ಗಣೇಶನ ಹಬ್ಬ ಚತುರ್ಥಿಯನ್ನು ಭಾರತದಲ್ಲಿ ಮಾತ್ರವಲ್ಲದೇ ಇಂದು ಬೇರೆ ಬೇರೆ ದೇಶಗಳಲ್ಲೂ ಆಚರಿಸಲಾಗುತ್ತಿದೆ. ವಿದೇಶದಲ್ಲಿ ನೆಲೆಸಿರುವ ಅನಿವಾಸಿ ಭಾರತೀಯರು ಹಬ್ಬಗಳನ್ನು ಆಚರಿಸುವುದು ಸಹಜವೇ. ಭಾರತದ ಆಚರಣೆ, ಸಂಪ್ರದಾಯದಿಂದ ಆಕರ್ಷಿತರಾದ ವಿದೇಶಿಗರು ಈಗೀಗ ಆಚರಣೆಗಳನ್ನು ಮಾಡುತ್ತಾರೆ. ಅದರಲ್ಲೂ ಇದು ಆನ್‌ಲೈನ್ ಯುಗ. ಪೂಜೆ, ಮದುವೆಗಳೇ ಆನ್‌ಲೈನ್‌ನಲ್ಲಿ ಆಗುತ್ತವಂತೆ, ಇನ್ನು ಹಬ್ಬ ಯಾವ ಲೆಕ್ಕ ಹೇಳಿ.
ಹೀಗೆ ಇತ್ತೀಚೆಗೆ ಬ್ರಹ್ಮಮುಹೂರ್ತದಲ್ಲಿ ಇಟಲಿಯಲ್ಲಿ ಗಣೇಶನ ಹಬ್ಬ ನಡೆಯಿತು. ಅದು ಝೂಮ್ ಮೀಟಿಂಗ್‌ನ ವೀಡಿಯೋ ಕಾಲ್‌ನ ಮೂಲಕ. ಕಂಪ್ಯೂಟರ್ ತೆರೆಯ ಮೇಲೆ ಗಣೇಶನ ಚಿತ್ರ ಮೂಡಿತ್ತು! ವೀಡಿಯೋ ಕಾಲ್‌ನಲ್ಲೇ ಎಲ್ಲರೂ ಸೇರಿ ತಾವಿದ್ದ ಸ್ಥಳಗಳಿಂದಲೇ ತಯಾರಿಸಿದ್ದ ತಿಂಡಿ, ಹಣ್ಣುಗಳನ್ನು ತೆರೆಯ ಮೇಲಿನ ದೇವರಿಗೆ ಅರ್ಪಿಸಿದ್ದರು.
ಮೂಡಲದಲ್ಲಿ ರವಿ ಬರಲು ಕಾದಿದ್ದ ವಾತಾವರಣ. ಹಕ್ಕಿಗಳ ಚಿಲಿಪಿಲಿ , ಮನಸ್ಸಿನಲ್ಲೇ ಭಕ್ತಿಯ ಗಂಗೆ ಹರಿಯುವ ಶಬ್ದ , ಹೊರಟಿತ್ತು ಓಂಕಾರ ಸಮುದ್ರ ತೀರದ ಊರಿಂದ. ಇಟಲಿಯ ಅನೇಕ ಭಾಗಗಳಿಂದ ಮೂವತ್ತಕ್ಕೂ ಮೇಲ್ಪಟ್ಟ ಇಟಾಲಿಯನ್ ಭಕ್ತರು ಝೂಮ್ ಮಂಟಪದಲ್ಲಿ ಸೇರಿ ಮಾನಸಿಕವಾಗಿ ವಿನಾಯಕ ಚೌತಿ ಆಚರಿಸಿದ್ದರು . ಗಣೇಶನಿಗೆ ಪ್ರಥಮ ಪ್ರಾರ್ಥನೆ ಗಾಯತ್ರಿ ಮಂತ್ರ ಜಪಿಸಿದ ಅನಂತರ ಪಿಯ ಅವರು ಹಬ್ಬದ ಆಚರಣೆಯ ವಿವರಣೆ ನೀಡಿದರು. ಬಳಿಕ ಕೋರಿನ್ನ ಅನ್ನುವವರು ಮಧುರ ಕಂಠದಿಂದ “ಗಣಾನಾಂತ್ವ ಗಣಪತಿಗಮ್ ‘ ಹಾಡಿದರು.
ಗಣೇಶನ ಸಂದೇಶ ಪವಾಡಗಳ ಮೂಲಕ ಮಾನವನಿಗೆ , ಮಾತನಾಡುವ ಭಾಗ್ಯ ನನ್ನದಾಗಿತ್ತು. ಗಣೇಶನ ಮಹಿಮೆ ಅವನರೂಪದ ಸಂಕೇತಗಳು ಎಲ್ಲವನ್ನು ವಿವರಿಸಿದವರು ರೊಬೆತೋರ್, ಆಧ್ಯಾತ್ಮಿಕದ ಸಂಶೋಧನೆ ನಡೆಸುವ ಬ್ರೂನ ಅವರ ಮಾತಿನ ಲಹರಿ ಎಲ್ಲರನ್ನು ಭಕ್ತಿಮಾರ್ಗಕ್ಕೆ ಮುನ್ನಡೆಯಲು ಹುರಿದುಂಬಿಸಿತ್ತು.
ಗಣೇಶನಿಗೆ ಪೂಜೆ, ಮಂಗಳಾರತಿ ಎಲ್ಲವೂ ವರ್ಚುವಲ್ ಆಗಿ ನಡೆಯುತ್ತಿತ್ತು. ಪೇ ಸರೋ ಅನ್ನುವ ಸಮುದ್ರ ತೀರದಲ್ಲಿರುವ ಊರಿನಿಂದ ಹಬ್ಬದಾಚರಣೆ ಆಯೋಜಿಸಿದ್ದವರು ಅಮಿಲ್ಕರೆ ಎನ್ನುವವರು. ಆನ್‌ಲೈನ್ ಫ್ಲಾಟ್‌ಫಾರ್ಮ್ ಮೂಲಕ ಎಲ್ಲರೂ ಹಬ್ಬದ ಆಚರಣೆಯುಲ್ಲಿ ಒಂದಾಗುವಂತೆ ಮಾಡಿದ್ದರು. ಶಾಂತಿ ಎನ್ನುವವರು ಸುಮಧುರ ಕಂಠದಿಂದ ಹಾಡಿ ನಮನ ಸಲ್ಲಿಸಿದರು. ಎಲ್ಲವನ್ನೂ ಗಮನಿಸಿದ್ದಾಗ ಈ ಇಂಟರ್‌ನೆಟ್‌ನ ಸಾಧ್ಯತೆಗಳ ಬಗ್ಗೆ ಅಚ್ಚರಿ ಅನಿಸಿತ್ತು.
*ಜಯಮೂರ್ತಿ, ಇಟಲಿ