುಖ್‌ನ ಸಿನಿಮಾ ನೋಡಿದ್ದವಾ ಗೊತ್ತಿಲ್ಲ!

ಏನನ್ನೂ ಸುಲಭಕ್ಕೆ ಬಿಟ್ಟುಕೊಡದ ಗಿಣಿ
ಎಲ್ಲಾ ಪ್ರಾಪಂಚಿಕ ಬಂಧನಗಳನ್ನು ಬಿಟ್ಟವರು ಸನ್ಯಾಸಿಯಾಗುತ್ತಾರೆ. ಬಿಡದವರು ಉಡ ಆಗಬಹುದು. ಏಕೆಂದರೆ ಉಡದ ಹಿಡಿತ ಅಂದರೆ ಹಿಡಿತ. ಒಮ್ಮೆ ಗಟ್ಟಿಯಾಗಿ ಏನನ್ನೇ ಹಿಡಿದುಕೊಂಡರೂ ಬಿಡುವುದಿಲ್ಲ. ಹಿಂದೆ ರಾಜಮಹಾರಾಜರ ಕಾಲದಲ್ಲೆಲ್ಲಾ ಉಡವನ್ನು ಕೋಟೆ ಹತ್ತಲು ಬಳಸುತ್ತಿದ್ದರು ಎಂಬ ಪ್ರತೀತಿಯೂ ಇದೆ. ಅದೇ ರೀತಿ ಪಕ್ಷಿಗಳಲ್ಲೂ ಏನನ್ನೇ ಹಿಡಿದುಕೊಂಡರೂ ಅಷ್ಟು ಸುಲಭವಾಗಿ ಬಿಡದ ಪಕ್ಷಿಯೊಂದಿದೆ. ಅದು ಗಿಳಿ. ಅದರ ಬಿಗಿಯಾದ ಹಿಡಿತಕ್ಕೆ ಪ್ರಕೃತಿಯೂ ಸಾಥ್‌ ನೀಡಿದೆ. ಅದು ಹೇಗೆಂದರೆ ಅದರ ಕಾಲಿನ ರಚನೆ. ಎಲ್ಲಾ ಪಕ್ಷಿಗಳಂತೆ ಅವುಗಳಿಗೂ ಕಾಲಲ್ಲಿ 4 ಬೆರಳುಗಳಿವೆ. ಒಂದು ವ್ಯತ್ಯಾಸವೆಂದರೆ ಮಿಕ್ಕ ಪಕ್ಷಿಗಳಲ್ಲಾದರೆ ನಾಲ್ಕರಲ್ಲಿ ಮೂರು ಬೆರಳು ಮುಂದಕ್ಕೆ ಚಾಚಿದ್ದು, ಒಂದು ಬೆರಳು ಕೊಂಚ ಹಿಂದಕ್ಕೆ ಚಾಚಿರುತ್ತದೆ. ಕೋಳಿಯನ್ನು ನೆನೆಸಿಕೊಂಡರೆ ಈ ವಿಚಾರ ಚೆನ್ನಾಗಿ ಮನದಟ್ಟಾಗುತ್ತದೆ. ಆದರೆ ಗಿಳಿಗಳಲ್ಲಿ ನಾಲ್ಕರಲ್ಲಿ ಎರಡು ಮುಂದಕ್ಕೆ, ಎರಡು ಬೆರಳು ಹಿಂದಕ್ಕೆ ಚಾಚಿಕೊಂಡಿರುತ್ತದೆ. ಈ ಕಾರಣಕ್ಕೆ ಯಾವುದೇ ವಸ್ತುವನ್ನು ಗಿಳಿಗಳು ಬಿಗಿಯಾಗಿ ಹಿಡಿದುಕೊಳ್ಳಬಹುದು.

ಹರ್ಷವರ್ಧನ್‌ ಸುಳ್ಯ

Advertisement

Udayavani is now on Telegram. Click here to join our channel and stay updated with the latest news.

Next