Advertisement

ಒಂದು ವಾರ ಸರಣಿ ಸತ್ಯಾಗ್ರಹ, ಸಹಿ ಸಂಗ್ರಹ ಅಭಿಯಾನ

07:35 AM May 19, 2018 | |

ಕಾಸರಗೋಡು: ಪ್ರಸ್ತುತ ಶೈಕ್ಷಣಿಕ ವರ್ಷದಿಂದ ಒಂದನೇ ತರಗತಿಯಿಂದ ಹತ್ತನೇ ತರಗತಿಯ ವರೆಗೆ ಮಲಯಾಳ ಕಲಿಕೆ ಕಡ್ಡಾಯಗೊಳಿಸಿದ ಕೇರಳ ಸರಕಾರದ ಆದೇಶವನ್ನು ಪ್ರತಿಭಟಿಸಿ ಕನ್ನಡ ಹೋರಾಟ ಸಮಿತಿ ನೇತೃತ್ವದಲ್ಲಿ ಮೇ 23ರಿಂದ 29ರ ವರೆಗೆ ಒಂದು ವಾರ ಕಾಲ ಸರಣಿ ಸತ್ಯಾಗ್ರಹ ಮತ್ತು ಸಹಿ ಸಂಗ್ರಹ ಅಭಿಯಾನ ನಡೆಸಲು ತೀರ್ಮಾನಿಸಲಾಯಿತು.

Advertisement

ಬೀರಂತಬೈಲ್‌ನಲ್ಲಿರುವ ಕನ್ನಡ ಅಧ್ಯಾಪಕ ಭವನದಲ್ಲಿ ಮೇ 18ರಂದು ಬೆಳಗ್ಗೆ ನಡೆದ ಕನ್ನಡ ಹೋರಾಟ ಸಮಿತಿ ಸಭೆಯಲ್ಲಿ ಈ ತೀರ್ಮಾನಕ್ಕೆ ಬರಲಾಯಿತು.

ಪ್ರಥಮ ಹಂತದಲ್ಲಿ ಸರಣಿ ಸತ್ಯಾಗ್ರಹ, ಸಹಿ ಸಂಗ್ರಹ ಅಭಿಯಾನ ನಡೆಯಲಿದ್ದು, ಮುಂದಿನ ದಿನಗಳಲ್ಲಿ ವಿವಿಧ ರೀತಿಯಲ್ಲಿ ತೀವ್ರ ಹೋರಾಟ ನಡೆಸುವ ಕುರಿತಾಗಿ ಚರ್ಚಿಸಲಾಯಿತು. ಕಳೆದ ವರ್ಷ ಮೇ 23 ರಂದು ಮಲಯಾಳ ಕಲಿಕೆ ಕಡ್ಡಾಯ ಹೇರಿಕೆಯ ವಿರುದ್ಧ ಕನ್ನಡ ಹೋರಾಟ ಸಮಿತಿ ನೇತೃತ್ವದಲ್ಲಿ ಐತಿಹಾಸಿಕ ಕಾಸರಗೋಡು ಜಿಲ್ಲಾಧಿಕಾರಿ ಕಚೇರಿ ದಿಗ್ಬಂಧನ ನಡೆಸಲಾಗಿತ್ತು. ಇದೀಗ ಮೇ 23 ರಿಂದ ಕನ್ನಡಿಗರ ಸರಣಿ ಸತ್ಯಾಗ್ರಹ ನಡೆಸಲು ತೀರ್ಮಾನಿಸಲಾಗಿದ್ದು, ಒಂದು ವಾರ ಕಾಲ ನಡೆಯಲಿದೆ. 

ಕಾಸರಗೋಡು ಹೊಸ ಬಸ್‌ ನಿಲ್ದಾಣ ಪರಿಸರದಲ್ಲಿ ದಿನಾ ಬೆಳಗ್ಗೆ 10 ರಿಂದ ಸಂಜೆ 5 ಗಂಟೆಯ ವರೆಗೆ ಧರಣಿ ಸತ್ಯಾಗ್ರಹ ನಡೆಸಲಾಗುವುದು. ಈ ಮೂಲಕ ಕೇರಳ ಸರಕಾರದ ಕಣ್ಣು ತೆರೆಸುವ ಪ್ರಯತ್ನ ನಡೆಯಲಿದೆ. ಮಲ ಯಾಳ ಕಡ್ಡಾಯದ ಬಗ್ಗೆ ವಿರೋಧವಿಲ್ಲ. ಆದರೆ ಕಾಸರಗೋಡಿನ ಭಾಷಾ ಅಲ್ಪ ಸಂಖ್ಯಾಕ‌ರನ್ನು ಕಡ್ಡಾಯ ಮಲಯಾಳ ಕಲಿಕೆ ಹೇರಿಕೆಯಿಂದ ರಿಯಾಯಿತಿ ನೀಡಬೇಕೆಂದು ಸರಕಾರವನ್ನು ಒತ್ತಾಯಿಸಲಾಗುವುದು.

ಕನ್ನಡ ಹೋರಾಟ ಸಮಿತಿ ಅಧ್ಯಕ್ಷ ನ್ಯಾಯವಾದಿ ಮುರಳೀಧರ ಬಳ್ಳುಕ್ಕುರಾಯ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಪ್ರಧಾನ ಕಾರ್ಯದರ್ಶಿ ಕೆ.ಭಾಸ್ಕರ, ಕನ್ನಡ ಸಾಹಿತ್ಯ ಪರಿಷತ್‌ ಕೇರಳ ಗಡಿನಾಡ ಅಧ್ಯಕ್ಷ ಎಸ್‌.ವಿ. ಭಟ್‌, ಗಮಕ ಪರಿಷತ್‌ ಅಧ್ಯಕ್ಷ ಟಿ. ಶಂಕರನಾರಾಯಣ ಭಟ್‌, ವಿ.ಬಿ. ಕುಳಮರ್ವ, ಎಂ.ವಿ. ಮಹಾಲಿಂಗೇಶ್ವರ ಭಟ್‌, ತಾರಾನಾಥ ಮಧೂರು, ಸತ್ಯನಾರಾಯಣ ಕಾಸರ ಗೋಡು, ಗುರುಪ್ರಸಾದ್‌ ಕೋಟೆಕಣಿ, ಸತೀಶ್‌ ಮಾಸ್ಟರ್‌ ಕೂಡ್ಲು, ಡಾ| ಬೇ.ಸೀ. ಗೋಪಾಲಕೃಷ್ಣ ಭಟ್‌, ಅಬ್ದುಲ್‌ ರಹಿಮಾನ್‌, ಸುಬ್ರಹ್ಮಣ್ಯ ಭಟ್‌, ಪ್ರದೀಪ್‌ ಕುಮಾರ್‌ ಪಿ.ವಿ., ಗೋವಿಂದ ಬಳ್ಳಮೂಲೆ, ಶ್ಯಾಮ್‌ ಪ್ರಸಾದ್‌ ಕೆ, ಪ್ರಶಾಂತ್‌ ಹೊಳ್ಳ, ಡಾ| ರತ್ನಾಕರ ಮಲ್ಲಮೂಲೆ ಮೊದಲಾದವರು ಮಲಯಾಳ ಹೇರಿಕೆಯ ವಿರುದ್ಧ ಹೋರಾಟ ಅನಿವಾರ್ಯ ಎಂಬು ದಾಗಿ ತಮ್ಮ ಅಭಿಪ್ರಾಯ ಮಂಡಿಸಿದರು. ಕೇರಳ ಸರಕಾರ ಭಾಷಾ ಅಲ್ಪಸಂಖ್ಯಾಕರ ಸಂವಿಧಾನಬದ್ಧ ಹಕ್ಕುಗಳನ್ನು ಕಸಿದುಕೊಳ್ಳುವ ಉದ್ದೇಶದಿಂದ ಮಲಯಾಳ ಕಲಿಕೆ ಕಡ್ಡಾಯಗೊಳಿಸುತ್ತಿದೆ. ಈ ಮೂಲಕ ಕನ್ನಡ ಭಾಷೆ, ಸಂಸ್ಕೃತಿ ನಾಶವನ್ನು ಎದುರುನೋಡುತ್ತಿದೆ. ಮಲಯಾಳ ಕಲಿಕೆ ಕಡ್ಡಾಯಗೊಳಿಸುವ ಮೂಲಕ ಕಾಸರಗೋಡಿನ ಭಾಷಾ ಅಲ್ಪಸಂಖ್ಯಾಕರ ಭಾಷೆ, ಸಂಸ್ಕೃತಿಯ ಮೇಲೆ ದುಷ್ಪರಿಣಾಮ ಬೀರಲಿದೆ. ಅಲ್ಲದೆ ಕೆಲವೇ ವರ್ಷಗಳಲ್ಲಿ ಕಾಸರಗೋಡಿನಲ್ಲಿ ಕನ್ನಡ ಭಾಷೆ, ಸಂಸ್ಕೃತಿ ಸರ್ವನಾಶವಾಗಲಿದೆ ಎಂದು ಆತಂಕ ವ್ಯಕ್ತವಾಯಿತು.

Advertisement

ಸರಣಿ ಸತ್ಯಾಗ್ರಹದ ಅಧ್ಯಕ್ಷರಾಗಿ ನ್ಯಾಯ ವಾದಿ ಮುರಳೀಧರ ಬಳ್ಳಕ್ಕುರಾಯ, ಎಸ್‌. ವಿ. ಭಟ್‌ ಉಪಾಧ್ಯಕ್ಷರಾಗಿಯೂ, ಕೆ. ಭಾಸ್ಕರ, ಗುರುಪ್ರಸಾದ್‌ ಕೋಟೆಕಣಿ ಮತ್ತು ತಾರಾನಾಥ ಮಧೂರು ಸಂಚಾಲಕರನ್ನಾಗಿ ಆರಿಸಲಾಯಿತು.

ಅಭೂತಪೂರ್ವ ಹೋರಾಟಕ್ಕೆ ಕನ್ನಡಿ ಗರು ಸಜ್ಜಾಗಿದ್ದು, ಕಾರ್ಯಕ್ರಮ ದಲ್ಲಿ ಸಾವಿರಾರು ಮಂದಿ ಕನ್ನಡಿಗರು, ಕನ್ನಡಾ ಭಿಮಾನಿಗಳು ಭಾಗವಹಿಸಲಿದ್ದಾರೆ. ಕನ್ನಡ ವನ್ನು ಅಳಿಸಿ ಹಾಕುವ ಪ್ರಯತ್ನದ ಅಂಗವಾಗಿ ಮಲಯಾಳ ಕಡ್ಡಾಯಗೊಳಿಸಿದ್ದು ಇದರ ವಿರುದ್ಧ ಹೋರಾಟಕ್ಕೆ ಕನ್ನಡಿಗರು ಸಜ್ಜುಗೊಂಡಿದ್ದು, ಜಾತಿ, ಮತ, ಧರ್ಮಗಳ ಭೇದಭಾವವಿಲ್ಲದೆ ಸರ್ವ ಕನ್ನಡಿಗರೂ ಭಾಗವಹಿಸಲಿದ್ದಾರೆ.

ಧರಣಿ ಸತ್ಯಾಗ್ರಹದ ಮೂಲಕ ಕಾಸರಗೋಡಿನ ಕನ್ನಡಿಗರ ಶಕ್ತಿಯನ್ನು ಸರಕಾರಕ್ಕೆ ತೋರಿಸಲಿದ್ದಾರೆ. ಜಿಲ್ಲೆಯಾ ದ್ಯಂತ ವಿವಿಧ ಸಂಘಟನೆಗಳಿಂದ, ರಾಜಕೀಯ ಪಕ್ಷಗಳಿಂದ, ಸಂಘ ಸಂಸ್ಥೆಗಳಿಂದ ಬೆಂಬಲ ಲಭಿಸಿದ್ದು, ಈ ಹಿನ್ನೆಲೆಯಲ್ಲಿ ಸತ್ಯಾಗ್ರಹದಲ್ಲಿ ಸಾವಿರಾರು ಮಂದಿ ಭಾಗವಹಿಸಲಿದ್ದಾರೆ. ಸರಣಿ ಧರಣಿ ಸತ್ಯಾಗ್ರಹದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕನ್ನಡ ಪರ ಸಂಘಟನೆಗಳು, ಕನ್ನಡಾಭಿಮಾನಿಗಳು ಭಾಗವಹಿಸುವಂತೆ ಸಭೆಯಲ್ಲಿ ವಿನಂತಿಸಲಾಯಿತು.

ವ್ಯಾಪಕ ಬೆಂಬಲ 
ಮಲಯಾಳ ಕಲಿಕೆ ಕಡ್ಡಾಯಗೊಳಿಸಿದ ಕೇರಳ ಸರಕಾರದ ನೀತಿಯ ವಿರುದ್ಧ ಕನ್ನಡ ಹೋರಾಟ ಸಮಿತಿ ನೇತೃತ್ವದಲ್ಲಿ ಮೇ 23ರಿಂದ 29ರ ವರೆಗೆ ನಡೆಯುವ ಸರಣಿ ಸತ್ಯಾಗ್ರಹಕ್ಕೆ ವಿವಿಧ ಕನ್ನಡ ಪರ ಸಂಘ, ಸಂಸ್ಥೆಗಳು ಬೆಂಬಲ ಘೋಷಿಸಿವೆ. ಕಾಸರಗೋಡು ಸರಕಾರಿ ಕಾಲೇಜಿನ ಕನ್ನಡ ವಿದ್ಯಾರ್ಥಿಗಳ ಸ್ನೇಹರಂಗ, ಮಂಜೇಶ್ವರ ಗೋವಿಂದ ಪೈ ಸ್ಮಾರಕ ಸರಕಾರಿ ಕಾಲೇಜಿನ ಗಿಳಿವಿಂಡು, ಸಿರಿ ಚಂದನ ಕನ್ನಡ ಯುವ ಬಳಗ, ವಿಶ್ವ ಬ್ರಾಹ್ಮಣ ಸಮಾಜ ಸೇವಾ ಸಂಘ ಕರಂದಕ್ಕಾಡು ಕಾಸರಗೋಡು, ಕನ್ನಡ ಜಾಗೃತಿ ಸಮಿತಿ, ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನ, ರಾಮನಾಥ ಸಾಂಸ್ಕೃತಿಕ ಭವನ ಸಮಿತಿ, ಯಕ್ಷತೂಣೀರ ಸಂಪ್ರತಿಷ್ಠಾನ ಮೊದಲಾದವು ಸರಣಿ ಸತ್ಯಾಗ್ರಹಕ್ಕೆ ಬೆಂಬಲ ವ್ಯಕ್ತಪಡಿಸಿವೆ.

ಕನ್ನಡಿಗರ ಕತ್ತು ಹಿಚುಕುವ ಕುತಂತ್ರ
ಮಲಯಾಳ ಕಲಿಕೆ ಕಡ್ಡಾಯಗೊಳಿಸುವ ಮೂಲಕ ಕಾಸರಗೋಡಿನ ಭಾಷಾ ಅಲ್ಪಸಂಖ್ಯಾಕರಾಗಿರುವ ಕನ್ನಡಿಗರ ಕತ್ತು ಹಿಚುಕುವ ಕುತಂತ್ರವನ್ನು ಕೇರಳ ಸರಕಾರ ಮಾಡುತ್ತಿದೆ. ಕಡ್ಡಾಯ ಮಲಯಾಳ ಜಾರಿಗೊಳಿಸುವ ಮೂಲಕ ಕಾಸರಗೋಡಿನ ಭಾಷಾ ಅಲ್ಪಸಂಖ್ಯಾಕ ಕನ್ನಡ ಭಾಷೆ, ಸಂಸ್ಕೃತಿಯನ್ನು ನಾಶಮಾಡ ಹೊರಟಿರುವ ಕೇರಳ ಸರಕಾರದ ನೀತಿಯನ್ನು ಪ್ರತಿಭಟಿಸಿ ಕನ್ನಡ ಹೋರಾಟ ಸಮಿತಿ ನೇತೃತ್ವದಲ್ಲಿ ಸರಣಿ ಸತ್ಯಾಗ್ರಹ ನಡೆಯಲಿದೆ.

Advertisement

Udayavani is now on Telegram. Click here to join our channel and stay updated with the latest news.

Next