ಮುದಗಲ್ಲ: ಕಳೆದೊಂದು ತಿಂಗಳಿಂದ ಈ ಭಾಗದಲ್ಲಿ ಮುಸುಕಿದ ವಾತಾವರಣ ಇರುವುದರಿಂದ ಈರುಳ್ಳಿ ಬೆಳೆಗೆ ರೋಗ ಬಂದು ಹಾಳಾಗಿದ್ದು, ರೈತರನ್ನು ಕಂಗಾಲಾಗಿಸಿದೆ. ಬೇಸಿಗೆಯಲ್ಲಿ ಬೆಳೆದ ಈರುಳ್ಳಿಗೆ ಕೋವಿಡ್ ಕಗ್ಗಂಟಾದರೇ, ಮುಂಗಾರು ಬೆಳೆ ಈರುಳ್ಳಿಗೆ ಕಳೆದ ಮೋಡ ಮುಸುಕಿನ ವಾತಾವರಣ ಮತ್ತು ಆಗಾಗ ಸುರಿಯು ಜಿಟಿ ಜಿಟಿ ಮಳೆ ಪರಿಣಾಮ ವಾತಾವರಣ ತಂಪಾಗಿ ಸೂರ್ಯನ ಕಿರಣಗಳು ಈರುಳ್ಳಿಗೆ ತಾಗದೇ ರೋಗ ಹರಡಿ ಸಂಪೂರ್ಣ ಬೂದಿ ಬಣ್ಣಕ್ಕೆ ತಿರುಗಿದೆ. ಈರುಳ್ಳಿ ನಾಟಿ ಮಾಡಿ ಒಂದೂವರೆ,ಎರಡು ತಿಂಗಳು ಗತಿಸಿದ್ದು ರೋಗ ಬಾಧಿಸುತ್ತಿದೆ. ವಿಶೇಷವಾಗಿ ಕಿಲಾರಹಟ್ಟಿ, ಆಮದಿಹಾಳ, ನಾಗರಹಾಳ, ನಾಗಲಾಪೂರ, ಕನ್ನಾಳ, ತಲೇಖಾನ, ಹಡಗಲಿ, ಹಡಗಲಿ ತಾಂಡಾ. ದೆಸಾಯಿ ಭೋಗಾಪೂರ, ಛತ್ತರ, ಕುಮಾರಖೇಡ, ತೊಡಕಿ, ಉಳಿಮೇಶ್ವರ, ಪಿಕಳಿಹಾಳ, ಆಶಿಹಾಳ, ಬಯ್ನಾಪೂರ, ಖೈರವಾಡಗಿ, ಅಡವಿಭಾವಿ ಹಾಗೂ ತಿಮ್ಮಾಪೂರ ಸೇರಿದಂತೆ ಹಲವಡೆ ನಾಟಿ ಮಾಡಲಾದ ಈರುಳ್ಳಿಗೆ ರೋಗ ಕಾಣಿಸಿಕೊಂಡಿದೆ. ಆರಂಭದಲ್ಲಿ ಈರುಳ್ಳಿ ಗರಿಗಳ ಮೇಲೆ ಚುಕ್ಕೆ ಕಾಣಿಸಿಕೊಂಡು ಗರಿ ಹಳದಿ ಬಣ್ಣಕ್ಕೆ ತಿರುಗಿದ ವಾರದಲ್ಲಿಯೇ ಸಂಪೂರ್ಣ ಒಣಗಿ ಮುದುಡಿದಂತಾಗಿದೆ. ಇದರಿಂದಾಗಿ ಈರುಳ್ಳಿ ಇಳುವರಿ ಕುಸಿತವಾಗುತ್ತದೆ ಎಂದು ಕನ್ನಾಳ ಗ್ರಾಮದ ರೈತ ಹನುಮನಗೌಡ ಅಳಲು ತೋಡಿಕೊಂಡಿದ್ದಾನೆ.
ಬೆಲೆ ಪಾತಾಳಕ್ಕೆ: ಪ್ರತಿವರ್ಷ ಸುಮಾರು 3000 ಹೆಕ್ಟೇರ್ ಪ್ರದೇಶದಲ್ಲಿ ಈರುಳ್ಳಿ ಬೆಳೆಯಲಾಗುತ್ತಿತ್ತು. ಆದರೆ ಈ ಬಾರಿ ಮಾರ್ಚ್ ತಿಂಗಳಲ್ಲಿ ದರ ಕುಸಿತ ಹಾಗೂ ಕೊರೊನಾ ಲಾಕ್‌ಡೌನ್‌ನಿಂದ ಈರುಳ್ಳಿಗೆ ಹೊಡೆತ ಬಿದ್ದಿದೆ. ಲಿಂಗಸುಗೂರು ತಾಲೂಕಿನಲ್ಲಿ 1500 ಎಕರೆ ಹಾಗೂ ಮಸ್ಕಿ ತಾಲೂಕಿನಲ್ಲಿ 800 ಎಕರೆಯಲ್ಲಿ ರೈತರು ಈರುಳ್ಳಿ ನಾಟಿ ಮಾಡಿದ್ದಾರೆ ಎಂದು ತೋಟಗಾರಿಕೆ ಇಲಾಖೆ ಅಧಿಕಾರಿ ರಾಜಶೇಖರ ಪತ್ರಿಕೆಗೆ ತಿಳಿಸಿದ್ದಾರೆ.
ಕೊಳವೆ ಬಾವಿ ನೀರು ನಂಬಿ ಈರುಳ್ಳಿ ಬೆಳೆಯುವ ರೈತರಿಗೆ ವಿದ್ಯುತ್ ಕಣ್ಣಾಮುಚ್ಚಾಲೆ ಆಟ ಒಂದೆಡೆಯಾದರೆ ಅಂತರ್ಜಲ ಕುಸಿತ ಮಧ್ಯೆಯೂ ಅಲ್ಪಸ್ವಲ್ಪ ನೀರನ್ನೆ ನಂಬಿ ಬೆಳೆಯುವ ಈರುಳ್ಳಿಗೆ ಒಂದೂವರೆ ಎಕರೆಗೆ 40 ರಿಂದ45 ಸಾವಿರ ಖರ್ಚು ಬಂದಿದೆ. ಮಾರುಕಟ್ಟೆಯಲ್ಲಿ 650 ರಿಂದ 700ರೂ.ಗೆ ಈರುಳ್ಳಿ ಮಾರಾಟವಾಗುತ್ತಿದೆ.
– ಸಂತೋಷ, ಈರುಳ್ಳಿ ಬೆಳೆಗಾರ