Advertisement

ನಾಮಪತ್ರ ಸಲ್ಲಿಕೆಗೆ 6 ದಿನ ಮಾತ್ರ ಬಾಕಿ

09:16 PM Nov 11, 2019 | Team Udayavani |

ಮೈಸೂರು: ಶಾಸಕರ ಅನರ್ಹತೆಯಿಂದ ತೆರವಾಗಿರುವ ಹುಣಸೂರು ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಗೆ ಮರು ಚಾಲನೆ ದೊರೆತಿದ್ದು, ಸೋಮವಾರ (ನ.11)ದಿಂದ ನೀತಿ ಸಂಹಿತೆ ಮರು ಜಾರಿಯೊಂದಿಗೆ ನಾಮಪತ್ರ ಸಲ್ಲಿಸುವ ಪ್ರಕ್ರಿಯೆ ಆರಂಭವಾಗಿದೆ. ಕಳೆದ ಸೆ.23ರಂದೇ ಚುನಾವಣಾ ಅಧಿಸೂಚನೆ ಹೊರಡಿಸಲಾಗಿದ್ದು, ನ.11ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಸಲ್ಲಿಸಲು ನ.18 ಕೊನೆಯ ದಿನ. ಇನ್ನು 6 ದಿನ ಮಾತ್ರ ಕಾಲಾವಕಾಶವಿದೆ. ನ.19ರಂದು ನಾಮಪತ್ರ ಪರಿಶೀಲನೆ, ನ.21ರಂದು ಉಮೇದುವಾರಿಕೆ ಹಿಂತೆಗೆದುಕೊಳ್ಳಲು ಕೊನೆಯ ದಿನ. ಡಿ.5ರಂದು ಮತದಾನ, ಡಿ.9ರಂದು ಮತ ಎಣಿಕೆ ನಡೆಯಲಿದೆ ಎಂದು ಜಿಲ್ಲಾಚುನಾವಣಾಧಿಕಾರಿಗಳಾದ ಜಿಲ್ಲಾಧಿಕಾರಿ ಅಭಿರಾಮ್‌ ಜಿ.ಶಂಕರ್‌ ತಿಳಿಸಿದರು.

Advertisement

ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹುಣಸೂರು ವಿಧಾನಸಭಾ ಕ್ಷೇತ್ರದಲ್ಲಿ 274 ಮತಗಟ್ಟೆ ಸ್ಥಾಪಿಸಲಿದ್ದು, 1,14,146 ಪುರುಷ, 1,12,770 ಮಹಿಳಾ ಹಾಗೂ ನಾಲ್ಕು ಇತರೆ ಸೇರಿದಂತೆ ಸದ್ಯ ಒಟ್ಟು 2,26,920 ಮಂದಿ ಮತದಾನದ ಹಕ್ಕು ಹೊಂದಿದ್ದಾರೆ. ಆದರೆ, ಮತದಾರರ ಪಟ್ಟಿಗೆ ಹೆಸರು ಸೇರ್ಪಡೆಗೆ ಸಲ್ಲಿಕೆಯಾಗಿರುವ 300 ರಿಂದ 400 ಅರ್ಜಿಗಳು ವಿಲೇವಾರಿಯಾಗಬೇಕಿದೆ. ಜತೆಗೆ ಮತದಾನದ ನಾಲ್ಕು ದಿನಗಳ ಮುಂಚೆ ಪಟ್ಟಿಯಲ್ಲಿ ಅನರ್ಹರನ್ನು ಗುರುತಿಸಿ ಅಂಥವರ ಹೆಸರರನ್ನು ಕೈಬಿಡಬೇಕಾಗಿರುವುದರಿಂದ ಅಂತಿಮ ಮತದಾರರ ಸಂಖ್ಯೆಯಲ್ಲಿ ಕೊಂಚ ವ್ಯತ್ಯಾಸವಾಗಲಿದೆ ಎಂದರು.

ಉಪಚುನಾವಣೆಗೆ 546 ಬ್ಯಾಲೆಟ್‌ ಯೂನಿಟ್‌, 540 ಕಂಟ್ರೋಲ್‌ ಯೂನಿಟ್‌, 527 ವಿವಿ ಪ್ಯಾಟ್‌ ತರಿಸಲಾಗಿದ್ದು, ಚುನಾವಣಾ ಆಯೋಗದ ನಿರ್ದೇಶನದಂತೆ ಹುಣಸೂರು ನಗರಸಭೆ ಕಾರ್ಯಾಲಯದ ಕಟ್ಟಡದ ಭದ್ರತಾ ಕೊಠಡಿಯಲ್ಲಿ ಸುರಕ್ಷಿತವಾಗಿ ದಾಸ್ತಾನು ಮಾಡಲಾಗಿದ್ದು, ಪೊಲೀಸ್‌ ಭದ್ರತೆ ಮತ್ತು ಸಿಸಿ ಟಿವಿ ಕಣ್ಗಾವಲು ಇರಿಸಲಾಗಿದೆ. ಹುಣಸೂರಿನ ದೇವರಾಜ ಅರಸು ಪ್ರಥಮ ದರ್ಜೆ ಕಾಲೇಜು ಕಟ್ಟಡದಲ್ಲಿ ಮಸ್ಟರಿಂಗ್‌, ಡಿ ಮಸ್ಟರಿಂಗ್‌ ಮತ್ತು ಮತ ಎಣಿಕೆ ನಡೆಸಲಾಗುವುದು ಎಂದು ತಿಳಿಸಿದರು.

ತಂಡ ನೇಮಕ: ಮೈಸೂರು ಮಹಾ ನಗರ ಪಾಲಿಕೆಯಾಗಿರುವುದರಿಂದ ಇಡೀ ಜಿಲ್ಲೆಗೆ ಚುನಾವಣಾ ಮಾದರಿ ನೀತಿ ಸಂಹಿತೆಯು ಅನ್ವಯವಾಗಲ್ಲ. ಹುಣಸೂರು ವಿಧಾನಸಭಾ ಕ್ಷೇತ್ರಕ್ಕೆ ಮಾತ್ರ ಅನ್ವಯವಾಗಲಿದೆ. ನೀತಿ ಸಂಹಿತೆ ಹಾಗೂ ಅಭ್ಯರ್ಥಿಗಳ ವೆಚ್ಚದ ಮೇಲೆ ನಿಗಾ ಇಡಲು ತಂಡಗಳ ರಚಿಸಲಾಗಿದೆ. ನೀತಿ ಸಂಹಿತೆಯನ್ನು ಕಟ್ಟುನಿಟ್ಟುಗೊಳಿಸಲು ಹಾಗೂ ಅಭ್ಯರ್ಥಿಗಳ ಚುನಾವಣಾ ವೆಚ್ಚದ ಮೇಲೆ ನಿಗಾ ಇಡಲು ಸೆಕ್ಟರ್‌ ಅಧಿಕಾರಿ, ಫ್ಲೈಯಿಂಗ್‌ ಸ್ಕ್ವಾಡ್‌, ಸ್ಟಾಟಿಕ್‌ ಸರ್ವೆçಲೆನ್ಸ್‌ ತಂಡ, ವೀಡಿಯೋ ವಿಕ್ಷಣಾ ತಂಡ, ವೀಡಿಯೋ ಸರ್ವೇಲೆನ್ಸ್‌ ತಂಡ, ಸಹಾಯಕ ಚುನಾವಣಾ ವೀಕ್ಷಕರ ತಂಡಗಳನ್ನು ರಚಿಸಿ, ತಂಡಗಳಿಗೆ ತರಬೇತಿಯನ್ನೂ ಸಹ ನೀಡಲಾಗುವುದು ಎಂದರು.

ಗುರುತಿನ ಚೀಟಿ: ಪ್ರವಾಹದ ಸಂದರ್ಭದಲ್ಲಿ ಹುಣಸೂರು ತಾಲೂಕಿನ 250 ಜನರ ಆಧಾರ್‌ ಹಾಳಾಗಿರುವ ಬಗ್ಗೆ ಮಾಹಿತಿ ಇದ್ದು, ಇವರಿಗೆ ಹೊಸದಾಗಿ ಆಧಾರ್‌ ಮಾಡಿಸಿಕೊಡಲು ಕ್ರಮವಹಿಸಲಾಗಿದೆ. ಚುನಾವಣಾ ಗುರುತಿನ ಚೀಟಿ ಕಳೆದಿರುವ ಬಗ್ಗೆ ಯಾವುದೇ ಮನವಿ ಬಂದಿಲ್ಲ. ಹಾಗೊಂದು ವೇಳೆ ಎಪಿಕ್‌ ಕಾರ್ಡ್‌ ಕಳೆದಿದ್ದರೆ ಚುನಾವಣಾ ಆಯೋಗ ನಿಗದಿ ಮಾಡಿರುವ ಇನ್ನಿತರೆ ಗುರುತಿನ ಚೀಟಿ ತೋರಿಸಿ ಮತದಾನ ಮಾಡಬಹುದಾಗಿದೆ ಎಂದು ಹೇಳಿದರು. ಮತಗಟ್ಟೆ ಸ್ಥಾಪನೆ ಸಂಬಂಧ ಮಳೆಯಿಂದ ಹಾನಿಗೀಡಾಗಿರುವ ಹುಣಸೂರು ತಾಲೂಕಿನ ಅಂಗನವಾಡಿ, ಶಾಲಾ ಕಟ್ಟಡಗಳ ದುರಸ್ತಿಗೆ ತಲಾ 2 ಲಕ್ಷ ರೂ. ಬಿಡುಗಡೆ ಮಾಡಿದ್ದು, ದುರಸ್ತಿ ಕಾಮಗಾರಿ ಆರಂಭವಾಗಿದೆ ಎಂದರು.

Advertisement

ಅಕ್ರಮ ತಡೆಗೆ ಚೆಕ್‌ಪೋಸ್ಟ್‌ ಸ್ಥಾಪನೆ: ಚುನಾವಣಾ ಅಕ್ರಮಗಳ ತಡೆಗಾಗಿ ಮನುಗನಹಳ್ಳಿ, ವೀರನಹೊಸಳ್ಳಿ, ಮುತ್ತುರಾಯನ ಹೊಸಳ್ಳಿ, ಚಿಲ್ಕುಂದ, ದೊಡ್ಡಕೊಪ್ಪಲು, ಗಾವಡಗೆರೆಗಳಲ್ಲಿ ಚೆಕ್‌ ಪೋಸ್ಟ್‌ ತೆರೆದು ವಾಹನಗಳನ್ನು ತಪಾಸಣೆ ಮಾಡಲಾಗುತ್ತಿದೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ರಿಷ್ಯಂತ್‌ ತಿಳಿಸಿದರು. ಚುನಾವಣಾ ಭದ್ರತಾ ಕರ್ತವ್ಯಕ್ಕಾಗಿ ಡಿಎಆರ್‌, ಕೆಎಸ್‌ಆರ್‌ಪಿ, ಎಎಸ್‌ಐ, ಪಿಎಸ್‌ಐ ಸೇರಿ ಸುಮಾರು 1 ಸಾವಿರ ಪೊಲೀಸ್‌ ಸಿಬ್ಬಂದಿ ಬಳಸಿಕೊಳ್ಳಲಾಗುವುದು. 5 ಫ್ಲೈಯಿಂಗ್‌ ಸ್ಕ್ವಾಡ್‌, 6 ಮೊಬೈಲ್‌ ಸ್ಕ್ವಾಡ್‌ ತಂಡ ರಚಿಸಲಾಗಿದೆ. ಈ ಹಿಂದೆಯೇ ಶೇ.50ರಷ್ಟು ಆಯುಧಗಳನ್ನು ಠೇವಣಿ ಇರಿಸಿಕೊಳ್ಳಲಾಗಿದ್ದು, ಇನ್ನುಳಿದ ಆಯುಧಗಳನ್ನು ಠೇವಣಿ ಇಡಲು ಸೂಚಿಸಲಾಗಿದೆ. ಸಮಾಜ ಘಾತುಕ ವ್ಯಕ್ತಿಗಳು ಹಾಗೂ ಚುನಾವಣಾ ಅಕ್ರಮ ಪ್ರಕರಣಗಳನ್ನು ಎದುರಿಸುತ್ತಿರುವವರ ಮೇಲೆ ನಿಗಾ ಇರಿಸಲಾಗಿದೆ ಎಂದರು..

ಪ್ರತಿ ಮತಗಟ್ಟೆಗೆ ಅಧಿಕಾರಿ ನೇಮಕ: ಪ್ರತಿ ಮತಗಟ್ಟೆಗೆ ಒಬ್ಬರು ಅಧ್ಯಕ್ಷಾಧಿಕಾರಿ, ಮೂವರು ಮತಗಟ್ಟೆ ಅಧಿಕಾರಿಗಳನ್ನು ನೇಮಿಸಲಾಗುವುದು. ಅಲ್ಲದೆ, ಶೇ.20ರಷ್ಟು ಮೀಸಲು ಅಧಿಕಾರಿ, ಸಿಬ್ಬಂದಿಗಳನ್ನು ನೇಮಿಸಲಾಗುವುದು. ಕೇಂದ್ರ ಸರ್ಕಾರದ ಅಧಿಕಾರಿ ಮತ್ತು ಸಿಬ್ಬಂದಿಗಳನ್ನು ಆಯ್ದ ಮತಗಟ್ಟೆಗಳಿಗೆ ಸೂಕ್ಷ್ಮ ವೀಕ್ಷಕರುಗಳಾಗಿ ನೇಮಕ ಮಾಡಲಾಗುವುದು. ಕೇಂದ್ರ ಸರ್ಕಾರಿ ನೌಕರರನ್ನು ಹೊರತುಪಡಿಸಿ ಮತಗಟ್ಟೆಗಳಿಗೆ ಒಟ್ಟು 1315 ಅಧಿಕಾರಿ, ಸಿಬ್ಬಂದಿ ನೇಮಿಸಲಾಗುವುದು ಎಂದು ಜಿಲ್ಲಾಧಿಕಾರಿ ಅಭಿರಾಮ್‌ ಜಿ.ಶಂಕರ್‌ ತಿಳಿಸಿದರು.

ಅನರ್ಹರ ನಾಮಪತ್ರ ಸ್ವೀಕಾರದ ಬಗೆಗ ಚುನಾವಣಾ ಆಯೋಗದಿಂದ ಈವರೆಗೆ ಯಾವುದೇ ಸ್ಪಷ್ಟತೆ ಸಿಕ್ಕಿಲ್ಲ. ಪ್ರಕರಣ ಸುಪ್ರೀಂ ಕೋರ್ಟ್‌ನಲ್ಲಿರುವುದರಿಂದ ನಾಮಪತ್ರಗಳ ಪ್ರಾರಂಭಿಕ ಪರಿಶೀಲನೆ ಹಂತದಲ್ಲಿ ಸ್ಪಷ್ಟತೆ ಪಡೆದುಕೊಳ್ಳಬೇಕಾಗುತ್ತದೆ.
-ಅಭಿರಾಮ್‌ ಜಿ.ಶಂಕರ್‌, ಜಿಲ್ಲಾಧಿಕಾರಿ

Advertisement

Udayavani is now on Telegram. Click here to join our channel and stay updated with the latest news.

Next