ಬದುಕು ನಮ್ಮನ್ನು ಬಹುದೂರಕ್ಕೆ ಕೊಂಡೊಯ್ದುಬಿಟ್ಟಿದೆ. ಕವಲೊಡೆದ ಬದುಕಿನ ಹಾದಿಯಲ್ಲಿ ನಿನ್ನದೊಂದು ದಾರಿ, ನನ್ನದೊಂದು ದಾರಿ. ಹೀಗೆ ಎದುರಾದಾಗೆಲ್ಲಾ ಒಂದು ಸಣ್ಣ ನಗು ನಕ್ಕು ಮುಂದುವರಿಯೋಣ.
ಅಲ್ಲ ಕಣೋ, ಪ್ರೀತಿಯನ್ನು ಮಳೆಯಂತೆ ಸುರಿದು ಇದ್ದಕ್ಕಿದ್ದಂತೆ ಮಾಯವಾದವನು ಹೀಗೆ ಧುತ್ತೆಂದು ಎದುರಾದರೆ ಈ ಪುಟ್ಟ ಹೃದಯದ ಗತಿಯೇನು?
ನೀನು ಕಳೆದುಹೋದೆ ಎಂದು ನಾನೆಂದೂ ಕೈಚೆಲ್ಲಿ ಕೂತವಳಲ್ಲ. ಮದುವೆಗಳಲ್ಲಿ, ಸಮಾರಂಭಗಳಲ್ಲಿ, ಜನಜಂಗುಳಿಯಲ್ಲಿ ನಿನ್ನನ್ನು ಹುಡುಕುತ್ತಿದ್ದೆ. ಪ್ರತಿಬಾರಿಯೂ ಜೊತೆಯಾದದ್ದು ನಿರಾಸೆಯೇ. ಅಂಥ ಸಾವಿರಾರು ನಿರಾಸೆಗಳು ಒಟ್ಟಾಗಿ ಬಂದರೂ ನಾನು ಅಳುತ್ತ ಕೂತವಳಲ್ಲ. ನೀನು ಉಸಿರಾಡುವ ಸದ್ದೊಂದೇ ಸಾಕಿತ್ತು ಯುಗದಂಥ ವರ್ಷಗಳನ್ನು ನಿಮಿಷಗಳಂತೆ ಉರುಳಿಸಲು. ನೀನು ಒತ್ತಾಯ ಮಾಡಿ ಚುಚ್ಚಿಸಿದ್ದ ಬುಗುಡಿ ಅದ್ಯಾವ ಮಾಯದಲ್ಲಿ ಒಂದು ಕಿವಿಯಿಂದ ಬಿದ್ದುಹೋಗಿತ್ತೋ ಗೊತ್ತಿಲ್ಲ. ಉಳಿದ ಇನ್ನೊಂದನ್ನು ಮಾತ್ರ ಜೋಪಾನವಾಗಿ ಡಬ್ಬಿಯೊಂದರಲ್ಲಿ ಬಚ್ಚಿಟ್ಟಿದ್ದೆ. ನಿನ್ನ ಅಗಲಿಕೆಯ ನೋವು ಮಾತ್ರ ನೀನಿದ್ದ ಸಣ್ಣಸಣ್ಣ ಖುಷಿಗಳನ್ನು ತುಳಿದುಬಿಟ್ಟಿತ್ತು. ಇನ್ಯಾವತ್ತೋ ಅನಿರೀಕ್ಷಿತವಾಗಿ ಹಳೆಯ ಸೀರೆಗಳ ಮಧ್ಯೆ ಸಿಕ್ಕ ಬುಗುಡಿ ಮಾತ್ರ ಇನ್ನಿಲ್ಲದಂತೆ ಅಳಿಸಿಬಿಟ್ಟಿತ್ತು. ಆ ಬುಗುಡಿಗೀಗ ಬರೋಬ್ಬರಿ ಎಂಟುವರ್ಷ ವಯಸ್ಸು. ಆ ಬುಗುಡಿ ಸಿಕ್ಕಿತಲ್ಲ, ಅವತ್ತೇ ಕಳೆದುಹೋದ ನಿನ್ನನ್ನು ಹುಡುಕಲೇಬೇಕೆಂದು ನಾನು ಪಣತೊಟ್ಟಿದ್ದು.
ಪ್ರತಿ ರಾತ್ರಿಯನ್ನೂ ನೀನು ಸಿಕ್ಕೇಸಿಗುವೆ ಎಂಬ ಭರವಸೆಯಲ್ಲೇ ದೂಡಿಬಿಟ್ಟೆ. ಅದೆಷ್ಟು ನಾಳೆಗಳು ಬಂದುಹೋದವೋ ಲೆಕ್ಕವಿಲ್ಲ. ನೀನಂತೂ ನನ್ನ ಭರವಸೆಯನ್ನು ಸುಳ್ಳಾಗಿಸಲಿಲ್ಲ. ನನ್ನ ಪ್ರಾಮಾಣಿಕ ಪ್ರೀತಿಗೆ ಮೋಸವಾಗಲಿಲ್ಲ. ಕೊನೆಗೂ ನೀನು ನನ್ನನ್ನು ಹುಡುಕಿ ಬಂದೇಬಿಟ್ಟೆ. ಇಲ್ಲಾ, ನಾನೇ ನಿನ್ನನ್ನು ಹುಡುಕಿ ಪಡೆದುಕೊಂಡೆ. ನೀನು ನಂಬುವುದಿಲ್ಲ, ನಿನ್ನ ಫೋನ್ ನಂಬರ್ ಸಿಕ್ಕಿದ ತಕ್ಷಣವೇ ನಾನು ಕುಣಿದು ಕುಪ್ಪಳಿಸಿಬಿಟ್ಟಿದ್ದೆ. ಪ್ರತಿದಿನವೂ ಕಣ್ಣರಳಿಸಿಕೊಂಡು ನೋಡುತ್ತಿದ್ದ ಆಕಾಶದ ನಕ್ಷತ್ರವೊಂದು ಜಾರಿ ಸೀದಾ ನನ್ನ ಮುಡಿಯಲ್ಲಿ ಬಿದ್ದಷ್ಟೇ ಸಂತೋಷಪಟ್ಟಿದ್ದೆ. ನಿನ್ನ ಪ್ರೀತಿ ಅದ್ಯಾವ ಪರಿ ನನ್ನನ್ನು ಆವರಿಸಿದೆ ನೋಡು.
ಹೇಗಿದೀಯಾ? ಎಂದು ನೀನು ಕೇಳಿದ್ದೇ ತಡ, ಇಷ್ಟು ವರ್ಷ ಎದೆಯಲ್ಲೇ ಮಡುಗಟ್ಟಿದ್ದ ದುಃಖದ ಮೋಡ ಕರಗಿ ಕಣ್ಣೀರಾಗಿ ಹರಿದುಬಿಟ್ಟಿತ್ತು. ಚೆನ್ನಾಗಿದೀನಿ ಅನ್ನೋ ಸುಳ್ಳನ್ನು ಹೇಳಲೇಬೇಕಾಗಿತ್ತು ಕ್ಷಮೆ ಇರಲಿ. ಬದುಕು ನಮ್ಮನ್ನು ಬಹುದೂರಕ್ಕೆ ಕೊಂಡೊಯ್ದುಬಿಟ್ಟಿದೆ. ಕವಲೊಡೆದ ಬದುಕಿನ ಹಾದಿಯಲ್ಲಿ ನಿನ್ನದೊಂದು ದಾರಿ, ನನ್ನದೊಂದು ದಾರಿ. ಹೀಗೆ ಎದುರಾದಾಗೆಲ್ಲಾ ಒಂದು ಸಣ್ಣ ನಗು ನಕ್ಕು ಮುಂದುವರಿಯೋಣ. ಹಾಂ… ಆ ಕಳೆದು ಹೋದ ಬುಗುಡಿ ನಾನು, ಮರೆಯದೇ ಮರೆತುಬಿಡು. ನಾನು ಬಚ್ಚಿಟ್ಟುಕೊಂಡ ಬುಗುಡಿ ನೀನು.ಅದನ್ನು ಜೋಪಾನ ಮಾಡುವ ಜವಾಬ್ದಾರಿ ನನ್ನದು.
ಸತ್ಯಾ ಗಿರೀಶ್