ಮಂಜೇಶ್ವರ: ಬತ್ತಿ ಹೋಗಿದ್ದ ಬಾವಿಯೊಂದರಲ್ಲಿ ನಾಗರಿಕರು ಕೆಸರು ತೆಗೆಯಲು ಹಾಗೂ ದುರಸ್ತಿಗೆ ಯೋಚನೆ ಮಾಡುತ್ತಿದ್ದ ಬೆನ್ನಲ್ಲೇ ರಾತ್ರಿ ಬೆಳಗಾಗುವುದರೊಳಗೆ 6 ಅಡಿಯಷ್ಟು ನೀರು ತುಂಬಿ ಪವಾಡ ನಡೆದಿದೆ.
ಮಂಜೇಶ್ವರ ಸಮೀಪದ ಗೋವಿಂದ ಪೈ ಕಾಲೇಜು ಸಮೀಪದ ಕಾಲನಿಯ ಸರಕಾರಿ ಬಾವಿಯೊಂದು ನೀರಿಲ್ಲದೆ ಬತ್ತಿ ಹೋಗಿತ್ತು. ಇಲ್ಲಿನ ಆರ್.ಕೆ. ಫ್ರೆಂಡ್ಸ್ ಕ್ಲಬ್ ಹಾಗೂ ಇತರ ಫ್ರೆಂಡ್ಸ್ ಕ್ಲಬ್‌ನ ಸದಸ್ಯರು ಮುಂದಿನ ರವಿವಾರ ಬಾವಿಯ ಕೆಸರು ಮೇಲೆತ್ತಲು ತಯಾರಿ ನಡೆಸಿದ್ದರು. ಆದರೆ ಬುಧವಾರ ಬೆಳಗ್ಗೆ ಇಲ್ಲಿನ ನಿವಾಸಿಯೋರ್ವರು ಬಾವಿಯೊಳಗೆ ನೋಡಿದಾಗ 6 ಅಡಿಯಷ್ಟು ನೀರು ತುಂಬಿರುವುದು ಕಂಡುಬಂತು.
ವಿಷಯ ತಿಳಿದು ನೂರಾರು ಮಂದಿ ಕುತೂಹಲಿಗರು ಬಾವಿಯನ್ನು ನೋಡಲು ಆಗಮಿಸುತ್ತಿದ್ದಾರೆ. ಬಾವಿಯಲ್ಲಿ ಪವಾಡವೆಂಬಂತೆ ಒಂದೇ ದಿನದಲ್ಲಿ 6 ಅಡಿ ನೀರು ತುಂಬಿರುವುದನ್ನು ನೀರಿಲ್ಲದೆ ಪರದಾಡುತ್ತಿದ್ದ ನಮಗೆ ದೇವರ ಅನುಗ್ರಹ ಎಂದು ಇಲ್ಲಿನ ನಿವಾಸಿಗಳು ಹೇಳುತ್ತಿದ್ದಾರೆ. ಈ ಅಪೂರ್ವ ವಿದ್ಯಮಾನ ಈ ಪ್ರದೇಶದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ. ನೀರು ಶುದ್ಧವಾಗಿದ್ದು, ಕಾಲನಿ ನಿವಾಸಿಗಳು ಭಾರೀ ಸಂತಸ ಹೊಂದಿದ್ದಾರೆ.
ಉಡುಪಿಯಲ್ಲೂ …
ಉಡುಪಿ ಜಿಲ್ಲೆಯ ಮಣಿಪಾಲ, ಪರ್ಕಳ ಪರಿಸರದ ಕೆಲವು ಕೆರೆ-ಬಾವಿಗಳಲ್ಲಿಯೂ ಕಳೆದ ಎರಡು ವರ್ಷಗಳಲ್ಲಿ ಇದೇ ರೀತಿಯ ವಿದ್ಯಮಾನ ನಡೆದಿತ್ತು.