ಕೆಂಗೇರಿ: ಮನುಷ್ಯನ ಸರ್ವಾಂಗೀಣ ಬೆಳವಣಿಗೆಗೆ ಮೂಲಧಾರವಾಗಿರುವ ವಿದ್ಯೆಯನ್ನು ಪ್ರತಿಯೊಬ್ಬರು ಪಡೆಯುವ ಮೂಲಕ ಸಮಾಜದ ಪ್ರಗತಿಗೆ ಕೈಜೋಡಿಸಬೇಕೆಂದು ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ಡಾ. ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ತಿಳಿಸಿದರು.
ರಾಜ್ಯ ಒಕ್ಕಲಿಗರ ಸಂಘದ ಕೆಂಪೇಗೌಡ ಇನ್ಸ್‌ಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ಸ್ಟಡೀಸ್ ಅಂಡ್ ರಿಸರ್ಚ್, ಶ್ರೀಗಂಧದಕಾವಲು ವಿದ್ಯಾಸಂಸ್ಥೆಗಳು ಹಾಗೂ ಹಳೆಯ ವಿದ್ಯಾರ್ಥಿಗಳ ಸಹಕಾರದೊಂದಿಗೆ ಕಾಲೇಜು ಆವರಣದಲ್ಲಿ ಆಯೋಜಿಸಿಲಾಗಿದ್ದ ಬೆಳ್ಳಿ ಹಬ್ಬ ಮಹೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿದರು.
ಮನುಷ್ಯನ ಉನ್ನತಿಗೆ ಶಿಕ್ಷಣ ಸರ್ವತ್ರ ಸಾಧನವಾಗಿದ್ದು, ಏನೇ ತೊಂದರೆ ತಾಪತ್ರಯಗಳಿದ್ದರೂ ಶಿಕ್ಷಣವನ್ನು ಮೊಟುಕುಗೊಳಿಸದೆ ಮುಂದುವರೆಸಬೇಕು. ಮಾಜಿ ಸಚಿವ ಎಂ.ವಿ ಕೃಷ್ಣಪ್ಪ ಉದಾರ ಮನಸ್ಸಿನಿಂದ ಸಂಸ್ಥೆಗೆ 25 ಎಕರೆ ಜಮೀನನ್ನು ನೀಡುವ ಮೂಲಕ ಆದರ್ಶ ರಾಜಕಾರಣಕ್ಕೆ ಮುನ್ನುಡಿ ಬರೆದಿದ್ದಾರೆ. ಕೃಷ್ಣಪ್ಪನವರು ಶೈಕ್ಷಣಿಕ ಕ್ಷೇತ್ರ, ಹೈನುಗಾರಿಕೆ, ರೇಷ್ಮೆ ಉತ್ಪಾದನೆಗೆ ಅಪಾರ ಪ್ರಮಾಣದ ಕೊಡುಗೆ ನೀಡಿ ರೈತರ ಆರ್ಥಿಕ ಸದೃಢತೆಗೆ, ಜೀವನಮಟ್ಟ ಸುಧಾರಣೆಗೆ ಕಾರಣೀಭೂತರಾಗಿದ್ದಾರೆ ಎಂದರು.
ಶಾಸಕ ಮುನಿರತ್ನ ಮಾತನಾಡಿ, ಶಿಕ್ಷಣ ಕ್ಷೇತ್ರದಲ್ಲಿ ತನ್ನದೆ ಆದ ಛಾಪು ಮೂಡಿಸಿ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಶಿಕ್ಷಣ ದೊರಕಿಸಿಕೊಡುವ ದಿಕ್ಕಿನತ್ತ ಧೃಡಹೆಜ್ಜೆ ಇಟ್ಟಿರುವುದು ಶ್ಲಾಘನೀಯ ಕಾರ್ಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಶಿಕ್ಷಣ ಸಂಸ್ಥೆ ಅಭಿವೃದ್ಧಿಗೆ ಅಗತ್ಯವಿರುವ ಮೂಲಸೌಕರ್ಯ ಒದಗಿಸಲು ಬದ್ಧವಿರುವುದಾಗಿ ಭರವಸೆ ನೀಡಿದರು.
ಇದೇ ವೇಳೆ ಮಾಜಿ ಸಚಿವ ಎಂ.ವಿ ಕೃಷ್ಣಪ್ಪನವರ ಧರ್ಮಪತ್ನಿ ಪ್ರಮೀಳಾರವರನ್ನು ಗೌರವಿಸಲಾಯಿತು. ಹಾಗೂ ಸಾಧನೆಗೈದ ಕಾಲೇಜಿನ ಹಳೆಯ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ರಾಜ್ಯ ಒಕ್ಕಲಿಗರ ಸಂಘದ ಅಧ್ಯಕ್ಷ ಡಿ.ಎನ್. ಬೆಟ್ಟೇಗೌಡ, ಪ್ರಧಾನ ಕಾರ್ಯದರ್ಶಿ ಪೊ›.ಎಂ. ನಾಗರಾಜು, ಪಾಲಿಕೆ ಸದಸ್ಯ ಮೋಹನ್‌ಕುಮಾರ್, ಒಕ್ಕಲಿಗರ ಸಂಘದ ನಿರ್ದೇಶಕ ಪೂಜಾರಿಪಾಳ್ಯದ ಕೃಷ್ಣಮೂರ್ತಿ, ವಾರ್ಡ್ ಅಧ್ಯಕ್ಷ ಎಂ. ಮಂಜುನಾಥ್ ಮತ್ತಿತರರಿದ್ದರು.