ಬೆಂಗಳೂರು: ಕೋವಿಡ್ 19 ಸೋಂಕಿನ ಸವಾಲಿನ ನಡುವೆಯೇ ಶಾಲೆಗಳ ಪುನರಾರಂಭಕ್ಕೆ ಸರ್ಕಾರ ಚಿಂತನೆ ನಡೆಸುತ್ತಿದೆ. ಆದರೆ, ಪೋಷಕರ ವಿರೋಧದ ಹಿನ್ನೆಲೆಯಲ್ಲಿ ಶಾಲೆಗಳು ಕೆಲವು ತಿಂಗಳ ಮಟ್ಟಿಗೆ ಪ್ರಾರಂಭವಾಗುವ ಸಾಧ್ಯತೆ ಕಡಿಮೆ ಇದೆ. ಈ ಮಧ್ಯೆ ಆನ್‌ಲೈನ್ ಶಿಕ್ಷಣದ ಚರ್ಚೆಯೂ ಪ್ರಾರಂಭವಾಗಿದೆ. ಈಗಾಗಲೇ ಕೆಲವು ಖಾಸಗಿ ಶಾಲೆಗಳು ಆನ್‌ಲೈನ್ ಮೂಲಕ ಮಕ್ಕಳಿಗೆ ಪಾಠ ಮಾಡುತ್ತಿವೆ. ಆದರೆ, ಬಿಬಿಎಂಪಿ ಶಾಲೆಗಳು ಹಾಗೂ ನಗರದಲ್ಲಿನ ಸರ್ಕಾರಿ ಶಾಲೆಗಳಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಮಕ್ಕಳು ಶೈಕ್ಷಣಿಕವಾಗಿ ಹಿಂದುಳಿಯುವ ಆತಂಕ ಎದುರಾಗಿದೆ.
ಪಾಲಿಕೆ ಮತ್ತು ಸರ್ಕಾರಿ ಶಾಲೆಗಳಲ್ಲಿ ಓದುತ್ತಿರುವ ಬಹುತೇಕ ವಿದ್ಯಾರ್ಥಿಗಳು ಬಡ ಕುಟುಂಬದವರಾಗಿದ್ದಾರೆ. ಈ ಶಾಲೆಗಳಲ್ಲಿ ಓದುವ ವಿದ್ಯಾರ್ಥಿಗಳ ಪೋಷಕರಿಗೆ ಆನ್‌ಲೈನ್ ಶಿಕ್ಷಣದ ಬಗ್ಗೆ ಮೊದಲು ಮಾಹಿತಿ ನೀಡಬೇಕಿದೆ. ಸದ್ಯ ಎಲ್ಲರ ಬಳಿ ಮೊಬೈಲ್ ಇರುವುದರಿಂದ ಆನ್‌ಲೈನ್ ಮೂಲಕ ಶಿಕ್ಷಣ ನೀಡುವ ಮೊದಲ ಸವಾಲಿಗೆ ಪರಿಹಾರ ಸಿಕ್ಕಂತಾಗಿದೆ. ಆದರೆ, ಆನ್‌ಲೈನ್ ಶಿಕ್ಷಣದ ಬಗ್ಗೆ ಮಕ್ಕಳನ್ನು ಸೆಳೆಯುವುದು, ಪೋಷಕರಿಗೆ ಇದನ್ನು ಹೇಳಿಕೊಡುವುದು ಸವಾಲು. ಬಡ ಮತ್ತು ಮಧ್ಯಮ ವರ್ಗದ ಪೋಷಕರಲ್ಲಿ ಬಹುತೇಕರು ಕೆಲಸಕ್ಕೆ ಹೋಗುವುದರಿಂದ ಮಕ್ಕಳಿಗೆ ಮೊಬೈಲ್ ಕೊಡುವ ಸಾಧ್ಯತೆ ಕಡಿಮೆ. ಅಲ್ಲದೆ, ಸರ್ಕಾರಿ ಹಾಗೂ ಬಿಬಿಎಂಪಿ ಶಾಲೆಯ ಶೇ.95ರಷ್ಟು ಮಕ್ಕಳಲ್ಲಿ ಲ್ಯಾಪ್‌ಟಾಪ್ ಇಲ್ಲ.
ಕಾಳಜಿ ಅಗತ್ಯ: ಆನ್‌ಲೈನ್ ಶಿಕ್ಷಣ ಬೇಡವೆಂದು ಈ ಮಕ್ಕಳಿಗೆ ಕೋವಿಡ್ 19 ತೀವ್ರವಾಗಿ ಹರಡುತ್ತಿರುವ ಸಂದರ್ಭದಲ್ಲಿ ಶಾಲೆಗಳನ್ನು ಪ್ರಾರಂಭಿಸಿದರೂ ಸ್ವತ್ಛತೆ ಹಾಗೂ ಕಾಳಜಿ ವಹಿಸಬೇಕು. ವಿಪರ್ಯಾಸವೆಂದರೆ ಪಾಲಿಕೆ ವ್ಯಾಪ್ತಿಯ ಕೆಲವು ಶಾಲೆಗಳಲ್ಲಿ ನೀರಿನ ಸಮಸ್ಯೆ ಇದೆ. ಶೌಚಾಲಯಗಳಲ್ಲೂ ಸ್ವತ್ಛತೆ ಇಲ್ಲ. ಹೀಗಾಗಿ, ಈ ಮಕ್ಕಳು ಶೈಕ್ಷಣಿಕವಾಗಿ ಹಿಂದುಳಿಯದಂತೆ ತಡೆಯುವ ಸವಾಲು ಪಾಲಿಕೆ ಹಾಗೂ ಸರ್ಕಾರದ ಮೇಲಿದೆ. ಪಾಲಿಕೆ ಶಾಲೆಗಳಲ್ಲಿ ಸ್ಮಾರ್ಟ್ ಶಿಕ್ಷಣ ಪ್ರಾರಂಭಿಸಿ ಶಿಕ್ಷಣ ನೀಡುತ್ತೇವೆ. ರೋಶನಿ ಯೋಜನೆ ಮೂಲಕ ಮಕ್ಕಳಿಗೆ ಆಧುನಿಕ ಶಿಕ್ಷಣ ನೀಡುತ್ತೇವೆ ಎಂದಿದ್ದ ಪಾಲಿಕೆ ಈ ವಿಚಾರದಲ್ಲಿ ಸಂಪೂರ್ಣ ವಿಫಲವಾಗಿದೆ. ಈ ಎಲ್ಲ ಸಮಸ್ಯೆಗಳು ಒಂದೆಡೆಯಾದರೆ, ಸರ್ಕಾರಿ ಮತ್ತು ಪಾಲಿಕೆಯ ಶಾಲೆಗಳಲ್ಲಿನ ಹಲವು ಶಿಕ್ಷಕರಿಗೂ ಆನ್‌ಲೈನ್ ತರಬೇತಿ ನೀಡಬೇಕಿದೆ!
ಎಲ್ಲ ಪರೀಕ್ಷೆ ರದ್ದುಪಡಿಸಲು ಒತ್ತಾಯ: ಎಸ್ಸೆಸ್ಸೆಲ್ಸಿ , ಫಾರ್ಮಸಿ, ಎಂಜಿನಿಯರಿಂಗ್ ಸೇರಿದಂತೆ ಎಲ್ಲ ಪರೀಕ್ಷೆಗಳನ್ನು ರದ್ದುಗೊಳಿಸಿ ವಿದ್ಯಾರ್ಥಿಗಳನ್ನು ಉತ್ತೀರ್ಣಗೊಳಿಸಬೇಕು ಎಂದು ಒತ್ತಾಯಿಸಿ ಕನ್ನಡ ಚಳವಳಿ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಮೈಸೂರು ಬ್ಯಾಂಕ್ ವೃತ್ತದಲ್ಲಿ ವಿನೂತನವಾಗಿ ಪ್ರತಿಭಟನೆ ನಡೆಸಿದರು. ಈ ವೇಳೆ ಮಾತನಾಡಿದ ಅವರು, ಕೋವಿಡ್ 19 ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು, ಪೋಷಕರು ತೀವ್ರ ಸಂಕಷ್ಟದಲ್ಲಿದ್ದಾರೆ. ತರಗತಿಯಲ್ಲಿ ವಿದ್ಯಾರ್ಥಿಗಳ ಕಲಿಕಾ ಮಾನದಂಡ ಅನುಸರಿಸಿ ವಿದ್ಯಾರ್ಥಿಗಳನ್ನು ತೇರ್ಗಡೆ ಮಾಡಬೇಕು. ಕಾನ್ಪುರ ಐಐಟಿ ಸೇರಿದಂತೆ 12 ರಾಜ್ಯಗಳು ಈಗಾಗಲೇ ಕೋವಿಡ್ 19 ಕಾರಣದಿಂದ ಎಲ್ಲ ಪದವಿ (ಅಂತಿಮ ಪರೀಕ್ಷೆ ಹೊರತುಪಡಿಸಿ) ಪರೀಕ್ಷೆಯನ್ನು ರದ್ದುಗೊಳಿಸಿವೆ. ಎಂಜಿನಿಯರಿಂಗ್ , ಫಾರ್ಮಸಿ, ಡಿಪ್ಲೊಮ ಪದವಿ ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಸದೆ ಉತ್ತೀರ್ಣಗೊಳಿಸಬೇಕೆಂದು ಆಗ್ರಹಿಸಿದರು.
ಶಾಲೆ ಆರಂಭಿಸಿದರೆ ಮಕ್ಕಳ ಸುರಕ್ಷೆ ಕಷ್ಟ: ಕೋವಿಡ್ 19 ವೈರಸ್ ವೇಗವಾಗಿ ಹರಡುತ್ತಿರುವ ಸಂದರ್ಭದಲ್ಲಿ ಸರ್ಕಾರ ಶಾಲೆಗಳನ್ನು ಆರಂಭಿಸಿದರೆ ಮಕ್ಕಳ ಸುರಕ್ಷೆ ನೋಡಿಕೊಳ್ಳುವುದು ಕಷ್ಟವಾಗಲಿದೆ ಎಂದು ಮಾಜಿ ಸಚಿವ ರಾಮಲಿಂಗಾರೆಡ್ಡಿ ಹೇಳಿದ್ದಾರೆ. ಸುದ್ದಿಗಾರರ ಜತೆ ಮಾತನಾಡಿ, ರಾಜ್ಯದಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಯೂರೋಪ್ ರಾಷ್ಟ್ರಗಳಲ್ಲಿ ಸೋಂಕು ಕಡಿಮೆ ಆದ ಹಿನ್ನೆಲೆಯಲ್ಲಿ ಶಾಲಾ, ಕಾಲೇಜು ಆರಂಭಿಸಲಾಗಿತ್ತು. ಆದರೆ, ಈಗ ಅಲ್ಲಿ ಶಿಕ್ಷಕರು ಮತ್ತು ಮಕ್ಕಳಿಗೆ ದೊಡ್ಡ ಸಂಖ್ಯೆಯಲ್ಲಿ ಕೋವಿಡ್ 19 ಹರಡುತ್ತಿದೆ. ಹೀಗಾಗಿ, ಕೋವಿಡ್ 19 ನಿಯಂತ್ರಣಕ್ಕೆ ಬರುವವರೆಗೂ ಸುಮ್ಮನಿರುವುದು ಉತ್ತಮ, ಆತುರಕ್ಕೆ ಬಿದ್ದು, ಮಕ್ಕಳ ಭವಿಷ್ಯದ ಜತೆ ಆಟವಾಡಬಾರದು ಎಂದು ಹೇಳಿದರು.
ಪೋಷಕರ ಮಧ್ಯ ಪ್ರವೇಶ: ಆನ್‌ಲೈನ್ ಮೂಲಕ ಶಿಕ್ಷಣ ನೀಡುವಾಗ ಪೋಷಕರು ಮಧ್ಯ ಪ್ರವೇಶಿಸುತ್ತಿರುವ ಬಗ್ಗೆ ನಿತ್ಯ ದೂರುಗಳು ಬರುತ್ತಿವೆ. ಹೀಗಾಗಿ, ಸರ್ಕಾರ ಆನ್‌ಲೈನ್ ಶಿಕ್ಷಣ ನೀಡುವ ಶಾಲೆಗಳಿಗೆ ನಿರ್ದಿಷ್ಟ ಮಾರ್ಗಸೂಚಿ ಹೊರಡಿಸಬೇಕು. ದೈಹಿಕ ಶಿಕ್ಷಣವನ್ನು ಆನ್‌ಲೈನ್‌ನ ಮೂಲಕ ನೀಡಬಾರದು. ಕೆಲವು ಖಾಸಗಿ ಶಾಲೆಗಳು ಇಂತಹ ಸಾಹಸಕ್ಕೆ ಕೈಹಾಕುತ್ತಿವೆ. ಅದೇ ರೀತಿ ಪೋಷಕರು ಮಧ್ಯ ಪ್ರವೇಶಿಸದಂತೆ ಆದೇಶ ಮಾಡಬೇಕು ಎಂದು ಚೈಲ್ಡ್ ರೈಟ್ಸ್ ಟ್ರಸ್ಟ್‌ನ ನಿರ್ದೇಶಕ ನಾಗಸಿಂಹ .ಜಿ. ರಾವ್ ಅಭಿಪ್ರಾಯ ವ್ಯಕ್ತಪಡಿಸಿದರು.
ನಗರದಲ್ಲಿ ಶಾಲೆಗಳನ್ನು ಪ್ರಾರಂಭಿಸುವ ಬಗ್ಗೆ ಪೋಷಕರಿಂದ ಮಾಹಿತಿ ಪಡೆದುಕೊಂಡು ಸರ್ಕಾರಕ್ಕೆ ಸಲ್ಲಿಸುವಂತೆ ಸರ್ಕಾರ ನಿರ್ದೇಶನ ನೀಡಿದೆ. ಈ ನಿಟ್ಟಿನಲ್ಲಿ ಪಾಲಿಕೆಯ ಶಾಲೆಗಳಲ್ಲಿ ಓದುತ್ತಿರುವ ಮಕ್ಕಳ ಪೋಷಕರಿಂದ ಅಭಿಪ್ರಾಯ ಸಂಗ್ರಹಿಸಿ, ಸರ್ಕಾರಕ್ಕೆ ಕಳುಹಿಸುತ್ತೇವೆ. ಈ ಅಭಿಪ್ರಾಯದ ಆಧಾರದ ಮೇಲೆ ಸರ್ಕಾರ ಕ್ರಮ ತೆಗೆದುಕೊಳ್ಳಲಿದೆ.
-ಮಂಜುನಾಥ್, ಬಿಬಿಎಂಪಿ ವಿಶೇಷ ಆಯುಕ್ತ (ಶಿಕ್ಷಣ)
ಒಂದನೇ ಕ್ಲಾಸ್ ಮಕ್ಕಳಿಗೆ ಆನ್‌ಲೈನ್ ನಲ್ಲಿ ಹೇಗೆ ಪಾಠ ಹೇಳಲು ಸಾಧ್ಯ? ಎಲ್ಲರ ಬಳಿ ಲ್ಯಾಪ್‌ಟಾಪ್ ಇರುವುದಿಲ್ಲ. ಗ್ರಾಮೀಣ ಭಾಗದಲ್ಲಿ ಅಷ್ಟೆ ಅಲ್ಲ ನಗರದ ಸರ್ಕಾರಿ ಶಾಲೆಗಳ ಮಕ್ಕಳ ಬಳಿ ಲ್ಯಾಪ್‌ಟಾಪ್ ಎಲ್ಲಿದೆ?.
-ರಾಮಲಿಂಗಾರೆಡ್ಡಿ, ಮಾಜಿ ಸಚಿವ
* ಹಿತೇಶ್ ವೈ