Advertisement

ವಿದ್ಯುನ್ಮಾನ ವ್ಯಾಪಾರ-ವಹಿವಾಟು: ಕ್ರಾಂತಿಗೆ ನಾಂದಿಯಾಗಲಿದೆಯೇ ಒಎನ್‌ಡಿಸಿ?

12:13 AM Sep 09, 2022 | Team Udayavani |

ಮೊಬೈಲ್‌ ತೆರೆದರೆ ಆಮೆಜಾನ್‌, ಫ್ಲಿಪ್‌ಕಾರ್ಟ್‌ನಂತಹ ಬೃಹತ್‌ ಇ-ಕಾಮರ್ಸ್‌ ದೈತ್ಯರು ಏನನ್ನು ಮಾರುತ್ತಿದ್ದಾರೆ ಎಂಬ ವಿವರ ಮಾತ್ರವೇ ಕಣ್ಣಿಗೆ ರಾಚುತ್ತದೆ. ನಮ್ಮೂರಿನ ರಸ್ತೆಯ ಕೊನೆಯಲ್ಲಿರುವ ಕಿರಾಣಿ ಅಂಗಡಿಯಲ್ಲಿ ಏನು ಲಭ್ಯ ಎಂಬ ವಿವರವೂ ಅಲ್ಲಿ ಲಭ್ಯವಾಗಿ, ಅವರ ವ್ಯಾಪಾರವೂ ನಮ್ಮ ಆಯ್ಕೆಯೂ ಹೆಚ್ಚುವ ಹಾಗಿದ್ದರೆ ಒಳ್ಳೆಯದಲ್ಲವೆ! ಒಎನ್‌ಡಿಸಿ ಎಂಬ ಹೊಸ ಮುಕ್ತ ಡಿಜಿಟಲ್‌ ಕಾಮರ್ಸ್‌ ಜಾಲದ ಅಳವಡಿಕೆಗೆ ದೇಶ ಸಿದ್ಧವಾಗುತ್ತಿದೆ. ಹಾಗಿದ್ದರೆ ಅದೇನು ಎಂಬ ವಿವರ ಇಲ್ಲಿದೆ.

Advertisement

ಮಣಿಪಾಲ: ದೇಶದಲ್ಲಿ ಆರು ಕೋಟಿಗೂ ಮಿಕ್ಕಿರುವ ಸಣ್ಣಪುಟ್ಟ ಅಂಗಡಿಗಳಲ್ಲಿ ಲಭ್ಯವಿರುವ ಸರಕು-ಸಾಮಗ್ರಿಗಳು ಕೂಡ ಒಂದು ಡಿಜಿಟಲ್‌ ವೇದಿಕೆಯಲ್ಲಿ ಕಾಣಲು- ಖರೀದಿಸಲು ಸಿಗುವ “ಓಪನ್‌ ನೆಟ್‌ವರ್ಕ್‌ ಫಾರ್‌ ಡಿಜಿಟಲ್‌ ಕಾಮರ್ಸ್‌’ (ಒಎನ್‌ಡಿಸಿ)ಯನ್ನು ಅಭಿವೃದ್ಧಿಪಡಿಸಿ ಅಳವಡಿಸಿ ಕೊಳ್ಳುವ ಕಾರ್ಯ ನಡೆಯುತ್ತಿದೆ ಎಂದು ವಾಣಿಜ್ಯ ಸಚಿವ ಪೀಯೂಷ್‌ ಗೋಯಲ್‌ ಹೇಳಿದ್ದಾರೆ. ಎಲ್ಲ ಇ-ಕಾಮರ್ಸ್‌ ಪ್ಲ್ರಾಟ್‌ಫಾರ್ಮ್ಗಳನ್ನು ಒಂದು ಸಮಾನ ನೆಟ್‌ವರ್ಕ್‌ಗೆ ಸಂಯೋಜಿಸುವುದರಿಂದ ಪ್ರತೀ ವಹಿವಾಟುದಾರನ ವ್ಯಾಪ್ತಿ ಹೆಚ್ಚಲಿದೆ. ಇದರಿಂದ ದೈತ್ಯ ಇ-ಕಾಮರ್ಸ್‌ ಕಂಪೆನಿಗಳ ಎದುರು ವ್ಯಾಪಾರ ವೃದ್ಧಿಸಿಕೊಳ್ಳಲು ಸಣ್ಣ ವ್ಯಾಪಾರಸ್ಥರಿಗೆ ಸಹಾಯವಾಗಲಿದೆ ಎಂದು ಗೋಯಲ್‌ ಹೇಳಿದ್ದಾರೆ.

ಒಎನ್‌ಡಿಸಿಯ ದ್ವಿತೀಯ ಹಂತದ (ಬೀಟಾ) ಪರೀಕ್ಷೆ ನಡೆಯುತ್ತಿದೆ. ಪ್ರಾಥಮಿಕವಾಗಿ ಒಂದೆರಡು ನಗರಗಳಲ್ಲಿ ಆರಂಭಿಸಲಿದ್ದೇವೆ. ಸಮರ್ಪಕ ಪರೀಕ್ಷೆ ಮತ್ತು ಪ್ರಯೋಗಗಳ ಬಳಿಕ ದೊಡ್ಡ ಪ್ರಮಾಣದ ಡೇಟಾ ನಿರ್ವಹಿಸುವಂತೆ ರೂಪಿಸಲಾಗುತ್ತದೆ. ಒಂದು ಜಿಲ್ಲೆ-ಒಂದು ಉತ್ಪನ್ನ ಯೋಜನೆಯನ್ನು ಕೂಡ ಇದರ ಜತೆಗೆ ಬೆಸೆಯಲಿದ್ದೇವೆ ಎಂದು  ಗೋಯಲ್‌ ತಿಳಿಸಿದ್ದಾರೆ.

ಒಎನ್‌ಡಿಸಿ ಎಂದರೇನು?

ಓಪನ್‌ ಪ್ರೊಟೊಕಾಲ್‌ ಆಧಾರಿತ ಮಾಹಿತಿ  ಜಾಲ. ಸ್ಥಳೀಯವಾದ ವಾಹನ ಬಾಡಿಗೆ, ಕಿರಾಣಿ, ಹೊಟೇಲ್‌, ಪ್ರಯಾಣ ಮತ್ತಿತರ ಎಲ್ಲ ಕ್ಷೇತ್ರಗಳ ಅಂಗಡಿ ಮುಂಗಟ್ಟುಗಳನ್ನು ಯಾವುದೇ ನೆಟ್‌ವರ್ಕ್‌ ಆಧಾರಿತ ಅಪ್ಲಿಕೇಶನ್‌ ಗುರುತಿಸಿ, ವ್ಯಾಪಾರ- ವಹಿವಾಟಿನಲ್ಲಿ ತೊಡಗಿಸಿಕೊಳ್ಳುವಂತೆ ಮಾಡುತ್ತದೆ. ಉದಾಹರಣೆಗೆ, ನಮ್ಮ-ನಿಮ್ಮ ಊರಿನ ಕಿರಾಣಿ ಅಂಗಡಿಯಲ್ಲಿ ನಮಗೆ ಬೇಕಾದ ಬ್ರ್ಯಾಂಡ್‌ನ‌ ಅಕ್ಕಿ ಇದೆಯೇ, ಹೊಟೇಲಿನಲ್ಲಿ ಬೆಳಗ್ಗೆ ಏನೇನು ಉಪಾಹಾರ ಲಭ್ಯವಿದೆ ಇತ್ಯಾದಿ ಎಲ್ಲ ಸ್ಥಳೀಯ ಮಾಹಿತಿಗಳು ಗ್ರಾಹಕರಿಗೆ ಲಭ್ಯವಾಗುವಂತೆ ಮಾಡುತ್ತದೆ.

Advertisement

ಯಾರಿಂದ ಹೆಜ್ಜೆ ? :

ಕೇಂದ್ರ ವಾಣಿಜ್ಯ ಮತ್ತು :

ಉದ್ದಿಮೆ ಸಚಿವಾಲಯದ ಅಧೀನದಲ್ಲಿ ಇರುವ ಆಂತರಿಕ ವ್ಯಾಪಾರ ಮತ್ತು ಉದ್ಯಮ ಪ್ರವರ್ಧನ ಇಲಾಖೆ (ಡಿಪಿಐಐಟಿ) ಈ ಉಪಕ್ರಮವನ್ನು ಕೈಗೆತ್ತಿಕೊಂಡಿದೆ.

ಒಎನ್‌ಡಿಸಿಯ ಗುಣಲಕ್ಷಣಗಳು :

  • ಇದು ಇ-ಕಾಮರ್ಸ್‌ನ ಯುಪಿಐ.
  • ಡಿಜಿಟಲ್‌ ಅಥವಾ ಎಲೆಕ್ಟ್ರಾನಿಕ್‌ ವ್ಯಾಪಾರ-ವಹಿವಾಟನ್ನು ಪ್ಲ್ರಾಟ್‌ಫಾರ್ಮ್ ಕೇಂದ್ರಿತ ಮಾದರಿಯಿಂದ ಮುಕ್ತ ನೆಟ್‌ವರ್ಕ್‌ನತ್ತ ಒಯ್ಯುತ್ತದೆ.
  • ಮಾಹಿತಿ ತಂತ್ರಜ್ಞಾನ ಕಾಯಿದೆ-2020ಗೆ ಬದ್ಧವಾಗಿರಲಿದೆ.
  • ಇನ್ನಷ್ಟೇ ರೂಪುಗೊಳ್ಳಬೇಕಿರುವ ವೈಯಕ್ತಿಕ ದತ್ತಾಂಶ ರಕ್ಷಣೆ ಮಸೂದೆಗೂ ಬದ್ಧವಾಗಿರಲಿದೆ.
  • ಒಎನ್‌ಡಿಸಿಯ ಮೂಲಕ ವ್ಯಾಪಾರಸ್ಥರು ಮತ್ತು ಗ್ರಾಹಕರು ಮುಕ್ತ ನೆಟ್‌ವರ್ಕ್‌ನಲ್ಲಿ ಡಿಜಿಟಲ್‌ ಆಗಿ ಪ್ರಸ್ತುತರಿರುವುದು, ವ್ಯಾಪಾರ ವಹಿವಾಟು ನಡೆಸುವುದು ಸಾಧ್ಯ.

ಉದ್ದೇಶ ಏನು? :

  • ಸಣ್ಣಪುಟ್ಟ ಅಂಗಡಿ ಮುಂಗಟ್ಟುಗಳಿಗೆ ಇ-ಕಾಮರ್ಸ್‌ನಲ್ಲಿ ಭಾಗಿಯಾಗುವ ಮೂಲಕ ಹೆಚ್ಚು ಮತ್ತು ಹೊಸ ಗ್ರಾಹಕರನ್ನು ತಲುಪುವ ಅವಕಾಶ.
  • ದೈತ್ಯ ಇ-ಕಾಮರ್ಸ್‌ ಕಂಪೆನಿಗಳ ಡಿಜಿಟಲ್‌ ಏಕಸ್ವಾಮ್ಯಕ್ಕೆ ಅಂಕುಶ ಹಾಕುವುದು.
  • ಕಿರು, ಸಣ್ಣ ಮತ್ತು ಮಧ್ಯಮ ವ್ಯಾಪಾರಸ್ಥರನ್ನು ಬೆಂಬಲಿಸುವುದು.
  • ಡಿಜಿಟಲ್‌ ಅಥವಾ ಎಲೆಕ್ಟ್ರಾನಿಕ್‌ ವ್ಯಾಪಾರ ವಹಿವಾಟನ್ನು ಪ್ರಜಾಸತ್ತಾತ್ಮಕಗೊಳಿಸುವುದು.

ಸಣ್ಣ ಅಂಗಡಿಗಳು,  ವ್ಯಾಪಾರಸ್ಥರ ಭವಿಷ್ಯ: ಗೋಯಲ್‌ ಹೇಳಿದ್ದೇನು? :

  • ದೇಶದಲ್ಲಿ ಸಣ್ಣ ಅಂಗಡಿಗಳ ಅಂದಾಜು ಸಂಖ್ಯೆ: 6 ಕೋಟಿ
  • ಇಲ್ಲಿರುವ ಉದ್ಯೋಗಿಗಳು: 10 ಕೋಟಿದೈತ್ಯ ಇ-ಕಾಮರ್ಸ್‌ ಪ್ಲ್ರಾಟ್‌ಫಾರ್ಮ್ಗಳು ತಮ್ಮ ಆಯ್ಕೆಯ ಉತ್ಪನ್ನಗಳನ್ನು ಪ್ರಚುರ ಪಡಿಸಲು ಬಿಗ್‌ ಡೇಟಾ, ತಮ್ಮದೇ ತಂತ್ರಗಾರಿಕೆ ಬಳಸುತ್ತವೆ.
  • ಸಣ್ಣ ಅಂಗಡಿಗಳ ವ್ಯಾಪ್ತಿ ಸಣ್ಣದು, ಸ್ಥಳೀಯವಾದುದು.
  • ಒಎನ್‌ಡಿಸಿಯ ಮೂಲಕ ಸಣ್ಣ ವ್ಯಾಪಾರಸ್ಥರ ವ್ಯಾಪ್ತಿ, ಗ್ರಾಹಕರಿಗೆ ಆಯ್ಕೆ ಎರಡೂ ಹೆಚ್ಚಲಿವೆ. ಒಎನ್‌ಡಿಸಿ ದೇಶದಲ್ಲಿ ಒಂದು ವಿದ್ಯುನ್ಮಾನ ವ್ಯಾಪಾರೋದ್ಯಮ  ಕ್ರಾಂತಿಗೆ ನಾಂದಿ ಹಾಡಲಿದೆ.

ಒಂದು ಅಥವಾ ಎರಡು ಸಂಸ್ಥೆಗಳು ಶತಕೋಟಿ ಡಾಲರ್‌ ಕಂಪೆನಿಗಳಾಗಿ ಬೆಳೆಯುವುದಕ್ಕಿಂತ ಒಎನ್‌ಡಿಸಿ 500 ಸಣ್ಣಪುಟ್ಟ ವ್ಯಾಪಾರಸ್ಥರಿಗೆ ಯೂನಿಕಾರ್ನ್ಗಳಾಗಲು ಅವಕಾಶ ಒದಗಿಸಲಿದೆ.ಪೀಯೂಷ್‌ ಗೋಯಲ್‌, ವಾಣಿಜ್ಯ ಸಚಿವ

Advertisement

Udayavani is now on Telegram. Click here to join our channel and stay updated with the latest news.

Next