ಹೊಸದಿಲ್ಲಿ: ಪಾಶ್ಚಾತ್ಯ ದೇಶಗಳಲ್ಲಿ ಲಸಿಕೆ ವಿತರಣೆಗೆ ಸಿದ್ಧತೆ ನಡೆಯುತ್ತಿರುವಂತೆಯೇ, ಭಾರತದಲ್ಲೂ ಲಸಿಕೆಯನ್ನು ಹೇಗೆ ವಿತರಣೆ ಮಾಡಬೇಕು ಎಂಬ ಬಗ್ಗೆ ತಯಾರಿ ಶುರುವಾಗಿದೆ.
ಪ್ರತೀ ದಿನ ಕ್ಯಾಂಪ್‌ವೊಂದರಲ್ಲಿ 100 ಮಂದಿಗೆ ಲಸಿಕೆ ನೀಡುವುದು, ಲಾಜಿಸ್ಟಿಕ್ಸ್‌ನ ಲಭ್ಯತೆ ಇದ್ದರೆ 200 ಮಂದಿಗೂ ಲಸಿಕೆ ನೀಡುವುದು ಸೇರಿದಂತೆ ಹಲವಾರು ಅಂಶಗಳನ್ನು ಸೇರಿಸಲಾಗಿದೆ. ಈ ಸಂಬಂಧ ಕೇಂದ್ರ ಆರೋಗ್ಯ ಇಲಾಖೆ 112 ಪುಟಗಳ ಮಾರ್ಗಸೂಚಿ ಬಿಡುಗಡೆ ಮಾಡಿದೆ.
ಒಂದು ವೇಳೆ ಅಡ್ಡಪರಿಣಾಮವೇನಾದರೂ ಕಂಡು ಬಂದಲ್ಲಿ ಅಂಥವರನ್ನು ನಿಗದಿತ ಆಸ್ಪತ್ರೆಗೆ ಕಳುಹಿಸುವುದು, ಲಸಿಕೆ ಕೇಂದ್ರಗಳನ್ನು ಶಾಲೆ, ಸಮುದಾಯ ಕೇಂದ್ರಗಳು ಮತ್ತು ಟೆಂಟ್‌ಗಳಲ್ಲಿ ವ್ಯವಸ್ಥೆ ಮಾಡಿಸುವುದು ಎಂಬುದನ್ನೂ ಸೂಚಿಸಲಾಗಿದೆ.
ತುರ್ತು ಬಳಕೆಗೆ ಅನುಮತಿ: ಬ್ರಿಟನ್, ಕೆನಡಾ ಅನಂತರ ಈಗ ಅಮೆರಿಕದಲ್ಲೂ ಫೈಜರ್ ಲಸಿಕೆಯ ತುರ್ತು ಬಳಕೆಗಾಗಿ ಅನುಮತಿ ನೀಡಲಾಗಿದೆ. ಇಲ್ಲಿನ ಔಷಧ ನಿಯಂತ್ರಣ ಪ್ರಾಧಿಕಾರ ಒಪ್ಪಿಗೆ ನೀಡಿದ್ದು, ಸದ್ಯದಲ್ಲೇ ಲಸಿಕೆ ನೀಡಲು ಆರಂಭಿಸಲಾಗುತ್ತದೆ. ಈ ಲಸಿಕೆಯನ್ನು 16 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಮಾತ್ರ ನೀಡಲಾಗುತ್ತದೆ ಎಂದು ತಿಳಿಸಿದೆ. ಅತ್ತ ಅಮೆರಿಕದಲ್ಲೂ ಫೈಜರ್‌ಗೆ ಒಪ್ಪಿಗೆ ನೀಡಿರುವುದರಿಂದ ಭಾರತದಲ್ಲಿಯೂ ಶೀಘ್ರದಲ್ಲೇ ಬಳಕೆಗೆ ಅನುಮತಿ ಸಿಗುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ. ಇನ್ನು ಲಸಿಕೆ ಮೇಲೆ ಭರವಸೆ ಇಡುವಂತೆ ನಿಯೋಜಿತ ಅಧ್ಯಕ್ಷ ಜೋ ಬೈಡೆನ್ ಜನರಿಗೆ ಕರೆ ಕೊಟ್ಟಿದ್ದಾರೆ.
ಅಪಾಯಕಾರಿ ಫಂಗಸ್ ಪತ್ತೆ: ಕೊರೊನಾ ವಿರುದ್ಧ ಸೆಣಸುತ್ತಿರುವ ರೋಗಿಗಳು ಹಾಗೂ ಇತ್ತೀಚೆಗಷ್ಟೇ ಚೇತರಿಸಿಕೊಂಡಿರುವ ಕೆಲವರಲ್ಲಿ ಅಪರೂಪದ ಮತ್ತು ಅಪಾಯಕಾರಿ ಫಂಗಸ್ ಸೋಂಕನ್ನು ಪತ್ತೆಹಚ್ಚಿದ್ದಾರೆ. ಮ್ಯೂಕೋಮೈಕೋಸಿಸ್ ಎನ್ನುವ ಫಂಗಸ್‌ನಿಂದ ಸಂಭವಿಸುವ ಸೋಂಕು ಕೆಲವು ಕೋವಿಡ್ ರೋಗಿಗಳಲ್ಲಿ ಪತ್ತೆಯಾಗಿದೆ. ಈ ಸೋಂಕು ಅಪಾಯಕಾರಿಯಾ ಗಿದೆ. ಅಹಮದಾಬಾದ್ ಮೂಲದ ಡಾ| ಪಾರ್ತ್ ರಾಣಾ ಅವರು ಕೆಲವು ದಿನಗಳಲ್ಲಿ 5 ರೋಗಿಗಳಲ್ಲಿ ಈ ಸೋಂಕನ್ನು ಪತ್ತೆಹ ಚ್ಚಿದ್ದು, ಅದರಲ್ಲಿ ಇಬ್ಬರು ಮೃತಪಟ್ಟರೆ, ಇನ್ನಿಬ್ಬರು ತಮ್ಮ ದೃಷ್ಟಿ ಕಳೆದುಕೊಂಡಿದ್ದಾರೆ.
ಮುಂದಿನ ತಿಂಗಳಿಂದಲೇ ಲಸಿಕೆ?
ಭಾರತದಲ್ಲಿ ಕೋವ್ಯಾಕ್ಸಿನ್ ಲಸಿಕೆ ರೂಪಿಸುತ್ತಿರುವ ಪುಣೆಯ ಸೆರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ ಈ ತಿಂಗಳ ಅಂತ್ಯದಲ್ಲೇ ಲಸಿಕೆಗೆ ಅನುಮತಿ ಸಿಗುವ ಬಗ್ಗೆ ಭರವಸೆ ವ್ಯಕ್ತಪಡಿಸಿದೆ. ಒಂದು ವೇಳೆ ಡಿಸೆಂಬರ್ ಅಂತ್ಯಕ್ಕೇನಾದರೂ ಒಪ್ಪಿಗೆ ಸಿಕ್ಕರೆ, ಜನವರಿಯಿಂದಲೇ ಲಸಿಕೆ ನೀಡಲು ಆರಂಭಿಸಬಹುದಾಗಿದೆ. ಮುಂದಿನ ಸೆಪ್ಟಂಬರ್-ಅಕ್ಟೋಬರ್ ವೇಳೆಗೆ ಜನಜೀವನ ಸಾಮಾನ್ಯ ಸ್ಥಿತಿಗೆ ಬರಲಿದೆ ಎಂದು ಸಂಸ್ಥೆಯ ಸಿಇಒ ಅಡಾರ್ ಪೂನಾವಾಲಾ ಹೇಳಿದ್ದಾರೆ.
5 ಮಂದಿ ತಂಡ
ಲಸಿಕೆ ವಿತರಣೆಗಾಗಿ 5 ಮಂದಿಯ ತಂಡವನ್ನು ರಚಿಸುವಂತೆಯೂ ಸೂಚಿಸಲಾಗಿದೆ.
ವೈದ್ಯರು, ನರ್ಸ್, ಫಾರ್ಮಾಸಿಸ್ಟ್ ಅಥವಾ ಇಂಜಕ್ಷನ್ ಕೊಡಲು ಬರುವಂಥ ಆರೋಗ್ಯ ಕಾರ್ಯಕರ್ತರ ನೇತೃತ್ವ.
2ನೇ ಅಧಿಕಾರಿ ಭದ್ರತಾ ಸಿಬಂದಿ. ನೋಂದಣಿ ಮತ್ತು ಪ್ರವೇಶ ದ್ವಾರದ ಉಸ್ತುವಾರಿ ಹೊಣೆ ಇವರದ್ದು.
3ನೇ ಅಧಿಕಾರಿ ದಾಖಲೆಗಳ ಪರಿಶೀಲನೆ ಮಾಡುವವರು.
4 ಮತ್ತು 5.: ಗುಂಪಿನ ನಿರ್ವಹಣೆ ಮತ್ತು ಸಂಪರ್ಕ.